-ಸೀತಾಕಾಂತ ಮಹಾಪಾತ್ರ
ಒರಿಸ್ಸಾದ ದಟ್ಟ ಕಾಡಿನಲ್ಲಿ, ಹಾಲು ಬೆಳಗು ತುಂಬಿದ್ದ ತಿಂಗಳ ಇರುಳಿನಲ್ಲಿ, ಬುಡಕಟ್ಟು ಒಂಟಿ ಹಾಡಿ ಒಂದಾಗಿ ಹೋಗಿತ್ತು. ಅಂದು ಪೊಯಸ್ (ಜನವರಿ) ತಿಂಗಳ ಹುಣ್ಣಿಮೆ ರಾತ್ರಿ. ಅದು ಮುಂಡಾ ಜನರ ಅತಿ ದೊಡ್ಡ ಹಬ್ಬಗಳಲ್ಲಿ ಒಂದು, ಹಾಡಿಯ ಒಂದೇ ಬೀದಿಯ ಆಖ್ರಾ (ಕೂಡುತಾಣ) ಹಾಡಿ ಜನರಿಂದ ನಿಧಾನವಾಗಿ ತುಂಬತೊಡಗಿತ್ತು. ಹುಡುಗ ಹುಡುಗಿಯರು, ಮುದುಕ ಮುದುಕಿಯರು ತಂಡ ತಂಡಗಳಲ್ಲಿ ಅಲ್ಲಿಗೆ ಬಂದರು, ಏರಿದ ಹುರುಪಿನಲ್ಲಿದ್ದ ಅವರು ಕುಣಿತಕ್ಕೆ ತಕ್ಕ ವೇಷದಲ್ಲಿದ್ದರು. ಇದೇ ಹಾಡಿ ಹಗಲಿನಲ್ಲಿ ಮುಸುಂಡಿತನದ ಮುಖ ಹೊತ್ತು ಗಲೀಜಾಗಿಯೂ ಸಾಧಾರಣವಾಗಿಯೂ ನನಗೆ ಕಂಡು ಹೆಚ್ಚು ಹೊತ್ತೇನೂ ಕಳೆದಿರಲಿಲ್ಲ. ಬೆಳುದಿಂಗಳ ಮಾಟ ಮತ್ತು ಹರುಷದ ಉಬ್ಬು ಅಡೆತಡೆ ಇಲ್ಲದೆ ಸುತ್ತಲೂ ಹಬ್ಬಿ ಅದನ್ನು ಬದಲಿಸಿತ್ತು. ಅವರು ಕುಣಿದರು, ಹಾಡಿದರು, ಮೈ ಮರೆತು ನಲಿದರು. ಈ ಹಾಡು ಕುಣಿತಗಳು ಪ್ರ್ರಾಚೀನವಾದವು, ಕಾಲವನ್ನು ಮೀರಿದವು, ಅವು ಸುತ್ತಲ ಬೆಟ್ಟ ಗುಡ್ಡಗಳಷ್ಟು ಹಿಂದಿನವು, ಚಂದಿರನಷ್ಟು ಹಳೆಯವು. ಅವರ ಸುತ್ತ ತಲೆಯೆತ್ತಿ ಬೆಳೆಯುತ್ತಿರುವ ಹೊಸ ಜಗತ್ತಿನಿಂದ ಅಂದರೆ ಗರ್ಭ ನಿರೋಧಕ ಮಾತ್ರೆ, ಕ್ರಿಮಿಕೀಟನಾಶಕ, ರಸಗೊಬ್ಬರ, ಸರಕಾರದ ಹಳ್ಳಿ ಮಟ್ಟದ ಕಾರ್ಯಕರ್ತರು, ಜೀಪು, ಕ್ಷೇತ್ರ ಅಭಿವೃದ್ಧಿಯ ಜಗತ್ತಿನಿಂದ ಆಶು ಕವಿತೆಗಳೂ ಪ್ರಕ್ಷಿಪ್ತಗಳೂ ಹೊರಹೊಮ್ಮುತ್ತಿದ್ದವು. ಕುಣಿಯುವ ಪಡ್ಡೆ ಹುಡುಗರೆ ಈ ಹೊಸ ಜಗತ್ತನ್ನು ಅಲ್ಲೊಂದು ಚೂರು ಇಲ್ಲೊಂದು ಚೂರು ಹಾಡುಗಳಲ್ಲಿ ಸೇರಿಸಿದ್ದಾರೆ. ಬುಡಕಟ್ಟು ಮುದುಕನೊಬ್ಬ ನನ್ನ ಬಳಿ ಕುಳಿತು ಕುಣಿತ ನೋಡುತಿದ್ದ. ಗಂಟಲ ಮಟ್ಟ ಕುಡಿದಿದ್ದ ಆತ ಮೈ ಮರೆತಿದ್ದ. ಮಾಗಿ ಕಾಲದ ಮರ ರಂಗುರಂಗಾಗಿ ಚಿಗುರೊಡೆದಂತೆ ಅವನು ಒಮ್ಮೆಗೆ ಹಾಡಲು ಶುರು ಮಾಡಿದ. ಅವನ ಕಂಚಿನ ಕಂಠ ಹೊರಸೂಸುತ್ತಿದ್ದ ಇಂಪಾದ ಹಾಡಿನ ನವುರು ಯಾತನೆ ಈಗಲೂ ನನಗೆ ಕೇಳುತ್ತಿದೆ. ಅದು ಪ್ರಕೃತಿಯ ಭಾಗವಾಗಿತ್ತು. ಬೋಳು ಬೆಟ್ಟಗುಡ್ಡಗಳು ಹಾಗೂ ಬಯಲಾದ ಕಾಡಿನ ಇರುಳ ಒಂಟಿ ಚಂದಿರನ ಹಾಲುಬಿಳುಪಿನದೇ ದನಿಯಿದ್ದಂತೆ ಇತ್ತು. ಈ ಪರಿಸರದಲ್ಲಿ ಒಳತೂರಿರುವ ದುರಂತದ ಕಾರಣಗಳು ನನಗೆ ನಂತರ ಹೊಳೆಯಿತು. ಈ ಬುಡಕಟ್ಟು ಜನಾಂಗ ತಮ್ಮ ಸಂಸ್ಕೃತಿಯ ಸ್ವತಂತ್ರ ರೀತಿ ನೀತಿ ಹಾಗೂ ಸ್ವಂತಿಕೆಯನ್ನು ಅಚ್ಚಳಿಯದಂತೆ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಆಧುನಿಕ ಸಮಾಜದೊಂದಿಗೆ ಒಗ್ಗೂಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿತ್ತು. ಅವರನ್ನು ಕೇವಲ ನಗರದ ಪರಿಣತರ ಅಧ್ಯಯನಕ್ಕಾಗಿ ಒತ್ತೊತ್ತಾದ ಕಾಡಿನ ನಡುವೆ 'ಘನತೆವೆತ್ತ ಕಾಡು ಮನುಷ್ಯ'ನ ಹಾಗೆ, ವಸ್ತು ಸಂಗ್ರಹಾಲಯದ ವಸ್ತು ನಮೂನೆಗಳ ಹಾಗೆ, ಆಧುನಿಕ ಸಮಾಜದ ಕಳಂಕ ತಟ್ಟದ ಹಾಗೆ ಬೇರೆಯಾಗಿರಿಸಿ ಕಾಪಾಡಬಾರದು, ನಡೆಸಿಕೊಳ್ಳಬಾರದೆನ್ನುವ ಸಾರ್ವಜನಿಕ ನೀತಿ ಸರಿಯಾಗಿಯೆ ಇದೆ. ಆದರೆ ಬುಡಕಟ್ಟುಗಳಲ್ಲಿ ಸಮಾಜೋ-ಆಥರ್ಿಕತೆಯನ್ನು ಸಮನಾಗಿ ಅನ್ವಯಿಸಿದರೆ ಅವರ ಸಂಸ್ಕೃತಿ ನೆಲೆ ಕಳೆದುಕೊಳ್ಳುವುದಿಲ್ಲವೆ ? ಇದರಿಂದ ಬುಡಕಟ್ಟುಗಳಲ್ಲಿ ಎದ್ದು ಕಾಣುವ ಉತ್ಸಾಹದ ಉಬ್ಬು, ಚುರುಕುತನ, ಅದಮ್ಯ ಶಕ್ತಿಯ ಮೂಲಬೇರು ಒಣಗಿಹೋಗದೆ ? ಬುಡಕಟ್ಟಿನ ಸ್ವಂತಿಕೆ ಸಾರುವ ತೋಂಡಿ ಸಂಪ್ರದಾಯದ ಹಾಡುಗಳು ಅವರ ಕಿರಿಯ ತಲೆಮಾರಿನವರ 'ಪಿಲ್ಸು' ಮತ್ತು 'ಕ್ರೀಮಿಕೀಟನಾಶಕ'ಗಳ ಆರೈಕೆಯಿಂದ ಮರೆತುಹೋಗಬಹುದು, ಮೂಲೆಗುಂಪಾಗಬಹುದು, ಅಥವಾ ಅಡ್ಡಜಾತಿಯ ತಳಿಯಾಗಬಹುದಲ್ಲವೆ ? ಸಾಂಸ್ಕೃತಿಕ ಬದಲಾವಣೆ ಮತ್ತು ನಯ ನಾಜೂಕಿನ ಬೆಳವಣಿಗೆಯಿಂದ ಈ ಸರಳ ಆದಿವಾಸಿ ಜನಾಂಗದ ಸಾಚಾ ಜೀವನ, ಕಲಾ ರಚನೆಗಳು, ಹಾಡುಗಳು ಹಾಳಾಗಬಹುದಲ್ಲವೆ ? ಈ ಹಾಡು ಕುಣಿತಗಳೆ ಕುರುಹುಗಳಾದ ಅವರ ಸಾಮಾಜಿಕ ಪರಿಸರವನ್ನೆ ಅವರ ಹೆಚ್ಚು ಕಲಿತ ವಿದ್ಯಾವಂತ ಪೀಳಿಗೆ ತಳ್ಳಿಹಾಕಬಹುದಲ್ಲವೆ? ಈ ಹಾಡುಗಳು ಖಂಡಿತ ಕಲೆ ಹಾಕಲು ತಕ್ಕುದಾಗಿವೆ, ಅವು ಬಹುಶಹ ಹಾಡಲಾಗದೆ ಮರೆತು ಮರೆಯಾಗುವ ಮುನ್ನ ಜೋಪಾನ ಮಾಡಬೇಕು.
ಆದಿವಾಸಿ ಜನರ ಹಾಡು ಅಥವಾ ಕವಿತೆಯೆನ್ನುವುದು ಹಾಡುವುದು, ಕುಣಿಯುವುದು, ಹಬ್ಬಗಳ ಆಚರಣೆ, ಸಾಮಾಜಿಕ ಸಮಾರಂಭಗಳ ಊರೊಟ್ಟಿನ ಕೆಲಸಕಾರ್ಯಗಳೆಲ್ಲದರ ಒಂದಂಗ. ಹಾಡು, ಕುಣಿತ ಮತ್ತದರ ಸಂಬಂಧದಲ್ಲಿ ನಡೆಸುವ ಹಬ್ಬಗಳ ಆಚರಣೆ ಒಂದಕ್ಕೊಂದು ನಿಕಟವಾಗಿ, ಸಾರಭೂತವಾಗಿ ಹೆಣೆದುಕೊಂಡಿರುತ್ತವೆೆ. ಪ್ರತಿಯೊಂದು ಮುಖ್ಯ ಧಾಮರ್ಿಕ ಹಬ್ಬ ಇಲ್ಲವೆ ಸಮಾಜೋ-ಧಾಮರ್ಿಕ ಆಚರಣೆಗಳನ್ನು ಆಚರಿಸಲು ಬುಡಕಟ್ಟುಗಳಲ್ಲಿ ಪ್ರತ್ಯೇಕ ಹಾಡು ಕುಣಿತಗಳಿವೆೆ. ಈ ಹಾಡುಗಬ್ಬಗಳನ್ನು ಒಟ್ಟು ಸಮುದಾಯ ಚಟುವಟಿಕೆಯ ಅಂಗವಾಗಿ ನೋಡುವ ಅವಶ್ಯಕತೆಯಿದೆ. ಈ ಮಾತು ಆಧುನಿಕ ಕಾವ್ಯ್ಕಕ್ಕೆ ಅನ್ವಯಿಸದು.
ಪರಿಣತ ಪ್ರದರ್ಶನಕಾರರು ವಿಶೇಷವಾಗಿ ಹಿರಿಯ ತಲೆಮಾರಿಗೆ ಸೇರಿದವವರು ತಮ್ಮ ಹಾಡುಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಹೆಚ್ಚಿನ ಪಾಲು ಹಾಡುಗಳೆಲ್ಲ ಬಾಯಿಂದ ಬಾಯಿಗೆ ಹರಡುತ್ತ ಸಾಗುತ್ತವೆ. ಅದರ ಬೇರುಗಳು ಬುಡಕಟ್ಟಿನ ಸಮುದಾಯ ಜೀವನದ ಆಳದಲ್ಲಿ ಹುದುಗಿಹೋಗಿವೆ. ಇಲ್ಲಿ ಹಾಡು ಕಟ್ಟುವ ಜನರ ತಂಡ ಬೇರೆಯಾಗಿರುವುದಿಲ್ಲ, ಯಾವುದೇ ಹಾಡನ್ನು ಪತ್ತೆ ಮಾಡಿ ಎಲ್ಲರ ಗಮನಕ್ಕೆ ತಂದುದಕ್ಕಾಗಿಯಾಗಲೀ ಆಶು ಕವಿತೆ ರಚನೆ ಮಾಡಿದುದಕ್ಕಾಗಿಯಾಗಲೀ ಹೆಸರು ಪಡೆದು ಮಾನ್ಯರಾಗುವ ಪ್ರಯತ್ನವಿಲ್ಲ. ಬಹುಪಾಲು ಹಾಡುಗಳೆಲ್ಲ ಹಿಂದಿನವರಿಂದಲೆ ಬಂದಿದ್ದು, ಪ್ರದರ್ಶನಕಾರರು ಅವನ್ನು ತಮ್ಮ ಹಿರಿಯರಿಂದ ಕಲಿತು ಹಳೆಯ ರೂಢಿ-ವಾಡಿಕೆಯನ್ನು ಮುಂದುವರೆಸಿ ಅವನ್ನು ಉಳಿಸಿಕೊಳ್ಳುತ್ತಾರೆ.
ಹಾಡುಗಬ್ಬಗಳು ಸಾಮಾನ್ಯವಾಗಿ ಕುಣಿವ ಜನರ ಜೊತೆ ಇರುತ್ತವೆ. ಪದಗಳನ್ನು ಉಸುರುವುದು ಮತ್ತು ಮೈ ಕುಲುಕಿಸಿ ಕುಣಿಯುವುದು ಇವು ಅವರೆ ವ್ಯಾಖ್ಯೆ ಮಾಡಿ ವಿವರಿಸುವಂತೆ ಸಮಾಜೋ-ಧಾಮರ್ಿಕ ಮತ್ತು ಕ್ರಿಯಾವಿಧಿ ಎಂಬ ಗೆರೆಯ ಎರಡು ತುದಿಗಳು. ಆದಿವಾಸಿ ಕುಣಿತದ ಹೆಸರಾಂತ ಪರಿಣತ ಕಟರ್್ ಸ್ಯಾಚ್ಸ್ ಹೇಳುವ ಪ್ರಕಾರ ಬುಡಕಟ್ಟು ಜನರಿಗೆ ಕುಣಿತ ತಮ್ಮ ಸುತ್ತಲ ಪರಿಸರದ ಮೇಲೆ ಹಿಡಿತ ಸಾಧಿಸುವ ಹಾದಿ''ೆಯಾಗಿದೆ. ನಿಸರ್ಗದ ಮೇಲೆ ಹಿಡಿತ ಸಾಧಿಸುವುದೆಂದರೆ ಸಹಾನುಭೂತಿಯನ್ನು ಮರುಹುಟ್ಟಿಸುವ ಮಾನಸಿಕ ಪ್ರಕ್ರಿಯೆ ಮೂಲಕ ತನ್ನನ್ನೆ ವ್ಯಕ್ತಪಡಿಸುವುದು. ಮರುಹುಟ್ಟಿನಲ್ಲಿ ಮೈಯ್ಯ ಅಲುಗಾಟದ ಸನ್ನೆಗಳು, ಅದರ ಶಾಬ್ದಿಕ ಸುಳಿವುಗಳು ಹಾಗೂ ನಿದರ್ಿಷ್ಟ ಕಾರ್ಯವಿಧಿಗಳು ಒಂದುಗೂಡುತ್ತವೆ. ಉದಾಹರಣೆಗೆ ಮುಂಡಾ ಜನರ ಸುರಹುಲ್ ಹಬ್ಬ ಒಂದು ರೀತಿಯಿಂದ ಸಸ್ಯ ಉತ್ಸವವಾದರೆ, ಮತ್ತೊಂದು ರೀತಿಯಿಂದ ಫಲವಂತಿಕೆ ಆಚರಣೆ. ಹಬ್ಬದ ದಿನ ಸ್ನಾನ ಮಾಡುವುದು, ಬುಟ್ಟಿಗಳಲ್ಲಿ ಅಕ್ಕಿಯನ್ನು ರಾಶಿ ಹಾಕುವುದು, ಅಕ್ಕಿಯಿಂದ ಮಾಡಿದ ಹೆಂಡವನ್ನು ಹಾಡಿಯ ಹಿರಿಯರಿಗೆ ಒಪ್ಪಿಸುವುದು, ಬತ್ತವನ್ನು ಬಿತ್ತನೆಗೆ ಬಳಸುವುದು ಫಲವಂತಿಕೆ ಆಚರಣೆಯ ಜೊತೆ ಸೇರಿಕೊಂಡಿದೆ. ಹೀಗಿದು ಬುಡಕಟ್ಟಿನಲ್ಲಿ ಹೆಚ್ಚು ಹೆಚ್ಚು ಜನ ಗಂಡು ಮಕ್ಕಳು ಹೆಣ್ಣು ಮಕ್ಕಳು ಬರಲೆಂದು ಬೇಡುವ ಪ್ರಾರ್ಥನೆಯಾಗಿದೆ. ಹಬ್ಬದಂದು ಹಾಡಿಯಾಚೆಯಿರುವ ಹಾಡಿ ದೇವತೆ ಸರಣಳ ಬಳಿಗೆ ಸುರಹುಲ್ ಮೆರವಣಿಗೆ ಹೊರಡುತ್ತದೆ. ಮನ ತಣಿಯುವಷ್ಟು ಕುಡಿಯುತ್ತ, ಹಾಡುತ್ತ ಹಬ್ಬವನ್ನು ಆಚರಿಸುತ್ತಾರೆೆ. ಕುಣಿತದ ಶೈಲಿ ಹಾಡಿನ ಶಬ್ದ ಮತ್ತು ಅರ್ಥಗಳೊಂದಿಗೆ ಸಾರಮೂಲ ಸಂಬಂಧ ಹೊಂದಿದ್ದು, ವಿಧಿಯಾಚರಣೆ ಅದರೊಂದಿಗೆ ಜರಗುತ್ತದೆ.
ಹಾಡು ಕಟ್ಟುವವರು ಹೇಳಹೆಸರಿಲ್ಲದೆ ಉಳಿಯುವುದು ಆದಿವಾಸಿ ಸಮಾಜದ ಒಂದು ಗಮನ ಸೆಳೆಯುವ ಸಂಗತಿ. ಅಲಿಖಿತ ಭಾಷೆ, ಜಟಿಲ ಸಮಾಜ ರಚನೆ ಹಾಗೂ ಸಮುದಾಯದೊಂದಿಗೆ ಒಡನಾಡುವ ಬೆರಗು ಹುಟ್ಟಿಸುವ ಅಂಶವೆ ಹಾಡುಗಳನ್ನು ದಾಟಿಸುತ್ತದೆ. ಅವು ಬಹುಮಟ್ಟಿಗೆ ಬದಲಾಗದೆ ವಷರ್ಾನುಗಟ್ಟಲೆ ಉಳಿದು ಬಂದಿರುವುದು ಅದರ ಪದಗಳ ಜೋಡಣೆ, ಮೈ ಮಾಟದ ನಮೂನೆ ಹಾಗೂ ನುಡಿಚಿತ್ರ ಮಾಲೆಗಳ ಅಲಿಖಿತ, ಮೌಖಿಕ ಗುಣದಿಂದಾಗಿಯೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನಾಮಧೇಯತೆೆಯು ಬರಹಗಾರ ತನ್ನ ಬರವಣೆಗೆಯಿಂದ ಅಪಮಾನಿತನಾಗಿರುವುದನ್ನು ಅಥವಾ ಹೆಸರು ನಮೂದಿಸುವ ಮೂಲಕ ಎದುರಿಸಬೇಕಾದ ಕಷ್ಟನಷ್ಟಗಳಿಗೆ ಹೆದರಿರುವುದನ್ನು ಸೂಚಿಸುತ್ತದೆ. ಆದರೆ ಆದಿವಾಸಿ ಸಮಾಜದಲ್ಲಿ ಬರಹಗಾರನ ಹೆಸರನ್ನು ಸುಮ್ಮನೆ ಅಸಡ್ಡೆ ಮಾಡಲಾಗಿದೆ'' ಎಂದು ರಾಬಟರ್್ ಗ್ರೇವ್ಸ್ ಹೇಳುತ್ತಾರೆ. ಈ ಅಸಡ್ಡೆತನ ಬುಡಕಟ್ಟು ಜನರ ಮೂಲ ಸ್ವಭಾವದಲ್ಲಿದೆ, ಅವರಿಗೆ ಮುಖ್ಯವಾದದು ಹಾಡು ಹೊರತು ಹಾಡುಗಾರನಲ್ಲ. ಈ ಬುಡಕಟ್ಟಿನ ಜನರನ್ನು ಅಷ್ಟರಮಟ್ಟಿಗೆ ಕೊನಾರ್ಕದಲ್ಲಿ, ಖುಜುರಾಹೊದಲ್ಲಿ ಹಾಗೂ ಈ ನೆಲದ ಮೇಲಿರುವ ಎಲ್ಲ ಶಿಲ್ಪಕಲೆಗಳು, ಕಟ್ಟಡಗಳು, ಹಾಗೂ ಚಿತ್ರಕಲೆಗಳಲ್ಲಿ ಮಾನವ ಕಲಾ ಪರಂಪರೆಯನ್ನು ಸಮೃದ್ಧಗೊಳಿಸಿಯೂ ತಮ್ಮ ಹೆಸರು ನಮೂದಿಸದೆ ಹೋದ ಅನಾಮಿಕ ಕಲಾವಿದರೊಂದಿಗೆ ಹೋಲಿಸಬಹುದು. ಇಪ್ಪತ್ತನೆಯ ಶತಮಾನದಲ್ಲಿ ಬರಹಗಾರನನ್ನು ಮುಂಚೂಣಿಗೆ ತಂದು ನಿಲ್ಲಿಸಿರುವುದು ಅವನ ಹೆಚ್ಚುಗಾರಿಕೆಯಾದ 'ಹಮ್ಮು', ಅಹಂ ಮೇಲೆ ಒತ್ತು ಹಾಕುವುದು ಬುಡಕಟ್ಟು ಮನಸ್ಥಿತಿಗೆ ತಿಳಿಯದು. ಹಾಡು ರಚಕರಿಗೆ ಹೆಸರು ಮಾಡುವ, ಜನಪ್ರಿಯತೆ ಗಳಿಸುವ ವ್ಯಕ್ತಿ ಮಟ್ಟದ ಯಾವುದೇ ಬಯಕೆ, ಆಸೆಗಳಿಲ್ಲದಿರುವುದೆ ಈ ಹಾಡುಗಳ ಸಾಚಾತನ ಮತ್ತು ಸತ್ವವನ್ನು ಹೆಚ್ಚಿಸಿದೆೆ, ಹಾಡುಗಳು, ಹಾಡು ಕಟ್ಟಿದವರ ಒಳಮಿಡಿತಗಳು ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಉಳಿದಿವೆ. ಬುಡಕಟ್ಟು ಹಾಡುಗಾರ ತನಗಾಗಿ ತಾನೆ ಹೆಚ್ಚಿಗೇನು ಬಯಸಬಲ್ಲ !
ಭಾರತದ ಆದಿವಾಸಿ ಜನಾಂಗದ ಬಾಯಿಯಲ್ಲಿರುವ ಹಾಡಿನ ಜಗತ್ತು ಪೂರ್ತ ಬಯಲಾಗದೆ ಹಾಳಾಗುತ್ತಿರುವ ಜಗತ್ತು. ಆರ್ಚರ್, ಎಲ್ವಿನ್ ಹಾಗೂ ಇನ್ನಿತರ ಕೆಲವೆ ಕೆಲವು ಪರಿಣತರು ದೊಡ್ಡ ಹರವುಳ್ಳ ಈ ಹಾಡುಗಬ್ಬದ ಕೆಲವು ಎಳೆಗಳನ್ನು ಕಲೆಹಾಕಿ ಒಂದೆಡೆ ಒಟ್ಟುಗೂಡಿಸಿದ್ದಾರೆ. ಅವರ ಈ ಪ್ರಯತ್ನ ದೊಡ್ಡ ಪರ್ವತದ ಮೂಲೆ ಮುಟ್ಟಿದಂತೆ, ಅಷ್ಟೆ. ನೂರಾರು ಸಾವಿರಾರು ಹಾಡುಗಳು ದಾಖಲಾಗದೆ ಉಳಿದಿವೆ. ಸಮಾಜೋ-ಆಥರ್ಿಕತೆಗೆ ವೇಗವಾಗಿ ಬದಲಾಗುತ್ತಿರುವ ಇತ್ತೀಚಿನ ಪರಿಸ್ಥಿತಿಯಲ್ಲಿ ತುಂಬ ಮುಖ್ಯವಾದುದು ಅಂದರೆ ಹಾಡುಗಳು ಹಾಳಾಗುವಂತೆ ಅವರೆ ಮಾಡಬಹುದು ಇಲ್ಲವೆ ಗುರುತಿಸಲಾಗದಂತೆ ತಿರುಚಿಟ್ಟು ಕೆಡಿಸಿಡಬಹುದು. ಬುಡಕಟ್ಟುಗಳು ಬಹು ದೊಡ್ಡ ಸಂಖ್ಯೆಯಲ್ಲೆ ಇವೆ. ಭಾರತದ ಮೂರು ಪೂರ್ವ ರಾಜ್ಯಗಳಾದ ಒರಿಸ್ಸಾ, ಬಿಹಾರ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಸರಿಸುಮಾರು ಒಂದುನೂರು ಆದಿವಾಸಿ ತಂಡಗಳಿವೆ. ಒರಿಸ್ಸಾ ಒಂದರಲ್ಲೆ ಅರವತ್ತೆರಡು ತಂಡಗಳಿವೆ. ಈ ಮೂರೂ ರಾಜ್ಯಗಳಲ್ಲಿ ಆಯ್ಕೆ ಮಾಡಿದ ಏಳು ಆದಿವಾಸಿ ಗುಂಪುಗಳ ಹಾಡುಗಬ್ಬದ ಆಯ್ದ ಚಿಕ್ಕ ಚಿಕ್ಕ ತುಂಡುಗಳನ್ನು ಇಲ್ಲಿ ಬಿಚ್ಚಿ ನೋಡಬಹುದು.
ಕಾಲಾನುಕಾಲದಿಂದಿರುವ 'ಆದಿವಾಸಿ' ಬುಡಕಟ್ಟುಗಳ ಹಾಡು, ಕತೆ, ಪುರಾಣಕತೆ, ಸಂಸ್ಕಾರವಿಧಿ ಹಾಗೂ ದಂತಕತೆಗಳನ್ನು ಕೇವಲ ಜನಾಂಗಿಕ ವಿವರಗಳೆಂದು ನೋಡಲಾಗಿದೆ. ಜನಾಂಗಿಕ ವಸ್ತು ವಿಷಯಗಳ ಆಥರ್ಿಕ ವಿಶ್ಲೇಷಣೆಯೆ ಶ್ರೇಷ್ಟವೆಂದು ಭಾವಿಸಿದ ಯುಗದಲ್ಲಿ ಅವರನ್ನು ಸರಿಸುಮಾರು ಅಳಿದುಳಿದ ಆಸ್ತಿಯಂತೆ ಹಾಗೂ ಯಾವುದೇ ವಿಷಯದಲ್ಲೂ ಕ್ರಮಬದ್ಧವಲ್ಲದ ರೀತಿಯಲ್ಲಿ, ಕೇವಲ ಸಮಾಜ ಮಾನವಶಾಸ್ತ್ರಜ್ಞನ ಸಹಜ ಕುತೂಹಲದಲ್ಲಿ ನೋಡಿದ್ದು ಅಚ್ಚರಿಯಲ್ಲ. ಈ ಸ್ಥಿತಿ ಭಾರತಕ್ಕೆ ವಿಚಿತ್ರವೇನಲ್ಲ. ಈ ನೋಟ ವಿಶ್ವದ ಎಲ್ಲ ಕಡೆಯೂ ಇದೆ. ತಾಂತ್ರಿಕ ಪ್ರಗತಿಯ ಹಂತಗಳ ಬಗ್ಗೆ ನಾವು ಮಾತಾಡುವ ಹಾಗೆ, ಅದೇ ಧಾಟಿಯಲ್ಲಿ ಸಂಸ್ಕೃತಿಯ ಕ್ಷೇತ್ರದಲ್ಲೂ ಪ್ರಗತಿ ಅಥವಾ ಅರಳುವಿಕೆ ಎಂದು ಹೇಳಲಾಗದೆ ಮನವರಿಕೆಯಾಗುವ ಕಾಲವೂ ಬರುತ್ತದೆ. ಸಮಾಜಗಳ ಸಂಸ್ಕೃತಿಗಳಲ್ಲಿ ಸಮಾನ ಬೆಳವಣಿಗೆ ಎಂಬುದು ಇರುವುದಿಲ್ಲ. ಆಥರ್ಿಕ ಬಿಚ್ಚುನೋಟಗಳಿಗೆ ಸಂಸ್ಕೃತಿಯ ಎಲ್ಲ ಅಂಶಗಳು ಸಂದೇಹಾಸ್ಪದವಾಗಿರುವುದಿಲ್ಲ. 'ಆದಿವಾಸಿ' ಎಂಬ ಹೆಸರಿನ ಪದಪ್ರಯೋಗವೆ ಅಸಂಗತವಾಗಿದೆ. ಈ ನಿಟ್ಟಿನಿಂದ ನೋಡುವುದಾದರೆ ಅಜ್ಟೆಕರು, ಮಾಯಾ ಜನರು ಕೂಡ ಬಹುಶಹ 'ಆದಿವಾಸಿ'ಗಳೆ. ಸಂಸ್ಕೃತಿಯ ಮಟ್ಟಗಳು ಸಂಪತ್ತ್ತಿನ ಹೆಚ್ಚಳ, ಒಬ್ಬ ವ್ಯಕ್ತಿಯ ಆದಾಯ ಇಲ್ಲವೆ ವೆಚ್ಚ ಮಾಡುವ ಮಟ್ಟ ಅಥವಾ ವ್ಯಕ್ತಿಯ ದುಂದುಗಾರಿಕೆ ಬಲದ ಶೇಕಡವಾರು ಅನುಪಾತದೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಆದರೆ ಈ ವಿವರಗಳು ವ್ಯಕ್ತಿ ವಿಶೇಷ ಗುಣ, ಕಟ್ಟುಪಾಡು ಕುರಿತ ನಡೆವಳಿಕೆ ಹಾಗೂ ಸಾಮಾಜಿಕ ಕಾರ್ಯಗಳು ಮತ್ತು ಗುಣ ಸ್ವಭಾವ ನಮೂನೆಗಳನ್ನು ಬಿಚ್ಚುನೋಡಲು ಸಮಾಜ ಮಾನವಶಾಸ್ತ್ರಕ್ಕೆ ಅತಿ ಮಹತ್ವದ ಪರಿಕರಗಳಾಗಿ ಕಂಡಿದೆೆ. ವೈಜ್ಞಾನಿಕ ಪ್ರವೃತ್ತಿ ಅರ್ಥಶಾಸ್ತ್ರದ್ದಾಗಲೀ ರಾಜಕೀಯ ಮಾನವಶಾಸ್ತ್ರದ್ದಾಗಲೀ ಅದು ವ್ಯಕ್ತಿಗಳ ನಡುವಿನ ಸಂಬಂಧ, ವ್ಯಕ್ತಿಗತ ಪ್ರತಿಕ್ರಿಯೆ ಹಾಗೂ ಸಾಮಾಜಿಕ ಪ್ರಕ್ರಿಯೆಗಳ ನಿಟ್ಟಿನಲ್ಲಿ ನೋಡಲು ಸಾಧ್ಯವಾಗದಿದ್ದಲ್ಲಿ ತಪ್ಪಿತಸ್ಥವಾಗಬಲ್ಲುದು. ಮುಂದುವರೆದು, ಈ ಹಾಡುಗಳು, ದಂತಕತೆಗಳು, ಪುರಾಣ ಕಥೆಗಳು ಬಹು ದೊಡ್ಡ ಶಕ್ತಿ ಪಡೆದ ಒಳ್ಳೆಯ ಸಾಹಿತ್ಯವೆಂದು ಅರಿಯಬೇಕಾದ ಸರಿಯಾದ ಕಾಲ ನಮಗೀಗ ಒದಗಿಬಂದಿದೆ. ಲಿಖಿತ ಭಾಷೆಯ ಗೈರುಹಾಜರಿ, ಹಸ್ತಪ್ರತಿ ಅಥವಾ ಹಾಡುಗಳ ಘೋಷಿತ ಕತೃತ್ವ ಅಥವಾ ನಿರೂಪಣೆ - ಇವು ಯಾವ ರೀತಿಯಲ್ಲೂ ಹಾಡುಗಬ್ಬಗಳನ್ನು ಉನ್ನತ ಗುಣಮಟ್ಟದಿಂದ ದೂರ ಸೆಳೆದಿಲ್ಲ. ಈ ಎಲ್ಲ ಹಾಡುಗಬ್ಬಗಳ ರಚನಕಾರರು ಹೇಳಹೆಸರಿಲ್ಲದಂತಿದ್ದಾರೆ. ಆದರೆ ರಾಬಟರ್್ ಗ್ರೇವ್ಸ್ ಒತ್ತಿ ಹೇಳುವಂತೆ ಆಧುನಿಕ ಸಮಾಜದಲ್ಲಿ ಕಂಡುಬರುವ ಸ್ಥಿತಿಗೆ ವಿರುದ್ಧವಾಗಿ ಬುಡಕಟ್ಟು ಸಮಾಜದ ರಚನೆಗಾರ ಹೇಳಹೆಸರಿಲ್ಲದಂತೆ ಉಳಿಯಲು ಒಲಿದಿರುವುದು ಎಲ್ಲ ಕಲೆಗಳ ಸೃಷ್ಟಿಕರ್ತ ಒಬ್ಬ ವ್ಯಕ್ತಿ ಎಂಬ ಹಕ್ಕು ಸ್ಥಾಪಿಸುವ 'ಹಮ್ಮಿ'ನ ಹೆಚ್ಚುಗಾರಿಕೆ ಇನ್ನಿಲ್ಲದಂತೆ ಮಾಡುವ ಉದ್ದೇಶದಿಂದಲೆ ಹೊರತು ಗೊಂದಲವಾಗಲೀ ಕಳಂಕವಾಗಲೀ ತಪ್ಪಿಸಲು ಅಲ್ಲ.
ಆದಿವಾಸಿಗಳ ಬರೆದಿಡದ ಕಾವ್ಯವನ್ನು ಮಾನವಶಾಸ್ತ್ರಜ್ಞರು ಪೂತರ್ಿ ಅಸಡ್ಡೆಯಿಂದ ಕಂಡಿದ್ದಾರೆಂದು ಆರ್ಥರ್ ವ್ಯಾಲೆ ಕೆಲ ವರುಷಗಳ ಹಿಂದೆ ದೂರಿದ್ದಾರೆ. ಮಾನವಶಾಸ್ತ್ರಜ್ಞರ ಆಸಕ್ತಿ ಅಲೆ ಅಲೆಯಾಗಿ ಒನೆದಾಡಿದೆ. ಈಗ ಎಲುಬು, ಈಗ ಬಂಧು-ಬಳಗ, ಈಗ ಪಾತ್ರ ನಮೂನೆ''. ಹೀಗೆ ಇದುವರೆಗೂ ಹಾಡುಗಳು ಅವರ ಮನಸ್ಸನ್ನು ಸೆಳೆದಿಲ್ಲ. ಈ ಹೇಳಿಕೆಯನ್ನು ವಿವರಿಸುವುದೇನೋ ತುಂಬ ಸುಲಭ. ಉದಾ: ಬುಡಕಟ್ಟು ಜೀವನ ಕುರಿತ ಇತೀಚಿನ ಅತ್ಯಂತ ಸಾಮಾನ್ಯ ಪುಸ್ತಕ ಬೊಯಸ್ರ 'ಸಾಮಾನ್ಯ ಮಾನವಶಾಸ್ತ್ರ'ದಲ್ಲಿ ಹಾಡುಗಳನ್ನು ಕುರಿತು ನಾಲ್ಕೈದು ಪುಟಗಳಿದ್ದರೆ, ಇದಕ್ಕೆ ವಿರುದ್ಧವಾಗಿ ಹಣಕಾಸು ಸಂಸ್ಥೆ ಕುರಿತು ನೂರು ಪುಟಗಳಿವೆ. 1934ರಲ್ಲಿ ಲಂಡನ್ ನಗರದಲ್ಲಿ ನಡೆದ ಮಾನವಶಾಸ್ತ್ರಜ್ಞರ ಸಭೆಯಲ್ಲಿ ಸುಮಾರು ನೂರು ಲೇಖನಗಳು ಮಂಡಿತವಾಗಿದ್ದು, ಅದರಲ್ಲಿ ಒಂದು ಲೇಖನವೂ ಹಾಡುಗಳ ಬಗೆಗೆ ನಿದರ್ಿಷ್ಟವಾಗಿ ಹೇಳದಿರುವುದು ರೂಢಿ ವಾಡಿಕೆಯಲ್ಲಿರುವ ಸಾಂಪ್ರದಾಯಿಕ ಹಾಡುಗಳ ಮೇಲೆ ಕೆಲಸ ನಡೆಯದೆ ಇರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಹಾಡು ಎಂಬುದು ಬೇರೆ ಮಾಡಲಾಗದ, ಸ್ವತಂತ್ರ ವಿಷಯ ಮತ್ತು ಸಂಗೀತ, ಕುಣಿತ, ಮತ್ತಿತರ ಕಾರ್ಯ ಚಟುವಟಿಕೆಗಳ ಕಟ್ಟು ಮೀರದುದು ಎಂದು ಹೇಳಿರುವುದೇನೋ ಸರಿ. ಆದರೆ ಅಷ್ಟು ವಿಶಾಲವಲ್ಲದ ವಿಚಾರಗಳ ಕುರಿತು ಕೆಲವು ಲೇಖನಗಳನ್ನು ಬರೆಯಲಾಗಿದೆ. ಉದಾಹರಣೆಗೆ 'ಹಲ್ಲು ಹುಟ್ಟುವ ಸಂಗತಿ ಕುರಿತು'. ಇನ್ನೊಂದು ಬಗೆಯಲ್ಲೂ ಪರೀಕ್ಷೆ ಮಾಡಬಹುದು. ನನ್ನಲ್ಲಿ ಕುಲ ಜನಾಂಗಶಾಸ್ತ್ರ ಸಂಬಂಧದಲ್ಲಿ ನೂರ ಐವತ್ತು ಪುಸ್ತಕಗಳಿವೆ. ನಾಲ್ಕೈದು ಪುಸ್ತಕಗಳು ಮಾತ್ರ ಹಾಡುವಿಕೆಯನ್ನು ನಮೂದಿಸಿವೆ. ಇನ್ನುಳಿದ ಯಾವ ಪುಸ್ತಕದಲ್ಲೂ ಹಾಡನ್ನು ತಕ್ಕ ರೀತಿಯಲ್ಲಿ ಗಮನ ಹರಿಸಿಲ್ಲ.
ಇದು 1940ರಲ್ಲಿ ಇದ್ದ ಸ್ಥಿತಿ. ಈ ಸ್ಥಿತಿ ನಲವತ್ತು ವರ್ಷಗಳ ನಂತರವೂ ಬದಲಾಗಿಲ್ಲ. ಬುಡಕಟ್ಟುಗಳ ತೋಂಡಿ ಸಂಪ್ರದಾಯವನ್ನು ಅಭ್ಯಾಸ ಮಾಡಲಾಗಿದೆ ಎಂಬ ಬಗ್ಗೆ ಅನುಮಾನವಿಲ್ಲ. ಆದಿವಾಸಿಗಳ ಕಾವ್ಯವನ್ನು ಪುಸ್ತಕ ರೂಪದಲ್ಲೂ ಹೊರತರಲಾಗಿದೆ. ಆದರೆ ಸಮಾಜ ಮಾನವಶಾಸ್ತ್ರ ಬುಡಕಟ್ಟಿನ ಹಾಡುಗಳನ್ನು ಸಮಾಜಶಾಸ್ತ್ರೀಯ ಪರಿಶೀಲನ ವಿಧಾನದಲ್ಲಿ ಅಧ್ಯಯನ ಮಾಡಲು ಇನ್ನೂ ದಯೆ ತೋರಿಲ್ಲ. ಇದರೊಂದಿಗೆ ಈ ಹಾಡುಗಳೇನು ಕೇವಲ ಸಮಾಜಶಾಸ್ತ್ರದ ಆಸಕ್ತ ಸಾಹಿತ್ಯವೇನಲ್ಲ. ಅವು ಕಾವ್ಯದ ಅಪಾರ ಒಳತುಡಿತ ಹೊಂದಿವೆೆ. ಭಾರತೀಯ ಬುಡಕಟ್ಟು ಕಾವ್ಯ ಕುರಿತ ವೆರಿಯರ್ ಎಲ್ವಿನ್ರ 'ಛತ್ತೀಸಗಢದ ಜನಪದಗೀತೆಗಳು', 'ಮಾಯಿಕಲ್ಲು ಬೆಟ್ಟದ ಜನಪದ ಗೀತೆಗಳು', 'ಕಾಡಿನ ಹಾಡುಗಳು' (ಕೊನೆಯ ಎರಡು ಕೃತಿಗಳು ಶ್ಯಾಮರಾವ್ ಹಿವಲೆ ಅವರೊಂದಿಗೆ) ಹಾಗೂ ಡಬ್ಲ್ಯು.ಜಿ.ಆಚರರ್್ರವರ 'ನೀಲಿತೋಪು' 'ಪಾರಿವಾಳ ಮತ್ತು ಚಿರತೆ' ಹಾಗೂ 'ಕೊಳಲಿನ ಬೆಟ್ಟ' ಇವು ಜನಪದ ಗೀತೆ ಮತ್ತು ಕವಿತೆಗಳ ಬಗ್ಗೆ ಉನ್ನತ ಅರಿವು ಮೂಡಿಸುವ ಹಾಗೂ ಅವುಗಳ ಒಳತುಡಿತ ಕಟ್ಟಿಕೊಡುವಲ್ಲಿ ಪರಿಣಾಮಕಾರಿ ಕಾಣಿಕೆಗಳಾಗಿವೆ. ಮಾನವಶಾಸ್ತ್ರೀಯ ಅಧ್ಯಯನವಾದ 'ಬೈಗಾ'ದಲ್ಲಿ ಎಲ್ವಿನ್, ಹಾಡುಗಳನ್ನು ವಿಸ್ತಾರವಾದ ಸಾಮಾಜಿಕ ದಾಖಲೆಯಾಗಿ ಬಳಸಿದ್ದಾರೆ. ಸೊಗಸಾದ ಈ ಪುಸ್ತಕದಲ್ಲಿ ಕಾವ್ಯ ಮತ್ತು ಮಾನವಶಾಸ್ತ್ರಗಳು ಒಂದನ್ನೊಂದು ಬಿಟ್ಟಿರದಂತಿವೆ. ಮಾನಶಾಸ್ತ್ರ ಕುರಿತ ಇನ್ನೆರಡು ಪುಸ್ತಕಗಳಲ್ಲಿ ಆಚರರ್್ ಮಾಡಿರುವ ಓರಯಾನರ ಹಾಡುಗಳ ಸೃಜನಶೀಲ ಅನುವಾದ ಆಥರರ್್ ವ್ಯಾಲೆಯ ಚೀನಿ ಕಾವ್ಯದ ಗೆಲುವುಳ್ಳ ಅನುವಾದದ ಪಕ್ವತೆಯನ್ನು ಮೂಲವಾಗಿಟ್ಟುಕೊಂಡಿದೆ. ನಾನು ಇದುವರೆಗೆ ಕಂಡ ಭಾರತೀಯ ಬುಡಕಟ್ಟು ಕಾವ್ಯಗಳಲ್ಲಿ ಕೆಲವು ಚೊಕ್ಕವಾದ ಅನುವಾದ 'ನೀಲಿತೋಪು'ನಲ್ಲಿ ಸೇರಿವೆ. ಇವು ತುಂಬ ನವುರಾದ ಅನುವಾದವಾಗಿದ್ದು, ಓರಯಾನರ ಜೀವನವನ್ನು ಚುರುಕಾಗಿಯೂ ತುಂಬಾ ಸಲುಗೆಯಿಂದಲೂ ತೆರೆದು ತೋರಿಸುತ್ತವೆ. ಇದೇ ಎಡೆಯಲ್ಲಿ ಹೆಮ್ ಬರೂವಾ ಹಾಗೂ ಗೋಪಿನಾಥ ಮೊಹಂತಿಯವರ ಸೇವೆಯನ್ನೂ ಗಮನಿಸಬೇಕು. ಈ ಕೆಲವು ಪುಸ್ತಕಗಳ ಜೊತೆ ಇನ್ನುಳಿದ ಬೆರಳೆಣಿಕೆಯ ಪುಸ್ತಕಗಳನ್ನು ಬಿಟ್ಟರೆ ನಲವತ್ತರ ದಶಕದ ಸೊರಗಿರುವ ಚಿತ್ರವೆ ಎದ್ದು ಕಾಣುವುದು ಶೋಚನೀಯವಾಗಿದೆ.
ದೇಶದ ಎಲ್ಲ ಕಡೆಗಳಲ್ಲಿರುವ ಬೇರೆ ಬೇರೆ ಆದಿವಾಸಿ ಬುಡಕಟ್ಟುಗಳ ಮೌಖಿಕ ಕಾವ್ಯವನ್ನು ಬರೆದಿಡುವ ಕಟ್ಟುನಿಟ್ಟಿನ ಪ್ರಯತ್ನಗಳು ನಡೆದಿಲ್ಲ;. ನಂತರದ ಕಾಲದಲ್ಲಿ ಹಾಡು, ಪುರಾಣ. ಕತೆ, ದಂತಕತೆ, ಒಡಪುಗಳನ್ನು ಬಿಚ್ಚಿನೋಡುವ ಕೆಲಸ ಮುಂದುವರೆಯುತ್ತ್ತದೆ. ಆದರೆ ಅದಕ್ಕೂ ಮೊದಲು ಕಡೆಗಣಿಸಿಯೋ ಹಾಡುವುದು ನಿಂತುಹೋಗಿಯೋ ಅವರ ನೆಪ್ಪಿನಿಂದ ಹಾರಿಹೋಗಿ ಹಾಳಾಗುತ್ತಿರುವ ಈ ಹಾಡು, ಕತೆಗಳನ್ನು ಕಟ್ಟುನಿಟ್ಟಾಗಿ ಒಟ್ಟು ಹಾಕುವ ಕೆಲಸ ಆಗಬೇಕಿದೆ. ಆದಿವಾಸಿಗಳ ಒಂದೊಂದು ಗುಂಪಿನಲ್ಲೂ ಸಾಮಾನ್ಯವಾಗಿ, ಇಂದಿನ ಆಧುನಿಕ ಓದಿನ ಲಾಭ ಪಡೆದ ಕಿರಿಯ ತಲೆಮಾರುಗಳ ಜನ ಬುಡಕಟ್ಟಿನ ಹಾಡು ಕುಣಿತಗಳಲ್ಲಿ ಪಾಲುಗೊಳ್ಳುವುದನ್ನು ಕೀಳಾಗಿ ಕಾಣುತ್ತಾರೆೆ. ಸಾಮಾಜಿಕ ಹಾಗೂ ಆಥರ್ಿಕವಾಗಿ ಮೇಲೇರುವ ಕಟ್ಟಾಸೆಯುಳ್ಳ ಅವರು ಬುಡಕಟ್ಟಿನ ಜನಪದವನ್ನು ಮರೆತುಬಿಡುತ್ತಾರೆ, ತಲೆಮಾರುಗಳು ಉರುಳಿದ ಹಾಗೆ ಕೆಲವು ಹಾಡುಗಳು ಮರೆಯಾಗಿ ಹೋಗುತ್ತವೆ, ಅವನ್ನು ಯಾರೂ ತಿಳಿಯದಂತಾಗಿ ಬಿಡುತ್ತದೆ. ಹತ್ತು ವರುಷದ ಅವಧಿಯೊಳಗೆ ನಿಗದಿತ ಬುಡಕಟ್ಟು ಹಾಡಿಗಳಲ್ಲಿ ಹಾಡುಗಳು ಕಾಣೆಯಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. 1970ರಲ್ಲಿ ಕಟ್ಟಾಸಕ್ತಿಯಿಂದ ಏರಿದ ದನಿಯಲ್ಲಿ ಹಾಡುತ್ತಿದ್ದ ಒಂದು ಹಾಡು ಕೆಲವು ಹಳೆಯ ತಲೆಗಳು ಮರೆಯಾದ ಮೇಲೆ 1978ರಲ್ಲಿ ಯಾರಿಗೂ ಗೊತ್ತಿಲ್ಲದಂತೆ, ಯಾರ ಗೆಪ್ತಿಯಲ್ಲೂ ಉಳಿಯದಂತೆೆ ಇನ್ನಿಲ್ಲವಾಗಿಬಿಟ್ಟಿದೆ. ಆದ್ದರಿಂದ ನಾವು ಎಲ್ಲ ಸಾಂಪ್ರದಾಯಿಕ ಹಾಡುಗಳು, ಪುರಾಣಗಳು, ಕತೆಗಳು, ಒಡಪುಗಳು, ನಂಬಿಕೆ-ನಡಾವಳಿಗಳು, ಜಗತ್ತಿನ ಹುಟ್ಟು ಕುರಿತ ಕತೆಗಳನ್ನು ಮೌಖಿಕ ಸಾಹಿತ್ಯದ ಭಾಗವಾಗಿ ಮಾತ್ರವಲ್ಲ, ಅವರ ಮೌಲ್ಯ ವ್ಯವಸ್ಥೆಗಳು, ಸಾಮಾಜಿಕ ರಚನೆಗಳು, ವ್ಯಕ್ತಿವಿಶೇಷ ಗುಣಗಳು, ಸಾಂಕೇತಿಕ ಪರಿಸರದ ಸಂಬಂಧದಲ್ಲೂ ಆದಷ್ಟು ಬೇಗ ಒಟ್ಟು ಹಾಕಬೇಕು, ಏಪರ್ಾಟು ಮಾಡಬೇಕು ಮತ್ತು ಬಿಚ್ಚಿ ನೋಡಬೇಕು,
ಈ ಬಾಯಿ ಮಾತಿನ ಪದ್ಯಗಳಲ್ಲಿ ವಸ್ತು ನಿಭಾಯಿಸುವ ಕ್ರಮ ಗಟ್ಟಿಮುಟ್ಟಾಗಿದೆ. ಸಾಮಾನ್ಯವಾಗಿ ಊರೊಟ್ಟಿನ ಜೀವನದ ಕೆಲವು ಗೊತ್ತು ಮಾಡಿದ ಅಂಶಗಳು, ಅದರ ಪುರಾಣ ಅಥವಾ ಸಾಂಕೇತಿಕ ರಚನೆಯನ್ನು ಇವು ಒಳಗೊಂಡಿವೆ. ಒಂದು ಅರ್ಥದಲ್ಲಿ ಬುಡಕಟ್ಟಿನ ಇಡೀ ಊರೊಟ್ಟಿನ ಜೀವನ ತೀವ್ರವೂ ಗಾಢವೂ ಒಂದೇ ಬಗೆಯ ಸಾಂಕೇತಿಕ ಪರಿಸರದಿಂದಲೂ ಕೂಡಿದೆ. ಆದ್ದರಿಂದ ನವ್ಯಕಲೆ ಹಾಗೂ ಕಾವ್ಯವನ್ನು ಹೆಣಭಾರ ಮಾಡಿರುವ ಕೇಳುಗರಿಗೆ ದಾಟಿಸುವ ತೊಡಕು, ಚೆಲುವಾನುಭವದ ಅಂತರದ ಸಂಕಷ್ಟಗಳು ಇಲ್ಲಿಲ್ಲ್ಲ. ಆಧುನಿಕ ಸಮಾಜದಲ್ಲಿರುವ ಸಾಂಕೇತಿಕ ಪರಿಸರ ಪೂತರ್ಾ ಚೆದುರಿಹೋಗಿದ್ದು, ಪುರಾಣ ಜಗತ್ತು ಬಹುಪಾಲು ನಗರೀಕೃತ ಸಮುದಾಯಗಳಲ್ಲಿ ಜೀವಂತ ಸಂಪ್ರದಾಯದ ಭಾಗವಾಗುಳಿದಿಲ್ಲ. ಅಲ್ಲಿ ಪುರಾಣವನ್ನು ಮತ್ತೆ ರೂಢಿಗೆ ತರುವ ಪ್ರಯತ್ನ ಮಾಡಿದಾಗ ನಿಜವಾದ ಗಂಡಾಂತರ ಸಾಂಸ್ಕೃತಿಕ ಮಾನವಶಾಸ್ತ್ರಕ್ಕೆ ಎದುರಾಗುತ್ತದೆ ಹೊರತು ಸಾಹಿತ್ಯಕ್ಕಲ್ಲ. ನಾನು ನಂಬಿದಂತೆ ಇದು ಎಲಿಯೆಟ್ ಕಾವ್ಯದ ತೊಡಕು. ಬಂಜರು ಭೂಮಿ (ದಿ ವೇಸ್ಟ್ ಲ್ಯಾಂಡ್)ಯಿಂದ ಚಿನ್ನದ ರೆಂಬೆ (ದಿ ಗೋಲ್ಡನ್ ಬೋ), ವಿಧಿಯಿಂದ ಪ್ರಣಯದ ಕಡೆಗೆ (ಫ್ರಂ ರಿಚುಯಲ್ ಟು ರೊಮಾನ್ಸ್) ವಾಪಸ್ಸು ಹೋಯಿತು. ಬುಡಕಟ್ಟಿನ ಜೀವಂತ ಪುರಾಣಗಳ ಹಾಗೆ ಆಧುನಿಕ ಸಮಾಜ ಅದನ್ನೆಂದೂ ಅರ್ಥ ಮಾಡಿಕೊಳ್ಳಲಿಲ್ಲ ಅಥವಾ ಅದರೊಳಗೆ ಒಮ್ಮೆಯೂ ಮುಳುಗೇಳಲಿಲ್ಲ. ಆದ್ದರಿಂದ ಅತಿ ಉತ್ತಮ ನೆಲೆಯಲ್ಲಿ ವಿದ್ವತ್ ವಲಯದ ಸಾಂಪ್ರದಾಯಿಕ ಮೂಲಕ್ಕೆ ಹಿಂದಿರುಗಿತು, ಅತಿಹೀನ ನೆಲೆಯಲ್ಲಿ ಸಾಂಸ್ಕೃತಿಕ ಮಾನವಶಾಸ್ತ್ರಕ್ಕೆ ಬೇಡದ ವಿಷಯಗಳನ್ನು ತರುವ ಪ್ರಯತ್ನ ಮಾಡಿತು. ಪುರಾಣ ಹಾಗೂ ಪುರಾಣ ಮೂಲದ ಸಾಹಿತ್ಯಕ್ಕೆ ಮರಳುವ ಕಷ್ಟದ ಪ್ರಯತ್ನವನ್ನು ಎಲಿಯೆಟ್ ಹಾಗೂ ಪೌಂಡ್ ವಿಸ್ತಾರವಾಗಿ ಮಾಡಿದರು. ಇವರಿಗೆ ಅಷ್ಟೇ ಗಟ್ಟಿ ದನಿಯಲ್ಲಿ ವಿಮಶರ್ೆಯ ಬೆಂಬಲ ನೀಡಿದ ಪ್ರೊ. ನಾರ್ಥ್ರೋಪ್ ಫ್ರೇ ಹೀಗೆ ಹೇಳುತಾರೆ: ಪಶ್ಚಿಮ ದೇಶಗಳ ಸಾಮಾಜಿಕ ಅರಿವಿನ ಬೇರುಗಳು ಫಲವತ್ತತೆ, ನಿಗೂಢತೆ ಹಾಗೂ ಬುಡಕಟ್ಟಿನ ಎಚ್ಚರವಿಲ್ಲದ ಸ್ಥಿತಿಯಲ್ಲಿ ಎಂದಿಗೂ ಇರಲಿಲ್ಲ. ಆದರೆ ಮುಂಡಾ, ಓರಯಾನ, ಕುಂಧ ಅಥವಾ ಪರಜಾಸರಿಗೆ ಪುರಾಣ ಎಂದಿಗೂ ನೆಲೆಸಿರುವ ದಿಟವಾಗಿದೆ. ಆದ್ದರಿಂದಲೇ ಅವರ ಕವಿತೆ ತುಂಬ ಗಟ್ಟಿಮುಟ್ಟಾಗಿರುತ್ತದೆ. ಮುಂಡಾ ಜನರ ಈ ಹಾಡು ತೆಗೆದುಕೊಳ್ಳೋಣ:
ಮೆತ್ತನೆ ಹಾಸುಗೆ ಕಣ್ತುಂಬ ನಿದ್ದುರೆ
ನಿನ್ನದೆ ಕನಸು ಕಣ್ತುಂಬ| ಎಲೆ ಚೆಲುವೆ
ಎದ್ದೇಳಿ ಬಂದೆ ಬೀದಿಗೆ
ಹಳ್ಳಿ ಹಾದಿ ಮೇಲೆ ಕಲ್ಲೊಂದು ಎಡವಿದೆ
ನೆನಪಲ್ಲಿ ನಿಂತೆ ನಿಂತಲ್ಲೆ | ಕುಲಜಾತಿ
ನನ್ನೆದೆ ಈಟಿ ಹೊಕ್ಕಂಗೆ
ಒಲವಿಗೆ ಎದುರಾಗಿರುವ ಅಡೆತಡೆ ಇಲ್ಲಿ ಕೇವಲ ಮಾನಸಿಕ ಅಡಚಣೆಯಲ್ಲ, ಬಂಡೆ ಕೇವಲ ಭೌತಿಕ ವಸ್ತುವಲ್ಲ- ಇವು ಮಾನಸಿಕ ಸ್ಥಿತಿ ಗತಿಗಳು, ಕಲ್ಲು ಹಿರಿಯರನ್ನು ಹುಗಿದಿರುವ ಸ್ಥಳದ ಗುರುತು ಮಾತ್ರವಾಗಿರದೆ ಗೋತ್ರ ಮತ್ತು ಸಂಬಂಧಗಳ ಸಂಕೇತವೂ ಆಗಿದೆ. ಹುಡುಗ ತಡೆಯೊಂದನ್ನು ಎಡವಿದಾಗ ಅದು ಜಡಗಟ್ಟಿದ ಮನಸ್ಥಿತಿಯಾಗುತ್ತದೆ. ಕಲ್ಲು ಹಿರೀಕರೇ ಆಗಿದ್ದು, ಹಾಡು ನಿರಾಸೆಯನ್ನು ಗಟ್ಟಿದನಿಯಲ್ಲಿ ವ್ಯಕ್ತಪಡಿಸಿದೆೆ. ಹಳೆಯ ರೂಢಿಗಳಿರುವ ಸಮಾಜದಲ್ಲಿ ಕಲ್ಲು 'ಹಾಗೆ ಮಾಡುವ ಹಾಗಿಲ್ಲ'ವೆಂದು ನಿರಾಕರಿಸಿದರೆ ಅದು ಹೆತ್ತವರ ತಕರಾರಿಗಿಂತಲೂ ಹೆಚ್ಚು ಗಟ್ಟಿದನಿಯಲ್ಲಿ ವಿರೋಧ ಮಾಡಿದಂತಾಗುತ್ತದೆೆ.
ಆದಿವಾಸಿಗಳ ಎಲ್ಲ ಹಾಡುಗಳಲ್ಲಿ ಊರೊಟ್ಟಿನ ಕೆಲಸಕಾರ್ಯಗಳು ಅಂದರೆ ಧಾಮರ್ಿಕ ಅಥವಾ ಸಾಮಾಜಿಕ ಕೆಲಸಕಾರ್ಯಗಳು, ಶಬ್ದಗಳು ಮತ್ತು ಕುಣಿತಗಳು ಸಂಕೀರ್ಣ ಗುಂಪಿನ ಒಂದು ಭಾಗ ಮಾತ್ರವಾಗಿರುತ್ತವೆೆ. ಕುಣಿತದ ಜೊತೆಗಿರುವ ನಿಯಮಿತ ಮೈ ಕುಲುಕುವ ನಮೂನೆಗಳು ಅಥವಾ ಮೂಕ ಸನ್ನೆಗಳು, ಅವುಗಳೊಂದಿಗೆ ಕೈ ಚಪ್ಪಾಳೆ ಇಲ್ಲವೆ ತಾಳ ಲಯಕ್ಕನುಗುಣವಾಗಿ ಹೆಜ್ಜೆ ಹಾಕುವ ಸಹಾಯಕ ಕ್ರಿಯೆಗಳು ಪದಗಳ ಜೋಡಣೆ ಮೇಲೆ ವರ್ಚಸ್ಸು ಬೀರುತ್ತವೆ. ಕೇವಲ ಪದ ಜೋಡಣೆ ನಮೂನೆಯಾದ ಹಾಡುಗಳು ಸಂಗೀತ ಮತ್ತು ಚಲನೆಯ ಸಹಾಯವಿಲ್ಲದೆ ತಂತಾನೆ ಬೇರೆಯಾಗಿ ನಿಲ್ಲಲು ಅಗತ್ಯವಾದುದೇನನ್ನೋ ಇಷ್ಟರಮಟ್ಟಿಗೆ ಕಳೆದುಕೊಳ್ಳುತ್ತವೆ.
ಬಹುಮುಖಿ ಸಮಾಜದಲ್ಲಿ ಸಾಂಸ್ಕೃತಿಕ ತಂಡಗಳು ರಚಿಸಿಕೊಂಡಿರುವ ಸ್ವಾಯತ್ತತೆಯನ್ನು ಕಾಪಾಡಬೇಕಾದ ಮತ್ತು ಬಲಪಡಿಸಬೇಕಾದ ಜರೂರುಯಿದೆೆ. ಈ ಬಲಪಡಿಸುವಿಕೆ ಆದಿವಾಸಿ ಸಮುದಾಯಗಳನ್ನು ಪಟ್ಟಣದ 'ನಾಗರಿಕ' ಪಂಡಿತರ ಅಧ್ಯಯನಕ್ಕಾಗಿ ದೂರದ ಬೆಟ್ಟ ಕಣಿವೆಗಳಲ್ಲೇ ಉಳಿಸಬೇಕಾದ ವಸ್ತು ಸಂಗ್ರಹಾಲಯದ ಮಾದರಿಗಳಂತೆ ನೋಡುವುದಾಗಲೀ ಅಥವಾ ಅವರನ್ನು ಕರಗಿಸಿಕೊಳ್ಳುವ ದೊಡ್ಡ ಸಮುದಾಯದಂಥ ಗಡಿಗೆಯಲ್ಲಿ ಒಳಸೇರಲು ಕೇಳಿಕೊಂಡು ತನ್ನಲ್ಲಿ ಅಡಗಿಸಿಕೊಳ್ಳುವುದರಿದಾಗಲೀ ಸಾಧಿತವಾಗುವುದಿಲ್ಲ. ಅವರನ್ನು ನೋಡುವ ತುಂಬ ಹಿತಕರವಾದ ನಡವಳಿಕೆಯೆಂದರೆ ರಾಥನ್ಬಗರ್್ ಅವರು ಅಭಿಪ್ರಾಯ ಪಡುವಂತೆ ಸಮುದಾಯದಿಂದಾದ ರಚನೆಗಳು ಮತ್ತು ಪರಿಸರದಿಂದಾದ ದನಿ ಮಾದರಿಗಳ ಮಾಲೆಯಿಂದ ಸಮಾಜದ ಮರುಏಪರ್ಾಟು ಹಾಗೂ ಮರುಶಕ್ತಿ ನೀಡುವ ಜೀವನ ಮತ್ತು ಚಿಂತನಗಳ ಕುರಿತು ಒಂದಷ್ಟು ಕಲಿಯುವುದು''.
ಈ ಸಮಾಜಗಳಲ್ಲಿ ದಾರಿದ್ರ್ಯವಿದೆಯೆ ಹೊರತು ಸಾರ್ಚಜನಿಕ ಹೊಲಸಿಲ್ಲ. ಒಪ್ಪ-ಓರಣ ಮತ್ತು ರೀತಿ ರಿವಾಜುಗಳ ಬಗ್ಗೆ ದುಸರಾ ಮಾತಾಡಲಾಗದ ಸಂತಲರ ಮನೆ ಇದಕ್ಕೊಂದು ಉದಾಹರಣೆ. ಕುಂಧರು ಬಿದಿರುಗಳನ್ನು ಕೋಮಲವಾಗಿ ಕೊರೆದು ಹೊಗೆಸೊಪ್ಪು ಇಡಲು ಬಳಸುವುದು ಎಂಥ ಕಲಾವಿದನಿಗೂ ಅಸೂಯೆ ಹುಟ್ಟಿಸುತ್ತದೆ. ಜೀವನದಲ್ಲಿ ದುರಂತ ತುಂಬಿ ತುಳುಕಿದೆಯಾದರೂ ಜುಗುಪ್ಸೆಯಿಲ್ಲ, ಹೀಕರಿಕೆಯಿಂದ ಜೀವನ ತಿರುಗಿ ನೋಡುವ ನೋಟವೂ ಇಲ್ಲ. ನಿರಾಶಾವಾದ ಫ್ಯಾಶನ್ ಅಲ್ಲ. ಮಾನವ ಸುಖವಾಗಿರಬಲ್ಲನೆಂದು ಹೇಳಲು ಎಂಟೆದೆ ಬೇಕೆಂದೆನಿಸುವ ಗಳಿಗೆಯಲ್ಲೂ ಈ ಆದಿವಾಸಿ ಸಮೂಹಗಳ ಜೀವನನೋಟ ನಮಗೊಂದು ಅಸಾಧಾರಣ ತಿಳಿವನ್ನು ನೀಡುತ್ತದೆ.
ಆದಿವಾಸಿ ಬುಡಕಟ್ಟುಗಳ ಜೀವನ ಕಡುಕಷ್ಟ ಮತ್ತು ಕ್ರೂರತರವಾಗಿರಬಹುದು. ಹಬ್ಬ ಆಚರಣೆಗಳ ಸಂದರ್ಭಗಳಲ್ಲಿ, ಸಂಭ್ರಮದ ಸಮಾರಂಭಗಳಲ್ಲಿ ಜೀವನ ಚಣೊತ್ತಾದರೂ ನಿರುಂಬಳವಾಗಿರುತ್ತದೆ. ಉಳಿದಂತೆ ಬಿಡಿಗಾಸಿಗೂ ಪರದಾಡುತ್ತ, ಅರೆ ಹೊಟ್ಟೆಯಲ್ಲಿ ದಿನ ನೂಕುತ್ತ, ಶೋಷಣೆಯಲ್ಲಿ ಬದುಕು ಹೆಣಭಾರವಾಗುತ್ತದೆ. ಇಷ್ಟಾದರೂ ಜೀವನವನ್ನು ಒಂದು ಅವಕಾಶವೆಂದು ಉನ್ನತೀಕರಿಸಿ ನೋಡುವ, ಮತ್ತು ನಿಸರ್ಗದ ಎಲ್ಲ ಚೆಲುವು ಮತ್ತದರ ಮೀರಲಾಗದ ಚೊಕ್ಕತನ, ಬೆಟ್ಟಗಳು, ಕಣಿವೆಗಳು, ಸದ್ದು ಮಾಡುತ್ತ ಹರಿವ ಹಳ್ಳಗಳು, ಹಾರಾಡುವ ಬಣ್ಣದ ಚಿಟ್ಟೆಗಳು, ಎಲ್ಲ ಲಗುಬಗೆಯ ಚಟುವಟಿಕೆಗಳು ವಂದನೆ ಸಲ್ಲಿಸುವ ಹಾಗಿವೆ ಎನ್ನುನ ನೋಟವಿದೆ. ಹಲವು ಬುಡಕಟ್ಟು ಹಾಡುಗಳಿಗೆ ಸಂಭ್ರಮಿಸುವುದನ್ನು ಬಿಟ್ಟು ಬೇರೆ ಉದ್ದೇಶವಿಲ್ಲವೆಂದು ಹೇಳಲು ಸಂದೇಹ ಪಡಬೇಕಿಲ್ಲ. ಎಲ್ಲೊ ಕೆಲವಕ್ಕೆ ಪ್ರದರ್ಶನಾತ್ಮಕವಾಗಿ ಸಾಮಾಜಿಕ ಮತ್ತು ಆಚರಣೆಯ ಉದ್ದೇಶವಿವೆ. ಆದರೆ ಈ ಹಾಡುಗಳ ದೊಡ್ಡ ಪಾಲೆಲ್ಲ ಪ್ರತಿದಿವಸದ ಕ್ಷುದ್ರ ಸಾಧಾರಣತೆಯನ್ನು ಸೋಜಿಗದ ವಿಚಿತ್ರವನ್ನಾಗಿ, ಹುಲುಸಾದ ಸ್ಥಿತಿಯನ್ನಾಗಿ ಬದಲಾಯಿಸುವ ಚೆಲುವು , ಪಾವಿತ್ರ್ಯದ ತಡಕಾಟ, ಕನಸು ಹಾಗೂ ಅದ್ಭುತ ರಮ್ಯ ಚಿತ್ರಗಳಿಂದ ತುಂಬಿಹೋಗಿವೆ.
ಒರಿಸ್ಸಾ, ಬಂಗಾಳ ಹಾಗೂ ಬಿಹಾರಗಳಲ್ಲಿ ವಾಸ ಮಾಡುತ್ತಿರುವ ಬಹುದೊಡ್ಡ ಸಂಖ್ಯೆಯ ಬುಡಕಟ್ಟು ತಂಡಗಳಲ್ಲಿ ಕೊನೆಪಕ್ಷ ಏಳು ಗುಂಪುಗಳಲ್ಲಿಯಾದರೂ ಸೊಗಸಾದ ದೊಡ್ಡ ಪಾತ್ರದ ಆಡುಮಾತಿನ ಸಾಹಿತ್ಯವಿದ್ದು, ಅದರಲ್ಲಿ ಸರಿಯಾಗಿ ಬರೆದಿಡಬೇಕಾದ ಹಾಗೂ ಬಿಚ್ಚುನೋಟ ಹರಿಸಬೇಕಾದ ಕಾವ್ಯವೂ ಸೇರಿದೆ. ವಿಶೇಷವಾಗಿ ಮುಂಡಾ, ಓರಯಾನ, ಕುಂಧ, ಪರಜಾಸ, ಸಂತಲ, ಹೋ ಹಾಗೂ ಕೋಯಾ ತಂಡಗಳ ಹಾಡುಗಳ ಮಟ್ಟಿಗೂ ಈ ಮಾತು ನಿಜ. ಒಂದಿಷ್ಟು ಹಾಡುಗಳು ಕತೆ ಹೇಳುವ ಮಾದರಿಯವು, ಉಳಿದವು ಕತೆ ಹೇಳದಿದ್ದರೂ ಕೆಲವು ಮುಖ್ಯವಾದ ಭಾವಸ್ಥಿತಿ, ಭಾವ ಸನ್ನಿವೇಶ ಅಥವಾ ಭಾವತೀವ್ರತೆ ಕುರಿತವು. ಕಥನ ಕಾವ್ಯ ವಿಶಾಲವಾಗಿ ಬುಡಕಟ್ಟುಗಳ ಜಗತ್ತಿನ ಹುಟ್ಟು ಕುರಿತ ಕಲ್ಪನೆ, ಅವರ ಚರಿತ್ರೆಯ ಮೂಲ, ಚಾರಿತ್ರಿಕ ವಲಸೆಗಳನ್ನೊಳಗೊಂಡಿವೆ. ಈ ಕಥನ ಕಾವ್ಯಗಳಿಗಿಂತ ತುಂಬಾ ಮುಖ್ಯವಾದುವೆಂದರೆ ವರುಷದ ಬೇರೆ ಬೇರೆ ಕಾಲಮಾನಗಳಲ್ಲಿ ನಡೆಸುವ ಹಬ್ಬ ಆಚರಣೆಗಳಿಗೆ ಸೇರಿದ ಕವಿತೆಗಳು ಅಂದರೆ ಮಗು ಹುಟ್ಟುವುದು, ಮಗುವಿಗೆ ಹೆಸರಿಡುವುದು, ಹೆಣ್ಣುಮಕ್ಕಳು ಮೈನರೆಯುವುದು, ಮದುವೆ ಹಾಗೂ ಸಾವಿನ ಸಮಯದ ಕಾರ್ಯಗಳಲ್ಲಿ ಹಾಡುವ ಹಾಡುಗಳು. ಹಬ್ಬದ ಹಾಡುಗಳು ಹಾಗೂ ವಿಧಿ ಆಚರಣೆಯ ಹಾಡುಗಳು ಸಾಧಾರಣವಾಗಿ ಕುಣಿತದ ಜೊತೆಗೂಡಿರುತ್ತವೆ. ಹೀಗಾಗಿ ಅನೇಕ ಹಾಡಿನ ಮಟ್ಟುಗಳ ವಿನ್ಯಾಸವನ್ನು ಕ್ರಮಬದ್ಧ ಸಂಗೀತ ಚಿಹ್ನೆಗಳಾಗಿ ಬರೆದಿಡಲು ಸಾಧ್ಯ. ಪೂರ್ವ ಭಾರತದ ಬುಡಕಟ್ಟು ಹಾಡುಗಳ ಮಟ್ಟು ನಮೂನೆಗಳ ಕುರಿತು ಕೆಲಸ ಮಾಡುತ್ತಿರುವ ಹಂಗೇರಿಯ ಮೇರುಮಟ್ಟದ ಸಂಗೀತಶಾಸ್ತ್ರಜ್ಞ ಡಾ. ರುಡಾಲ್ಫ್ ವಿಗ್ರವರು ಬುಡಕಟ್ಟುಗಳ ಸಂಗೀತಕ್ಕೂ ಜಿಪ್ಸಿ ಸಂಗೀತಕ್ಕೂ ನಿಕಟ ಹೋಲಿಕೆಯಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಭಾರತದ ಅನೇಕ ಬುಡಕಟ್ಟು ಸಮುದಾಯಗಳು ಪೂರ್ವ ಯುರೋಪಿನ ಕ್ಯಾಸ್ಪಿಯನ್ ಸಮುದ್ರದ ಸುತ್ತಲ ಮೂಲನಿವಾಸಿಗಳಾಗಿರುವ ಸಾಧ್ಯತೆಯಿದ್ದು, ಹಲವು ಶತಮಾನಗಳ ಹಿಂದೆ ಭಾರತಕ್ಕೆ ವಲಸೆ ಬಂದರೆಂದು ತಮ್ಮ ಊಹೆ ಮುಂದಿಟ್ಟಿದ್ದು, ಕುತೂಹಲಕರವಾಗಿದೆ.
ಈ ಹಾಡುಗಬ್ಬಗಳನ್ನು ಬೇರೆ ಬೇರೆ ನಿಟ್ಟಿನಿಂದ ಪರಿಗಣಿಸಬಹುದು. ಅವು ಹಾಡಲೆಂದೆ ಹುಟ್ಟಿಕೊಂಡಿದ್ದರೂ ಸಂಗೀತ ಚಿಹ್ನೆಗಳಲ್ಲ್ಲಿ ಅಭಿವ್ಯಕ್ತಿಸಲು ಎಡೆಮಾಡಿಕೊಟ್ಟಿವೆ. ಸಂಗೀತಶಾಸ್ತ್ರಜ್ಞರು ಕೆಲವು ಹಾಡುಗಳಿಗೆ ಸಂಗೀತ ಪ್ರಸ್ತಾರ ಹಾಕುವ ಪ್ರಯತ್ನ ಮಾಡಿರುವುದು ಈ ವಲಯದಲ್ಲಿ ಆಸಕ್ತಿ ಹುಟ್ಟಿಸಿದೆ. ಎರಡನೆಯದಾಗಿ ಈ ಹಾಡುಗಬ್ಬಗಳನ್ನು ಅವರ ಕಾವ್ಯದ ಹೆಚ್ಚುಗಾರಿಕೆಯ ಸಾಧನೆಯಾಗಿ ಸಾಹಿತ್ಯದ ಕಣ್ಣಿನಿಂದಲೂ ಬಿಚ್ಚುನೋಟ ಹರಿಸಬಹುದು. ಇವು ಸಂಕೇತಶಾಸ್ತ್ರದ ಕಾವ್ಯವಾಗಿದ್ದು ತನ್ನೆಲ್ಲ ಸ್ವಂತ ತಾಜಾತನದೊಂದಿಗೆ ಹಬ್ಬಿದ ನುಡಿಚಿತ್ರಗಳಾಗಿವೆ. ಮೂರನೆಯದಾಗಿ ಅವು ಸಾಮಾಜಿಕ ಅಥವಾ ಧಾಮರ್ಿಕ ಉದ್ದೇಶದ ಆಚರಣೆಯ ವಿಧಿ ಹೊಂದಿದ್ದು, ಕೃಷಿ ಚಕ್ರದ ಆಚರಣೆ, ಜೀವನದ ತೊಡರು ಅಥವಾ ಸಾಮಾಜಿಕ ಸಹಜ ಸಮಾರಂಭವೂ ಆಗಿರಬಲ್ಲದಾಗಿವೆ. ನಾಲ್ಕನೆಯದಾಗಿ ಕುಣಿತದ ತಂಡಗಳು ಸಾಮಾನ್ಯವಾಗಿ ಹಾಡುಗಳನ್ನು ಹೊಂದಿರುತ್ತವೆ. ಈ ನಿಟ್ಟಿನಿಂದಲೂ ಅವು ಅಧ್ಯಯನ ಮಾಡಲು ತಕ್ಕುದಾಗಿವೆ.
ಎಲ್ಲ ಮೌಖಿಕ ಸಾಹಿತ್ಯದಂತೆ ಈ ಬುಡಕಟ್ಟು ಹಾಡುಗಳೂ ಅನೇಕ ಕಾಲದಿಂದ ರೂಪವಿಕಾರಗೊಳ್ಳುವ ಹಾದಿಯಲ್ಲಿ ಸಾಗಿಬಂದಿವೆ. ಬಾಯಿ ಮಾತಿನ ಕಾವ್ಯದಲ್ಲಿ ವಿರೂಪಗೊಳ್ಳುವುದು ಸಾಮಾನ್ಯವಾಗಿದ್ದು, ಈ ಹಾಡುಗಳಲ್ಲಿ ಬುಡಕಟ್ಟಿನ ಬದಲಾಗುತ್ತಿರುವ ದೃಶ್ಯ ಹಾಗೂ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಸಂದರ್ಭದ ಘಟನೆ, ಸನ್ನಿವೇಶಗಳಿಂದ ತಂದ ಪದಗಳನ್ನು ಜೋಡಿಸಿ ರಚಿಸಿದ ಗೊತ್ತುಗುರಿಯಿಲ್ಲದ ಸಾಲುಗಳು ಒಳತೂರಿವೆ, ಇವನ್ನು ಬೊಟ್ಟು ಮಾಡಿ ಹೇಳಬೇಕು. ಉದಾಹರಣೆಗೆ ಸಂತಲರ ಸಾಂಪ್ರದಾಯಿಕ ಬಾಹಾ ಹಾಡುಗಳಲ್ಲಿ ಸಾಲ್ ಹಾಗೂ ಮಹೂಲ್ ಮರಗಳು ಚಿಗುರು ಕಾಲದಲ್ಲಿ ಮೊದಲ ಸಲ ಬಿಟ್ಟ ಹೂಗಳನ್ನು ಕರೆಯುವ 'ಹೊಸ ಚಿಗುರು ಬಂತಣ್ಣ' ಎಂಬ ಸಾಲಿನ ಪ್ರಾಸಕ್ಕೆ 'ಬಾಬು ಬಂದರಣ್ಣ, ಜೀಪಲ್ಲಿ ಬಂದರಣ್ಣ' ಎಂಬಂಥ ಒಂದು ಸಾಲಿನ ಆಶುಕವಿತೆ ಕಟ್ಟಿ ತೂರಿಸಲಾಗಿದೆ. ಎರಡನೆಯದಾಗಿ ಸಾಂಪ್ರದಾಯಿಕ ಹಳೆಯ ರೂಢಿಯ ಹಾಡುಗಳು ಕೂಡ ಹೆಚ್ಚುಗಾರಿಕೆಯ ಚೋದ್ಯ ಮತ್ತು ಹಳೆಯ ಪದಗಳೊಂದಿಗೆ ಸೇರಿ ಪಡೆದುಕೊಂಡಿದ್ದ ಸಿರಿಯನ್ನು ಕಳೆದುಕೊಳ್ಳುವತ್ತ ವಾಲಿವೆ. ಅವನ್ನು ಈವೊತ್ತಿನ ರಚನಕಾರರು ಈಗಿನ ಕಾಲಕ್ಕೆ ಬದಲಿಸಿದ್ದಾರೆ. ಇದು ಓರಯಾನರ ಹಾಡುಗಳಲ್ಲೂ, ಹೆಚ್ಚು ಪರಿಣಾಮಕಾರಿಯಾಗಿ ಕುಂಧರ ಹಾಡುಗಳಲ್ಲೂ ನಡೆಯುತ್ತಿದೆೆ. 1940ಕ್ಕೂ ಮೊದಲು ಒರಿಯಾದ ಹೆಸರಾಂತ ಕಾದಂಬರಿಕಾರ ಗೋಪಿನಾಥ ಮೊಹಂತಿ ಅವರು ಕೋರಪೇಟೆಯ ಕುಂಧರ ಹಾಡುಗಳನ್ನು ಒಟ್ಟುಗೂಡಿಸಿದ್ದರು. ಒಂದಷ್ಟನ್ನು ಒರಿಯಾ ಭಾಷೆಗೆ ತಂದರು. ಬೇರೆಯವರಿಗೆ ಹೋಲಿಸಿದರೆ ಅವರು ತಿರುಳನ್ನು ಹಿಡಿಯುವ ಕೆಲಸ ಮಾತ್ರ ಮಾಡಿದ್ದಾರೆ. ನಲವತ್ತು ವರುಷಗಳ ನಂತರದಲ್ಲಿ ಅವನ್ನು ಸಂಗ್ರಹಿಸಿದ ಹಾಡಿಗಳಲ್ಲೂ ಮೂಲ ಹಾಡುಗಳ ಪದಗಳು ನೀಡುವ ಅರ್ಥವನ್ನು ಪಡೆಯಲು ಶಕ್ಯವಾಗುತ್ತಿಲ್ಲ. ಬಾಯಿಮಾತಿನ ರೂಢಿ-ವಾಡಿಕೆ ಸಂಪ್ರದಾಯದ ಈ ಹಾಡುಗಳ ಬಲ ಇರುವುದೆ ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗುವ ಸಾಚಾತನದಲ್ಲಿ. ಹೀಗಿರುವಾಗ ಪರಂಪರೆಯ ಹಳೆಯ ಹಾಡುಗಳ ಕರಾರುವಾಕ್ಕಾದ ಪದಗಳು, ಕಾಕುದನಿಗಳ ಚಮತ್ಕಾರ ಹಾಗೂ ಅನೇಕ ಸಾಲುಗಳು ಕಾಣೆಯಾಗುತ್ತವೆ, ಅದಕ್ಕಾಗಿ ಹುಬ್ಬೇರಿಸಬೇಕಿಲ್ಲ.
ಬುಡಕಟ್ಟು ಹಾಡುಗಳ ಮೋಡಿ ಮಾಡುವ ಪ್ರಬಲ ಅಂಶವೆಂದರೆ ಅದರ ಕುರುಹುಗಳು. ವಸ್ತುಗಳು ಹುಟ್ಟಿಸುವ ಹಲವು ಬಗೆಯ ಒಡನಾಟಗಳಿಂದ ಬೇರೆಯಾಗದೆ ತಾನೇ ಆಗಿಹೋದಾಗ ಕಾವ್ಯದ ಪದಪ್ರಯೋಗ ಹಳೆಯ ತರಹವೂ ಭೇದ ಮಾಡಲಾಗದ ಭಾಷೆಯ ಸ್ಥಿತಿಯೂ ಆಗಿ ಒಂದೆಯಾಗಿರುತ್ತದೆ ಎಂಬ ಓವೆನ್ ಬಾರ್ಫೀಲ್ಡ್ ತಮ್ಮ 'ಕಾವ್ಯದ ನುಡಿನಡೆ'ಯಲ್ಲಿ ಮುಂದಿಡುವ ವಿಚಾರ ಆಸಕ್ತಿ ಹುಟ್ಟಿಸುವಂತಿದೆ. ಇದು ಬುಡಕಟ್ಟು ಕಾವ್ಯದ ಕುರುಹುಗಳ ಗುಣಸ್ವಭಾವ ತಿಳಿಯಲು ಮತ್ತು ಆಧುನಿಕ ಕಾವ್ಯದ ಸಂಕೇತ ಪದ್ಧತಿಗಳೊಂದಿಗಿರುವ ಅದರ ಮೂಲ ವ್ಯತ್ಯಾಸ ತಿಳಿಯಲು ಕೀಲಿ ಕೈಯಾಗಿದೆ. ಆಧುನಿಕ ಕಾವ್ಯದಲ್ಲಿ ಸಂಕೇತ ಪದ್ಧತಿಯೆಂದರೆ ಮೂಲಭೂತವಾಗಿ ಸಾಧಾರಣೀಕೃತ ಅಮೂರ್ತತೆ, ಪರಿಚಿತದ ಅಸಡ್ಡೆತನ ಮತ್ತು ಮಿತಿಮೀರಿದ ನಿತ್ರಾಣದ ಜಗತ್ತಿನಲ್ಲಿ ಅಪರಿಚಿತವೂ ಅಮೂರ್ತವೂ ಹೊಸತಾದುದೂ ಆದುದನ್ನು ಕಾಣುವ ಒಂದು ಪ್ರಯತ್ನ. ಇದು ದಿನನಿತ್ಯದ ಬಳಕೆಯಲ್ಲಿ ಆಕರ ಮೂಲವಾಗಿರುವ, ಪ್ರಾತಿನಿಧಿಕವಾಗಿರುವ ಮತ್ತು ತಾಕಿರ್ಕವಾಗಿರುವ ಭಾಷೆಯ ಬಿಗಿ ಹಿಡಿತವನ್ನು ಮುರಿದುಹಾಕುತ್ತದೆ. ನಾವು ಜೀವಿಸಿರುವ ಜಗತ್ತು ಆದಿವಾಸಿಗಳ ಕುರುಹುಗಳ ಜಗತ್ತಲ್ಲ, ಇದು ವ್ಯವಸ್ಥೆ ಮಾಡಿದ, ಜೋಡಣೆ ಮಾಡಿದ, ಬುದ್ಧಿಬಲದಿಂದ ಕೂಡಿದುದು. ಬೆರಗು, ಭಯ, ಭಕ್ತಿಯ ಭಾವವನ್ನು ನಾವು ಕಡೆಗಣಿಸಿದ್ದೇವೆ. ಆದರೆ ಸಾಮಾಜಿಕ ಸಂಪರ್ಕವೆಂಬುದು ಆದಿವಾಸಿ ಜನರಿಗೆ ವಿಪುಲ ಕುರುಹುಗಳ ಪರಿಸರದ ಅಂಗವಾಗಿದ್ದು, ಅದರಲ್ಲವರು ಮೀನಿನಂತೆೆ ಈಜುತ್ತಾರೆ. ಅಂಥ ಜಗತ್ತಿನಲ್ಲಿ ಹೊಸತಾದ ಮತ್ತು ತಿಳಿಯದ ಪ್ರತಿಯೊಂದೂ ಇಣುಕಿಹಾಕುತ್ತದೆ; ಭಾಷೆ ಕೆಲವು ಹಿಡಿತ ಸಾಧಿಸುವ ವಿಧಾನ ಮತ್ತು ಹಾದಿಯಾಗಿರುತ್ತದೆ. ಒಂದು ಬಗೆಯಲ್ಲಿ ಭಾಷಿಕ ರಚನೆಗಳೆಲ್ಲ ಕುರುಹುಗಳೆ ಆಗಿವೆ. ಈ ಮಾತನ್ನು ಈ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟಿರುವ ಯಾವುದೆ ಬುಡಕಟ್ಟು ಕಾವ್ಯದಿಂದ ವಿವರಿಸಬಹುದು. ಮುಂಡಾ ಜನರ ಈ ಹಾಡು ಇದಕ್ಕೊಂದು ಉದಾಹರಣೆ.
ಮಹೂಲಾ ಮಹೂಲಾ
ಗೆಲ್ಲು ಗೆೆಲ್ಲು ಹಚ್ಚ ಹಸಿರು
ಏಸು ಚೆಂದ ಬತ್ತ ಬಯಲು !
ಕಡಿವರೊ ಅವರು ಮಹೂಲಾ
ಐವರಾಳು ನೀವು ಅಣ್ಣ ತಮ್ಮ
ಕಾಪಾಡಿರಣ್ಣ ಕಾಪಾಡೊ ತಮ್ಮ !
ಇಲ್ಲಿಯ ವಸ್ತು ಮಹೂಲ ಮರವಾಗಿರದೆ ಮದುವೆ ಮಾಡಿ ಕಳುಹಿಸಿಕೊಟ್ಟ ಮನೆಯ ಹೆಣ್ಣುಮಗಳಾಗಿದ್ದಾಳೆ. ಆಕೆ ಹೋದ ಮೇಲೆ ಹಾಡಿ ಪಾಳುಬಿದ್ದಂತೆ ಕಾಣುತ್ತದೆ. 'ಅವರು' ಅಂದರೆ ಇಲ್ಲಿ ಗಂಡಿನ ಕಡೆಯವರು. ಇದನ್ನೆಲ್ಲ ಹೇಳುವಂಥದ್ದಲ್ಲ, ತಿಳಿಯುವಂಥದ್ದು. ನಂತರ ಸೋದರರು ಗಂಡಿನ ಕಡೆಯವರನ್ನು ಅಟ್ಟಿಸಿಕೊಂಡು ಹೋಗುತ್ತಾರೆಂದು ಇಲ್ಲಿ ಎದುರು ನೋಡಿಲ್ಲ. ಇದೊಂದು ಪ್ರತಿಭಟನೆಯ ಅಣಕ ಮಾತ್ರವಾಗಿದೆ. ಸಮಾಜದಲ್ಲಿ ಸೋದರಿಯರನ್ನು ಕಾಪಾಡುವ ಸೋದರರ ಪಾತ್ರವನ್ನು ಸೂಚಿಸುತ್ತದೆ.
ಓರಯಾನರ ಕವಿತೆಯೊಂದರಲ್ಲಿ ತುಂಬ ಚಾಕ್ಯಚಕ್ಯತೆಯಿಂದ ಕಿತ್ತಳೆಯನ್ನು ಕಾಮದ ಕುರುಹಾಗಿ ಹುಡುಗಿಯ ಎದೆಗೆ ಬಳಸಿಕೊಳ್ಳಲಾಗಿದೆ. ಪೂತರ್ಿ ಬೆಳೆದ, ಸರಿಯಾಗಿ ಬೆಳೆಯದ, ಹಾಗೂ ಅರ್ಧ ಬೆಳೆದ ಹುಡುಗಿಯರ ಎದೆಯನ್ನು ಕ್ರಮವಾಗಿ 'ತುಂಬಾ ಸಿಹಿ', 'ತುಂಬಾ ಕಹಿ' ಹಾಗೂ 'ಒಗರು' ಎಂದು ವಿವರಿಸಲಾಗಿದೆ. ಇದನ್ನು ಮಾಯಿಕಲ್ಲು ಬೆಟ್ಟದ ಜನಪದ ಗೀತೆಯ ಜೊತೆೆಯಲ್ಲಿ ನೋಡಬಹುದು.
ಗಿಡದಲ್ಲಿ ಕಂಡೆ ಗಜನಿಂಬೆ ಹಣ್ಣ
ಗಿರಕಿ ತಡೆದೆೆ ಹೇಗೆ ಕಂಡು ಹಸಿದ ಕಣ್ಣ
ಓರಯಾನರ ಇನ್ನೊಂದು ಕವಿತೆ:
ಮರದ ಮೈ ತುಂಬ ಸಿಹಿಸಿಹಿ ಹಣ್ಣು
ಕಾಗೆ ಪರಿವಾರ ಗಿಣಿ ಪಾರಿವಾಳ | ನೆರೆದು
ಕೊಕ್ಕು ಕುಕ್ಕಿ ಕುಕ್ಕಿ ತಿಂದೊ | ಚರಪರ
ಹಕ್ಕಿಗಳು ನಲಿದೊ ಕಲಕಲ
ಮರವೆಂಬುದಿಲ್ಲಿ ಮದುವೆಗೆ ಬಂದ ಹೆಣ್ದುಮಕ್ಕಳನ್ನು ಮನೆ ತುಂಬ ಪಡೆದ ಕುಟುಂಬವಾಗಿದೆ. ಗಮಗಮ ಗಮಲು ಬೀರುವ ಮಲ್ಲಿಗೆಯ ಹೂವು ಕೂಡ ಇಲ್ಲಿ ಹುಡುಗಿಯರೆ ಆಗಿದ್ದಾರೆೆ. ದಿವಿರಿ ಹಾಗೂ ಸುರಮಾಲಿ ಹಾಡಿಯ ಹುಡುಗಿಯರು ಮುಂಡಾ ಕುಣಿತದ ತಂಡ ಸದಸ್ಯರಾಗಿದ್ದು ಅವರನ್ನು ಲುದುಮಾ ಮತ್ತು ಚಂಪಕಾ ಹೂಗಳ ಜೊತೆ ನೋಡಲಾಗಿದೆ.
ದಿವಿ ಹಾಡಿಯ ಲುದುಮಾ ಹೂವ
ಬಳುಕಿ ಬಾಗುವ ನಯನಾಜುಕವ್ವ !
ಸುರಮಾಲಿ ಹಾಡಿ ಚಂಪಕ ಹೂವ
ಗಾಳಿ ಬೀಸಿದಂಗೆ ಅಲೆವ ಗಮಲವ್ವ !
ಗೆರೆ ಎಳೆದ ಹಾಗೆ ನೆಟ್ಟಗೆ ಹೋಗುವಾ
ತಿರುವು ಮುರುವಿನಂಗೆ ಓಡಿಹೋಗುವಾ
ಎಂಥ ಕತ್ತಿನ ಸರ ಮಾಡವರೆ ಕಂಡ !
ಎಂಥ ಕತ್ತಿನ ಸರ ಮಾಡವರೆ ಕಂಡ !
ಕುರುಹು ಅವಿತಿಟ್ಟುಕೊಂಡ ಈ ಬಗೆಯ 'ಒಡಪು' ಕವಿತೆಗಳು ಮುಂಡಾ ಹಾಗೂ ಓರಯಾನರ ಜನಪದ ಗೀತೆಗಳಲ್ಲಿ ತುಂಬ ಮಾಮೂಲಾಗಿವೆ. ಆದರೆ ಇಂಥವು ಕುಂಧ ಹಾಗೂ ಪರಜಾಸರ ಹಾಡುಗಳಲ್ಲಿ ಕಾಣುವುದಿಲ್ಲ.
ಈ ಮುಂದಿನ ಮುಂಡಾ ಕವಿತೆ ಕಾಮದ ಕುರುಹನ್ನು ಸ್ವಾರಸ್ಯಕರವಾಗಿ ಬಳಸಿಕೊಂಡಿದೆ.
ಕೆಂಪಾಯಿತಲ್ಲವ್ವ ನಿನ್ನ ಪಾದ
ಅಂಗೈ ಅರಿಸಿಣವಾಯಿತಲ್ಲೆ
ನೀನಾಡಿದ ಬಯಲು ಯಾವುದವ್ವ ?
ಯಾವ ಅರಿಸಿಣ ಹೊಲಕೆ ನೀ ಹೋದೆ ?
ದಿಟವ ಹೇಳು ತಾಯಿ
ಅರಿಸಿಣ ಮನೆ ಹೊಕ್ಕು ಬಂದೆಯೇನೆ?
ಮುಂಡಾ ಮತ್ತು ಓರಯಾನರ ಸಮಾಜಗಳಲ್ಲಿ ಕೆಂಪು ಬಣ್ಣ ಹೆಚ್ಚಾಗಿ ಜೀವಂತಿಕೆ, ಶಕ್ತಿ ಮತ್ತು ಕಾಮದ ಕುರುಹಾಗಿದೆ. ಸಿಂಧೂರ ಅಥವಾ ಕುಂಕುಮದ ಗುರುತು ಹಣೆಯ ಮೇಲೆ ಹಾಗೂ ಬಯ್ತಲೆಯಲ್ಲಿರುವುದು ಮದುವೆಯಾಗಿರುವುದರ ಕುರುಹು. ಕೆಂಪು ರಕ್ತವನ್ನೂ ಬಿಂಬಿಸುತ್ತದೆ. ಇದೇ ರೀತಿ ಮದುವೆಯಾಗಿರುವುದೂ ಕನ್ನೆತನವನ್ನ ಕಳೆದುಕೊಂಡಿರುವುದೂ ಅರಿಸಿಣದ ಜೊತೆ ಸೇರಿಕೊಂಡಿದೆ. ಅರಿಸಿಣದ ಹೊಲ ಅಥವಾ ಮನೆಯನ್ನು ಹೊಗುವುದು ಅಂದರೆ ಕನ್ನೆತನವನ್ನು ಕಳೆದುಕೊಳ್ಳುವುದು ಅಥವಾ ಸಂಭೋಗ ಕ್ರಿಯೆಯಲ್ಲಿ ತೊಡಗಿದುದನ್ನು ಸೂಚಿಸುತ್ತದೆ.
ಮುಂಡಾ ಜನರ ಕವಿತೆಯಲ್ಲಿ 'ಬಾವಿ' ಹುಡುಗಿಯ ಲಿಂಗಕ್ಕೆ ಕುರುಹು ಆಗಿದೆ.
ಹಾಡಿಯ ಕಡಸಿಗೆ ಬಾವಿ ಐತೆ
ಕಲ್ಲು ಕಟ್ಟಿದ ಬಾವಿ ಫಳಗುಡುತೈತೆ
*
ತಳಮಟ್ಟ ನೀರಲ್ಲಿ ಬಕೀಟು ಮುಳುಗೈತೆ
ಬಡಹುಡುಗಿ ಪಾಪ ಗೊಳೊ ಅಳುತೈತೆ
ಪಾಪ ಗೊಳೋ ಅಳುತೈತೆ
ಬುಡಕಟ್ಟುಗಳಲ್ಲಿ ಬಾವಿ ಬಹುಮಟ್ಟಿಗೆ ಒಂದು ಸಾಮಾಜಿಕ ಸಂಸ್ಥೆಯೆಯಾಗಿದೆ. ಹಾಡಿಯ ಹೆಂಗಸರು ನೀರೆಳೆಯಲು ಹಾಗೂ ಅಂದು ಕಿವಿಗೆ ಬಿದ್ದ ಗಾಳಿಮಾತನ್ನು ಹರಟಲು ಸೇರುವ ಕೂಡುತಾಣವದು. ಒಲವಿನ ಹುಡುಗ ಹುಡುಗಿಯರು ಪರಸ್ಪರ ಒಬ್ಬರನ್ನೊಬ್ಬರು ಕಾಣಲು, ಮಾತಾಡಲು ಬಾವಿಯೊಂದು ಸಂಕೇತ ಸ್ಥಳವಾಗಿದೆ. ಆದರಿದು ಈ ಹಿಂದಿನಂತೆ ಸ್ತ್ರೀ ಲಿಂಗದ ಕುರುಹು ಆಗಿರುವುದೆ ಹೆೆಚ್ಚು. ಗೊಂಡಾ ಜನರ ಹಾಡೊಂದು ಹುಡುಗಿಯಲ್ಲಿ ತಪ್ಪು ಪತ್ತೆ ಹಚ್ಚಿ ಬೈಯ್ದಿದೆೆ.
ಸಣಬಾವಿ ನಿನ್ನಲ್ಲಿ ನೀರಿಲ್ಲವಲ್ಲ
ನಿನ ಹರೆಯ ನೆನ್ನೆಗೆ ಬಾಡಿ ಹೋಯ್ತಲ್ಲ
ತಿಳಿದುಕೋ ನಿನಗಿನ್ನು ಹದಿಹರೆಯವಿಲ್ಲ
ವಯಸಿಗೆ ಬಂದ ಹುಡುಗಿಯ ಬಗೆಗೆ ಧನವಾರರ ಹಾಡು ಹೀಗಿದೆ.
ಈಗಲು ಅವಳು
ಗಿಣಿಯಂಗೆ ಕಾಣುವಳು
ಬಾವಿ ತುಂಬಿ ನೀರು
ಭತರ್ಿ ತುಳುಕಾಡುವಳು
ಕುಂಧರ ಬಹುಪಾಲು ಹಾಡುಗಳಲ್ಲಿ ಪ್ರತಿಯೊಂದು ಸಾಲು ಪಲ್ಲವಿಯಲ್ಲಿ ಕೊನೆಯಾಗುತ್ತದೆ. ಇಡೀ ಹಾಡು ಬಾಯಲ್ಲಿ ಉಳಿಯಲು ಇದು ಅನುವು ಮಾಡಿಕೊಡುತ್ತದೆ. ಕೆಲವರು ಚರಣದ ಸಾಲುಗಳನ್ನು ಹಾಡಿದರೆ ಉಳಿದವರು ಪಲ್ಲವಿ ಹಾಡುತ್ತಾರೆ. ಮರಳಿ ಬರುವ ಸಾಲುಗಳು ಅನುವಾದದಲ್ಲಿ ಹೆಚ್ಚಿನ ತಿಳಿವನ್ನೇನೂ ಸೇರಿಸುವುದಿಲ್ಲ.
ಕುಂಧರಿಗೆ ನಗಿಸುವುದು. ತಮಾಷೆ ಮಾಡುವುದು ಬಲು ಇಷ್ಟದ ಕೆಲಸ. ಬೇರೆಯವರು ತಮಾಷೆ ಮಾಡುವುದನ್ನೂ ಅವರು ಮೆಚ್ಚುತ್ತಾರೆ. ಅವರು ತಮಗೆ ತಾವೆ ಅಪಹಾಸ್ಯ ಮಾಡಿಕೊಳ್ಳುತ್ತಾರೆ, ವಿಡಂಬಿಸಿಕೊಳ್ಳುತ್ತಾರೆ, ನಗುತ್ತಾರೆ. ಹೆಚ್ಚು ಜನಪ್ರಿಯವಾದ ಬೈಲೆ ಹಾಡುಗಳ ಮೂಲಕ ಹುಡುಗ ಹುಡುಗಿಯರು ಒಬ್ಬರನ್ನೊಬ್ಬರ ವ್ಯಕ್ತಿಗತ ಗುಣಸ್ವಭಾವ, ಮೈಮಾಟಗಳನ್ನು ಕುರಿತು ಗೇಲಿ ಮಾಡುತ್ತಾರೆ. ಲೇವಡಿಯ ದನಿಯಿದ್ದಾಗ ಹಾಡು ನಾಟಕೀಯವಾಗಿರುತ್ತದೆ, ಇದರಲ್ಲಿ ಬಾಳಿನ ಕಡುಕಷ್ಟದ ಸಂಗತಿಗಳಾದ ಇಷ್ಟವಿಲ್ಲದ ಮದುವೆ ಇಲ್ಲವೆ ಮುದಿ ವಯಸ್ಸಿನ ಸ್ಥಿತಿ ಒಳ ಹರಿವಾಗಿಯೂ ಹರಿಯಬಹುದು. ಹೀಗೆ ಕುಂಧರು ಭಯಂಕರ ಹುಡುಗಾಟಿಕೆಯಿಂದಲೂ ಭಯಭಕ್ತಿಯಿಲ್ಲದಂತೆಯೂ ಇರಬಲ್ಲರು. ಬಾಳಿನ ಕಷ್ಟಗಳು ಅಂದರೆ ಸಾವು, ಜಾಡ್ಯ, ದಾರಿದ್ರ್ಯ, ಹುಲಿ, ಕ್ರೂರ ಪ್ರಾಣಿಗಳು, ಹಾಗೂ ಕ್ರೂರ ಜನರ ಶೋಷಣೆಗಳನ್ನು ಇವರು ಇನ್ನು ಹೇಗೆ ತಾನೆ ಎದುರಿಸಲು ಸಾಧ್ಯ?
ವಿಶೇಷವಾಗಿ ಒಲವಿನ ಹಾಡುಗಳು ನವಿರಾಗಿದ್ದು ಅವು ಹುಡುಗ-ಹುಡುಗಿಯರ ಕೊನೆಯಿಲ್ಲದ ಸಲುಗೆಯ ಭಾವನೆಯನ್ನು ನಿರೂಪಿಸುತ್ತವೆ. ಅವು ಬಳಸಿರುವ ಕುರುಹುಗಳು ಅಪ್ಪಟವಾಗಿದ್ದು ಅತ್ಯುತ್ತಮವಾಗಿವೆ, ಅದರ ಆಳದಲ್ಲಿ ಮರುಕದ ತೋಡುಗಳಿವೆ. ಅಂಥ ಕವಿತೆಯ ಭಾಗಗಳು-
ಬಿಟ್ಟು ಹೋದೆ ಯಾಕೆ ಹೊರಟು ಹೋದೆ ಯಾಕೆ
ತೋಪಿನ ಕುಣಿತ ಮುಗಿದಂಗೆೆ | ತೋರಿಲ್ಲ
ಕಾಗೆಗಳು ಇನ್ನೂ ಅರಚಿಲ್ಲ
ಹಾಡಿಗೆ ತಕ್ಕಂತೆ ಏನೆಂಥ ಕುಣಿತವೆ
ಬಗೆಬಗೆ ಕುಣಿದೆ ಬೆಡಗಲ್ಲಿ | ತೇಲಿದೆ
ಹಾಡಿಗೆ ಜೇನು ತುಂಬಿದಂಗೆ
ಕಿಣಿಕಿಣಿ ಕೈಬಳೆ ಕುಲುಕುಲು ಮೆಲುದನಿ
ಆಲಿಕಲ್ಲ ಮಳೆ ಬಿದ್ದಂಗೆ | ಇಂಪಾಗಿ
ಇರುಳಲ್ಲಿ ಇರುಳು ಉರುಳಿದಂತೆ
ಮಾಯಾದ ಮಂಜು ಕಪ್ಪುಮೋಡ ಮುಸುಕು
ಮೆಟ್ಟಿತೆ ನಿನ್ನ ಹುಚ್ಚಂಗೆ | ಚಣದಲ್ಲಿ
ತೆಪ್ಪಗೆ ಯಾಕೆ ಬಿಟ್ಟೋದೆ
ಕಿವಿರಿಂಗು ಕಿವಿಗೆ ಕಾಲ್ಕಡಗ ಕಾಲಿಗೆ
ನಾ ನಿನಗೆ ಜೋಡಿ ನೀ ನನಗೆ | ಎಂದವಳೆ
ಯಾಕಿಂಗೆ ನೀನು ಬಿಟ್ಟೋದೆ?
*
ಮಾಯಾದ ಈ ಬಾಳು ಬಳಲಿ ಮುಪ್ಪಂಗೆ
ಯಾವತ್ತೊ ಉತ್ತಿದ ನೆಲದಂಗೆ | ಬೆಳಸಿಲ್ಲ
ಅಗೆದೆಗೆದು ನೆಲವ ತಿರುವಿದಂಗೆ
ಮುದುಕರ ಬಾಳು ಬಾಡಿದ ಸುಕದಂಗೆ
ಜೀವದ ಹಂಗು ಹರಿದಂಗೆೆ | ಒಳ ಮನಸು
ಉಬ್ಬೆದ್ದು ಕುಣಿದು ಕರೆದಂಗೆ
*
ಹಿರಿಯರು ಅಗಲಿದ ಹಳೆಯ ಹಾಡೀಲಿ
ಹಿರಿಯರು ನಾವು ಇರುತೀವಿ | ಹಿರಿಹಿರಿ
ಕುಣಿತೀವಿ ಇಂದು ಹಿರಿಹಬ್ಬ
ಏಸಂತ ನಡೆದೀತು ಮುದುಕರ ಕುಣಿದಾಟ
ಬಡಕಲು ಜಿಂಕೆ ಅರಚಾಟ | ನಮ ಹರುಷ
ಜೀವದ ಹಂಗು ತೊರೆದಾಟ
*
ನೆಲ ಮುಟ್ಟಿದಾಗಿಂದ ನರಕ ಯಾತನೆ
ಬೀಡು ಕಬ್ಬಿಣ ಮೂಲೇಲಿ | ಎಸೆದಂಗೆ
ಕಾಡಿಗೆ ಬಡವ ಹೊರಟವನೆ
ಹೆಗಲ ಮೇಲೆ ಹಾರೆ ತಲೆಮೇಲೆ ಮಂಕರಿ
ಗೋಳಿನ ಬಾಳು ನವೆಯುತ | ಹಾಡುತ
ಕಾಡಿಗೆ ಬಡವ ಹೊರಟವನೆ
ಪ್ರಿಯತಮೆಯನ್ನು 'ದೂರದ ಬೆಂಕಿಯಾಟ', 'ಕಾಡುಹಕ್ಕಿ', 'ಸಿಯಾಲಿಬಳ್ಳಿ ಒನೆದಾಟ' ಹಾಗೂ 'ಕಾಡಿನ ಎಸಿಹಕ್ಕಿ'ಗಳ ಜೊತೆಯಲ್ಲಿ ನೋಡಲಾಗಿದೆ. ಅವಳು ಯಾರೂ ಇಲ್ಲದ ಅಂಗಳದಿಂದ ಅವನೆಡೆಗೆ 'ನಳ್ಳಿಯ ಮೂಕ ನೋಟವನ್ನು'ವನ್ನು ಬೀರುತ್ತಾಳೆ. 'ಕನಸಿನ ಲೋಕದಲ್ಲಿ ಕಳೆದುಹೋದ ಕಂದ ಅವಳು'. ಅವರಿಬ್ಬರ ಕೆಳೆತನವನ್ನು 'ಕಿವಿರಿಂಗು ಕಿವಿಗೆ' ಹಾಗೂ 'ಕಾಲ್ಕಡಗ ಕಾಲಿಗೆ' ಜೊತೆಯಲ್ಲಿಟ್ಟು ನೋಡಲಾಗಿದೆ. ಅವಳು ಅವನಿಂದ ದೂರ ಹೋದಾಗ 'ನನ್ನ ದುಂಗ್ದುಂಗ ಹಿತ್ತಾಳೆ ದಾರದ ಕಂಬನಿ'ಯಾಗಿ ಕಂಡಿದ್ದಾಳೆ. ನಂತರ ಅವಳ ಕುರಿತು ಹೀಗೆ ಮನಸ್ಸು ಹೊಮ್ಮಿದೆ.
ಕೊರಗಿನ ದನಿಯಲ್ಲಿ ಬೆಡಗಿಲ್ಲ ಬೆರಗಿಲ್ಲ
ಯಾತನೆ ಹಿತವ ಹೊರಚೆಲ್ಲಿ | ಅಳುತಿದ್ದೆ
ಕೆಂಗೆಟ್ಟು ಬಳಲಿ ಕೈಚೆಲ್ಲಿ
ಗಂಡನ ಕಳಕೊಂಡು ಮಗಳ ತಬ್ಬಿಕೊಂಡು
ಹೊಸಬನ ಕೂಡಿ ಒಲೆಹೂಡಿ | ನಿಂತಾಗ
ದಿಕ್ಕಿಲ್ಲದ ಮಗಳು ಅತ್ತಂಗೆ
ಇಂಥ ಹಾಡುಗಳ ಹೆಚ್ಚು ಪಾಲಲೆಲ್ಲ ಧಂಗದ ಧಂಗದಿಗೆ ಅಥವಾ ಧಂಗದಿ ದಂಗಧನಿಗೆ ತೋರುವ ತೀವ್ರ ಪ್ರೀತಿಯ ಮರುಕದ ಹಾಡುಗಳಾಗಿವೆ. ಅಟ್ಟದ ಮಲಗು ಮನೆಯಲ್ಲಿ ರಾತ್ರಿ ಕಳೆಯುವಾಗ ಆತ ತನ್ನ ನಲ್ಲೆಗೆ ಕೊಟ್ಟ ಹೆಸರನ್ನು ಕೂಗಿ ಕರೆಯುತ್ತ ತನ್ನ ಕೊಳಲು ಇಲ್ಲವೆ ದುಂಗ್ದುಂಗ ನುಡಿಸಲು ಹೆಚ್ಚು ಇಷ್ಟ ಪಡುತ್ತಾನೆ. ಅವನ ನಲ್ಲೆಯ ಹೆಸರು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದ್ದು, ಅವನ ಪ್ರೀತಿ ಅವನ ಗೆಳೆಯರಿಗೆ ಅಥವಾ ಹುಡುಗಿಯರ ಅಟ್ಟದ ಮಲಗು ಮನೆಯ ಹುಡುಗಿಯರಿಗೂ ತಿಳಿಯುವುದಿಲ್ಲ. ಆದರೂ ಪ್ರೀತಿ, ಸುಖ, ಸಂಪತ್ತು ಮೊದಲಾಗಿ ಎಲ್ಲದರ ಮೇಲೂ ಮಾತು ಕೊಡಲಾಗುತ್ತದೆ. ಅವನಿಗೆ ನಲ್ಲೆಯಿಂದ ಮರುಮಾತಿನಲ್ಲಿ ಉತ್ತರ ಬರದಿದ್ದರೆ ಅವನು ಚಿಕ್ಕ ಹುಡುಗಿಯಂತೆ ಕಂಗೆಡುತ್ತಾನೆ. ಹುಡುಗಿಯ ಅನುಕಂಪ ಪಡೆಯಲು ಮೊರೆ ಕೂಡ ಹೋಗುತ್ತಾನೆ. ಕೆರಳಿದ ಬಲವಾದ ಭಾವನೆಯ ಸುಳಿವನ್ನು ಚಂದ್ರನ ನೀಲಿಯ ಅಲೆಗೆ ನೀಡಲಾಗುತ್ತದೆ. ಕೊಟ್ಟ ಮಾತನ್ನು ಜೋರು ಮಾಡಿ ವಾಪಸ್ಸು ಪಡೆಯಬಹುದು. ಮೊದಮೊದಲು ರೋಷ ಹೆಚ್ಚು ತೋರಿಬಂದರೆ, ನಂತರ ದೂರ ಉಳಿದು ಬಿಡುವುದು ಇಲ್ಲವೆ ಕೊನೆಕೊನೆಗೆ ಒಪ್ಪಿಗೆ ನೀಡುವುದು ಕಂಡುಬರುತ್ತದೆ. ಧಂಗದಿಯ ಎದೆಗಾರಿಕೆ. ಮೈಬಲ ಹಾಗೂ ಪ್ರೀತಿಸುವ ಜಾಣತನ ಮೆಚ್ಚುವಂಥದ್ದಲ್ಲವೆ ?
ಅವಳಿಗೆ 'ನಾಜೂಕಿನ ಕುಂಬಳ ಬಳ್ಳಿ / ಬಾ ನನ್ನ ಹಬ್ಬಿಕೋ' ಎಂದು ಕರೆ ನೀಡಲಾಗುತ್ತದೆ. ಧಂಗದ ಧಂಗದಿಯರು (ಮದುವೆಯಾಗದ ಹುಡುಗ ಹುಡುಗಿಯರು) ಇಲ್ಲದ ಹಾಡಿ 'ಹಾಳೂರು ನಾಯಿ ನರಿಗಳಿಗೆ ತಕ್ಕ ಊರು' ಆಗಿದೆ. ಹೀಗೆ ಮುಗಿವಿಲ್ಲದ ಮಾತುಕತೆ ನಡೆಯುತ್ತದೆ. ಲೆಕ್ಕವಿಲ್ಲದೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ ಮತ್ತು ಇರುಳಿನಲ್ಲಿ ಅಟ್ಟದ ಮಲಗು ಮನೆಯ ದುಂಗದುಂಗ ಅಥವಾ ಕೊಳಲಿನ ಮಟ್ಟುಗಳು ಅನುಸರಣೆಯಲ್ಲಿರುತ್ತವೆ. ನೀಲಾ, ತಾಲಾ, ಲೆಂಬರಿ, ದುಂಬಾರಿ: ನಲ್ಲೆಗೆ ಕೊಟ್ಟ ಪ್ರೀತಿಯ ಹೆಸರುಗಳು. ಆದರೂ ಅವರ ಬಾಳು ದಾರಿದ್ರ್ತ, ಸಂಕಟ, ಸಾವಿನಿಂದ ತುಂಬಿ ಹರಿಯುತ್ತದೆ.
ಮನಮುಟ್ಟಿ ಬೇಡುವ ಸಂತಲರ ಹಾಡುಗಳು ಹಾಗೂ ಕುಂಧರ ಮೇರಿಯಾ ಹಾಡುಗಳು ಬಹುಮಟ್ಟಿಗೆ ವೇದಕಾಲೀನ ಆಚರಣೆಯಾದ ಸಮುದಾಯದ ಜನತೆಗೆ ಸುಖ ಸಂಪತ್ತು ಬೇಡುವ ಪ್ರಾರ್ಥನೆಯನ್ನು ನೆನಪಿಸುತ್ತದೆ. ಬುಡಕಟ್ಟುಗಳಿಗೆ ನಿಸರ್ಗದಾಚೆಗಿನ ಜಗತ್ತು - ದೆವ್ವ ಭೂತಗಳು ಹಾಗೂ ಸತ್ತ ಹಿರೀಕರೆಲ್ಲ ಕೂಡಿದ ಬೊಂಗಾ ಜಗತ್ತು,- ಅವರು ಜೀವಿಸಿರುವ ಸಮಾಜ ಹಾಗೂ ನಿಸರ್ಗದಿಂದ ಕೂಡಿದ ಜಗತ್ತಿನಷ್ಟೇ ನಿಜವಾದುದು. ಪಕ್ಕದ ಬೆಟ್ಟದಲ್ಲಿ, ಹಾಡಿಯ ಆಚೆಗೆ ಹರಿವ ಹಳ್ಳದಲ್ಲಿ, ಚೊಕ್ಕವಾದ ತೋಪಿನಲ್ಲಿ ಹಾಗೂ ಅಡುಗೆ ಮನೆಯಲ್ಲೂ ಒಳ್ಳೆಯ ಇಲ್ಲವೆ ದುಷ್ಟ ದೈವಗಳು ಇರುತ್ತವೆ. ಈ ದೈವಗಳು ನರಮಾನವನನ್ನು ತುಂಬಾ ಹತ್ತಿರದಿಂದ ನೋಡುತ್ತಿರುತ್ತವೆ. ತಪ್ಪೊಪ್ಪಿಕೊಂಡು ಈ ದೈವಗಳನ್ನು ಹರಸುವಂತೆ ಬೇಡಿಕೊಳ್ಳಬೇಕು. ಇಲ್ಲಿ ಕಾವ್ಯ ಹಾಗೂ ನಂಬಿಕೆ-ನಡಾವಳಿಗಳು ಕೈಕೈ ಹಿಡಿದು ಸಾಗುತ್ತವೆ. ನಿಕಟತೆ ಮತ್ತು ಮುಖ್ಯ ಸಾಮಾಜಿಕ ಗುರಿ ಸಾಧಿಸುತ್ತದೆ.
ಭಾರತೀಯ ಸಾಮಾಜಿಕ ವ್ಯವಸ್ಥೆಯ ಮಾದರಿಯಿದು. ಸಮುದಾಯಗಳ ಸಮುದಾಯ ಸಾರವಾದ ಇಂಥ ಜೀವಂತ ಮತ್ತು ಬೆಳೆಯುತ್ತಿರುವ ಸಮುದಾಯವನ್ನು ಹುಟ್ಟುಹಾಕಲು ಯಾವತ್ತಿಗೂ ಪ್ರಯತ್ನಿಸುತ್ತದೆ.
ಹಿರಿಯ ಸಮಾಜದ ಜೊತೆ ಬುಡಕಟ್ಟು ಸಂಸ್ಕೃತಿ ಮತ್ತು ಸಮಾಜ ಬೆರೆಯುವ ಅನೇಕ ಮಾದರಿಗಳಲ್ಲಿ ಇದುವರೆಗೆ ಮುಂದಿಟ್ಟಿರುವ ಒಂದೇ ಒಂದು ಸೂತ್ರವಾದ ಕರಗುವ ಗಡಿಗೆಯಲ್ಲಿ ಒಂದೆಸಮ ಕೊಡುಕೊಳ್ಳುವಿಕೆ ನಡೆಯುವ ಹಾಗೂ ಬೆರಕೆ ಸಂಸ್ಕೃತಿಯಾಗಿ ಕೂಡಿ ಬಾಳುವ ಮಾದರಿಯನ್ನೆ ಒತ್ತಿ ಹೇಳಲಾಗಿದೆ. ಬುಡಕಟ್ಟುಗಳ ಸಂಸ್ಕೃತಿಯ ಚಿಮ್ಮುನೆಲೆಯಲ್ಲಿ ಮೈಗೂಡಿರುವ ವಿಶ್ವ ವ್ಯಾಪಕ ಮಾನವ ಮೌಲ್ಯಗಳು ಅವರದೆ ಶೋಧನೆ ಎಂದು ಒತ್ತಿ ಹೇಳುವುದಕ್ಕೂ ಈಗ ಕಾಲ ಒದಗಿಬಂದಿದೆ. ಹಲವೆಡೆ ಎದ್ದ ಬೇಡಿಕೆಗಳನ್ನು ಚಾರಿತ್ರಿಕ ಮೌಲ್ಯಗಳಿಗೊಳಪಟ್ಟು ಮೀರಿರುವ ಶಿಷ್ಟ ಪರಂಪರೆಯ ಹುಡುಕಾಟ ಕೂಡ ಇದನ್ನೇ ಬೊಟ್ಟು ಮಾಡಿದೆ. ಸಂಸ್ಕೃತಿಯ ಬೆಳೆಯುವಿಕೆ ಹಾಗೂ ಅರಳುವಿಕೆಗೆ ಇದೊಂದು ಪಕ್ಕಾ ಚಿಹ್ನೆಯಾಗಿದ್ದು. ನೀರಸ ಜಗಳ ಅಥವಾ ಆದಿಕಾಲದಿಂದ ಹೊರಬರುವುದು ಇದಕ್ಕೆ ವಿರುದ್ಧವಾದುದೆ ಆಗಿದೆ.
ಸಂಸ್ಕೃತಿ ಬೇರುಗಳ ಈ ಹೊಸ ತಡಕಾಟದಲ್ಲಿ ಬುಡಕಟ್ಟು ತಂಡಗಳು ತನ್ನದಲ್ಲದ ಬಗ್ಗೆ ವಿರೋಧದ ಬಲ ಒಗ್ಗೂಡಿಸುವ ಚಿಹ್ನೆಗಳಿವೆ. ಕುಲ ಜನಾಂಗೀಯತೆ ಬಗ್ಗೆ ಹೇಳಿದ್ದನ್ನೆ ಹೇಳುವುದರಿಂದ ಚಿಲುಮೆಯ ಅಂತರ್ಜಲವೆ ಬತ್ತಿಹೋಗಿ ಮನಸ್ಸಿನಲ್ಲಿ ಗೊಂದಲಗಳು ಬೆಳೆಯತೊಡಗುತ್ತವೆ. ಬುಡಕಟ್ಟು ಸಂಸ್ಕೃತಿಯ ಬಗ್ಗೆ ಬೆಳೆಯುತ್ತಿರುವ ಕುತೂಹಲ ಹಾಗೂ ಅಪ್ಪಟ ಅರಿವು ನಮ್ಮ ವಿಶ್ವವ್ಯಾಪಕ ಮೌಲ್ಯಗಳ ಕುರಿತ ನಿಯತ್ತನ್ನು ಉಳಿಸುತ್ತದೆ. ಈ ಮೌಲ್ಯಗಳು ಊರೊಟ್ಟಿನ ಜನ ಸಮೂಹ, ಅವರ ಸಹಜ ಸ್ವಭಾವ ಮತ್ತು ಅರ್ಥವತ್ತಾದ ಸಾಲು ಚಿತ್ರ ಊಹಿಸುವ ಮನಸ್ಸಿನ ಬಲ- ಇವನ್ನು ಒತ್ತಿ ಹೇಳುತ್ತವೆ. ಅಲ್ಲದೆ ನಗರವನ್ನು ನೆರೆಹೊರೆಯ ಸಂಬಂಧಿಕರ ಗುಂಪಿನಂತೆ ಅಥವಾ ಬೇರೆ ಬೇರೆ ಸಾಂಸ್ಕೃತಿಕ ನಮೂನೆಗಳು, ನಂಬಿಕೆಗಳು ಹಾಗೂ ನೆಲೆ-ಬೆಲೆೆಗಳು ಮೊಸಾಯಿಕ್ನಂತೆ ಗಟ್ಟಿಗೊಂಡು ಬಬ್ಲರ್ ಹೇಳಿರುವ ಹಲವು ಪಂಗಡಗಳು, ಬಣಗಳು ಕೂಡಿ ಆಗಿರುವ ಸಮುದಾಯದಂತೆ ಕಾಣಲು ಅನುವು ಮಾಡಿಕೊಡುತ್ತದೆ.
ಆದಿವಾಸಿ ಬುಡಕಟ್ಟುಗಳ ಸಂಸ್ಕೃತಿ ಪರಂಪರೆಗಳ ಬಗ್ಗೆ ಅರಿವು ಹೆಚ್ಚುತ್ತಿರುವ ಪರಿಣಾಮಗಳಲ್ಲಿ, ಸಾಂಸ್ಕೃತಿಕ ಸಂಕುಚಿತ ದೃಷ್ಟಿ ಮತ್ತು ಮತಾಂಧತೆಯ ಸ್ವಮತ ಶ್ರೇಷ್ಟ ಕಲ್ಪನೆ ಉತ್ತೇಜಿಸುತ್ತಿರುವ ಸದ್ಯದ ಸಾಂಸ್ಕೃತಿಕ ಸಾಪೇಕ್ಷ ಸಿದ್ಧಾಂತದಿಂದ ಹೊರಬರಲು ಆಗು ಮಾಡಿಕೊಡುವುದು ಮುಖ್ಯವಾಗಿದೆ. ಕಲೆ ಕುರಿತ ನಮ್ಮ ಕಲ್ಪನೆಯನ್ನೆ ಇದು ಹೆಚ್ಚಿಸಬಲ್ಲದು. ಇವತ್ತು ಕಲಾ ರಚನೆಗಳೆಂದು ಕರೆಯುವ ಕಲಾ ರೂಪಗಳನ್ನು ಹಿಂದಿನ ಕಾಲದಲ್ಲಾಗಲೀ ಅಥವಾ ಉಳಿದ ಸಂಸ್ಕೃತಿಗಳಲ್ಲಾಗಲೀ ಅರಿತಿರಲಿಲ್ಲವೆಂದು ನೆನಪು ಮಾಡಿಕೊಳ್ಳುವ ಅಗತ್ಯವಿದೆ. ನಮಗೆ ತಿಳಿದಂತೆ, ಪಶ್ಚಿಮ ದೇಶಗಳ ಸಂಸ್ಕೃತಿಯಲ್ಲೂ ಒಂದು ಯುಗದ ಜನ ತಮ್ಮ ಹಿಂದಿನ ಮತ್ತೊಂದು ಯುಗವನ್ನು ಬಹುಮಟ್ಟಿಗೆ ತಿಳಿದಿರುತ್ತಿರಲಿಲ್ಲ. ಉದಾಹರಣೆಗೆ, ಹನ್ನೆರಡನೆಯ ಶತಮಾನದಲ್ಲಿ ಯಾರೂ ಗ್ರೀಕರ ಕಲೆಯಯನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹಾಗೇಯೆ ಹದಿನೇಳನೆಯ ಶತಮಾನದಲ್ಲಿ ಮಧ್ಯಯುಗದ ಕಲೆಯನ್ನು ಅಸಡ್ಡೆ ಮಾಡಲಾಗಿತ್ತು.
ಬಡತನ, ಸಂಕಷ್ಟ, ಯಾತನೆ, ಗೋಳಾಟಗಳೇ ಖುದ್ದು ಸಲಿಗೆಯಿಂದಿರುವ ಜೀವನದ ತೀಕ್ಷ್ಣತೆ ನಡುವೆಯೂ ಡಿಲಾನ್ ಥಾಮಸ್ನ ನೆನಪಿಗೆ ಬಂದ ಸಾಲುಗಳು.
ನಾ ಮೂಗ ಹೇಳೋಕೆ ಬಾಗಿರುವ ಗುಲಾಬಿ
ಅದೇ ಚಳಿಜ್ವರ ಬಾಗಿಸಿತೋ | ನನ್ನ ಹರೆಯ
ಏಸಂತ ನಡೆದೀತೋ ಮುದುಕರ ಕುಣಿದಾಟ
ಬಡಕಲು ಜಿಂಕೆ ಅರಚಾಟ | ನಮ್ಮ ಹರುಷ
ಕುಂಧ, ಪರಜಾಸ, ಮುಂಡ, ಓರಯಾನ ಮತ್ತು ಇನ್ನುಳಿದ ಬುಡಕಟ್ಟು ಸಮಾಜಗಳಲ್ಲಿ ಸಾಕಷ್ಟು ಸಾವು ನೋವುಗಳಿದ್ದರೂ ಸಂಸ್ಕೃತಿಯ ಮೇಲ್ಮೈ ಮುಟ್ಟಿವೆ. ಅವರ ಸಮಾಜ ಜನರ ನುಡಿಕಟ್ಟುಗಳಲ್ಲಿ ಸರಳಾನುಸಾರಿಯಾದ, ರಸಾದ್ರ್ರತೆಯಿಂದ ಕೂಡಿದ, ಮೇಲುಮಟ್ಟದ ಕಾವ್ಯ ಕಟ್ಟಿದೆ, ಮದುವೆ ಸಡಗರದಲ್ಲಿ ಒಬ್ಬ ಮುದುಕ ಅವನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ-
ಹಿರಿಯರು ಅಗಲಿದ ಹಳೆಯ ಹಾಡೀಲಿ
ಹಿರಿಯರು ನಾವು ಇರುತೀವಿ | ಹಿರಿಹಿರಿ
ಕುಣಿತೀವಿ ಇಂದು ಹಿರಿಹಬ್ಬ
'ಚಲಿಸುವ ಮಣ್ಣಿನ ನಮೂನೆಗಳಾದ ಈ ಜನ, ಪರಿಚಿತವಾದ ಆ ತೋಳುಗಳನ್ನು ಪ್ರೀತಿಸುತ್ತ, ಯೋಚನೆ ಮಾಡಲು ತಿಳಿಯುತ್ತ, ಅವರ ಮಿದುವಾದ ದುಂಡನೆ ಆಕಾರದ ಕೊಡುಕೊಳೆಯ ಚೆಲುವಾದ ಅನುದಿನದ ಕಂಗಳ ಮುಚ್ಚುತ್ತ, ಅವರ ತೊಡೆಗಳನ್ನು ಹಳೆಯ ಬುಡಕಟ್ಟು ನೀರಲ್ಲಿ ಇಳಿಬಿಟ್ಟು ತಂಪಗಾಗಿಸುತ್ತ, ಅವರ ಕನಸುಗಳನ್ನು ಮುಗಿವಿಲ್ಲದ ವರುಷಗಳ ಕೊನೆಯಿಲ್ಲದ ನೆಪ್ಪಿನಲ್ಲಿ ಹಿತವಾಗಿಸುತ್ತ ಇರುತ್ತಾರೆ'' ಎಂಬುದು ಫ್ರೆಡ್ರಿಕ್ ಪ್ರೊಕೊಶ್ಚ್ರ ಮಾತು.
-ಸೀತಾಕಾಂತ ಮಹಾಪಾತ್ರ, 1990, ಮೆನ್, ಪ್ಯಾಟರ್ನ್ಸ್ ಆಫ್ ಮೂವಿಂಗ್ ಡಸ್ಟ್: ಓರಲ್ ಪೊಯಿಟ್ರಿ ಆಫ್ ಇಂಡಿಯನ್ ಟ್ರೃಬ್ಸ್, ಇಂಡಿಯನ್ ಹಾರಿಜಾನ್ಸ್, ಸಂಪುಟ:39, ಸಂಚಿಕೆ: ನವೆಂಬರ್ 1-2, ಪುಟ: 11-24