ಕ್ಲಿನಿಕ್
ಮಲಯಾಳಂ ಮೂಲ - ಡಿ. ವಿನಯ ಚಂದ್ರನ್ಹುಡುಗನೊಬ್ಬ ಹುಡುಗಿಗೆ
ಆಗಬಹುದು ಕ್ಲೀನಿಕ್
ಅವಳ ಹಲ್ಲುನೋವಿಗೆ, ಗಂಟಲ ಕಿರಿಕಿರಿಗೆ
ತುಟಿ ಯೋನಿ ಮೊಲೆ ನೆನಪು ದಾಹಕ್ಕೆ
ಆಗಬಹುದು ಶುಶ್ರೂಷೆ ಮೋಸಕ್ಕೂ
ಚುಚ್ಚುಮದ್ದು ಮರಗಟ್ಟಿದಂಗಕ್ಕೆ
ನೋವು ತಿಳಿಯದರವಳಿಕೆ
ದೇಹವೆಲ್ಲ ಅವಯವ
ಇರುವಿಕೆ ನೆನಪಿಸೊ
ಸ್ಟೆತಾಸ್ಕೋಪೂ ಆಗಬಹುದು
ಸರಿಯಿದ್ದರೆ ಜಾತಕ
ಏನೂ ಕೂಡ ಯೋಚಿಸದೆ ಯಾವಾಗಲಾದರೂ
ಅವನು ಅವಳ ಗೋಣಿಗೂ
ನೀಡಬಹುದು ಮುತ್ತು
ಅವಳನ್ನೆ ಮರೆತ ಅವಳು
ಅವನಿಗೊರಗಿ ಹೋಗಬಹುದು ನಿದ್ದೆ
ಆಗುತ್ತವೆ ಹಳತು ಇಂಥ ಕ್ಲೀನಿಕ್ ಗಳು
ಅವನಿಗವಳು ಅವಳಿಗವನು
ಆಗ ಬೇಡವಾಗಿ
ಮಲಗಬಹುದು ಮುದುಡಿ
ಆಗಬಹುದು ದೂರ ಕೂಡ
'ಟು ಲೆಟ್'ಎಂದು ಬರೆದು
ತೂಗಿ ಹಾಕಬಹುದು ಹೊಚ್ಚಹೊಸ ಫಲಕ
ಜೀವ ಎಳೆವಾಗ ಕೊನೆಯುಸಿರು
ಉಪಗುಪ್ತ ವಾಸವದತ್ತೆಗೆ
ಕರುಣೆ ತೋರಿಸಿದ್ದ ಕಾರಣ
ಹೇತ ಸ್ವರ್ಗದಲ್ಲು
ಕಾಯಬೇಕಾಗಬಹುದು ವಾಸವದತ್ತೆಗೆ
'ಲೀಲಾ' ಹುಚ್ಚಳಾಗಿದ್ದು
'ಮದನ'ನಿಗೆ ನೀಡಿದ ಉಪ್ಪಿ -
ಅಗಲಿಕೆ ನಂತರ ಕೂಡ
ಹಿಡಿಯಬಹುದು
ಮದನನಿಗೆ ಹುಚ್ಚುಗಾಳಿ.
ಕ್ಲಿನಿಕ್ - ಹುಚ್ಚು - ಹೇತ ಸ್ವರ್ಗ
ಒಂದಕ್ಕೊಂದು ಬದಲಿಯೆ ?
ಈ ಅಂಗಡಿ ಜಗಲಿ
ನಾಯಿ ಆಕಳಿಕೆ ಕೂಡ
ತಿಳಿಸಿಕೊಡಲು ಬರುವುದಿಲ್ಲ
ಟಿಪ್ಪಣಿ
1. ಉಪಗುಪ್ತ ಮತ್ತು ವಾಸದತ್ತೆ ಕುರಿತ ಪ್ರಣಯ ಕತೆ ಜಾತಕ ಕತೆಗಳಲ್ಲಿ ಒಂದು. ಮಲಯಾಳಂ ಕವಿ ಕುಮಾರನ್ ಆಶಾನ್ ಅವರು ಈ ಕುರಿತು 'ಕರುಣಾ' ಎಂಬ ಕಾವ್ಯ ರಚನೆಯನ್ನು ಮಾಡಿದ್ದಾರೆ.
2. ಲೀಲಾ ಮತ್ತು ಮದನ ಪಾತ್ರಗಳು ಲೈಲಾ-ಮಜ್ನು, ರೋಮಿಯೊ-ಜೂಲಿಯೆಟ್ ರೀತಿ ಕುಮಾರನ್ ಆಶಾನ್ ಅವರ ಕಾವ್ಯದಲ್ಲಿನ ಪ್ರಸಿದ್ಧ ಪ್ರೇಮಿಗಳು.
*
*
ನಾನು ತೇರ್ಳಿ ಎನ್ ಶೇಖರ್ ನೊಂದಿಗೆ ಕೂಡಿ ಮಾಡಿದ ಈ ಕವಿತೆಯ ಅನುವಾದದ ಸಂದರ್ಭವನ್ನು ವಿವರಿಸಬೇಕು ಅಂದುಕೊಂಡಿದ್ದೆ. ಆದರೆ ನನ್ನ ಲೇಖನಗಳ ಸಂಗ್ರಹ್ಕಕಾಗಿ ಹಳೆಯ ಲೇಖನಗಳನ್ನು ಹುಡುಕುವ ತುರ್ತಿನಲ್ಲಿ ಅಂದುಕೊಂಡಿದ್ದ ಕೆಲಸ ಮಾಡಲಾಗಲಿಲ್ಲ. ಅದಕ್ಕಾಗಿ ಗೆಳೆಯ ಶಶಿ ನೀಡಿದ ಪ್ರತಿಕ್ರಿಯೆಗೆ ಉತ್ತರ ನೀಡುವ ನೆಪದಲ್ಲಾದರೂ ವಿವರಿಸುತ್ತಿದ್ದೇನೆ.
*
ಅದು 2008 ಇದ್ದಿರಬೇಕು. ಆಗ ತೇರ್ಳಿ ಕನಕಪುರದಲ್ಲಿದ್ದ ಸಂದರ್ಭ. ನಾನು ಹಂಪಿಯಿಂದ ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದವನು ತೇರ್ಳಿ ಮತ್ತಿತರ ನನ್ನ ಕನಕಪುರದ ಗೆಳೆಯರನ್ನು ಕಾಣಲು ಕನಕಪುರಕ್ಕೆ ಹೋಗಿದ್ದೆ. ತೇರ್ಳಿ ಎನ್ ಶೇಖರ್ ಸಾಮಾನ್ಯವಾಗಿ ಮಾತೃಭೂಮಿ ಪತ್ರಿಕೆಯನ್ನು ತಂದುಕೊಳ್ಳುತ್ತಿದ್ದರು. ನಾನಾಗ ಹೋಗಿದ್ದಾಗಲೂ ಅವರ ಬಳಿ ಕೆಲವು ಸಂಚಿಕೆಗಳಿದ್ದವು. ಅವುಗಳಲ್ಲಿ ಸಾಹಿತ್ಯ ವಿಶೇಷಾಂಕವೂ ಇತ್ತು. ನಾವು ಆಗಾಗ ಅನುವಾದ ಕಾರ್ಯಯೋಜನೆಯನ್ನು ಬಹಳಸಲ ಹಮ್ಮಿಕೊಂಡಿದ್ದರೂ ನಾವು ಒಟ್ಟಿಗೆ ಸೇರುತ್ತಿದ್ದುದು ಕೆಲವೇ ದಿನಗಳ ಮಟ್ಟಿಗೆ ಮಾತ್ರ. ಆದ್ದರಿಂದ ನಮ್ಮೆಲ್ಲ ಕಾರ್ಯಯೋಜನೆಗಳು ಯೋಜನಾಮಟ್ಟದಲ್ಲಿಯೇ ಉಳಿದಿತ್ತು. ಇದಕ್ಕೊಂದು ಚಾಲನೆಕೊಡಬೇಕೆಂದು ನಾನು ಆ ಸಂಚಿಕೆಗಳನ್ನು ಒಬ್ಬ ಅನಕ್ಷರಸ್ತನ ಹಾಗೆ ತಿರುವಿ ಹಾಕತೊಡಗಿ ಅದರಲ್ಲಿನ ವಿನ್ಯಾಸ, ಚಿತ್ರ ಮೊದಲಾದವನ್ನು ನೋಡುತ್ತಿದ್ದೆ. ಆ ಸಂಚಿಕೆಯಲ್ಲಿ ಹಲವಾರು ಕವಿತೆಗಳು ಇದ್ದವು. ನಾನು ಕುತೂಹಲಕ್ಕೆ ಅವನ್ನು ಓದಲು ತೇರ್ಳಿಗೆ ಕೇಳಿದೆ. ಅವರು ನಾನು ಕೇಳಿದ ಕವಿತೆಗಳನ್ನು ಮಲಯಾಳಂನಲ್ಲಿ ಓದಿ ಕನ್ನಡದಲ್ಲಿ ವಿವರಿಸಿದರು. ನನಗಾಗ..... 91-94ರ ಅವಧಿಯಲ್ಲಿ ನನ್ನ ಹೊಟ್ಟೆಪಾಡಿಗಾಗಿ ಅಕಾಡೆಮಿಯಲ್ಲಿ ಕರಡು ತಿದ್ದುವ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಗೆಳೆಯರಾಗಿದ್ದ ಎಚ್ ಎಸ್ ಶಿವಪ್ರಕಾಶ್ ದಿನ ಸಂಜೆ ನಾಲ್ಕರ ಹೊತ್ತಿಗೆ ಅಕಾಡೆಮಿಗೆ ಬರುವಾಗ ಒಬ್ಬರಲ್ಲ ಒಬ್ಬರು ಮಲಯಾಳಿ ಸ್ನೇಹಿತರನ್ನು ಕರೆದುಕೊಂಡು ಬರುತ್ತಿದ್ದುದು..... ಅವರಿಗೆ ಮಲಯಾಳ ಕವಿಗಳ ಕವನ ಸಂಕಲನ ಕೊಟ್ಟು ಓದಿಸಿ ಪದ ಪದಗಳ ಅರ್ಥ ಕೇಳಿ ತಿಳಿದು ಮೂಲ ಕವಿತೆಯ ಲಯಕ್ಕೆ ಅನುಗುಣವಾಗಿ ಕನ್ನಡದನುವಾದ ಸಿದ್ಧಪಡಿಸುತ್ತಿದ್ದುದು......... ಅದನ್ನು ಮತಷ್ಟು ಪರಿಷ್ಕರಿಸುತ್ತಿದ್ದುದು .... ನೆನಪಿಗೆ ಬಂತು. ಈ ಅನುವಾದದ ಕಾರ್ಯ ಸ್ವರೂಪ ಲಿಂಗರಾಜು, ನಾನು, ಕೆಲವು ಸಲ ಅಕಾಡೆಮಿಯ ಅಂದಿನ ರಿಜಿಸ್ಟ್ರಾರ್ ಸಮ್ಮುಖದಲ್ಲಿ ನಡೆಯುತ್ತಿತ್ತು. ಹಾಗೆ ನಾನೂ ಕೂಡ ಏಕೆ ಪ್ರಯತ್ನಮಾಡಬಾರದು ಎಂದೆನಿಸಿತ್ತು. ಕೂಡಲೇ ತೇರ್ಳಿ ವಿವರಿಸುತ್ತಿದ್ದಂತೆ ಕವಿತೆಯ ಪ್ರತಿ ಸಾಲಿನ ಅರ್ಥ ಭಾವ ಲಯಗಳ ದಾರಿಯಲ್ಲಿ ನಾನು ಕನ್ನಡ ಪದಗಳನ್ನು ಜೋಡಿಸತೊಡಗಿದೆ. ಹೀಗೆ ಕೆಲವು ಪದ್ಯಗಳನ್ನು ಅನುವಾದಿಸಿದೆ. ಅವುಗಳಲ್ಲಿ ಎಲ್ಲವೂ ಏಕಪ್ರಕಾರವಾಗಿ ಉತ್ತಮ ಅನುಭವ ನೀಡಲಿಲ್ಲ. ವಿನಯ ಚಂದ್ರನ್ ಅವರ ಪ್ರಸ್ತುತ ಕವಿತೆಯನ್ನು ಉಳಿಸಿಕೊಂಡು ಕೆಲವು ಸಣ್ಣಪುಟ್ಟ ತಿದ್ದುಪಾಟುಗಳೊಂದಿಗೆ ಇಬ್ಬರ ಹೆಸರಿನಲ್ಲಿ ಮಯೂರಕ್ಕೆ ಕಳಿಸಿದೆ. ಶೇಖರ್ ಇದ್ದು, ಅನುವಾದದಲ್ಲಿ ನನ್ನ ಪಾತ್ರವೇನೂ ಇಲ್ಲ; ನಿಮ್ಮೊಬ್ಬರ ಹೆಸರಿನಲ್ಲಿಯೇ ಬಳಸಿಕೊಳ್ಳಿ ಎಂದು ತಮ್ಮ ಹೆಸರು ಸೇರಿಸಿಕೊಳ್ಳಲು ಅವರು ಅಸಮ್ಮತಿಯನ್ನು ಸೂಚಿಸಿದರು. ಮಲಯಾಳಂನ ಗಂಧಗಾಳಿಯೂ ತಿಳಿಯದು ನಾನು ಹೇಗೆ ಅನುವಾದ ಮಾಡಲು ಸಾಧ್ಯ-ಶೇಖರ್ ಇಲ್ಲದೆ? ಹಾಗಾಗಿ ಅಂದಿನಂತೆ ಇಂದು ಕೂಡ ನಮ್ಮಿಬ್ಬರ ಹೆಸರಿನಲ್ಲಿ ಪ್ರಕಟಿಸಲು ಮುಂದಾದೆ. ಅದು ಪ್ರಕಟವೂ ಆಯಿತು. ಮೊನ್ನೆ ಭಾನುವಾರ ನನ್ನ ಲೇಖನಗಳನ್ನು ಸಂಗ್ರಹಿಸಲು ಹುಡುಕುತ್ತಿದ್ದ ವೇಳೆ ಈ ಕವಿತೆ ಕಣ್ಣಿಗೆ ಬಿದ್ದು ಅದನ್ನು ಮತ್ತಷ್ಟು ತಿದ್ದಿತೀಡಿ ಅದರ ಅನುಭವ ಸ್ಫುಟಗೊಳ್ಳುವಂತೆ ಮಾಡಿ ನಿಮ್ಮ ಮುಂದಿರಿಸಿದೆ. ಈ ಯಾವ ಬೆಳವಣಿಗೆಯೂ ಕೇರಳದಲ್ಲಿರುವ ಶೇಖರ್ ಗೆ ತಿಳಿದಿಲ್ಲ ಈಗಲೂ. ಅದೇಕೋ ಈ ಅನುವಾದ ಕವಿತೆ ಬಹಳಷ್ಟು ಜನರಿಗೆ ಇಷ್ಟವಾಯಿತು. ಇವನ್ನೆಲ್ಲ ಶೇಖರ್ ಗೆ ಫೋನ್ ನಲ್ಲಿ ಹೇಳಬೇಕು. ಇದೇ ಸರಿಯಾದ ಸಮಯ ಈ ಕವಿತೆಗೆ ಬಂದ ಪ್ರತಿಕ್ರಿಯೆ ನಿಮ್ಮ ಮುಂದಿಡಲು ಎಂದು ಭಾವಿಸುವೆ. ಅವು ಹೀಗಿವೆ-
"ಪ್ರಿಯ ಡಾ. ಶ್ರೀಧರ ಪಿಸೆ ಅವರಿಗೆ:
ನಮಸ್ಕಾರ. ನೀವು ಕಳುಹಿಸಿರುವ ಅನುವಾದಿತ ಕವನವನ್ನು ಓದಿ ಈ ಪತ್ರವನ್ನು
ಬರೆಯುತ್ತಿದ್ದೇನೆ. ಮೂಲದಲ್ಲಿ ಹೇಗಿದೆಯೋ ಗೊತ್ತಿಲ್ಲ; ಅನುವಾದ ಸಮರ್ಥವಾಗಿದೆ;
ವೈನೋದಿಕ ಶೈಲಿಯಲ್ಲಿ, ಕ್ಲಿನಿಕ್ಕಿನ ರೂಪಕದ ಚೌಕಟ್ಟಿನಲ್ಲಿ ಪ್ರೇಮ-ಕಾಮಗಳ
ತೃಪ್ತಿ-ಸಮಾಧಾನ-ಅವಸಾನ ಇವುಗಳ ಅನುಭವ ಮೂರ್ತರೂಪದಲ್ಲಿ ಓದುಗರನ್ನು ತಟ್ತುತ್ತದೆ;
ಮತ್ತು ಉಪಗುಪ್ತ-ವಾಸವದತ್ತಾ ಪ್ರಕರಣದ ಆಶಯ ಕಾಮದ ಕ್ಷಣಿಕ ಅರ್ತಿತ್ವವನ್ನು ಮತ್ತೂ
ದಟ್ಟವಾಗಿಸುತ್ತದೆ.
ಥ್ಯಾಂಕ್ ಯೂ.
ರಾಮಚಂದ್ರನ್" ಎಂದು ಸಿ ಎನ್ ರಾಮಚಂದ್ರನ್ ಮೇಲ್ ಕಳಿಸಿದರು." ಪ್ರಿಯ ಡಾ ಶ್ರೀಧರ ಪಿಸ್ಸೆ,
ಗೆಳೆಯ ಶೇಖರ್ ಜೊತೆ ಸೇರಿ ಮಾಡಿದ ಅನುವಾದ ಹೊಸ
ಪ್ರಯೋಗ ಯಶಸ್ವಿಯಾಗಿದೆ. ಅಭಿನಂದನೆಗಳು.
ಇಂತಿ
ಅಶೋಕ್ ಕುಮಾರ್ " ಎಂದು ಹೇಳಿದರು ಡಾಕ್ಟರು.
"
| sblakshmikanth kanth | Sep 2 (1 day ago)![]() | |||||||||||
| ||||||||||||
