-ಏಜಾಜ್ ಅಹಮದ್
ಜಾಗತೀಕರಣದ ವಿರುದ್ಧ 2001ನೇ ಮಾರ್ಚ್ 21ರಿಂದ 23ರ ವರೆಗೆ ಜರುಗಿದ ಜನವಾದಿ ಸಮಾವೇಶದಲ್ಲಿ ಮಾಡಿದ ಭಾಷಣದ ಲೇಖನ ರೂಪ
ಗೆಳೆಯರೆ,
ನನಗಿಲ್ಲಿ ಮಾತಾಡಲು ಅವಕಾಶ ಕೊಟ್ಟಿರುವ ಈ ಸಮಾವೇಶದ ಸಂಘಟಕರಿಗೆ ಆಭಾರಿಯಾಗಿದ್ದೇನೆ. ನನಗಿಂತ ಮೊದಲು ಪ್ರಭಾತ್ ಪಟ್ನಾಯಕ್ ಅವರು ತುಂಬಾ ಯಶಸ್ವಿಯಾಗಿ ಮತ್ತು ಕ್ರಮಬದ್ಧವಾಗಿ ಮಂಡಿಸಿದ ವಿಚಾರ ಸಂತೋಷವನ್ನುಂಟು ಮಾಡಿದೆ. ನಮ್ಮ ಕಾಲದ ಸಾಮ್ರಾಜ್ಯಶಾಹಿ ಆರ್ಥಿಕ ರಾಜಕಾರಣ ಕುರಿತು ನನಗೆ ತಿಳಿದ ಮಟ್ಟಿಗೆ ಮಾತಾಡಬೇಕೆಂದಿದ್ದ ನನ್ನ ಕೆಲಸವನ್ನು ಇವರು ಹಗುರಗೊಳಿಸಿದ್ದಾರೆ. ಶ್ರೀ ಅಶೋಕ ಮಿತ್ರ ಅವರು ಈ ಸಭೆಯ ಅಧ್ಯಕ್ಷರಾಗಿರುವ ವಿಚಾರ ನನಗೆ ಅನುಕೂಲಕರವೂ ಗಾಬರಿ ತರಿಸುವ ವಿಚಾರವೂ ಆಗಿದೆ. ಅನುಕೂಲಕರ ಯಾಕೆಂದರೆ ಅವರು ಎಡಪಂಥೀಯ ಚಿಂತನೆಗಳಲ್ಲಿ ಪ್ರಾಜ್ಞರು. ಅದೇ ವಿಚಾರವಾಗಿ ನನಗೆ ಗಾಬರಿ ಕೂಡ. ಅವರು ಆರ್ಥಿಕ ರಾಜಕಾರಣವಷ್ಟೇ ಅಲ್ಲ 'ಸಂಸ್ಕೃತಿ' ಎಂದು ನಾವು ಕರೆಯುವ -ಅದಕ್ಕಿಂತ ಉತ್ತಮ ಪದದ ಕೊರತೆ ಇರುವ-ನಿಗೂಢ ವಿಚಾರದಲ್ಲೂ ನನಗಿಂತ ಹೆಚ್ಚು ತಿಳಿದವರು.
ಪ್ರಸ್ತುತ ಸಂದರ್ಭದಲ್ಲಿ 'ಸಂಸ್ಕೃತಿ' ಕುರಿತು ಮಾತಾಡಲು ನನಗೆ ಎದುರಾಗಿರುವ ತೊಡಕು ಮುಂದಿನ ಸತ್ಯಾಂಶದೊಂದಿಗೆ ತಳುಕು ಹಾಕಿಕೊಂಡಿದೆ. ಸಾಮ್ರಾಜ್ಯಶಾಹಿ ಜಾಗತೀಕರಣದ ಈ ಯುಗದಲ್ಲಿ ಸಾಂಸ್ಕೃತಿಕ ಕೈಗಾರಿಕೆಗಳು ಮತ್ತು ಬೃಹತ್ ಶೈಕ್ಷಣಿಕ ಸಮುಚ್ಚಯಗಳು ತಲೆ ಎತ್ತಿರುವುದನ್ನು ನಾವು ಕಂಡಿದ್ದೇವೆ. ಅವು ವಿಶ್ವಮಟ್ಟದಲ್ಲಿ ಒಂದೇ ಒಂದು ವಿಚಾರವನ್ನು, ಕರಾರುವಕ್ಕಾಗಿ ಹೇಳಬೇಕೆಂದರೆ ಸಾಂಸ್ಕೃತಿಕ ವಾದ (ಕಲ್ಚುರಲಿಸಂ)ವೆಂಬ ಒಂದು ವಿಚಾರವನ್ನು ಪ್ರಚಾರ ಮಾಡುವ ಕಾರ್ಯ ಕೈಗೆತ್ತಿಕೊಂಡಿವೆ. ಅಂದರೆ ಅವು ಸಂಸ್ಕೃತಿಯನ್ನು ಸಾಮಾಜಿಕ ಆಚರಣೆಗಳ ಸಮಗ್ರ ಅಂಶವನ್ನಾಗಿ ಮಾತ್ರವಲ್ಲದೆ ನಿರ್ಣಾಯಕ ಉದಾಹರಣೆಯನ್ನಾಗಿಯೂ ನಡೆಸಿಕೊಳ್ಳುತ್ತವೆ. ಇದು ನಮ್ಮ ಕಾಲದ ತಾತ್ವಿಕ ಉತ್ಪನ್ನದ ಮಹಾವ್ಯಂಗ್ಯಗಳಲ್ಲೊಂದು. ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬಂಡವಾಳಶಾಹಿ ಜಗತ್ತಿನಾದ್ಯಂತ ಆರ್ಥಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ಉತ್ಪನ್ನವಾಗಿಯೂ ಅತಿ ದೂರದಲ್ಲಿರುವವರನ್ನು ತಲುಪಲು ಅಂತಿಮವಾಗಿ ಸಾಗುತ್ತಿದ್ದಾಗ ಪಾಶ್ಚಿಮಾತ್ಯ ಶೈಕ್ಷಣಿಕ ಸಂಸ್ಥೆಯ ಎಲ್ಲ ಜನಪ್ರಿಯ ವೇದಿಕೆಗಳು ಪ್ರಚುರ ಪಡಿಸಿದ ವಿಚಾರವೊಂದು ತಲೆ ಎತ್ತಿದುದನ್ನು ನಾವು ಕಂಡಿದ್ದೇವೆ. ಅದು ನಿರ್ಣಯದ ನೆಲೆಯನ್ನು ಭೌತಿಕ ಉತ್ಪನ್ನದ ಕ್ಷೇತ್ರದಿಂದ ಸಂಸ್ಕೃತಿಗೆ ಬದಲಿಸಿದೆ.
ಸಂಸ್ಕೃತಿ ವಿಷಯ ಕುರಿತು ನಾನೀಗ ದೀರ್ಘವಾಗಿ ಮಾತನಾಡುತ್ತೇನೆ. ಮೊದಲು 'ಜಾಗತೀಕರಣ'ವನ್ನು ನಾನು ಹೇಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ಎರಡು ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳುತ್ತೇನೆ. ಅದರ ಆಧಾರದ ಮೇಲೆ ನಮ್ಮ ಕಾಲದ ಸಂಸ್ಕೃತಿಯ ಅರ್ಥವೇನು ಎಂಬುದನ್ನು ನನಗೆ ಅಂತಿಮವಾಗಿ ಕಂಡ ರೀತಿಯಲ್ಲಿ ಹೇಳುತ್ತೇನೆ. ಸಾಮ್ರಾಜ್ಯಶಾಹಿಯ ಇತಿಹಾಸದಲ್ಲಿ 'ಜಾಗತೀಕರಣ' ವೆನ್ನುವುದು ಇತ್ತೀಚಿಗಿನ ಹಂತ ಎಂಬ ಅಂಶವನ್ನು ನಾನು ತಳ್ಳಿ ಹಾಕುವುದಿಲ್ಲ. ಇದರ ಕೇಂದ್ರ ಬಿಂದು ಬಂಡವಾಳ ಸ್ವರೂಪದಲ್ಲಿ ನಡೆದ ಐತಿಹಾಸಿಕ ಬದಲಾವಣೆಗಳ ಒಟ್ಟು ಮೊತ್ತವಾಗಿದೆ. ಈ ವಿಚಾರವಾಗಿ ಬೆಳಗ್ಗೆ ಮಾತನಾಡಿದ ಪ್ರಭಾತ್ ಪಟ್ನಾಯಕ್ ಅವರು ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಇದು ಸಾಮ್ರಜ್ಯಶಾಹಿಯ ಹೊಸಹಂತ ಮಾತ್ರವಲ್ಲ, ಆಮೂಲಾಗ್ರ ಹೊಸಹಂತ. ಹಲವಾರು ಪೂರ್ವ ಶರತ್ತುಗಳನ್ನು ಒಪ್ಪಿಕೊಂಡ ಪರಿಣಾಮವಾಗಿ ಈ ಹಂತ ಮೈ ತಳೆದಿದೆ. ಆ ಪೂರ್ವ ಶರತ್ತುಗಳಲ್ಲಿ ಬಹುಮುಖ್ಯವಾದುವು ಯಾವುವು? ಈ ಪ್ರಶ್ನೆಗೆ ಪರಸ್ಪರ ಸಂಬಂಧಪಟ್ಟ ಹದಿಮೂರು ಬಗೆಯ ಪ್ರಮೇಯಗಳ ಮೂಲಕ ಉತ್ತರಿಸುತ್ತೇನೆ. ಈ ಎಲ್ಲ ಅಂಶಗಳ ಒಟ್ಟು ಮೊತ್ತ ಈ ಹಂತದ ಆಮೂಲಾಗ್ರತೆಯ ನಾವಿನ್ಯತೆಯನ್ನು ವ್ಯಾಖ್ಯಾನಿಸಬೇಕು ಎಂದು ನಾನು ವಾದ ಮಾಡಲು ಬಯಸುತ್ತೇನೆ.
ನನ್ನ ನಂಬಿಕೆಯಂತೆ ಆ ಪೂರ್ವ ಶರತ್ತುಗಳಲ್ಲಿ ಮೊದಲನೆಯದು, ವಸಾಹತು ಸಾಮಾಜ್ಯ ತನ್ನಿಂದ ತಾನೆ ಮುಕ್ತಾಯಗೊಳ್ಳಬೇಕು ಮತ್ತು ಜಾಗತೀಕರಣದ ಆರಂಭದ ಕಾಲಘಟ್ಟವನ್ನು ವಿಶ್ವದ ಎರಡನೆಯ ಮಹಾಯುದ್ಧದ ನಂತರದ ಕಾಲದಲ್ಲಿ ನಿಗದಿಪಡಿಸಬೇಕು. ಆಗ ಬಂಡವಾಳಶಾಹಿ ವಾದದ ಆರಂಭದಿಂದಲೂ ಅಂರ್ತಗತಗೊಂಡಿದ್ದ ಜಾಗತಿಕ ಸಮಗ್ರ ಮಾರುಕಟ್ಟೆಗೆ ಚಾಲನೆ ದೊರೆತ ಬಗ್ಗೆ ಮೊದಲ ಬಾರಿಗೆ ಮಾರ್ಕ್ಸ್ ಎತ್ತಿ ಹೇಳಿದರು. ವಸಾಹತುಶಾಹಿ ಇಂಥ ಮಾರುಕಟ್ಟೆಯೊಂದನ್ನು ಹುಟ್ಟು ಹಾಕಲು ಪ್ರಮುಖ ಪಾತ್ರ ವಹಿಸಿತು. ಹಾಗಿದ್ದರೂ ಈ ಎಲ್ಲವೂ ಆರಂಭಗೊಂಡಿದ್ದು 15ನೆಯ ಶತಮಾನದ ಕೊನೆಯಲ್ಲಿ. 18ನೆಯ ಶತಮಾನದ ಕೊನೆಯ ತನಕ ನಿಜವಾದ ವಸಾಹತೀಕರಣ ಪ್ರಕ್ರಿಯೆ ಬಹುಪಾಲು ಅಮೆರಿಕಾದಲ್ಲೆ ಕೇಂದ್ರಿಕೃತಗೊಂಡಿತ್ತು. 19ನೆಯ ಶತಮಾನದಲ್ಲಿ ಏಷ್ಯಾ ಮತ್ತು ಆಫ್ರಿಕಾಗಳನ್ನು ವಸಾಹತುಗಳನ್ನಾಗಿಸುವ ಕಾರ್ಯ ತೀವ್ರಗೊಳಿಸಲಾಯಿತು. ಇದರಿಂದ ಪಾಶ್ಚಿಮಾತ್ಯ ಅಭಿವೃದ್ಧಿಶೀಲ ಕೈಗಾರಿಕಾ ಕೇಂದ್ರ ದೇಶಗಳ ಗುಂಪು ಮತ್ತು ಹಿಂದುಳಿದ ಬೃಹತ್ ಕೈಗಾರಿಕೆ ರಹಿತ ವಸಾಹತು ಮತ್ತು ಪರಾವಲಂಬಿ ದೇಶಗಳ ಗುಂಪಾಗಿ ವಿಶ್ವ ಒಡೆದುಹೋಯಿತು. ವಸಾಹತುಶಾಹಿ ತನ್ನ ಕೊನೆಯ ವೈಭವದ ದಿನಗಳಲ್ಲಿ ವಿಶ್ವ ಆರ್ಥಿಕತೆಗೆ ಸಮಾನವಾದಂಥದೊಂದನ್ನು ಹುಟ್ಟು ಹಾಕಿತು. ಆದರೆ ಅದು ನಿಜವಾದ ಅರ್ಥದಲ್ಲಿ ಪರಸ್ಪರ ತೊಡರುಗಾಲಾಗಿರುವ ಆರ್ಥಿಕ ವ್ಯವಸ್ಥೆಯಾಗಿತ್ತು. ಬೇರೆಬೇರೆ ವಸಾಹತುಶಾಹಿ ಶಕ್ತಿಗಳು ಬೇರೆ ಬೇರೆ ಭಾಗಗಳನ್ನು ನಿಯಂತ್ರಿಸಿದ್ದವು. ಹೊಸಹಂತದ ಸಮಗ್ರ ವಿಶ್ವ ಆರ್ಥಿಕತೆಗಾಗಿ ಆಗ ನಿರ್ವಸಾಹತೀಕರಣ ಮುಂದಿನ ಬಂಡವಾಳ ಬೆಳವಣಿಗೆಗೆ ಅಗತ್ಯವಾಗಿತ್ತು. ತನ್ನ ಶತ್ರು ರಾಷ್ಟ್ರಗಳು ತಮ್ಮ ಸಾಮ್ರಾಜ್ಯವನ್ನು ಮತ್ತು ಸಾಮ್ರಾಜ್ಯಶಾಹಿ ಯೋಜನೆಗಳನ್ನು ಕಳೆದುಕೊಳ್ಳುವ ವರೆಗೂ ಅಮೆರಿಕಾ ಯಾಜಮಾನ್ಯ ಶಕ್ತಿಯಾಗಿ ಹೊರಹೊಮ್ಮಿತು.
ಇದು ಎರಡನೆಯ ಪೂರ್ವ ಶರತ್ತಿಗೆ ಕಾರಣವಾಯಿತು. ಅದೆಂದರೆ ವಿಶ್ವದ ಸಂಯುಕ್ತ ಸಾಮ್ರಾಜ್ಯವಾಗಿ ಪರಿವರ್ತನೆ ಹೊಂದಿದ ಹಲವಾರು ಸಣ್ಣ ಮತ್ತು ದೊಡ್ಡ ಸಾಮ್ರಾಜ್ಯಗಳನ್ನು ಮೇಲ್ವಿಚಾರಣೆ ನಡೆಸಲು ಸರ್ವೋತ್ಕೃಷ್ಟವಾದ ಶಕ್ತಿಯೊಂದು ಇರಬೇಕಾಗಿದ್ದಿತು, ವಿಶ್ವದ ಎರಡನೆಯ ಮಹಾಯುದ್ಧ ನಡೆದ ಇಪ್ಪತ್ತೊಂದು ವರುಷಗಳ ನಂತರ ಅಂಥ ಪರಿವರ್ತಿತ ಸಂಸ್ಥೆಗಾಗಿ ಅಮೆರಿಕ ತನ್ನ ಯಾಜಮಾನ್ಯದ ಸುವರ್ಣಯುಗದಂತೆ ವ್ಯವಹರಿಸಿದುದು ಇತಿಹಾಸದಲ್ಲಿ ಜರುಗಿಹೋಯಿತು. ಆ ಯಾಜಮಾನ್ಯದ ಅವನತಿಯ ಬಗ್ಗೆ ಇತ್ತೀಚೆಗೆ ಮಾತ್ರ ಹೆಚ್ಚು ಕೇಳಿಬರುತ್ತದೆ. ಅಂಥ ಅಸಾಧಾರಣ ಶಕ್ತಿಯ ಕೆಲವು ಅಂಶಗಳನ್ನು ಆಕ್ಷೇಪಿಸಲು ಪಶ್ಚಿಮ ಯುರೋಪು ಮತ್ತು ಜಪಾನು ಒಂದುಗೂಡಿದುದು ಖಂಡಿತವಾಗಿಯೂ ನಿಜ. ಬಂಡವಾಳಗಾರರ ಶಕ್ತಿಶಾಲಿ ಆರ್ಥಿಕ ದೇಶವಾಗಿ ಅಮೆರಿಕ ಮುಂದುವರೆಯಲಿದೆ ಎಂದು ಹೇಳುವುದೂ ಹೆಚ್ಚು ಸೂಕ್ತ. ಹಣಕಾಸು ಮಾರುಕಟ್ಟೆಗಳಲ್ಲಿ ಪಶ್ಚಿಮ ಯುರೋಪು ಮತ್ತು ಜಪಾನಿನ ಬ್ಯಾಂಕುಗಳು ಅಮೆರಿಕಾದ ಫೆಡರಲ್ ರಿಸರ್ವ್ ಕೇಂದ್ರಪಾತ್ರವನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ನಿರ್ವಹಿಸಲಾರವು. ಅಲ್ಲದೆ ಅಮೆರಿಕಾದ ಸೈನ್ಯ ಶಕ್ತಿ ಪಶ್ಚಿಮ ಯುರೋಪು ಮತ್ತು ಜಪಾನಿನ ಸಂಯುಕ್ತಗೊಂಡ ಸೈನ್ಯ ಬಲಕ್ಕಿಂತ ಹೆಚ್ಚಿನದು. ನ್ಯಾಟೊ ಮೂಗು ತೂರಿಸುವುದೆಂದರೆ ಅಮೆರಿಕ ಮೂಗು ತೂರಿಸಿದಂತೆಯೆ. ಜಗತ್ತಿನಲ್ಲಿ ಸಾಂಸ್ಕೃತಿಕ ವಸ್ತುಗಳು ಮತ್ತು ಸಮಾಚಾರಗಳನ್ನು ಒದಗಿಸುವ ಹತ್ತು ಅತ್ಯುತ್ತಮ ಕಾಪೊರೇಷನ್ನುಗಳಲ್ಲಿ ಆರು ಅಮೆರಿಕದವು. ಮೂರನೆಯ ಜಗತ್ತಿನ ತಾಂತ್ರಿಕ ವಿಜ್ಞಾನ ವ್ಯವಸ್ಥಾಪಕ ಗಣ್ಯರ ತರಬೇತಿಯಲ್ಲಿ ಅಮೆರಿಕ ಸರ್ವೋತ್ಕೃಷ್ಟವಾದ ಮತ್ತು ವಿಧ್ವಂಸಕ ಪಾತ್ರ ಹೊಂದಿದೆ ಎಂಬುದು ನನ್ನ ನಂಬಿಕೆ.
ಮೂರನೆಯದು, ನಾನೀಗ ತಾನೇ ಹೇಳಿದಂತೆ ವಸಾಹತುಶಾಹಿಯ ಅತ್ಯುತ್ಕೃಷ್ಟ ಯುಗ ಕೈಗಾರಿಕೆ ಕೇಂದ್ರೀತ ದೇಶಗಳು ಮತ್ತು ತುಂಬ ಹಿಂದುಳಿದ ಕೈಗಾರಿಕೆ ರಹಿತ ವಲಯಗಳೆಂದು ವಿಭಜನೆ ಹೊಂದಿತು. ಬಂಡವಾಳಶಾಹಿ ವಿಶ್ವ ವ್ಯವಸ್ಥೆಯ ಮೇಲ್ಮಟ್ಟವನ್ನು ಮುಟ್ಟಲು, ಅಭಿವೃದ್ಧಿಶೀಲ ಮತ್ತು ಹಿಂದುಳಿದ ಬಂಡವಾಳ ವಲಯಗಳ ನಡುವೆ ಜಗತ್ತು ಹೊಸ ಬಗೆಯಲ್ಲಿ ವಿಭಜನೆಗೊಳ್ಳುವುದು ಅವಶ್ಯಕವಿತ್ತು. ವಸಾಹತುಶಾಹಿ ಸಾಮ್ರಾಜ್ಯದ ಕೊನೆಗೊಳ್ಳುವಿಕೆ ತೃತೀಯ ಜಗತ್ತಿನಲ್ಲಿ ಸ್ವಲ್ಪ ಪ್ರಮಾಣದ ಕೈಗಾರಿಕಾ ಕ್ರಾಂತಿಯ ರಾಷ್ಟ್ರೀಯ ಬೂರ್ಜ್ವಾ ಯೋಜನೆ ಸಾಧ್ಯವಾಗುವಂತೆ ಮಾಡಿತು ಮತ್ತು ಬಂಡವಾಳಶಾಹಿ ವ್ಯಾಪ್ತಿ ಹೀಗೆ ಬಹುವಿಸ್ತಾರಕ್ಕೆ ಮಾರ್ಪಾಟು ಹೊಂದುವಂತೆ ಮಾಡಿತು.ಅಮೆರಿಕ ಯಾವ ವಸಾಹತುಶಕ್ತಿಯೂ ಇದುವರೆಗೆ ಹೊಂದಿರದಿದ್ದ ಜಗತ್ತಿನ ಸರ್ವೋತ್ಕೃಷ್ಟ ಆರ್ಥಿಕ, ತಾಂತ್ರಿಕ ಮತ್ತು ಸೈನಿಕ ಶಕ್ತಿಯ ಹಾಗೆ ಸಮಗ್ರವಾದ ಹೊಸಬಗೆಯ ವ್ಯವಸ್ಥೆಯಾಗಿ ರೂಪುಗೊಳ್ಳಲು ಅಸಾಧಾರಣವಾಗಿ ಶಕ್ತವಾಗಿತ್ತು.
ನಾಲ್ಕನೆಯದು, ಸೊವಿಯತ್ ಒಕ್ಕೂಟ ಮತ್ತು ಪೂರ್ವ ಏಷ್ಯಾದ ಸಮಾಜವಾದಿ ದೇಶಗಳ ಇರುವಿಕೆ 'ಜಾಗತೀಕರಣ'ಕ್ಕೆ ಮೂರು ವಿಧಗಳಲ್ಲಿ ಅಡ್ಡಿಯನ್ನುಂಟು ಮಾಡುತ್ತಿತ್ತು. ಅವು ಹೆಚ್ಚು ಕಡಿಮೆ ತೃತೀಯ ಜಗತ್ತನ್ನು ರೂಪಿಸಿಕೊಂಡಿದ್ದವು. ಈ ಮೂರನೆಯದೊಂದು ಭಾಗ ಅಷ್ಟು ಸುಲಭವಾಗಿ ಬಂಡವಾಳಶಾಹಿ ಜಾಗತೀಕರಣಕ್ಕೆ ಒಳಗಾಗುತ್ತಿರಲಿಲ್ಲ. ಅವು ವಿಶ್ವಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥಗೆ ಸವಾಲಾಗುವ ಸಾಧ್ಯತೆಗಳನ್ನು ಎತ್ತಿ ಹಿಡಿಯುತ್ತಿದ್ದವು. ತೃತೀಯ ಜಗತ್ತಿನ ದೇಶಗಳಿಗೆ ತಾಂತ್ರಿಕತೆ, ತರಬೇತಿ, ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಪರ್ಯಾಯ ಮೂಲವಾಗಿ ಸೇವೆ ಸಲ್ಲಿಸುತ್ತಿದ್ದವು. ಸೊವಿಯತ್ ಒಕ್ಕೂಟದ ವಿಘಟನೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಚೀನಾ ದೇಶ ಸಮ್ಮಿಳನಗೊಂಡ ಮಾತ್ರದಿಂದಲೆ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಯಾಗಬಹುದಿತ್ತು. ಅದು ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ನೆರವೇರಿತು.
ಐದನೆಯದು, ಆರ್ಥಿಕವಾಗಿ ಸದೃಢವಾಗುಳ್ಳ ತೃತೀಯ ಜಗತ್ತಿನ ಕೆಲವೊಂದು ದೇಶಗಳು ಯಾವ ಪ್ರತಿಬಂಧಕಗಳನ್ನು ಹೊಂದಿರದಿದ್ದರೂ ಸಣ್ಣ ಪ್ರಮಾಣದ ತಡೆಯನ್ನು ಒಡ್ಡಿದವು. ಈ ಮೂಲಕ ರಕ್ಷಣಾತ್ಮಕ ನಿಲುವು, ದೇಶೀಯ ಕೈಗಾರಿಕೆಯ ಬೆಳವಣಿಗೆಗೆ ಪ್ರಭುತ್ವದ ಬಳಕೆ, ತಾಂತ್ರಿಕ ಮತ್ತು ಆರ್ಥಿಕ ಸಹಾಯದ ಪರ್ಯಾಯ ಮೂಲ ದೇಶಗಳೊಂದಿಗೆ ಸಂಬಂಧ ಮುಂತಾದ ಹಲವಾರು ಉಪಾಯಗಳನ್ನು ತಮ್ಮ ಸಮಾಜಗಳ ಮೇಲೆ ಸಾಮ್ರಾಜ್ಯಶಾಹಿ ಪ್ರಭಾವ ತಡೆಯಲು ಬಳಸಿಕೊಂಡವು. ಈ ಹಂತ ತೃತೀಯ ಜಗತ್ತಿಗೆ ಬಹುಪಾಲು 1970ರ ವೇಳೆಗೆ ಕೊನೆಗೊಳ್ಳತೊಡಗಿತು. ವಾಸ್ತವವಾಗಿ ಆ ದೇಶಗಳೆಲ್ಲ -ಅಂದರೆ ಈಜಿಪ್ಟ್, ಇಂಡೋನೇಷ್ಯಾ, ಘಾನ, ಬ್ರೆಜಿಲ್, ಗ್ವಾಟೆಮಾಲಾ -ಪರಾವಲಂಬಿ ವ್ಯವಸ್ಥೆಗೆ ಮರಳತೊಡಗಿದವು. ಹೀಗಾಗಿ ಬೆರಣಿಕೆಯಷ್ಟು ಉಳಿದ ದೇಶಗಳು ಹಟವಾದಿಗಳಾದವು ಮತ್ತು ಅರೆಮನಸ್ಸಿನಿಂದ ಪ್ರತಿಭಟನೆ ತೋರುತ್ತ ಕೇವಲ ಸ್ಥಳೀಯ ದ್ವೀಪಗಳಾಗಿ ಉಳಿದುಬಿಟ್ಟವು.
ಆರನೆಯದು, ವಿಶ್ವದ ಹಣಕಾಸು ಮಾರುಕಟ್ಟೆಗಳನ್ನು ಸಮಗ್ರತೆಗೆ ಒಳಪಡಿಸಲು ಹೊಸ ತಂತ್ರಜ್ಞಾನದ ಅವಶ್ಯಕತೆಯಿತ್ತು. ಅದಕ್ಕೆ ಉತ್ಪಾದನಾ ಬಂಡವಾಳವನ್ನೇ ಹೆಚ್ಚು ಹೆಚ್ಚು ಸಂಚಲಿತ ಬಂಡವಾಳವನ್ನಾಗಿ ಮಾಡಬೇಕಿತ್ತು. ಇದು ಆರ್ಥಿಕ, ಮಾಹಿತಿ, ವಾಣಿಜ್ಯ ಸಮಾಚಾರಗಳು, ಮನರಂಜನಾ ವಸ್ತುಗಳು ಮತ್ತು ವೈಯಕ್ತಿಕ ವ್ಯವಹಾರವೆಲ್ಲ ಒಂದಾದ ಅವ್ಯಕ್ತ ಹರಿವು, ರಾಷ್ಟ್ರಗಳ ಭೂ ಪ್ರದೇಶ ಗಡಿಗಳನ್ನು ಮೀರಿದ ಮತ್ತು ಲಕ್ಷಾಂತರ ಹಾದಿಗಳನ್ನೊಳಗೊಂಡ ಒಂದು ಅತ್ಯುತ್ಕೃಷ್ಟ ಮಾಹಿತಿ ಹೆದ್ದಾರಿ ನಿರ್ಮಾಣದಂಥ ಹಲವು ವಿಷಯಗಳನ್ನು ಒಳಗೊಂಡಿತ್ತು. ಜಾಗತಿಕ ಮಟ್ಟದ ಯಾವುದೇ ಅರ್ಥ ವ್ಯವಸ್ಥೆಯಾಗಲೀ ಇಲ್ಲವೆ ಸಂಸ್ಕೃತಿಯಾಗಲೀ ವಿಶ್ವ ಮಟ್ಟದ ಯಾವುದೇ ಕ್ರೀಡೆಯಾಗಲೀ ಇಲ್ಲವೆ ಮನರಂಜನೆಯಾಗಲೀ ಯಾವುದೆ ದೇಶಗಳ ನಡುವಿನ ವ್ಯಾಪಾರ ವ್ಯವಹಾರದಷ್ಟು ಜಾಗತೀಕರಣಗೊಳ್ಳುವುದು ಅಗತ್ಯವಾಗಿತ್ತು. ಜಗತ್ತಿನ ಪ್ರತಿಯೊಂದು ಮನೆಯಲ್ಲೂ ಈ ಸಂಕೇತಗಳು ಬೆಳಗಬೇಕಾಗಿತ್ತು ಮತ್ತು ಹಣಕಾಸಿನ ಪರಿಣಾಮಕಾರಿ ನಿರ್ಣಯಗಳನ್ನು ಕೈಗೊಳ್ಳಲು ಬೇಕಾದ ಪ್ರಯಾಣದ ಕಾಲವನ್ನು ಪೂರ್ತಾ ಉಳಿಸಬೇಕಾಗಿತ್ತು. ವಸಾಹತುಶಾಹಿಯ ಆಕ್ರಮಣ ಪೂರ್ಣಗೊಳ್ಳಲು ಎರಡನೆಯ ಕೈಗಾರಿಕಾ ಕ್ರಾಂತಿಯ ತಂತ್ರಜ್ಞಾನಗಳು ಅವಶ್ಯಕವಾಗಿದ್ದ ಹಾಗೆಯೆ ಈ ಹೊಸ ಬಗೆಯ ವಿಶ್ವಾತ್ಮಕವಾದ ಸಾಮ್ರಾಜ್ಯಶಾಹಿಯ ಆರಂಭಕ್ಕೆ ಜಾಗತಿಕ ಯುದ್ಧಾನಂತರದ ಕಾಲದ ಬೃಹತ್ ತಂತ್ರಜ್ಞಾನ ಅನ್ವೇಷಣೆಯೂ ಅತ್ಯವಶ್ಯಕವಾಗಿತ್ತು ಎಂದು ಯಾರೂ ಸಲಹೆ ನೀಡಬಹುದಿತ್ತು.
ಏಳನೆಯದು, ಈ ಸಮಗ್ರವಾದ ಸರಣಿಯನ್ನು ಎರಡು ದೃಷ್ಟಿಕೋನಗಳಿಂದ ಅಸ್ಪಷ್ಟವಾಗಿರುವ ಕಾನೂನು ನಿಯಮಗಳ ಸಂಕೀರ್ಣ ವ್ಯವಸ್ಥೆಯಿಂದ ಎತ್ತಿ ಹಿಡಿಯಲಾಗಿದೆ. ಅವು ಐಎಂಎಫ್, ವಿಶ್ವಬ್ಯಾಂಕ್, ಐಎಫ್ಐ, ಗ್ಯಾಟ್, ವಿಶ್ವ ವ್ಯಾಪರ ಸಂಸ್ಥೆ ಮೊದಲಾದ ನಿಯಮಿತ ಆಡಳಿತ ಪದ್ಧತಿಗಳಲ್ಲೆಲ್ಲ ಮೊದಲನೆಯವು. ಇವು ಒಟ್ಟಿಗೆ ಸೇರಿ ಜಗತ್ತಿನ ಮೇಲೆ- ಏಕರೂಪದ ನೀತಿ ನಿರ್ಧಾರಗಳನ್ನು , ಕರಾರುಗಳನ್ನು ಮತ್ತು ಶರತ್ತುಗಳನ್ನು ಹೇರುವ ಹೊಸ ಜಾಗತಿಕ ಸರಕಾರವಾಗಿ ತ್ವರಿತಗತಿಯಲ್ಲಿ ರೂಪ ತಳೆಯುತ್ತಿತ್ತು. ಈ ವ್ಯವಸ್ಥೆಯನ್ನು ಪರಿಪೂರ್ಣಗೊಳಿಸುವಲ್ಲಿ ಈ ಸಂಸ್ಥೆಗಳೇ ಕೇಂದ್ರವಾಗಿದ್ದವು. ಪ್ರತಿಯೊಂದು ರಾಷ್ಟ್ರದ ಪ್ರಭುತ್ವ ಒಪ್ಪಿ ಅನುಸರಿಸುವಂಥ ತಮ್ಮದೆಯಾದ ಅತಿ ಸಂಕೀರ್ಣವಾದ ಕಾನೂನು ಚೌಕಟ್ಟುಗಳು ಮತ್ತು ನಿಯಮಿತ ಆಡಳಿತ ಪದ್ಧತಿಗಳನ್ನು ಅವು ಹೊಂದಿದ್ದವು. ಆದರೆ ಈ ಜಾಗತೀಕರಣದ ಕಾಯಿದೆ ಮತ್ತು ಪರಮಾಧಿಕಾರದಷ್ಟೇ ಸಮಾನವಾದ ಮತ್ತು ತುಂಬಾ ಮುಖ್ಯವಾದ ದೃಷ್ಟಿಕೋನವೆಂದರೆ ಅಮೆರಿಕಾದ ಕಾಯಿದೆಗಳಿಗೆ ಹೆಚ್ಚು ಹೊಂದಿಕೆಯಾಗುವಂಥ-ಪಡಿಯಚ್ಚಿನಂಥ- ಕಾಯಿದೆಗಳನ್ನಾಗಿ ತಮ್ಮ ದೇಶದ ಕಾಯಿದೆಗಳನ್ನು ಬದಲಿಸಲು ರಾಷ್ಟ್ರೀಯ ಸರಕಾರಗಳನ್ನು ನಿರಂತರವಾಗಿ ಒತ್ತಾಯ ಪಡಿಸುತ್ತಲೇ ಇರುವುದು. ವಾಷಿಂಗ್ಟನ್ಅನ್ನು ತನ್ನ ರಾಜಧಾನಿಯನ್ನಾಗಿ ಪಡೆದ ಭೌಗೋಳಿಕ ಗಡಿರೇಖೆ ರಹಿತ ಸಾಮ್ರಾಜ್ಯ ದೂರದೂರದಲ್ಲ್ಲಿರುವ ರಾಷ್ಟ್ರ ಪ್ರಭುತ್ವಗಳ ಒಳಡಾಳಿತಗಳಲ್ಲಿ ಈ ಕೆಳಗಿನ ಮೂರು ಸಂದರ್ಭಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತದೆ. 1. ರಾಷ್ಟ್ರದ ಆಚೀಚಿನ ಖಾಸಗಿ ಬಂಡವಾಳದ ಶಕ್ತಿ ಮತ್ತು ಸೆಳೆತದ ಮೂಲಕ, 2. ರಾಷ್ಟ್ರಾತೀತ ಸಂಸ್ಥೆ (ವಿಶ್ವ ವ್ಯಾಪರ ಸಂಸ್ಥೆ ಮೊದಲಾದವು)ಗಳ ನಿಯಮಿತ ಆಡಳಿತ ಪದ್ಧತಿಗಳ ಮೂಲಕ, 3. ಬೇರೆ ಬೇರೆ ದೇಶಗಳ ಕಾಯಿದೆಗಳನ್ನು ಅಮೆರಿಕ ಕಾಯಿದೆಯ ನಕಲನ್ನಾಗಿ ಮಾಡುವುದರ ಮೂಲಕ.
ಎಂಟನೆಯದು, ಈ ಹೊಸಬಗೆಯ ಜಾಗತಿಕ ಸಾಮ್ರಾಜ್ಯಶಾಹಿಗೆ ನವೀನ ಮಾದರಿಯ ಸೈನಿಕ ತಂತ್ರಜ್ಞಾನದ ಅಗತ್ಯತೆ ಉಂಟಾಯಿತು. ಪ್ರಖ್ಯಾತ 'ಸ್ವಯಂಚಾಲಿತ ರಣರಂಗ ' ಇದಕ್ಕೊಂದು ಉದಾಹರಣೆಯಾಗಿದೆ. ಈ ಮೂಲಕ ಪ್ರಪಂಚದಾದ್ಯಂತ ಬೆಳೆಯುತ್ತಿರುವಂತೆ ಗ್ರಹಿಸಲಾಗಿರುವ ಸಣ್ಣ ಪುಟ್ಟ ಬೇರೆ ಬೇರೆ ಶತ್ರುಗಳ ವಿರುದ್ಧ ಸಾಮ್ರಾಜ್ಯಶಾಹಿಯ ಶಕ್ತಿ ಪರಿಣಾಮಕಾರಿಯಾಗಿ ಮತ್ತು ತೀವ್ರಗತಿಯಲ್ಲಿ ದಾಳಿ ಮಾಡಲು ಸಾಧ್ಯವಾಗಿದೆ. ಹಿಂದಿನ ಯುಗೋಸ್ಲಾವಿಯಾ ಮತ್ತು ಇತ್ತೀಚೆಗೆ ಇರಾಕ್ ಮೇಲೆ ದಾಳಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಈ ಎರಡೂ ಸಂದರ್ಭಗಳು ಸಾಮ್ರಾಜ್ಯಶಾಹಿಯ ನೈತಿಕ ಹಕ್ಕು ಸ್ಥಾಪನೆ ಮತ್ತು ಸೈನಿಕ ತಂತ್ರಜ್ಞಾನಗಳ ಪರಿಕ್ಷಾರ್ಥ ಸಾಧನಗಳಾಗಿ ಬಳಕೆಯಾಗಿವೆ.
ಒಂಬತ್ತನೆಯದು, ರಾಷ್ಟ್ರೀಯ ಸಂಸ್ಥೆಗಳು ಹೊಸ ಸಾಮ್ರಾಜ್ಯಶಾಹಿ ಆಡಳಿತ ಕಾಯಿದೆಗಳನ್ನು ಹೇರಲು ಬಳಸುವ ಹಾಗೆಯೆ ಸಾಮ್ರಾಜ್ಯಶಾಹಿ ಆಕ್ರಮಣದ ನೈತಿಕ ಸಮರ್ಥನೆಗಾಗಿ ಕುಂದಿದ ಪರಮಾಧಿಕಾರ ಮತ್ತು ನಿಯಮಾವಳಿಗಳನ್ನು, ವಿಶ್ವಸಂಸ್ಥೆಯೊಂದಿಗೆ ವಿಶೇಷವಾಗಿ ಭದ್ರತಾ ಮಂಡಳಿಯೊಂದಿಗಿನ ಸಂಬಂಧಗಳನ್ನು ಸತತವಾಗಿ ಮರುಕರಾರಿಗೆ ಒಳಪಡಿಸುತ್ತಿರುತ್ತವೆ. ಅಮೆರಿಕಾದ ಸೈನಿಕ ಕಾರ್ಯಾಚರಣೆಗಳನ್ನು ಅಧಿಕೃತಗೊಳಿಸಲು ವಿಶ್ವಸಂಸ್ಥೆಯನ್ನು ಬಳಕೆ ಮಾಡಿಕೊಂಡಿರುವುದು 1950ರ ಕೊರಿಯಾ ವಿರುದ್ಧದ ಯುದ್ಧದಷ್ಟು ಹಳೆಯದು. ನಂತರದ ಆ ಮುಂದಿನ ಇಪ್ಪತ್ತು ವರುಷಗಳ ಕ್ರಾಂತಿಕಾರಿ ಉತ್ಥಾನ ಕಾಲದಲ್ಲಿ ಈ ಅಪವಿತ್ರ ಮೈತ್ರಿ ಕುಸಿದು ಬಿತ್ತು. 1970ರ ಮಧ್ಯಕಾಲದ ಸ್ಥಿತ್ಯಂತರ ಸಂದರ್ಭದಲ್ಲಿ, ವಿಯೆಟ್ನಾಂ ಸ್ವಾತಂತ್ರ್ಯಗೊಳ್ಳುವ ಸಮಯದಲ್ಲಿ ವಿಶ್ವಸಂಸ್ಥೆಯೂ ಆ ಕಾಲದ ಕ್ರಾಂತಿಕಾರಿ ಮನಸ್ಥಿತಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಿತ್ತು. ಹಾಗಾಗಿ 1974ರಲ್ಲಿ ಪ್ರಭುತ್ವದ ಆರ್ಥಿಕ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತ ಶಾಸನವನ್ನು ಜಾರಿಗೆ ತಂದಿತು. ಈ ಮೂಲಕ ಸದಸ್ಯ ರಾಷ್ಟ್ರಗಳು 'ವಿದೇಶಿ ಬಂಡವಾಳದ ಮೇಲೆ ಕಾನೂನು ಮತ್ತು ಅಧಿಕಾರ ಚಲಾಯಿಸುವ ' ಮತ್ತು 'ಬಹುರಾಷ್ಟ್ರೀಯ ಸಂಸ್ಥೆಗಳ ಚಟುವಟಿಗಳ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸುವ ' ಅಲ್ಲದೆ 'ವಿದೇಶಿ ಆಸ್ತಿಗಳ ಮಾಲಿಕತ್ವ ಬದಲಿಸುವ ಅಥವಾ ಸ್ವಾಧೀನ ತಪ್ಪಿಸುವ, ರಾಷ್ಟ್ರೀಯಗೊಳಿಸುವ ' ಹಕ್ಕು ಹೊಂದಿರುವುದನ್ನು ಘೋಷಿಸಿತು. ನಾನಿಲ್ಲಿ ನಿಮಗೆ ಏನು ನೆನಪಿಸುತ್ತಿದ್ದೇನೆಂದರೆ 1966ರ ಮೂಲಸ್ವರೂಪದ ರಾಷ್ಟ್ರೀಯವಾದಗಳು ಮತ್ತು ಕ್ರಾಂತಿಕಾರತನದ ಉತ್ಕರ್ಷಗಳಿಂದಾಗಿ ಸಾಧಿಸಿದ ವಿಶ್ವದ ಬಲಾಬಲಗಳ ವಿಭಿನ್ನ ಹೊಂದಾಣಿಕೆ ಸಂದರ್ಭದಲ್ಲಿ ವಿಶ್ವಸಂಸ್ಥೆಯ ತೃತೀಯ ಜಗತ್ತಿನ ಹಣಕಾಸು ರಾಷ್ಟ್ರೀಯವಾದದ ಮೂಲಭೂತ ಆಶೋತ್ತರಗಳನ್ನು ತಾನೆ ಮುಂದಾಗಿ ಒಪ್ಪಿಕೊಂಡುಬಿಟ್ಟಿತು. ನಂತರ ಇದು ಭದ್ರತಾ ಮಂಡಳಿಯ ಮರು ಅಮೆರಿಕೀಕರಣದ ಉಸ್ತುವಾರಿ ವಹಿಸಿಕೊಂಡಿದ್ದ ಕೋಫಿ ಅನ್ನಾನ್ ಅವರಿಗೆ ಘೋರತರವಾಗಿ ಪರಿಣಮಿಸಿತು. ಕೊಲ್ಲಿ ಯುದ್ಧದ ಆಕ್ರಮಣ ಕಾಲದಲ್ಲಿ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಕಾರ್ಯದರ್ಶಿ ಮತ್ತೆ ಸಾಮ್ರಾಜ್ಯಶಾಹಿ ನೀತಿಯನ್ನು ಅನುಸರಿಸುವ ಪರಿಕರವಾಗಿ ಬದಲಾದವು. ಅಲ್ಲದೆ ಅನ್ನಾನ್ ಅವರ ಕೆಲಸವನ್ನು ತುಂಬ ಸುಲಭ ಮಾಡಿದವು.
ಹತ್ತನೆಯದು, ಅಮೆರಿಕ ಆಕ್ರಮಣದ ನೈತಿಕ ಸಮರ್ಥನೆಯನ್ನು ಭದ್ರತಾ ಮಂಡಳಿಯಿಂದ ಪಡೆದುದೇ ಅಲ್ಲದೆ ಜಗತ್ತಿನ ಬುದ್ಧಿ ಜೀವಿಗಳಲ್ಲಿ ನೈತಿಕ ಒತ್ತಡ ಉಂಟುಮಾಡಲು, ತನ್ನ ಆಲೋಚನೆ ಅಧಿಕೃತಗೊಳಿಸಲು ಮತ್ತು ಸಾಂಸ್ಕೃತಿಕ ಒಪ್ಪಿಗೆ ಪಡೆಯಲು ಅದಕ್ಕೆ ಸಂಕೀರ್ಣ ಬಲವೊಂದರ ಅಗತ್ಯವಿತ್ತು. ಅದನ್ನು ಎಲ್ಲ ಬಗೆಯ ಎನ್ ಜಿಒಗಳಿಂದ, ನವ್ಯೋತ್ತರವಾದ ಅತ್ಯುತ್ತಮ ಚಿಂತಕರಿಂದ, 'ಇತಿಹಾಸ ಮುಗಿತಾಯ' ಚಿಂತನೆಗಳವರೆಗೂ ಪಸರಿಸಿದ ಹಲವು ಬಗೆಯ ದೊಡ್ಡ ದೊಡ್ಡ ಮಾದರಿಗಳನ್ನು ಪಡೆದುಕೊಂಡಿತು. ಅಮೆರಿಕೆಯ ವಿಶ್ವವಿದ್ಯಾನಿಲಯಗಳ ನಯವಂತಿಕೆಯ ನೈತಿಕ ತತ್ವಶಾಸ್ತ್ರಜ್ಞರು 'ನ್ಯಾಯಯುತ ಯುದ್ಧ ' ಪರಿಕಲ್ಪನೆಯ ಅನುಕೂಲವನ್ನು ಹೊಸದಾಗಿ ರೂಪುಗೊಳ್ಳುತ್ತಿರುವ ಸಾಮ್ರಾಜ್ಯಶಾಹಿಯ ನೈತಿಕ ಆರ್ಥಕತೆಯಲ್ಲಿ ಪ್ರತಿಪಾದಿಸುತ್ತಿರುವುದು ನಮಗೆ ಕೇಳಿ ಬರುತ್ತದೆ. ಆಸಕ್ತಿಯ ವಿಷಯವೆಂದರೆ ಮಾನವ ಹಕ್ಕುಗಳು ಮುಂತಾದ ಸಂಸ್ಥೆಗಳ ಪರವಾಗಿ 'ಮೂಗು ತೂರಿಸುವ ಹಕ್ಕು' ರೋಮ್ ಸಾಮ್ರಾಜ್ಯದಲ್ಲಿ ಮೊದಲಿಗೆ ಬೆಳವಣಿಗೆಯಾದುದು. ಅದು ಜಾಗತಿಕ ಪರಿಣಾಮ ಹೊಂದಿರುವುದು ಗಣನೀಯ. ಸಾಮ್ರಾಜ್ಯಶಾಹಿಯ ಕೇಂದ್ರಗಳಲ್ಲಿ ಆರಂಭವಾದರೂ ಸಾಮ್ರಾಜ್ಯಶಾಹಿಯ ಗಿರಾಕಿಗಳಾದ ಮೂರನೆಯ ಜಗತ್ತಿನ ದೇಶಗಳಲ್ಲಿ ಹರಡಿಕೊಂಡಿದೆ. ಸದ್ದಾಂ ಹುಸೇನ್ ಮಾನವ ಹಕ್ಕುಗಳ ವಿಷಯದಲ್ಲಿ ಒಬ್ಬ ರಾಕ್ಷಸನೇ ಇದ್ದಿರಬಹುದು. ಆದರೆ 'ದುಷ್ಟ ಸಾಮ್ರಾಜ್ಯ' ಎಂಬ ಮಾತನ್ನು ಶೀತಲ ಸಮರದ ಕಾಲದಿಂದ ಹಿಡಿದು ಇಂದಿನವರೆಗೂ ಮರುಚಾಲನೆ ನೀಡಲು ಸಾಧ್ಯ. ಅಲ್ಲದೆ ಅಸಹಾಯಕ ಮಕ್ಕಳು, ಹಿಮ್ಮೆಟ್ಟಿದ ಸೈನಿಕರು ಸೇರಿದಂತೆ ಹತ್ತು ಸಾವಿರ ಇರಾಕಿಗಳ ಸಾವು ನ್ಯಾಯಯುತ ಯುದ್ಧದ ವಿಷಾದನೀಯ ದೃಷ್ಟಿಕೋನವೆಂಬುದನ್ನು ಪ್ರತಿನಿಧಿಸಬೇಕಿದೆ. ಈ ನೈತಿಕ ಆರ್ಥಿಕತೆ ಕೂಡ ತನ್ನದೇ ಆದ ಸಂಕೇತಗಳು ಮತ್ತು ಸ್ಥಿತಿಸ್ಥಾಪಕ ಗುಣಗಳನ್ನು ಹೊಂದಿರುತ್ತದೆ ಎಂಬುದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು ಶ್ರೇಷ್ಠ ಮೌಲ್ಯಗಳು. ಆದರೆ ಇವು ಸೌದಿ ಅರೇಬಿಯಾದಂಥ ಪ್ರದೇಶಗಳಲ್ಲಿ ಹೆಚ್ಚು ಶ್ರೇಷ್ಠವಾಗಿ ಉಳಿದಿಲ್ಲ. ಆಫಘಾನಿಸ್ತಾನದ ಕೊಲೆಪಾತಕಿ ಧರ್ಮಾಂಧರು ಮತ್ತು ಮಾದಕ ವ್ಯವಹಾರಿಗಳು ನೀತಿವಂತ ಏಜೆಂಟರ ಹಾಗೆ ಚಿತ್ರಿಸಲ್ಪಡುತ್ತಾರೆ. ಅಮೆರಿಕ ಪ್ರಪಂಚದಾದ್ಯಂತ ನಡೆಸಿದ ಕಮ್ಯೂನಿಸ್ಟ್ ವಿರೋಧಿ ಯುದ್ಧದಲ್ಲಿ ಬಹುಕಾಲದವರೆಗೆ ಕಾಲಾಳಾಗಿ ಸೇವೆ ಸಲ್ಲಿಸಿದ 'ಮುಜಾಹಿದ್ದೀನ್'ನಂಥವರೂ ಕೂಡ ಬೃಹತ್ ಇಸ್ಲಾಮಿಕ್ ನ ಕಾರಣ ಮುಂದೊಡ್ಡುತ್ತಾರೆ. ಆದರೆ 'ಇಸ್ಲಾಂ ಮೂಲಭೂತವಾದ'ದ ಹೆಸರಿನಲ್ಲಿ ಬರಲಿರುವ ಮಹಾ ಕೆಡಕನ್ನು ಅವರು ವೈಯಕ್ತಿಕಗೊಳಿಸುತ್ತಾರೆ ಹಾಗೂ ಕಮ್ಯೂನಿಷ್ಯರನ್ನು ಆದಷ್ಟು ಬೇಗ ಸೋಲಿಸಿದ ನಂತರ ತುಂಬಾ ಉಲ್ಲಾಸದಿಂದಿರುತ್ತಾರೆ. ಇಂಥ ಸಿನಿಕ ಏರುಪೇರುಗಳು ಜಾಗತಿಕ ಮಾಧ್ಯಮದ ಪಿತೂರಿ ಮತ್ತು ಮಾನವ ಹಕ್ಕುಗಳ ಯಾಂತ್ರಿಕ ಸಂಸ್ಥೆಗಳು ಸೃಷ್ಟಿಸಿದ ನೈತಿಕ ವ್ಯವಸ್ಥೆಯ ಪೂರ್ವಸ್ಥಿತಿಗೆ ವಂದಿಸಿ ಯಾರೊಬ್ಬರ ಗಮನಕ್ಕೂ ಬಾರದೆ ಹಾಗೆ ಕಣ್ಮರೆಯಾಗುತ್ತವೆ.
ಹನ್ನೊಂದನೆಯದು, ನಾಗರಿಕ ಹಕ್ಕು ಮತ್ತು ಪರಮಾಧಿಕಾರದ ಹೊಸ ವ್ಯವಸ್ಥೆಯೊಂದು ಮೈಪಡೆಯುತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈಗಾಗಲೇ ನಾನು ಹೊಸಕಾನೂನಿನ ಆಡಳಿತ ವ್ಯವಸ್ಥೆ ರೂಪತಳೆದುದನ್ನು ತಿಳಿಸಿದ್ದೇನೆ. ಅವಳಿ ನಗರಗಳಾದ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಈ ಸಾಮ್ರಾಜ್ಯದ ಸಂಯುಕ್ತ ರಾಜಧಾನಿಯ ಹಾಗೆ ಕಾರ್ಯ ನಿರ್ವಹಿಸುತ್ತವೆ ಎಂದು ಯಾರೂ ಹೇಳಬಹುದು. ಏಕೆಂದರೆ ಇವು ಅಮೆರಿಕಾ ಸಂಯುಕ್ತ ಸಂಸ್ಥಾನ ಸರಕಾರದ ಕೇಂದ್ರ ಕಾರ್ಯಸ್ಥಾನ ಮಾತ್ರವಾಗಿರದೆ ಈ ಹೊಸ ಸಾಮ್ರಾಜ್ಯದ ಪರಮಾಧಿಕಾರ ಹೊಂದಿದ ಪ್ರಮುಖ ಕೇಂದ್ರೀಯ ಸಂಸ್ಥೆಗಳ ಕೇಂದ್ರ ಕಾರ್ಯಸ್ಥಾನವೂ ಆಗಿದೆ. ಅವುಗಳೆಂದರೆ: ವಾಲ್ ಸ್ಟ್ರೀಟ್, ಐಎಂಎಫ್, ವಿಶ್ವಬ್ಯಾಂಕ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವಸಂಸ್ಥೆ ಮುಂತಾದವು, ಈ ನಡುವೆ ನಾಗರಿಕ ಹಕ್ಕುಗಳು ಮೂರು ಬಗೆಗಳಲ್ಲಿ ಪುನರ್ಸಂಘಟನೆಯಾಗಬಹುದು. ಅತಿ ಮುಖ್ಯ ದೇಶಗಳಲ್ಲಿ ಕೀನ್ಸಿಯನ್ ವಾದದ ಕುಸಿತ ಮತ್ತು ತೃತೀಯ ಜಗತ್ತಿನಲ್ಲಿ ಸುಧಾರಣಾವಾದಿ ರಾಷ್ಟ್ರೀಯವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕ ಅರ್ಹತೆಗಳು ನಾಗರಿಕ ಹಕ್ಕನ್ನು ಕಟ್ಟಿಹಾಕಿರುವುದು ಈಗ ಸೈದ್ಧಾಂತಿಕವಾಗಿಯೂ ಕಡಿಮೆಯಾಗಿದೆ ಹಾಗೂ ಸಮಾಜ ಹಿತದ ಅಂತಿಮ ನ್ಯಾಯಕಾರನ ಹಾಗೆ ಮಾರುಕಟ್ಟೆಗೆ ಹೆಚ್ಚು ದೂರವಾಗಿದೆ. ಬಂಡವಾಳಶಾಹಿ ಬಯಸುವ ಹಾಗೆ ಮಾರುಕಟ್ಟೆ ಆದಾಯವನ್ನು ಕೆಳಹಂತಗಳ ಬದಲು ಮೇಲು ಹಂತಗಳಿಗೆ ಮರು ಹಂಚಿಕೆ ಮಾಡಿದರೆ - ಜಾಗತೀಕರಣದ ವಿರುದ್ಧ ಈ ಜನವಾದಿ ಸಮಾವೇಶ ಅಪೇಕ್ಷೆ ಪಡುವ ಹಾಗೆ - ಕೆಳವರ್ಗದಲ್ಲಿರುವವರು ತಲೆ ಎತ್ತಲಾಗದಂತೆ ಸೊರಗುತ್ತಾರೆ. ಕುವೈತ್ ತನ್ನ ಬಂದಿಗಳನ್ನು, ಹೊರದೇಶದ ಜನರನ್ನು, ಪೌರರಲ್ಲದ ಕಾರ್ಮಿಕರನ್ನು ನಡೆಸಿಕೊಂಡ ರೀತಿಯಲ್ಲೆ ಅವರನ್ನೂ ಜಗತ್ತಿನಾದ್ಯಂತ ನಡೆಸಿಕೊಳ್ಳಲಾಗುತ್ತದೆ. ಇಲ್ಲವೆ ಮ್ಯಾಡ್ ಲೈನ್ ಆಲ್ ಬ್ರೈಟ್ ಅಂಥವರು ಮತ್ತು ಆಧುನಿಕೋತ್ತರದ ಅತ್ಯುತ್ತಮ ಚಿಂತನಕಾರರು- ರಾಷ್ಟ್ರೀಯ ಪ್ರಭುತ್ವ ಪ್ರತಿನಿತ್ಯ ನಾಶವಾಗುವುದನ್ನು ನಾಗರಿಕ ಹಕ್ಕು ಉಳಿಸಬಲ್ಲುದೆ? ಅಂದರೆ ರಾಷ್ಟ್ರೀಯ ಪ್ರಭುತ್ವವನ್ನು ವಿಭಿನ್ನವಾದ ಜನಾಂಗೀಯ ಅನನ್ಯತೆಯ ಯೋಜನೆಯಿಂದ ಮರುಸಂಘಟಿಸಬೇಕಿದೆಯೆ ಹೊರತು ನಾಗರಿಕ ಹಕ್ಕುಗಳ ಸಂಯುಕ್ತ ಯೋಜನೆಯಿಂದ ಅಲ್ಲ-ವೆಂದು ಆತುರಾತುರದಲ್ಲಿ ಸಂಯುಕ್ತ ಹೇಳಿಕೆ ನೀಡುತ್ತಾರೆ. ಒಂದು ಕಾಲದಲ್ಲಿ ಸಮಾನತೆಯಾಗಿದ್ದುದು ಇಂದು ಅನನ್ಯತೆಯಾಗಿದೆ. ಸಾಮ್ರಾಜ್ಯಶಾಹಿವಾದ ಅಂತಿಮವಾಗಿ ಕಟ್ಟಕಡೆಯ ವರ್ಗದ ಧ್ರುವೀಕರಣವನ್ನು ಜಾಗತಿಕ ಮಟ್ಟದಲ್ಲಿ ತರುವುದೆಂದರೆ ಎಲ್ಲ ಕಡೆ ಸಾಮ್ರಾಜ್ಯದ ಪ್ರಜೆಗಳನ್ನು ಕಾಣುವುದು ಎಂದರ್ಥ. ಬಾಂಬೆ, ದೆಹಲಿ, ಸಾವೊಪೌಲೆ, ಟೋಕಿಯೋ, ಫ್ರಾಂಕ್ ಫರ್ಟ್, ನ್ಯೂಯಾರ್ಕ್, ಬೀಜಿಂಗ್ ನಂಥ ನಗರಗಳಲ್ಲೂ ಕೂಡ ಅಲ್ಲಿಯ ಪೌರರಲ್ಲದವರೆ ತುಂಬಿಕೊಳ್ಳುತ್ತಾರೆ. ಈ ನಗರಗಳಲ್ಲಿ ವಾಸಿಸುವವರು ನಗರದ ಹೊರವಲಯಗಳಲ್ಲಿ , ನಿಷೇಧಿತ ಸ್ಥಳಗಳಲ್ಲಿ, ಇಕ್ಕಟ್ಟಿನ ವಠಾರಗಳಲ್ಲಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಉಳಿಯುತ್ತಾರೆ. ಶಾಂಘೈನಂಥ ನಗರಗಳಲ್ಲಿ ರೈತರ ಸಂಖ್ಯೆ ಅಪಾರವಾಗಿ ಬೆಳೆಯುತ್ತಿದೆ. ಈಗಾಗಲೇ ಆ ನಗರದಲ್ಲಿ ಕೋಟಿಗಟ್ಟಲೆ ಜನ ಹಿಂದುಳಿದ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಆದರೂ ಅವರು ತಮ್ಮ ಸರಕಾರದಿಂದ ತಾವು ಎಲ್ಲಿಬೇಕಾದರೂ ನೆಲೆಸಬಹುದೆಂಬ ಅನುಮತಿಯನ್ನೇನೂ ಪಡೆದುಕೊಂಡಿಲ್ಲ. ಅವರು ಅತತವಾಗಿ ತಲೆಮರೆಸಿಕೊಂಡಿರಬೇಕಿದೆ ಮತ್ತು ಸರಕಾರದ ಅಂಕಿಅಂಶಗಳಲ್ಲಿ ವ್ಯಕ್ತಿಗಳಾಗದೆ ಉಳಿಯಬೇಕಾದ ಸಂದರ್ಭವೊದಗಿದೆ.
ಹನ್ನೆರಡನೆಯದು, ಜಾಗತೀಕರಣದ ವಿಚಾರಧಾರೆ ರಾಷ್ಟ್ರೀಯ ಪ್ರಭುತ್ವದ ಆಕ್ಷೇಪಣೆಗೆ ಎದುರಾಗಿ ಅಸಂಬದ್ಧವಾದುದನ್ನೇ ಹೆಚ್ಚು ಹುಟ್ಟು ಹಾಕಿದೆ ಹಾಗೂ ಬಂಡವಾಳದ ವಿರಾಟ್ ರೂಪದೆದುರು ತನ್ನ ಅವಸಾನವನ್ನೂ ಕಲ್ಪಿಸಿಕೊಂಡಿದೆ. ವಾಸ್ತವವಾಗಿ, ರಾಷ್ಟ್ರೀಯ ಪ್ರಭುತ್ವದ ಸ್ವರೂಪ ಜೀವಂತವಾಗಿರಬೇಕಿದ್ದು, ಚಿಗುರೊಡೆಯುತ್ತಿರಬೇಕಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಹೆಮ್ಮೆಯಿಂದ ಬೀಗುವಂಥ ರಾಷ್ಟ್ರೀಯವಾದಿ ಮನೋಭಾವ ಕೇಂದ್ರಿತವಾದ ರಾಷ್ಟ್ರೀಯ ಮಟ್ಟದ ಸೈನ್ಯ ವ್ಯವಸ್ಥೆಯನ್ನು ಹೊಂದಿದೆ. ಯುರೋಪ್ ಒಕ್ಕೂಟದ ಅತಿ ಶಕ್ತಿಶಾಲಿ ಸದಸ್ಯ ರಾಷ್ಟ್ರವಾದ ಜರ್ಮನಿ ಪೂರ್ವವಲಯವನ್ನು ಪರಿಣಾಮಕಾರಿ ವಸಾಹತುವನ್ನಾಗಿಸಿಕೊಂಡು ವಿಶಾಲ ರಾಷ್ಟ್ರ ಸಂಘಟನೆಯನ್ನು ಇತ್ತೀಚೆಗಷ್ಟೆ ಸಾಧಿಸಿದೆ. 'ಪೂರ್ವ ಏಷಿಯಾದ ಹುಲಿಗಳು' ಎಂದೇ ಕರೆಯಲಾಗುವ ದೇಶಗಳ ಅಸಾಧಾರಣ ಬೆಳವಣಿಗೆಯನ್ನು ಪ್ರಬಲ ಮಧ್ಯಸ್ಥಗಾರ ರಾಷ್ಟ್ರದ ನೆರವಿಲ್ಲದೆ ಯೋಚಿಸುವುದು ಕಷ್ಟ. ನವ ಉದಾರ ಖಾಸಗೀಕರಣ ನೀತಿಯನ್ನು ಪ್ರತಿಯೊಂದು ರಾಷ್ಟ್ರ ಪ್ರಭುತ್ವವೂ ಪ್ರಪಂಚದಾದ್ಯಂತ ಕಾರ್ಯರೂಪಕ್ಕೆ ತಂದವು. ಬಂಡವಾಳ ಯಾವುದೇ ನಿರ್ಬಂಧಗಳನ್ನು ಬಯಸುವುದಿಲ್ಲ. ಆದರೂ ಕಾರ್ಮಿಕ ಆಡಳಿತ ವ್ಯವಸ್ಥೆ ಯಾವಾಗಲೂ ರಾಷ್ಟ್ರೀಯವಾಗಿರುತ್ತದೆ. ವಲಸಿಗರು ಒಂದು ರಾಷ್ಟ್ರೀಯ ಆಡಳಿತ ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಗೆ ಚಲಿಸಿದರೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ನೀವು ಮೆಕ್ಸಿಕೋ ನಗರದಲ್ಲಿ ಮೆಕ್ಸಿಕನ್ನರನ್ನು ಮಾತ್ರ ಕೇಳಬೇಕು ಇಲ್ಲವೆ ಕ್ಯಾಲಿಫೋರ್ನಿಯಾದಲ್ಲಿ ಅದಲು ಬದಲು ಮಾಡಿ ಕೇಳಬೇಕು. ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಕಾರ್ಮಿಕರ ಬಗ್ಗೆ ಏನೂ ಮಾತನಾಡುವ ಹಾಗಿಲ್ಲ. ಜಾಗತೀಕರಣ ಏನನ್ನು ಬಯಸುತ್ತದೆ ಎಂದರೆ ರಾಷ್ಟ್ರೀಯ ಪ್ರಭುತ್ವ ಕಾರ್ಮಿಕರ ಸಂಬಂಧದಲ್ಲಿ ದುರ್ಬಲವಾಗಿರಬೇಕು, ಬಂಡವಾಳದ ಪರವಾಗಿ ಹೆಚ್ಚು ಬದ್ಧವಾಗಿರಬೇಕು ಎಂದು.
ಅಂತಿಮವಾಗಿ ಸಂಸ್ಕೃತಿಯ ಪುನರ್ ಸಂಘಟನೆ ವ್ಯಾಪಕವಾಗಬೇಕಿದೆ. ಇಲ್ಲಿನ ಕೇಂದ್ರೀಕೃತ ಸತ್ಯವೆಂದರೆ ನನ್ನ ದೃಷ್ಟಿಯಲ್ಲಿ ನಾವು ಜಗತ್ತಿನಾದ್ಯಂತ ಬಂಡವಾಳಶಾಹಿ ನಾಗರಿಕತೆಯೊಂದು ಮೈ ಪಡೆದುಕೊಳ್ಳುತ್ತಿರುವುದಕ್ಕೆ ಸಾಕ್ಷೀದಾರರಾಗಿದ್ದೇವೆ. ಅದರಲ್ಲಿ ಏಕರೂಪ ನಾಗರಿಕತೆಯಲ್ಲಿ ಹಲವು ವೈವಿಧ್ಯತೆಗಳ ಹಾಗೆ ರಾಷ್ಟ್ರೀಯ, ಪ್ರಾಂತೀಯ, ಮತ್ತು ಸ್ಥಳೀಯ ಸಂಸ್ಕೃತಿಗಳನ್ನು ಪುನರ್ಸಂಘಟಿಸಬೇಕಿದೆ. ನಾಗರಿಕತೆಯ ಏಕರೂಪತೆಯಲ್ಲಿ ವಸ್ತು ಉಪಯುಕ್ತತೆಯ ಮಟ್ಟ ತೀರಾ ತಳಮಟ್ಟದಲ್ಲಿರುತ್ತದೆ. ಆದರೆ ಎರಡನೆಯ ಹಂತದಲ್ಲಿ ಅಂದರೆ ಆದೇಶಿತ ವಾಸ್ತವದಲ್ಲಿ ವಸ್ತುವಿನ ಮೂಲರೂಪ ಎಲ್ಲ ಬಗೆಯ ವ್ಯತ್ಯಾಸಗಳನ್ನು ಉಳಿಸಿಕೊಂಡು ಬರುತ್ತದೆ, ಉತ್ತೇಜಿಸುತ್ತದೆ, ಉತ್ಪಾದನೆಯನ್ನು ಮಾಡುತ್ತದೆ. ಏಕೆಂದರೆ ಆ ವೈವಿಧ್ಯತೆ ಇಲ್ಲದೆ ಸ್ವಾತಂತ್ರ್ಯದ ಭ್ರಮೆ ಮತ್ತು ಆಯ್ಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಮಾರುಕಟ್ಟೆಯ ಅತ್ಯಂತ ಮೂಲಭೂತ ಅಂಶ. ಆದ್ದರಿಂದ ಜನಾಂಗೀಯತೆ ಎಂಬುದು ಆಧುನಿಕ ಮಾದರಿಯ ವಿನ್ಯಾಸದಲ್ಲಿ ಅಷ್ಟೊಂದು ಪ್ರಮುಖ ಭಾಗವಾಗಿದೆ. ಉದಾಹರಣೆಗೆ, ಜಗತ್ತಿನ ಮಾರುಕಟ್ಟೆಗಳನ್ನು ಮತ್ತು ರಾಷ್ಟ್ರಮಟ್ಟದ ಮಾರುಕಟ್ಟೆಗಳನ್ನು ಮೆಟ್ರೋಪಾಲಿಟನ್ ಮಾರುಕಟ್ಟೆಗಳ ಮಾದರಿಯಲ್ಲಿ ಮರುಏರ್ಪಾಟು ಮಾಡಿರಬೇಕಿತ್ತು. ಫ್ರೆಡರಿಕ್ ಎಂಜೆಲ್ಸ್ ಒಮ್ಮೆ ಆಶಾವಾದದಿಂದ ಹೀಗೆ ಬರೆದ - 'ಸಂಸ್ಕೃತಿಯ ಕ್ಷೇತ್ರದಲ್ಲಿಡುವ ಪ್ರತಿಯೊಂದು ಹೆಜ್ಜೆ ಸ್ವಾತಂತ್ರ್ಯದ ಕಡೆಗಿಡುವ ಹೆಜ್ಜೆ'. ಬಂಡವಾಳಶಾಹಿಯ ಮೂಲಭೂತ ಸಾಂಸ್ಕೃತಿಕ ಯೋಜನೆ ಉಳ್ಳವರ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯದ ರೂಪದಲ್ಲಿ ಚಲಾಯಿಸುವ ಪ್ರತಿಯೊಂದು ಉತ್ಪಾದನಾ ವಸ್ತುವಿನ ಸ್ವತಂತ್ರಹೀನ ಕಂತೆಯಾಗಿ ಇರುತ್ತದೆ ಎಂದು ಬಡವನಾದವನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ವಾಲ್ಟರ್ ಬೆಂಜಮಿನ್ ನಾಗರಿಕತೆಯ ಪ್ರತಿಯೊಂದೂ ದಾಖಲೆ ಅದೇ ಕಾಲದಲ್ಲಿ ಅನಾಗರಿಕತೆಯ ದಾಖಲೆಯೂ ಆಗಿರುತ್ತದೆ ಎಂದು ಹೇಳಿದಾಗ ಬಹುಶಹ ಆತ ಸತ್ಯಕ್ಕೆ ಹತ್ತಿರವಿದ್ದ. ನಾಗರಿಕತೆ ಎಂದರೆ ಆತನ ಅರ್ಥದಲ್ಲಿ ಬಂಡವಾಳಶಾಹಿ ನಾಗರಿಕತೆಯಲ್ಲಿ ಸೌಂದರ್ಯೀಕರಣ ಕ್ರಿಯೆ ಮತ್ತು ಸಂಪತ್ತೀಕರಣ ಕ್ರಿಯೆ ಜೊತೆಯಲ್ಲಿ ಕೈ ಹಿಡಿದು ಸಾಗುತ್ತವೆ. ಹಾಗಾಗಿ ಅದರ ವಿನಿಮಯ ಮೌಲ್ಯದ ಹೆಸರಿನಿಂದ ಕರೆಯಲಾಗುವ ಪೈಶಾಚಕತ್ವದೊಂದಿಗೆ ಹೆಣೆದುಕೊಳ್ಳಲಾರದೆ ಹೋದರೆ ನಮಗೆ ಉಪಯುಕ್ತತೆಯ ಮೌಲ್ಯ ದೊರಕುವುದು ಸಾಧ್ಯವಿಲ್ಲ.
ಈ ಅಭಿಪ್ರಾಯದೊಂದಿಗೆ 'ಜಾಗತೀಕರಣ'ದ ವಿಷಯವನ್ನು ಇಲ್ಲಿಗೆ ಕೈ ಬಿಡೋಣ. ಈ ವಿಷಯದಲ್ಲಿ ನಾನು ವಾಸ್ತವಿಕವಾಗಿ ಇಷ್ಟು ವಿಸ್ತಾರವಾಗಿ ಮಾತಾಡಬೇಕೆಂದುಕೊಂಡಿರಲಿಲ್ಲ. ಇನ್ನು ಸಂಸ್ಕೃತಿಯ ವಿಷಯಕ್ಕೆ ಬರೋಣ. ಈ ವಿಚಾರದಲ್ಲಿ ನಾನು ತಜ್ಞನಲ್ಲದಿದ್ದರೂ ಅಲ್ಪಸ್ವಲ್ಪ ತಿಳುವಳಿಕೆಯಿದೆ ಎಂಬುದು ನಿಮ್ಮಲ್ಲಿ ಕೆಲವರ ನಂಬಿಕೆ. ಬಂಡವಾಳಶಾಹಿ ಜಾಗತೀಕರಣದ ಈ ಯುಗದಲ್ಲಿ 'ಸಂಸ್ಕೃತಿ' ಪದದ ಅರ್ಥ ಸಾಧ್ಯತೆಗಳು ಏನಾಗಿರಬಹುದೆಂದು ನಾನು ಮತ್ತೆ ಮತ್ತೆ ಅಚ್ಚರಿ ಪಟ್ಟಿರುವುದು ನಿಜ. ಆದರೂ ಈಗ ಕೃಷಿ ಮೂಲದ ಎಲ್ಲ ಆಯಾಮಗಳನ್ನು ಮತ್ತು ಜೀವನಾವಶ್ಯಕವಾದ ಆರ್ಥಿಕತೆಯನ್ನು ಏಕರೂಪದ ಜಾಗತಿಕ ನಿಯಮದಡಿ ತರಲಾಗುತ್ತಿದೆ. ಸಮೀರ್ ಅಮೀನ್ ಮಂಡಿಸಿರುವ ಹಾಗೆ ತೀರಾ ಕೆಳಹಂತದಲ್ಲಿರುವ ಜನರಿಗೆ ಸಂಸ್ಕೃತಿ ಗೋಳಾಕಾರವಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬಳಕೆ ಮೌಲ್ಯಗಳನ್ನು ಬಲಪ್ರಯೋಗ ಮಾಡದ ಮತ್ತು ಸಹಕಾರಿಯುತ ಬಳಕೆ ಮೌಲ್ಯಗಳ ಹಾಗೆ ಉತ್ಪಾದಿಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ. ಅಲ್ಲದೆ ಜೀವನಾವಶ್ಯಗಳನ್ನು ತೃಪ್ತಿ ಪಡಿಸುವುದಕ್ಕಾಗಿ , ವಿನಿಮಯ ಮೌಲ್ಯದ ಮಧ್ಯಸ್ಥಿಕೆ ಇಲ್ಲದ, ಸೌಂದರ್ಯದ ಅಗತ್ಯತೆ ಸ್ಪಷ್ಟವಾಗಿ ಒಳಗೊಂಡಿರುತ್ತದೆ. ಮೂಲಭೂತ ವಿಚಾರದಲ್ಲಿ ಸಾಂಸ್ಕೃತಿಕವಾಗಿ ಉತ್ಪಾದನೆ ಹೀಗೆ ಸಂಸ್ಕೃತಿಯ ನಿರಾಕರಣೆಯಂಥದ್ದಕ್ಕೆ ಸಮಾನವಾಗಿರುತ್ತದೆ. ಇದನ್ನು ನಾನು ಜಗತ್ತಿನಾದ್ಯಂತ ಸ್ಥಳೀಯ ಜನರು ಅಥವಾ ಆದಿವಾಸಿಗಳು ಮತ್ತು ಭಾರತದ ಅತಿ ಬಡ ರೈತ ಸಮುದಾಯಗಳ ಸಾಂಸ್ಕೃತಿಕ ಹಕ್ಕುಗಳು ಒಳಗೊಂಡಿರುವ ಹಕ್ಕುಗಳನ್ನು ನಾವು ಸಮರ್ಥನೆ ಮಾಡುವಾಗ ಏನು ಆಗಿರುತ್ತೇವೆಯೋ ಅದೇ ಎಂದು ನಂಬುತ್ತೇನೆ. ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವರೂಪಗಳ ಕಾರಣಗಳಿಂದ ಅವರು ಬಂಡವಾಳಶಾಹಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ಅರಗಿಸಿಕೊಂಡರು ಮತ್ತು ಅದರಿಂದ ಹೆಚ್ಚು ಶೋಷಣೆಗೆ ಒಳಗಾದರು. ಅವರ ವಸ್ತು ಉತ್ಪಾದನೆಗಳಿಗೂ ಬಂಡವಾಳಶಾಹಿಯ ಅವಶ್ಯಕತೆಯಾಗಿದ್ದ ವ್ಯಕ್ತಿಗತ ಮಾದರಿಗಳು ಮತ್ತು ಸಂಗ್ರಹಿತ ರಾಶಿಯ ಆಜ್ಞಾರೂಪಗಳಿಗೂ ಯಾವುದೇ ರೀತಿಯ ಹೊಂದಾಣಿಕೆಯಾಗಲಿಲ್ಲ -ವಿಶೇಷವಾಗಿ ರಾಷ್ಟ್ರ ಮತ್ತು ರಾಷ್ಟ್ರದಾಚೆಗಿನ ಬೂರ್ಜ್ವಾಗಳಲ್ಲದೆ ರಾಷ್ಟ್ರ ಮತ್ತು ರಾಷ್ಟ್ರದಾಚೆಗಿನ ಅಧಿಕಾರಿಶಾಹಿಗಳ ವಿಚಿತ್ರಕೂಟ ನಮ್ಮ ಗಿಡ ಮರ ಮತ್ತು ನೀರಿನ ಬಗ್ಗೆ ವಿಮರ್ಶಾತ್ಮಕ ನಿರ್ಣಯ ತೆಗೆದುಕೊಳ್ಳುವ ಹಕ್ಕನ್ನು ತಮಗೆ ತಾವೇ ಕಾಯ್ದಿರಿಸಿಕೊಂಡ ಬಂಡವಾಳಶಾಹಿ ಜಾಗತೀಕರಣ ಹಂತದ ಸಂದರ್ಭದಲ್ಲಿ. ಬಂಡವಾಳಶಾಹಿ ಸಾರ್ವತ್ರೀಕರಣಗೊಳ್ಳುತ್ತಿರುವ ಈ ಹೊಸಯುಗದಲ್ಲಿ 'ಸಂಸ್ಕೃತಿ' ಎಂಬ ಪದವನ್ನು ಬೇರೆ ರೀತಿಯಾಗಿಯೆ ಅರ್ಥ ಮಾಡಿಕೊಳ್ಳಬೇಕಿದೆ.
ಸಮೀರ್ ಅಮೀನ್ ಅವರಿಂದ ಪಡೆದ ಸಂಸ್ಕೃತಿ ಕುರಿತ ಈ ವ್ಯಾಖ್ಯೆಯನ್ನು ಈಗ ನನ್ನದೆ ಉದ್ದೇಶಗಳಿಗಾಗಿ ಮಾರ್ಪಾಟು ಮಾಡಿಕೊಂಡಿದ್ದೇನೆ. ಅದು ಒಂದು ವಿಶಿಷ್ಟ ವಿಚಾರವನ್ನು ಹೊಂದಿದೆ. ಸಂಸ್ಕೃತಿ ವಿನಿಮಯ, ಮಾರುಕಟ್ಟೆ, ಬೆಲೆ ನಿಗದಿಕರಣ, ಜಾಹಿರಾತು ಮುಂತಾದುವುಗಳ ಬೇಲಿಯೊಳಗೆ ಸಿಕ್ಕಿ ಹಾಕಿಹೊಂಡಾಗ ಸೌಂದರ್ಯಾತ್ಮಕ ಆನಂದ ಮತ್ತು ಕಲಾಕೃತಿ ಬಳಕೆಯ ಮೌಲ್ಯಗಳ ಪಾವಿತ್ರ್ಯತೆ ಜರೂರಾಗಿ ಕುಗ್ಗುತ್ತದೆ ಅಥವಾ ಕೊನೆಯ ಪಕ್ಷ ರೂಪಾಂತರ ಹೊಂದುತ್ತದೆ. ಅಲ್ಲದೆ ಸಂಸ್ಕೃತಿ ಸಾಮಾಜಿಕ ಘನತೆ ಮತ್ತು ಅವಕಾಶ ಗಳಿಸುವ ಉದ್ದೇಶಗಳಿಗಾಗಿ ಶೇಖರವಾದಾಗ ಅದು ಒಂದು ಬಗೆಯಲ್ಲಿ ಬಂಡವಾಳದ ಹಾಗೆ ಕೆಲಸ ಮಾಡಲುತೊಡಗುತ್ತದೆ. ಹೀಗಿದ್ದರೂ ಸಂಸ್ಕೃತಿ ಸಂಬಂಧದಲ್ಲಿ ಬಂಡವಾಳಶಾಹಿ ಪಾತ್ರ- ಅದರ ಎಲ್ಲ ಹಂತಗಳಲ್ಲಿ ಇತ್ತೀಚಿನ ಹಂತವೂ ಸೇರಿರುವ- ಇತರ ಹಲವಾರು ಉನ್ನತ ವಿಚಾರಗಳ ಜೊತೆಗಿನ ಸಂಬಂಧ ಒಂದೇ ರೀತಿಯದಾಗಿರುವುದರಿಂದ ಅದಕ್ಕೆ ಕೆಲವನ್ನು ಸೇರಿಸಬೇಕಾದ ಅಗತ್ಯವಿದೆ. ಉತ್ಪಾದನೆಯ ಮಾರ್ಗಗಳನ್ನು ಉತ್ತಮಪಡಿಸುವುದರಿಂದ ಸಾಧ್ಯತೆಯ ಹಲವು ಅವಕಾಶಗಳು ಹೆಚ್ಚುತ್ತವೆಯಾದರೂ ತನ್ನದೇ ಆದ ಉತ್ಪಾದನೆಯ ಸಾಮಾಜಿಕ ಸಂಬಂಧಗಳು ಮತ್ತು ವಿನಿಮಯ ಅವಕಾಶ ಮಾಡಿಕೊಟ್ಟ ಸಾಧ್ಯತೆಯ ಮೂಲವನ್ನೇ ಹಾಳು ಮಾಡುತ್ತದೆ. ಉದಾಹರಣೆಗೆ, ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಬಂಡವಾಳಶಾಹಿಯ ಸಾಂಸ್ಕೃತಿಕ ಸಾಮಗ್ರಿಗಳಿಗಾಗಿ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿತು. ಈ ಮೂಲಕ ಗಣನೀಯ ಪ್ರಮಾಣದಲ್ಲಿ ಕಲಾವಿದರನ್ನು ಶ್ರೀಮಂತರ ಆಶ್ರಯದಿಂದ ಬಿಡುಗಡೆಗೊಳಿಸಿತು. ಕರಕುಶಲ ಉತ್ಪನ್ನಗಳಿಗೆ ಮೀರಿದ ಮತ್ತು ಕಲೆಯ ಸ್ವತಂತ್ರ ಪರಿಧಿಯಾಚೆಗಿನ ಸಾಮರ್ಥ್ಯವನ್ನು ಹೆಚ್ಚಿಸಿತು. ಆದರೆ ನಂತರ ಕಲಾ ಉತ್ಪನ್ನವನ್ನು ಒಂದು ಮಾರಾಟದ ವಸ್ತುವನ್ನಾಗಿ ಬದಲಾಯಿಸುತ್ತ ಅದೇ ಕಲಾವಿದರನ್ನು ಅದೇ ಮಾರುಕಟ್ಟೆಯಿಂದ ನಿರ್ಬಂಧಕ್ಕೆ ಒಳಪಡುವಂತೆ ಮಾಡಿತು. ಈ ಕಾರ್ಯಗತಿಯಲ್ಲಿ ಮಾರುಕಟ್ಟೆಯಿಂದ ನ್ಯೂನತೆಗಳು ಕಲೆ ಮತ್ತು ಸಂಸ್ಕೃತಿಯ ಆವರಣವನ್ನು ಸ್ಥಳೀಯ ಮತ್ತು ರಾಷ್ಟ್ರೀಯವೆಂದು ವಿಭಜನೆ ಮಾಡುವುದರಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಪರಿಧಿ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಹವಣಿಸುತ್ತಿದ್ದರೆ ಸ್ಥಳೀಯ ಪರಿಧಿ ಮಾರುಕಟ್ಟೆಯ ಅಸ್ತಿತ್ವವನ್ನು ಇಲ್ಲವಾಗಿಸಿಬಿಡುತ್ತಿತ್ತು ಅಥವಾ ಬಿಗಿಯಾದ ನಿರ್ಬಂಧಕ್ಕೆ ಒಳಪಡಿಸುತ್ತಿತ್ತು. ಜಾಗತೀಕರಣದ ಇಂದಿನ ಹಂತಗಳಲ್ಲಿ ನಡೆಯುತ್ತಿರುವುದೇನೆಂದರೆ ಸ್ಥಳೀಯವಾದುದು ಕೂಡ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಹೆಚ್ಚು ಹೆಚ್ಚು ಹಂಬಲಿಸುತ್ತಿರುವುದು ಮತ್ತು ಸ್ವಂತಂತ್ರ ಪರಿಧಿಯ ಒಪ್ಪಂದವನ್ನು ಉಳಿಸಿಕೊಂಡಿರುವುದೇ ಆಗಿದೆ.
ಉದಾಹರಣೆಗೆ, ತೃತೀಯ ಜಗತ್ತಿನ ಪ್ರತಿಯೊಂದೂ ದೇಶವೂ ಸ್ವಾತಂತ್ರ್ಯ್ರ ಪಡೆದ ಮರು ದಿನದ ಸಂದರ್ಭದಲ್ಲಿ ಸರಕಾರ ಪ್ರ್ರಾಯೋಜಿತ ವಲಯದ ಕರಕುಶಲಗಳ ಸಂಸ್ಥೆಯ ಹಾಗೆ ಇರುವುದಕ್ಕೆ ಸಾಕ್ಷಿ. ಇದು ಸರಕಾರದ ಪ್ರ್ರಾಯೋಜನೆ ಮತ್ತು ಸಣ್ಣ ಪುಟ್ಟ ಸಾಮಗ್ರಿ ಉತ್ಪಾದನೆಗಳ ವಿಷಮ ಮಿಶ್ರಣವಾಗಿದೆ. ಈ ಮೂಲಕ ಹಳ್ಳಿಯ ವಿಶ್ವಾಸಾರ್ಹತೆಯನ್ನು ನಗರದ ಮನೆಯಂಗಳಕ್ಕೆ ಕರೆದು ತರಲಾಗುತ್ತಿದೆ. ನಂತರ ಇದು ಏಕವ್ಯಕ್ತಿ ಪ್ರವಾಸಿಗರ ಪ್ರವಾಸೋದ್ಯಮದಲ್ಲಿ ಹೆಚ್ಚು ಸಂಬಂಧ ಸಾಧಿಸುತ್ತದೆ, ಕೊನೆಗೆ ಜಾಗತಿಕ ಮಟ್ಟದ ರಫ್ತು ಮಾರುಕಟ್ಟೆಗಳನ್ನು ತನ್ನದನ್ನಾಗಿಸಿಕೊಳ್ಳುತ್ತದೆ. ಕೆಲವು ಎನ್ ಜಿಒ ವಲಯದ ಚಟುವಟಿಕೆಗಳಲ್ಲಿ ಉದ್ದೇಶಪೂರ್ವಕವಾಗಿಯೋ ಉದ್ದೇಶಪೂರ್ವಕವಲ್ಲದೆಯೋ ವಿಷಮ ಸಹಭಾಗಿತ್ವ ಬೆಳೆದಿದೆ. ಕೆಲವು ಎನ್ ಜಿಒಗಳು ಸಾಮ್ರಾಜ್ಯದ ನೈತಿಕ ಆರ್ಥಿಕ ಸ್ಥಿತಿಯನ್ನು ಸಂಘಟಿಸುವಲ್ಲಿ ನೆರವಾಗುತ್ತಿವೆ. ಈ ಮೂಲಕ ಮಾನವ ಹಕ್ಕುಗಳಂಥ ವಿಷಯಗಳನ್ನು ರಾಷ್ಟ್ರೀಯ ಪ್ರಭುತ್ವದ ಸಮರ್ಥನೆಗಾಗಿ ಬಳಸುತ್ತಿದ್ದು, ಇವು ಕ್ರೂರವೂ ಕಾನೂನು ಬಾಹಿರವೂ ಆಗಿವೆ. ಅಲ್ಲದೆ ಅವು ಸಾಮ್ರಾಜ್ಯಶಾಹಿ ದೇಶಗಳನ್ನು ಮತ್ತು ಬಹುರಾಷ್ಟ್ರೀಯ ಏಜೆನ್ಸಿಗಳನ್ನು ಆ ಮಾನವ ಹಕ್ಕುಗಳ ಸಂರಕ್ಷಕರ ಹಾಗೆ ನೇಮಕ ಮಾಡುತ್ತವೆ. ಇದಕ್ಕೆ ಸಮಾನಾಂತರವಾಗಿ ಸಣ್ಣ ಪುಟ್ಟ ವಸ್ತು ಉತ್ಪಾದನೆ ಮಾಡುವಂಥ ಅರೆಸಾಂಸ್ಕೃತಿಕ ಹಾಗೂ ಅರೆಸೌಂದರ್ಯಾತ್ಮಕ ವಲಯವನ್ನು ಸಂಘಟಿಸಲಾಗಿದೆ. ಈ ಸಂಘಟನೆಯಲ್ಲಿ ಸಮಾಜದ ಕೆಳ ದಲಿತ ವರ್ಗದಿಂದ ಬಂದ ರೈತರು, ಬುಡಕಟ್ಟು ಮಹಿಳೆಯರಂಥ ಕೆಲವರಿಗೆ ರಾಷ್ಟ್ರೀಯ ಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಬಳಸಲಾಗುವಂಥ ವಸ್ತುಗಳನ್ನು ಉತ್ಪಾದಿಸಲು ಉತ್ತೇಜಿಸಲಾಗಿದೆ. ನಾನಿಲ್ಲಿ ಯಾವುದೇ ಉದ್ದೇಶವನ್ನಿಟ್ಟುಕೊಂಡು ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಏಕೆಂದರೆ ಈ ಉದ್ದೇಶಗಳು, ಆಶಯಗಳು, ಮೇಲಿಂದ ಮೇಲೆ ಮೆಚ್ಚುಗೆಗೆ ಒಳಗಾಗುತ್ತವೆ, 'ಅಧಿಕಾರತ್ವ' ಎಂದು ಕರೆಯಲಾಗಿರುವುದನ್ನು ಅನುಸರಿಸಲು ಇದನ್ನೆಲ್ಲ ಮಾಡಲಾಗಿದೆ. ನನಗಿಲ್ಲಿ ಹೆಚ್ಚು ಆಸಕ್ತಿ ಇರುವುದು- ಈ ಬಗೆಯ ಅಂತರ್ಗತ ಯೋಜನೆಗಳಿಂದಾಗಿ ತಂತಾನೆ ವಿಸ್ತಾರಗೊಳ್ಳುವ ಮಾರುಕಟ್ಟೆಯ ಸಾಮರ್ಥ್ಯದಲ್ಲಿ ಮತ್ತು ತನ್ನ ನೈತಿಕ ಏಜಂಟರು ಹಾಗೂ ಸಾಂಸ್ಕೃತಿಕ ಪ್ರತಿನಿಧಿಗಳ ಹಾಗೆ ಉತ್ತಮವಾಗಿ ಆಲೋಚಿಸುವ ಜನರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ. ನನಗೆ ವಿವಾದಾತ್ಮಕ ಸತ್ಯದಲ್ಲೆ ಆಸಕ್ತಿ. ಅಲ್ಲಿ ಅಧಿಕಾರತ್ವದ ಆ ಯೋಜನೆಗಳು ಮಾರುಕಟ್ಟೆಯ ಆರ್ಥಿಕತೆಯೊಳಗೆ ಕಾರ್ಯಗತವಾಗುತ್ತ ಜಾಗತೀಕರಣದ ಮತ್ತೊಂದು ಮುಖದಂತೆ ಮತ್ತೆ ಮತ್ತೆ ಕಾಣುತ್ತಿರುತ್ತದೆ.
ಮಾರ್ಕ್ಸ್ ವಾದಿಯಾದವನಿಗೆ ಸಂಸ್ಕೃತಿಯ ದರ್ಶನವೆಂಬುದು ಯಾವುದೇ ಸಂದರ್ಭದಲ್ಲಿ ಆಲೋಚನೆಯ ಕಷ್ಟದಿಂದ ಓಡಿ ಹೋಗುವುದಲ್ಲ. ಅದು ಸೌಂದರ್ಯಾತ್ಮಕ ಅಗತ್ಯಗಳನ್ನು ಒಳಗೊಂಡ, ಸಾಮಾನ್ಯರ ಅಗತ್ಯಗಳನ್ನು ಪರಿಹರಿಸುವ ಸಲುವಾಗಿ ವಿನಿಮಯ ಮೌಲ್ಯದ ಮಧ್ಯವರ್ತಿ ಇಲ್ಲದೆ ಹಂಚಿಕೊಳ್ಳುವ ಮತ್ತು ಯಾವ ಬಲಾತ್ಕಾರವಿಲ್ಲದೆ ಉತ್ಪಾದನೆಯಾದ ಬಳಕೆಯ ಮೌಲ್ಯಗಳನ್ನು ಒಂದು ವಲಯದ ಹಾಗೆ ಭಾವಿಸುತ್ತದೆ. ತಾತ್ವಿಕ ಅಮೂರ್ತತೆಯ ಕೆಳಹಂತದಲ್ಲಿ ಸಂಸ್ಕೃತಿಯ ವಿಷಯವನ್ನು ಯಾರೊಬ್ಬರೂ ಬೇರೆ ಬೇರೆ ವ್ಯಾಖ್ಯೆಗಳ ಮೂಲಕ ಮಾತನಾಡಲು ಸಾಧ್ಯವಾದರೂ ಅದು ಮೂಲತಹ ಸಮಾಜಶಾಸ್ತ್ರೀಯ ಮತ್ತು ಮಾನವೀಯ ನೆಲೆಯುಳ್ಳದ್ದಾಗಿರುತ್ತದೆ. ಅಂಥ ಮೂರು ವ್ಯಾಖ್ಯೆಗಳ ಬಗ್ಗೆ ನನಗೆ ಆಸಕ್ತಿ. ಮೊದಲನೆಯದು, ಸಂಸ್ಕೃತಿ ಸೌಂದರ್ಯ ಮತ್ತು ಬೌದ್ಧಿಕತೆಯ ವಲಯ ಎಂಬುದು; ಎರಡನೆಯದು, ಸಂಸ್ಕೃತಿ 'ಸಮಗ್ರ ಜೀವನ ವಿಧಾನ' ಎಂಬುದು; ಮೂರನೆಯದು, ಪ್ರಾಪಂಚಿಕ ಜೀವನದ ಮೇಲೆ ಹೆಚ್ಚು ಒತ್ತು ನೀಡಿರುವ ಸಂಸ್ಕೃತಿ ಸಂವಹನದ ಆಚರಣೆಗಳ ಮತ್ತು ಹಾದಿಗಳ ಒಟ್ಟು ಮೊತ್ತವಾಗಿದ್ದು, ಅರ್ಥವಂತಿಕೆಗಳು ಮತ್ತು ಮೌಲ್ಯಗಳನ್ನು ಹುಟ್ಟುಹಾಕುತ್ತದೆ ಮತ್ತು ಪ್ರಸಾರ ಮಾಡುತ್ತದೆ.
ಸಂಸ್ಕೃತಿಯ ಈ ಮೂರು ವ್ಯಾಖ್ಯೆಗಳಲ್ಲಿ 'ಸಮಗ್ರ ಜೀವನ ವಿಧಾನ'ದ ಹಾಗೆ ಎಂಬುದು ಬಹುಶಹ ಹೆಚ್ಚು ಸಾರ್ವಜನಿಕವಾದ. ಸರ್ವ ಸಮ್ಮತವಾದ ವ್ಯಾಖ್ಯೆ. ಈ ಚಿಂತನಾಕ್ರಮದಿಂದಲೇ 'ರಾಷ್ಟ್ರೀಯ ಸಂಸ್ಕೃತಿ', 'ಭಾರತೀಯ ಸಂಸ್ಕೃತಿ', 'ಹಿಂದೂ ಸಂಸ್ಕೃತಿ', 'ಪಾಶ್ಚಾತ್ಯ ಸಂಸ್ಕೃತಿ' ಇನ್ನೂ ಮುಂತಾದ ವಿಚಾರಗಳನ್ನು ಪಡೆದಿದ್ದೇವೆ. ಅಧಿಕಾರ ಮತ್ತು ಅಧಿಕಾರರಹಿತವೆಂಬ ಗೆರೆಯನ್ನು ಅನುಸರಿಸಿ ಬುಡಮಟ್ಟದಿಂದ ವಿಭಜನೆಗೊಂಡ ಸಮಾಜ ವರ್ಗ ಅಧಿಕಾರಗಳು ಅಥವಾ ಹೆಣ್ಣಿನ ಮೇಲೆ ಪುರುಷನ ಅಧಿಕಾರ ಅಥವಾ ಧಾರ್ಮಿಕ ನಂಬುಗೆಯ ಒಂದು ಸಮುದಾಯದಲ್ಲಿನ ಅಧಿಕಾರ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಮೂಲಭೂತ ವೈರುಧ್ಯಗಳಿಂದ ತುಂಬಿ ತುಳುಕುವ ಸಮಾಜ ಏಕ ಸಂಸ್ಕೃತಿಯನ್ನು ಕಷ್ಟದಿಂದ ಹೊಂದಿರಲು ಸಾಧ್ಯ. ಇಂಥ ಸಂದರ್ಭಗಳಲ್ಲಿ ಸಂಸ್ಕೃತಿ ರಾಷ್ಟ್ರೀಯ ಚೈತನ್ಯವನ್ನು ಹೊರಹೊಮ್ಮಿಸುವ ಹಾಗೆ ಕಾರ್ಯನಿರ್ವಹಿಸದೆ ಹೋರಾಟ ಮತ್ತು ಕಿತ್ತಾಟದ ಕಣದ ಹಾಗೆ ಕಾರ್ಯ ನಿರ್ವಹಿಸುತ್ತದೆ. ಏಕೀಕೃತ ಅಸ್ತಿತ್ವದ ಹಾಗೆ ಪ್ರಧಾನ ವಾಗ್ವಾದಗಳಲ್ಲಿ ಸಾಮಾನ್ಯವಾಗಿ ಪ್ರತಿನಿಧಿಸುವ ಭಿನ್ನ ನಂಬುಗೆಯ ಸಮುದಾಯಗಳಿಗೂ ಇದೇ ಮಾತು ಅನ್ವಯವಾಗುತ್ತದೆ. ಏಕೀಕೃತ ಸಂಸ್ಕೃತಿಯನ್ನು ಹೊಂದಿರುವ ಜಾತಿ ಸಮಾಜಕ್ಕೆ ಮಾತ್ರ ಇದು ಅಸಾಧ್ಯವಾದುದಲ್ಲ. ಶುದ್ಧ ಬ್ರಾಹ್ಮಣವಾದದ ಚರಿತ್ರೆ ಮತ್ತು ಅದರ ವಿರುದ್ಧ ಎದ್ದ ಆಸ್ತಿಕವಾದಿ ಭಿನ್ನ ಮತಗಳೂ ಒಳಗೊಂಡಂತೆ ಹಲವು ಭಿನ್ನ ಮತಗಳು ನಮಗೆ ಏಕೀಕೃತವಾದ ಅತ್ಯತ್ತಮ ಧಾರ್ಮಿಕ ಸಂಸ್ಕೃತಿಯ ವಿಚಾರವನ್ನು ಕಳೆದುಕೊಳ್ಳಲು ಓಲೈಸುತ್ತದೆ. ಧರ್ಮ ಅಥವಾ ರಾಷ್ಟ್ರವನ್ನು ಸಂಸ್ಕೃತಿಯೊಂದಿಗೆ ಸಮೀಕರಿಸುವುದು ಸುಲಭದ ಹಾದಿ ಮತ್ತು ದೋಷಯುಕ್ತವೆಂದು ನನಗೆ ತೋರುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ನಮಗೆ ಕಂಡುಬರುವುದು ಏಕೀಕೃತ ಸಂಸ್ಕೃತಿಯಲ್ಲ, ಹಿತಕರವಾದ ನುಡಿಗಟ್ಟಿನಲ್ಲಿ ಹೇಳುತ್ತಿರುವ ಏಕತೆಯಲ್ಲಿ ವೈವಿಧ್ಯತೆಯಲ್ಲ, ಆದರೆ ವಿವಿಧ ಸಂಸ್ಕೃತಿಗಳ ಪರಸ್ಪರ ಸೆಣಸಾಟ. ಅತಿ ಸುಂದರಗೊಳಿಸಿದ ಸಂಸ್ಕೃತಿಗಳ ತಿಳುವಳಿಕೆಗಳು ಅದನ್ನು ರಮ್ಯಗೊಳಿಸಲು ಪ್ರಯತ್ನಿಸಿರುವ ಹಾಗೆ ಸಂಸ್ಕೃತಿ ಎಂದೆಂದಿಗೂ ಸ್ಥಾವರವಲ್ಲ, ಚರಿತ್ರಾತೀತ ಬಗೆಯದಲ್ಲವೆ ಅಲ್ಲ. ಆಧುನಿಕ ಜಗತ್ತಿನಲ್ಲಿ ಕೊನೆಯ ಪಕ್ಷ ಸಾಂಸ್ಕೃತಿಕ ಆಚರಣೆಗಳಲ್ಲಿ ಬದಲಾಗದಿರುವುದೇನು ಅಂದರೆ ಸ್ವತಹ ಬದಲಾಗುವ ಪ್ರಕ್ರಿಯೆ ಮತ್ತು ಅದರ ಮೂಲತತ್ವ.. ಅಂತಿಮವಾಗಿ ಸಂಸ್ಕೃತಿ ಎಂಬುದು ಯಾವಾಗಲೂ ಇರುವ ಸ್ವಾತಂತ್ರ್ಯದ ವಲಯವಲ್ಲ, ಸ್ವಂತ ಅಭಿವ್ಯಕ್ತಿಯಲ್ಲ, ಆತ್ಮಾವಲೋಕನವಲ್ಲ, ಸಾಮೂಹಿಕ ಸಹಭಾಗಿತ್ವವಲ್ಲ, ಏನೇನೂ ಅಲ್ಲ. ಪರಂಪರಾಗತ ಸಂಸ್ಕೃತಿಯನ್ನು ಒಳಗೊಂಡಿರುವ ಸಂಸ್ಕೃತಿ ನಿರ್ದಿಷ್ಟ ಸಮುದಾಯಗಳ ತುಳಿತಕ್ಕೆ ಒಳಪಟ್ಟ ಯಾವುದೇ ಪ್ರಮಾಣದ ಜನರು ನಿಮಗೆ ಹೇಳುವ ಹಾಗೆ, ಅದು ಮತ್ತೆ ಮತ್ತೆ ಕುತಂತ್ರ ಮತ್ತು ಮುಕ್ತವಲ್ಲದ ವಲಯದ ಹಾಗೆ, ಅಷ್ಟೆ.
ಸಂಸ್ಕೃತಿ ಎಂದರೇನೆಂದು ಹೇಳಲು ಇಂಥ ಕೆಲವು ನಕಾರಾತ್ಮಕ ವ್ಯಾಖ್ಯೆಗಳನ್ನು ಪರಿಶೀಲಿಸಲು ಬಯಸುತ್ತೇನೆ. ಸಂಸ್ಕೃತಿ ಯಾರದು ಎಂಬುದು ಯಾವಾಗಲೂ ಇರುವ ನಿಜವಾದ ಪ್ರಶ್ನೆ. ಅಲ್ಲದೆ ಜಾಗತೀಕರಣಕ್ಕೆ ಸಂಬಂಧಿಸಿದ ಪ್ರಶ್ನೆ ಎಂದರೆ ರಾಷ್ಟ್ರದೊಳಗಿನ ಸಂಸ್ಕೃತಿ ಯಾರದು, ಅದು ಸಂಪೂರ್ಣವಾಗಿ ನಾಶ ಮಾಡಲಾಗುತ್ತದೆಯೇ, ಯಾರ ಸಂಸ್ಕೃತಿಯ ವಿಚಾರಧಾರೆಯನ್ನು ಅದು ಬೆಂಬಲಿಸುತ್ತದೆ ಮತ್ತು ಭೌತಿಕವಾಗಿ ಬಲಗೊಳಿಸುತ್ತದೆ, ವಿದ್ಯುನ್ಮಾನ ಮಾರ್ಗಗಳು, ದೂರ ಸಂಪರ್ಕ ಮಾರ್ಗಗಳು, ಮತ್ತು ಸಂಖ್ಯೀಕರಣ(ಡಿಜಿಟಲೈಜೇಷನ್), ಠೇವಣಿ ಇಡಬಲ್ಲ ಬಂಡವಾಳದ ಕೇಂದ್ರೀಕರಣ ಮುಂತಾದ ಎಲ್ಲ ಬಗೆಯ ಮಾರ್ಗಗಳ ಮೂಲಕ ಅದು ಕೆಲವು ಸಾಂಸ್ಕೃತಿಕ ಆಚರಣೆಗಳು ದೊರಕುವಂತೆಯೂ ಮತ್ತೆ ಕೆಲವನ್ನು ನಿರಾಕರಿಸುವಂತೆಯೂ ಮಾಡುತ್ತದೆ. ಭಾರತದಲ್ಲಿ ಜಾಗತಿಕ ಬಂಡವಾಳದ ಸಾಂಸ್ಕೃತಿಕ ಒಳನುಸುಳುವಿಕೆಯನ್ನು ನಾನು ವಿರೋಧಿಸುವಾಗ ಸಾಂಪ್ರದಾಯಿಕ ರಾಷ್ಟ್ರೀಯವಾದಿ ಒರಟು ದೇಶಾಭಿಮಾನಿಯ ಬಲೆಯಲ್ಲಿ ಬೀಳಲು ಬಯಸುವುದಿಲ್ಲ. ಜಾಗತೀಕರಣದ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ, ಮುಸ್ಲಿಂ ಸಂಸ್ಕೃತಿ, ತೃತೀಯ ಜಗತ್ತಿನ ಸಂಸ್ಕೃತಿ ಮುಂತಾದ ಹೆಸರಿನಲ್ಲಿ ವಿರೋಧಿಸುವುದಲ್ಲ. ನನ್ನ ವಿರೋಧ ಹೆಚ್ಚು ಮೂಲಭೂತವಾದುದು. ಜಾಗತೀಕರಣ ಸಂಸ್ಕೃತಿ ಭಾರತದೊಳಗಿನ ಹಲವು ಬಗೆಯ ಜೀವನ ವಿಧಾನಗಳನ್ನು ಹಾಳು ಮಾಡುತ್ತದೆ ಹಾಗೂ ಇತರ ಕೆಲವನ್ನು ಪುಷ್ಟಿಗೊಳಿಸುತ್ತದೆ. ಅದು ಕೆಲವರ ಕೈಯಲ್ಲಿ ಹೆಚ್ಚು ಅಭಿವೃದ್ಧಿಗೊಂಡ ಸಾಂಸ್ಕೃತಿಕ ಸೆಣಸಾಟದ ಮಾರ್ಗಗಳನ್ನು ನೀಡುತ್ತದೆ ಹಾಗೂ ಉಳಿದವರಿಗೆ ನಿರಾಕರಿಸುತ್ತದೆ. ಅದು ನಮ್ಮ ವಿಶಿಷ್ಟ ಬಗೆಯ ಸಾಂಸ್ಕೃತಿಕ ಒಳಜಗಳಗಳಲ್ಲಿ ಅನಾಗರಿಕವಾಗಿ ಮೂಗು ತೂರಿಸುತ್ತದೆ. ರಾಷ್ಟ್ರದೊಳಗೆ ಸೆಣಸಾಡುವವರ ನಡುವಿನ ಈ ವಿಷಯಗಳನ್ನು ನಾವು ನಮ್ಮದೆ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆಯಾದರೂ ಈ ಸಾಧ್ಯತೆಯನ್ನು ಅದು ಬರಿದುಗೊಳಿಸಲು ಪ್ರಯತ್ನಿಸುತ್ತದೆ. ಇಂಥ ಸಂದರ್ಭದಲ್ಲಿ ನಾನು ರಾಷ್ಟ್ರೀಯವಾದಿ ರೀತಿಯನ್ನು ಪೂರ್ತಾ ತೊರೆದು ಪ್ರಗತಿ ವಿರೋಧಿ ನಿಲುವನ್ನು ತಳೆದುಬಿಡುತ್ತೇನೆ. ರಾಷ್ಟ್ರೀಯ ಸಂಸ್ಕೃತಿ ರಕ್ಷಣೆ ಬಗೆಗೆ ಅರಗಿಸಿಕೊಳ್ಳದ ತಿಳುವಳಿಕೆಯಿಂದಾಗಿ ಏನನ್ನು ರಕ್ಷಿಸಿಕೊಳ್ಳಲಾಗುತ್ತದೆಯೋ ಅದನ್ನು ಈಗಾಗಲೇ ನೆಲೆಸಿರುವ ರಾಷ್ಟ್ರೀಯ ಸಂಸ್ಕೃತಿ ಎಂಬ ರಕ್ಷಣಾತ್ಮಕ ನಿಲುವಿಗೆ ದುಡುಕಿ ತಲುಪಿಬಿಡುತ್ತೇನೆ. ಯಾವುದೇ ಒಬ್ಬ ವ್ಯಕ್ತಿ ನಿಜವಾಗಿಯೂ ರಕ್ಷಿಸಲು ಬಯಸುವುದು ಏನನ್ನು? ಜಾಗತಿಕರಣಕ್ಕೆ ಬಲಿಯಾದವರ ಸಂಸ್ಕೃತಿಗಳನ್ನೆ? ಅದರ ಫಲಾನುಭವಿಗಳ ಸಂಸ್ಕೃತಿಗಳನ್ನು ಅಲ್ಲವೆ? ನಮ್ಮದೆ ಜನರ ಅವಶ್ಯಕತೆಗಳು ಮತ್ತು ತುರ್ತು ಅಗತ್ಯಗಳನ್ನು ಅನುಸರಿಸಿ ದೇಶಕ್ಕೆ ನ್ಯಾಯ ಒದಗಿಸುವಂಥ ನಮ್ಮದೆ ರಾಷ್ಟ್ರೀಯ ಸಂಸ್ಕೃತಿಯನ್ನು ಜಾಗತೀಕರಣದ ದವಡೆಯಲ್ಲಿ ಯಾರೇ ಆಗಲೀ ರಕ್ಷಿಸಲು ಬಯಸಬೇಕು. ಈ ವ್ಯಾಖ್ಯೆಯ ಪ್ರಕಾರ ರಾಷ್ಟ್ರೀಯ ಸಂಸ್ಕೃತಿಯೆಂಬುದು ಪರಂಪರಾಗತವಾಗಿ ಹರಿದು ಬಂದದ್ದು ಅಥವಾ ಈಗಾಗಲೇ ಸಾಧಿತವಾಗಿರುವಂಥದ್ದು ಅಲ್ಲ. ಅದಿನ್ನೂ ಮುಟ್ಟಬೇಕಿರುವ ಬಾನಿನ ಅಂಚು. ಸಾಮಾಜಿಕ ಬದಲಾವಣೆಗಾಗಿ ಅತಿ ಮೂಲಭೂತವಾದ ಪ್ರಜಾಸತ್ತಾತ್ಮಕ ಬೇಡಿಕೆಗಳನ್ನು - 'ಪ್ರಜಾಸತ್ತಾತ್ಮಕ ಬೇಡಿಕೆ' ಎಂಬುದನ್ನು ಪ್ರತಿಭಟನಾತ್ಮಕ ಮನೋಧರ್ಮವುಳ್ಳದೆಂದು ಅರಿಯಬೇಕು- ಸಾಮೂಹಿಕವಾಗಿ ಪಡೆದುಕೊಳ್ಳಲು ಹೊರಡದಿದ್ದರೆ ಆ ಬಾನಿನ ಅಂಚು ಕೈಗೆಟುಕದೆ ದೂರದಲ್ಲಿಯೇ ಉಳಿದುಬಿಡುತ್ತದೆ. ಇಂಥ ತುಂಬ ಮೂಲಭೂತವಾದ ಅರ್ಥದಲ್ಲಿ ಜಾಗತೀಕರಣವೆನ್ನುವುದು ತನ್ನನ್ನು ತಾನು ಖಾಯಂ ಆಗಿ ಉಳಿದುಕೊಳ್ಳಲು ಪ್ರಯತ್ನಿಸುವಂಥ ಬರಿದುಗೊಳಿಸುವ ಮುನ್ನಿನ ಒಂದು ಪ್ರತಿ ಕ್ರಾಂತಿ (ಕೌಂಟರ್ ರೆವಲ್ಯೂಷನ್) ಯಾಗಿದೆ.
ಆಚರಣೆಗಳು ಮತ್ತು ರೂಢಿಗಳ ಮೂಲಕ ಮೌಲ್ಯಗಳು ಮತ್ತು ಅರ್ಥವಂತಿಕೆಗಳನ್ನು ಹುಟ್ಟುಹಾಕಿದ ಹಾಗೆ ಹೆಚ್ಚು ಪರಿಶುದ್ಧವಾದ , ಹೆಚ್ಚು ಭೌತಿಕವಾದ ಸಂಸ್ಕೃತಿಯ ವ್ಯಾಖ್ಯೆಯ ಕಡೆಗೆ ಹಿಂದಿರುಗುತ್ತೇನೆ. ಈ ವ್ಯಾಖ್ಯೆಯನ್ನು ನಾನು ಇಷ್ಟ ಪಡುತ್ತೇನೆ. ಏಕೆಂದರೆ 'ಹುಟ್ಟುವಳಿ' ವಿಚಾರದ ಅರ್ಥ 'ಸಂಸ್ಕೃತಿ' ವಿಚಾರಕ್ಕೆ ಗತಕಾಲದ ಬದಲಾಗಿ ಭವಿಷ್ಯತ್ತಿನ ನೆಲೆಯನ್ನು ನೀಡುತ್ತದೆ. ತಲತಲಾಂತರದಿಂದ ಹರಿದು ಬರುತ್ತಿರುವ ಮತ್ತು ಕಟ್ಟುವಿಕೆಯ ಆಯಾಮ ಕೂಡ ಪಡೆದುಕೊಂಡ ಸಮಾಜದೊಳಗಿನ ಹಲವಾರು ಶಕ್ತಿಗಳ ಸೆಣಸಾಟ ಮೀರಿದ ಸಾಮಾನ್ಯ ಸ್ವತ್ತಿನ ವಿಚಾರವಾಗಿ ನಿಲ್ಲುತ್ತದೆ. ಆಚರಣೆಗಳ ಮತ್ತು ಅರ್ಥವಂತಿಕೆಗಳ ಮೊತ್ತದ ವ್ಯಾಖ್ಯೆ ಸಂಸ್ಕೃತಿಗೆ 'ಭಾವನೆಯ್ಗೆ' ಎಂಬಂಥ ನುಡಿಗಟ್ಟುಗಳಲ್ಲಿ ಒಳಗೊಂಡಿರುವ ಎಲ್ಲ ಅನುಭವದಾಚೆಗಿನ ಸ್ವಂತ ಭೌತಿಕತೆಯನ್ನು ತಂದುಕೊಡುತ್ತದೆ. ಒಬ್ಬ ಏನು ಮಾಡುತ್ತಾನೆಯೋ ಅದೇ ಸಂಸ್ಕೃತಿ. ಸಂಸ್ಕೃತಿಯೆಂಬುದು ಸೆಣಸಾಡುತ್ತಿರುವ ಗುಂಪುಗಳ ಒಟ್ಟು ಆಚರಣೆಗಳ ವೈರುದ್ಧ್ಯಾತ್ಮಕ ಒಟ್ಟು ಮೊತ್ತ ಎಂದಾದರೆ ಸಾಂಸ್ಕೃತಿಕ ಆಚರಣೆಗಳು ಹಿಂಸೆ ಮತ್ತು ಪ್ರಾಬಲ್ಯಗಳ ಜೊತೆ ನಿಸ್ಸಂಶಯವಾಗಿ ಗಾಢವಾಗಿ ರಾಜಿ ಮಾಡಿಕೊಂಡಿರುತ್ತವೆ. ಆದರೆ ಇತರ ಸಂದರ್ಭಗಳಲ್ಲಿ ಎಂದರೆ ಪ್ರತಿಭಟನಾತ್ಮಕ ಸಾಂಸ್ಕೃತಿಕ ಆಚರಣೆಯ ಸಂದರ್ಭಗಳಲ್ಲಿ ಯಾವಾಗಲೂ ಅಸಾಧ್ಯವಾದುದನ್ನೆ ಕಲ್ಪಿಸಿಕೊಳ್ಳುವುದನ್ನು ಮುಂದುವರೆಸುತ್ತದೆ. ಈ ಮೂಲಕ ಭವಿಷ್ಯತ್ತಿನಲ್ಲಿ ಭರವಸೆಯನ್ನು ಇರಿಸುತ್ತದೆ.
ಭವಿಷ್ಯತ್ತನ್ನು ಕುರಿತ ಈ ಪೂರ್ವನೆಲೆ ಮತ್ತು ಅಸಾಧ್ಯವಾದುದನ್ನು ಕಲ್ಪನೆ ಮಾಡಿಕೊಳ್ಳುತ್ತ ಸಾಗುವ ಶಕ್ತಿ- ಇವನ್ನು ಜಾಗತೀಕರಣದ ಸಂಸ್ಕೃತಿ ಭಯಂಕರವಾಗಿ ಹಾಳುಮಾಡಲು ಪ್ರಯತ್ನಿಸುತ್ತದೆ. ಹೇಗೆ? ಇನ್ನೊಂದು ಬಗೆ ಸಂಸ್ಕೃತಿಯ ಕೆಲವು ಪ್ರಮುಖ ಗಮನೀಯ ದೃಷ್ಟಿಕೋನಗಳು ಯಾವುವು? ಅದು ತನ್ನದೆ ಮೌಲ್ಯಗಳನ್ನು ಮತ್ತು ಅರ್ಥಗಳನ್ನು ಹುಟ್ಟಿ ಹಾಕುವುದಿಲ್ಲವೆ? ಈಗಾಗಲೆ ಅದರ ಮೂಲ ಲಕ್ಷಣಗಳನ್ನು ಕುರಿತು ಮಾತಾಡಿದ್ದೇನೆ. ಆದಷ್ಟು ಬೇಗ ಇನ್ನುಳಿದ ಕೆಲವು ಲಕ್ಷಣಗಳಿಗೆ ಪ್ರಾಧಾನ್ಯತೆ ನೀಡುತ್ತೇನೆ. ವಿಶೇಷ ಆಹ್ವಾನಿತರ ಮುಂದೆ ನಿಂತು ಮಾತನಾಡುತ್ತಿರುವುದರಿಂದ ಏಕಸ್ವಾಮ್ಯತೆ ಮುಂತಾದವುಗಳ ಬಗ್ಗೆ ವಿವರ ನೀಡುವುದನ್ನು ನಾನಿಲ್ಲಿ ಕೈ ಬಿಡುತ್ತೇನೆ.
ಮೊದಲು ಅದರ ಆಕ್ರಮಣಶೀಲತೆಯ ವ್ಯಾಪ್ತಿ : ನಾವು ಈ ವ್ಯಾಪ್ತಿಯನ್ನು ಗ್ರಹಿಸಿಕೊಳ್ಳಲು ದೇಶದ ಮಕ್ಕಳನ್ನು ಅತಿಸಣ್ಣ ಪ್ರಮಾಣದಲ್ಲಿ ಪರಿಚಯ ಮಾಡಿಕೊಡುವ ಹಂತ ತಲುಪಿರುವಂಥ ವಸಾಹತುಶಾಹಿ ಶಾಲಾ ತರಗತಿಯನ್ನು ನೆನಪಿಸಿಕೊಳ್ಳಲೆಬೇಕು. ವಸಾಹತುಶಾಹಿ ವಿಚಾರಧಾರೆಯನ್ನು ಪಠ್ಯಪುಸ್ತಕಗಳ ಬೆನ್ನಲ್ಲೆ ಅವು ಇದ್ದ ಹಾಗೆ ಅಸಮಾನವಾಗಿಯೇ ಹಂಚಿಕೊಳ್ಳಲಾಗುತ್ತಿತ್ತು. ಆ ತರಗತಿಗಳಲ್ಲಿ ಮಕ್ಕಳು ಈ ಸಂಬಂಧವಾಗಿ ಕೆಲವು ಗಂಟೆಗಳನ್ನೋ ದಿನಗಳನ್ನೋ ಕಳೆಯುತ್ತಿದ್ದರು. ನಂತರ ಅವರು ತರಗತಿಯ ವಿಚಾರಗಳಿಂದ ಕಳಚಿಕೊಂಡಂಥ ಮನೆಗಳಿಗೆ ಹಿಂದಿರುಗುತ್ತಿದ್ದರು. ಬಹುಶಹ ಶೇಕಡ ಹತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿರದ ಜನಸಾಮಾನ್ಯರೂ ಈ ಅಭ್ಯಾಸದಲ್ಲಿ ತೊಡಗಿರುತ್ತಾರೆ. ಜಾಗತೀಕರಣದ ಸಂಸ್ಕೃತಿ ನೇರ ಶಾಲಾ ತರಗತಿಯಿಂದಲೇ ವೈರುಧ್ಯಮಯವಾಗಿ ತಲೆದೋರುತ್ತದೆ ಎಂದೇನಲ್ಲ. ಈಗ ಅದು ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣವನ್ನೂ ಒಳಗೊಂಡಿದೆ. ಈ ಜಾಗತೀಕರಣ ಸಂಸ್ಕೃತಿ ದಿನವಹಿ ಆಧಾರದ ಮೇಲೆ ಟೆಲಿವಿಷನ್ ಮತ್ತು ವ್ಯಾಪರೀಕರಣಗೊಂಡ ಸಂಗೀತದ ಉಪಕರಣಗಳ ಮೂಲಕ ಮನೆಯ ವ್ಯವಹಾರಗಳೊಳಗೆ, ಮಧ್ಯಮ ವರ್ಗದವರಲ್ಲೆ ಖಚಿತವಾಗಿ ಹೆಚ್ಚು ಕೇಂದ್ರೀಕೃತಗೊಳ್ಳುತ್ತದೆ. ಮನೆ ಯಜಮಾನಿಕೆಯ ಮೇಲೆ ನಡೆದ ಈ ಆಕ್ರಮಣದ ತೀವ್ರತೆ ಆಲೋಚನೆಯ ವಿಧಾನವನ್ನಷ್ಟೆ ಅಲ್ಲ , ಜೀವಿತದ ಮೌಲ್ಯ ವ್ಯವಸ್ಥೆ , ಉಪಭೋಗದ ಮಾದರಿಗಳು ಮತ್ತು ಮಾನವನ ಪ್ರಾಕೃತಿಕ ಬಯಕೆಗಳಾದ ಪ್ರೀತಿ ಮತ್ತು ಕಾಮನೆಗಳನ್ನೂ ಬದಲಿಸಿಬಿಡುತ್ತದೆ. ಸಾಂಪ್ರದಾಯಿಕ ಅರ್ಥದಲ್ಲಿನ ಸಾಕ್ಷರತೆ ವಸಾಹತು ಕಾಲಕ್ಕಿಂತ ಹೆಚ್ಚುಹಬ್ಬಿದೆ. ಇಂದಿನ ಭಾರತದಲ್ಲಿ ವಿದ್ಯುನ್ಮಾನ ಸಾಕ್ಷರತೆ (ಇಲೆಕ್ಟ್ರಾನಿಕ್ ಲಿಟರಸಿ) ವಸಾಹತು ಕಾಲಕ್ಕಿಂತ ಹೆಚ್ಚು ಹರಡಿದೆ. ಅಲ್ಲದೆ ಸಾಮಾನ್ಯ ಸಾಕ್ಷರತೆಯಾದ ಓದು, ಬರೆಹಗಳಿಗಿಂತ ಜೀವಂತ ಸಂಸ್ಕೃತಿಯನ್ನು ಪರಿವರ್ತನಶೀಲವನ್ನಾಗಿಸಿ ಇರಿಸುವುದರಲ್ಲೆ ಹೆಚ್ಚು ಕ್ರಿಯಾಶೀಲವಾಗಿದೆ. ಈ ಪ್ರಕ್ರಿಯೆಗಳ ನೇರಪ್ರಭಾವ ಶ್ರೀಮಂತ ವರ್ಗಗಳ ಮೇಲೆಂಬುದು ಮಹತ್ತರವಾದುದು. ಆದರೆ ವರ್ಗ ಸಂಸ್ಕೃತಿಗಳನ್ನು ರೂಪಿಸುವಲ್ಲಿ ಪ್ರಧಾನವಾಗಿರುವ ಆ ವರ್ಗಗಳು ಕೂಡ ನಿರ್ಣಾಯಕ ವರ್ಗಗಳಾಗಿವೆ. ಶ್ರೀಮಂತರ ಮಧ್ಯವರ್ತಿ ಜೀವನದಿಂದ ಬಂದ ದುಡಿಮೆಗಾರರನ್ನು ಅಪಮಾನಿಸಲು ಚೀನಾದ ಮಹಾಗೋಡೆಗಳಂಥವು ಇಲ್ಲವೆ ಇಲ್ಲ. ವಸಾಹತು ಶಾಲಾ ತರಗತಿ ಆಲೋಚನೆಯ ಗತಿಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸುವ ಉದ್ದೇಶ ಹೊಂದಿದ್ದರೆ, ಜಾಗತೀಕರಣದ ಮಧ್ಯವರ್ತಿ ಸಂಸ್ಕೃತಿ ಈ ಎಲ್ಲವನ್ನೂ ಮಾಡುತ್ತದೆ. ಮಾತ್ರವಲ್ಲದೆ, ಸುಪ್ತಪ್ರಜ್ಞೆಯನ್ನು ತನ್ನ ವಸಾಹತುವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ, ಈ ಕಾರ್ಯದಲ್ಲಿ ಯಶಸ್ವಿಯೂ ಆಗುತ್ತದೆ.
ಅನಂತರ ಜಾಗತೀಕರಣದ ಸಾಂಸ್ಕೃತಿಕ ರೂಪ. ಸಮೂಹ ಸಂಸ್ಕೃತಿಯ ಸಂಸ್ಥೆಗಳು ಮತ್ತು ಜನಪ್ರಿಯ ಮನರಂಜನೆಗಳು ಶ್ರಮಿಕ ವರ್ಗದ ಪ್ರಾಂತಗಳಲ್ಲಿ ಮತ್ತು ಹಳ್ಳಿಗಾಡಿನಲ್ಲಿ ಈ ಹಿಂದಿಗಿಂತ ಹೆಚ್ಚು ಗಾಢತರವಾದ ವ್ಯಾಪ್ತಿಯನ್ನು ಹೊಂದಿವೆ. ಇವು ಅಮೆರಿಕಾದ ಪ್ರಧಾನ ಮಾಧ್ಯಮದ ವಿಚಾರಧಾರೆಯಾಗಿ, ರಾಜಕೀಯವಾಗಿ, ಸೌಂದರ್ಯಶಾಸ್ತ್ರವಾಗಿ ಮತ್ತು ಅಭಿವ್ಯಕ್ತಿ ಮಾಧ್ಯಮವಾಗಿ ಇನ್ನೂ ಹೆಚ್ಚು ನಿಕಟವಾಗಿ ಸಂಯೋಜನೆಗೊಂಡಿವೆ. ನವ-ಉದಾರೀಕರಣದ ಬಿರುಸು ದಾಳಿಯನ್ನಾಗಲೀ ಟಿವಿ ಚಾನೆಲ್ ಗಳಲ್ಲಿ ವಿದೇಶಿ ಮಾಧ್ಮಮಗಳೇ ಪ್ರಧಾನವಾಗಿರುವುದನ್ನಾಗಲೀ ಕೇವಲ ಒಂದು ದಶಕದ ಮೊದಲು ಭಾರತದಲ್ಲಿ ಇದನ್ನು ಊಹಿಸಲು ಕೂಡ ಅಸಾಧ್ಯವಾಗಿದ್ದುದಾಗಲೀ ಹೇಳಬಾರದ ಸತ್ಯವಾಗಿದೆ. ಭಾರತದ ಸಮಗ್ರ ಮಧ್ಯಮ ವರ್ಗ ದೂರದರ್ಶನ ವೀಕ್ಷಿಸುವ ಪ್ರತಿಯೊಂದು ಕಾಲಾವಧಿಯನ್ನು ಕೆಲವೊಂದು ಬಗೆಯ ವಿಚಾರಧಾರೆ ಮತ್ತು ಸಾಂಸ್ಕೃತಿಕ ಅಭಿರುಚಿ ಅರಿಯುವ ಅಧ್ಯಯನ ವೇದಿಕೆಯನ್ನಾಗಿ ಹೊರಹೊಮ್ಮಿಸಬಹುದಾಗಿದೆ. ಜಾಗತೀಕರಣದ ಈ ಸಾಂಸ್ಕೃತಿಕ ರೂಪ ಮತ್ತು ಗಾಢ ಬಯಕೆಯ ಮಾದರಿಗಳನ್ನು ಜಾಹಿರಾತು, ಲಾಂಛನದ ಉತ್ತೇಜನ ಮತ್ತು ಸ್ವತಹ ಮನರಂಜನೆಯೆ ಆದ ಈ ಎಲ್ಲ ಅಂತರ ಸಂಬಂಧಗಳ ಮೂಲಕ ಗಣನೀಯವಾಗಿ ಸಾಧಿಸಲಾಗುತ್ತದೆ. ಅಂಥ ಸಂಸ್ಕೃತಿ ಕೈಗಾರಿಕೆಯ ಮೂರ್ತಿ ಚಿತ್ರಗಳನ್ನು ನಿರ್ದಿಷ್ಟವಾದ ಉತ್ಪನ್ನಗಳು ಮತ್ತು ಉತ್ಪದನಾ ಚಿಹ್ನೆಗಳೊಂದಿಗೆ ನಿಕಟವಾಗಿ ಪತ್ತೆ ಹಚ್ಚಲಾಗುತ್ತದೆ. ಪೆಪ್ಸಿಯ ಮಾರಾಟದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಶಾರೂಕ್ ಖಾನ್ ಪರಸ್ಪರ ಅದಲು ಬದಲಾಗುವ ಸಮೂಹ ಸಂಸ್ಕೃತಿಯ ಮೂರ್ತಿಗಳು. ಸಾಮಗ್ರಿ ಹಾಗೂ ಮನರಂಜನೆಯ ಹಾಗೆ ಕ್ರೀಡೆಗಳನ್ನೂ ಮಾರಾಟ ಮಾಡುತ್ತಿರುವ ಕೇಂದ್ರ ವ್ಯಕ್ತಿ ಅಮೆರಿಕಾದ ಬೇಸ್ ಬಾಲ್ ಹೀರೋ ಮೈಕೆಲ್ ಜೋರ್ಡಾನ್ ನ ಮಾದರಿಯಲ್ಲಿ ಮಾಂತ್ರಿಕ ಬ್ಯಾಟ್ಸ್ ಮನ್ ಸಚಿನ್ ಸ್ವತಹ ಒಬ್ಬ ಮನರಂಜಿಸುವವನು ಮತ್ತು ಮಾರಾಟಗಾರನಾಗಿದ್ದಾನೆ. ನಂತರ ಇದನ್ನು ಜಾಗತೀಕರಣದ ಕೆಲವು ಜಾಹಿರಾತು ಪ್ರತೀಕಗಳೊಂದಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಚಾನಲ್ಅನ್ನು ಬದಲಿಸುತ್ತಿರುವಾಗಲೇ ಈಡನ್ ಗಾರ್ಡನ್ನಿನ ಕ್ರಿಕೆಟನ್ನು ನನಗದು ತೋರಿಸುತ್ತದೆ. ನಾನು ಕಪ್ಪು ಕೂದಲಿನ ಜಲಪಾತದ ನದಿಯಲ್ಲಿ ಭಿನ್ನ ಬಗೆಯ ಈಡನ್ನಿನಲ್ಲಿ ಇದ್ದ ಹಾಗೆ ಇರುತ್ತೇನೆ. ಅದು 'ಹೆಡ್ ಅಂಡ್ ಶೋಲ್ಡರ್' ಶಾಂಪೂನ ಜನಪ್ರಿಯ ಜಾಹಿರಾತು ಆಗಿತ್ತೆಂದು ಭಾವಿಸುತ್ತೇನೆ. ಅದನ್ನು ಸಾಕಷ್ಟು ಸಾರಿ ಭಾರತದ ದೂದದರ್ಶನದಲ್ಲಿ ನೋಡುತ್ತಿರುವುದನ್ನು ಮಾತ್ರ ಕಂಡುಕೊಳ್ಳುತ್ತೇನೆ. ಈಗ ಕಪ್ಪನೆ ಹೊಳೆಯುವ ದೃಶ್ಯ ಚಿತ್ರ ಅದೇ ಆಗಿದ್ದು, ಕೊಂಚ ಭಿನ್ನದನಿಯ್ಲಲಿ ಮತ್ತು ಭಿನ್ನ ಮಾತನಾಡುವ ಪಠ್ಯದೊಂದಿಗೆ ಬಂದಿದೆಯಷ್ಟೆ. ಈ ಹೋರಾಟಮಯ ಸಾಂಸ್ಕೃತಿಕ ಜಾಗತೀಕರಣದ ಗುರಿಯ ಒಂದು ಭಾಗವೆಂದರೆ ಅಮೆರಿಕಾದ ಜೀವನ ಮಾದರಿಗಳೊಂದಿಗೆ ಕಲೆತ ಹೊಸ ಅಭಿರುಚಿಗಳನ್ನು ಹುಟ್ಟು ಹಾಕುವುದು ಮತ್ತು ಹೀಗೆ ಭಾರತದ ಮಧ್ಯಮ ವರ್ಗಗಳಿಗೆ ಜಾಗತಿಕ ಸಾಂಸ್ಕೃತಿಕ ದೃಶ್ಯವಿದ್ದಲ್ಲಿಗೆ ತಲುಪಿರುವ ಭಾವನೆ ತಂದುಕೊಡುವುದು. ಉದಾಹರಣೆಗೆ, ಕ್ರೀಡಾ ಚಾನಲ್ ಗಳು ಗಾಲ್ಫ್ ಮತ್ತು ಬೇಸ್ ಬಾಲ್ ಗಳಂಥ ಆಟಗಳನ್ನು ನಿರಂತರವಾಗಿ ತೋರಿಸುವುದನ್ನು ಗಮನಿಸಿ. ಅವು ಭಾರತದಲ್ಲಿ ಕೇಬಲ್ ಟಿವಿ ಬರುವ ಮೊದಲು ಕೇವಲ ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲೆ ಇರಲಿಲ್ಲ. ವಾಣಿಜ್ಯ ಮತ್ತು ಮನರಂಜನೆಯ ಈ ಅಂತರ ವಿಭಾಗದಲ್ಲಿ ಸಂಸ್ಕೃತಿಗೆ ಒಪ್ಪಿಗೆಯಾಗುವುದಾಗಿದ್ದರೂ ಜಾಗತಿಕ ಮಟ್ಟದ ವಿದ್ಯುನ್ಮಾನ ಸಾಂಸ್ಕೃತಿಕ ವೇದಿಕೆಯ ಮುಖ್ಯ ತಂತ್ರೋಪಾಯವೆಂದರೆ ಸಮೂಹ ಸಂಸ್ಕೃತಿ ಮತ್ತು ಅತ್ಯುತ್ಕೃಷ್ಟ ಸಂಸ್ಕೃತಿಯನ್ನು ಒಂದೇ ಬೀಸಿನಲ್ಲಿ ಬದಲಾವಣೆಗೆ ಒಳಪಡಿಸಲು ಪ್ರಯತ್ನ ಮಾಡುವುದು. ವಸಾಹತುಶಾಹಿ ಸಾಂಸ್ಕೃತಿಕ ಯೋಜನೆ ಭಾರತದ ಉನ್ನತ ಶ್ರೇಣಿಯ ಪುರೋಹಿತಶಾಹಿ ವರ್ಗಗಳ ಆಶೋತ್ತರಗಳಿಗೆ ಗಾಢವಾಗಿ ಬೆಸೆದುಕೊಂಡಿದೆ. ಈ ಪುರೋಹಿತಶಾಹಿ ಜನ ತಮ್ಮ ಕನಸಿನ ಆಕ್ಸ್ ಬ್ರಿಡ್ಜ್ ಇಂಗ್ಲಿಶಿನವನ ಮಾದರಿಗೆ ಹತ್ತಿರ ಚಲಿಸಲು ಬಯಸಿದ ಹಾಗೆಯೆ ಉಳಿದ ಭಾರತೀಯ ಸಮಾಜದಿಂದ ಬಲು ದೂರ ನಡೆದಿರುತ್ತಾರೆ. ವಸಾಹತು ಸಂಸ್ಕೃತಿಯ ಆಂಗ್ಲೀಕರಣದ ಹಾಗೆ ಭಾರತೀಯ ಸಮಾಜದ ಶ್ರೀಮಂತರು ಮತ್ತು ಬಡವರ ನಡುವೆ ಸಾಂಸ್ಕೃತಿಕ ಅಂತರವನ್ನು 'ಹೆಚ್ಚಿಸಲು' ಹೆಚ್ಚಿನ ಬದ್ಧತೆಯನ್ನುಂಟು ಮಾಡುತ್ತದೆ. ಮತ್ತೊಂದೆಡೆ ಬಂಡವಾಳಶಾಹಿ ಜಾಗತೀಕರಣದ ಸಾಂಸ್ಕೃತಿಕ ಯೋಜನೆ ಸಮಮಟ್ಟದ ಪರಿಣಾಮ ಹೊಂದಿರುವುದು ಕುತೂಹಲಕರವಾಗಿದೆ. ಅಲ್ಲದೆ ಸ್ವತಹ ಅಮೆರಿಕವೇ ಹೆಚ್ಚುತ್ತಿರುವ ಡಿಸ್ನೀಕರಣ ಪ್ರಕ್ರಿಯೆಗೆ ಒಳಗಾಗುತ್ತಿದೆ. ನಂತರ ಅದನ್ನು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದದ ಬಂಡವಾಳ ವಲಯಗಳ ಎಲ್ಲ ವರ್ಗಗಳಿಗೂ ರಫ್ತು ಮಾಡುತ್ತದೆ. ಏಕೆಂದರೆ ಎಲ್ಲ ವರ್ಗಗಳ ಆತ್ಮೋನ್ನತೀಕರಣ ದೂರದರ್ಶನಕ್ಕೆ ಹಾದಿ ಒದಗಿಸಿದೆ ಅಥವಾ ಯಾರು ಹಾದಿಯಾಗಿರುತ್ತಾರೋ ಅವರು ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ.
ಈ ವ್ಯಾಪ್ತಿಗೆ ವಿರುದ್ಧವಾಗಿ ಸಮತೋಲನದಲ್ಲಿಡುವುದು ಎಂದರೆ ಇಂಟರ್ ನೆಟ್ ಮತ್ತು ವಿಶ್ವವ್ಯಾಪಿ ಜಾಲವೆಂದು ಕರೆಯುವ - ವಿಶೇಷವಾಗಿ ಹರಿತ ಹತಾರ ತಂತ್ರಜ್ಞಾನಗಳಾದ-ಪ್ರಪಂಚದಾದ್ಯಂತ ವ್ಯಾಪಿಸುತ್ತಿರುವ ತಂತ್ರಜ್ಞಾನಗಳ ಇತರೆ ಕ್ಷೇತ್ರದಲ್ಲಿನ ಸವಲತ್ತಿನ ಕೇಂದ್ರೀಕರಣ ಇಂದಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿರುವ ಮಾಹಿತಿ ತಂತ್ರಜ್ಞಾನದ ಪ್ರಜಾಪ್ರಭುತ್ವವಾದಿ ಪರಿಣಾಮವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಯೋಗ್ಯ. ಇದು ಜಗತ್ತಿನಾದ್ಯಂತ ಲಭ್ಯವೆಂದು ಹೇಳಲಾಗುವ ಮಾಹಿತಿ. ಬಿಲ್ ಗೇಟ್ಸ್ ಸುಂದರವಾಗಿ ಹೇಳಿರುವ ಹಾಗೆ- 'ವಾಸ್ತವ ಸತ್ಯದಲ್ಲಿ ಎಲ್ಲವೂ ಸಮಾನ '. ಸತ್ಯಸ್ಯ ಸತ್ಯವಾದ ಸಂಗತಿಯೆಂದರೆ ಜೀವಿತ ಮಾನವ ಕುಲದಲ್ಲಿ ಅರ್ಧದಷ್ಟು ಜನ ದೂರವಾಣಿ ಕರೆಯೊಂದನ್ನು ಮಾಡದಿರುವುದು ಹಾಗೂ ಆಫ್ರಿಕಾದಲ್ಲೆಲ್ಲ ಇರುವುದಕ್ಕಿಂತ ಹೆಚ್ಚು ದೂರವಾಣಿ ಸಂಪರ್ಕಗಳು ನ್ಯೂಯಾರ್ಕ್ ನ ಮ್ಯಾನ್ ಹಟನ್ ದ್ವೀಪವೊಂದರಲ್ಲೆ ಇರುವುದು. ಹಾಗಾದರೆ ಸತ್ಯಸ್ಯ ಸತ್ಯದಿಂದ ವಾಸ್ತವ ಸತ್ಯದೆಡೆಗೆ ಸಾಗುವುದು ಹೇಗೆ? ಜಗತ್ತಿನ ಜನಸಂಖ್ಯೆಯಲ್ಲಿ ಕೆಲವರು ಜಗತ್ತಿನ ಆದಾಯದ ಶೇಕಡ 70ರಷ್ಟು ಸಂಪಾದಿಸುತ್ತಾರೆ ಹಾಗೂ ಶೇಕಡ 15ರಷ್ಟು ವ್ಯಯ ಮಾಡುತ್ತಾರೆ. ಮಾಹಿತಿ ಸಾಮಗ್ರಿಗಳಿಗಿದು ಪ್ರವೇಶವಾಗಿರುವುದನ್ನು ತುಂಬಾ ಚೆನ್ನಾಗಿ ಪ್ರತಿನಿಧಿಸುತ್ತದೆ. ಉತ್ತರ ಅಮೆರಿಕಾ ಮತ್ತು ನೈರುತ್ಯ ಯುರೋಪ್ ಗಳು ಒಟ್ಟುಗೂಡಿ ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟಿದ್ದರೂ ಜಗತ್ತಿ ಶೇಕಡ 70ರಷ್ಟು ಆದಾಯವನ್ನು ಹೊಂದಿರುವುದು ಅಚ್ಚರಿಯ ವಿಷಯವೇನಲ್ಲ. ಹಾಗಾಗಿ ಅವರು ಜಗತ್ತಿನ ಮೂರನೆಯ ಎರಡರಷ್ಟು ಟಿವಿ, ರೇಡಿಯೋ ಸೆಟ್ಟುಗಳನ್ನು ಹೊಂದಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೂಡ ಯಾವುದೇ ಪರಿಶೀಲನಾರ್ಹ ಒಳ ದಾರಿಗಳ ಯಜಮಾನಿಕೆ ವರ್ಗ ಸವಲತ್ತುಗಳಿಗೆ ಸಂಬಂಧ ಹೊಂದಿರುತ್ತದೆ. ಅತ್ಯಾಧುನಿಕವಾದ ಮತ್ತು ಶಕ್ತಿಯುತವಾದ ಉಪಕರಣಗಳನ್ನು ಹೊಂದಲು ಆರಂಭಿಕ ವೆಚ್ಚ ಕನಿಷ್ಟ 2000 ಡಾಲರ್ ಗಳಾಗಿರುತ್ತದೆ. ನಂತರ ಅವನ್ನು ಕ್ರಮವಾಗಿ ಬದಲಿಸುತ್ತಿರಬೇಕು ಇಲ್ಲವೆ ಪ್ರತಿ ಕೆಲವು ವರುಷಗಳಿಗೊಮ್ಮೆ ಕೊನೆಯ ಪಕ್ಷ ಮುಖ್ಯಭಾಗಗಳನ್ನಾದರೂ ಮೇಲ್ದರ್ಜೆಗೇರಿಸುತ್ತಿರಬೇಕಾಗುತ್ತದೆ. ಇಂಟರ್ ನೆಟ್ ನ ಸತತ ಬಳಕೆ ಮತ್ತು ಅತಿಹೆಚ್ಚು ಆದಾಯಗಳ ನಡುವೆ ಯಾವುದೇ ಅಚ್ಚರಿಯಿಲ್ಲ. ಉಪಭೋಗಿಗಳಲ್ಲಿ ಮೂರನೇ ಒಬ್ಬನಿಗೆ ಬಿಟನ್ನಿನಲ್ಲಿ 25,000 ಪೌಂಡ್ ಗಳ ವಾರ್ಷಿಕ ಆದಾಯವಿದ್ದರೆ, ಅಮೆರಿಕಾ ಮತ್ತು ಕೆನಡಾಗಳಲ್ಲಿ 80,000 ಡಾಲರ್ಗಳಿಗಿಂತಲೂ ಹೆಚ್ಚು ಗಳಿಕೆ ಇದೆ.
ಇಂಟರ್ ನೆಟ್ ಒಂದು ದಶಕದಷ್ಟು ಹಳೆಯದಲ್ಲ. ಅದು ಈಗಾಗಲೇ ಎಲ್ಲ ಕಡೆ ಪಸರಿಸಿಕೊಂಡಿದೆ ಎಂದೇ ಹೇಳಬಹುದು. ಇನ್ನೆರಡು ದಶಕಗಳಲ್ಲಿ ಅದು ಬಹುಶಹ ಭೂಮಿಯ ಮೂಲೆ ಮೂಲೆಗೂ ತಲುಪಲಿದೆ. ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಇಂಟರ್ ನೆಟ್ ಬೃಹತ್ತಾಗಿ ಪಸರಿಸುವುದೆಂದು ನನಗೆ ತೋರುತ್ತದೆ. ಆದರೆ ಪ್ರತಿಯೊಬ್ಬರೂ ಅಥವಾ ಅರ್ಧಕ್ಕಿಂತ ಹೆಚ್ಚು ಪಾಲು ಜನರಿಗೆ ಮುಂಬರುವ ಯಾವುದೇ ಭವಿಷ್ಯದಲ್ಲೂ ಇಂಟರ್ನೆಟ್ ಸಂಪರ್ಕ ಹೊಂದಿತ್ತಾರೆಂದು ನನಗೆ ಸ್ಪಷ್ಟವಾಗಿ ತೋರುವುದಿಲ್ಲ. ಮೊದಲ ಟೆಲಿಗ್ರಾಫ್ ಸಂಪರ್ಕವನ್ನು 1830ರಲ್ಲಿ ಹಾಕಲಾಯಿತು. ನಂತರ 1865ರಲ್ಲಿ ಲಂಡನ್ ಮತ್ತು ಬಾಂಬೆ ನಡುವಿನ ಟೆಲಿಗ್ರಾಫ್ ಸಂಪರ್ಕದ ಕೆಲಸ ಪೂರ್ಣವಾಯಿತು. ಪಶ್ಚಿಮ ದೇಶಗಳಲ್ಲಿ ವ್ಯಾಪಕವಾಗಿ ಹಾಗೂ ತೃತೀಯ ಜಗತ್ತಿನ ಕೈಗಾರಿಕಾ ವಲಯದ ನಗರ ಮಧ್ಯಮ ವರ್ಗದಲ್ಲಿ ಟೆಲಿಫೋನ್ ಸಂಪರ್ಕವನ್ನು ಹೊಂದುವುದು ತುಂಬಾ ಸುಲಭವಾಗಿಬಿಟ್ಟಿದೆ. ಆದರೆ ಅರ್ಧಕ್ಕಿಂತ ಹೆಚ್ಚು ಮಾನವ ಕುಲ ಒಂದು ಟೆಲಿಗ್ರಾಮನ್ನೂ ಕೂಡಾ ಸ್ವೀಕರಿಸಿಲ್ಲ. ನಾನೀಗ ತಾನೆ ಹೇಳಿದಂತೆ ಮಾನವ ಕುಲದ ಅರ್ಧದಷ್ಟು ಜನ ಫೋನ್ ಕರೆಯನ್ನು ಮಾಡಲು ಇನ್ನೂ ಕಾಯುತ್ತಿದ್ದಾರೆ.
ಅಹಿತಕರವಾದ ಸಂಗತಿಯೆಂದರೆ, ದೇಶೀಯ ಜನರು ಯಾರೇ ಆಗಿರಲಿ ಅವರು ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರೂ ಸವಲತ್ತು ಪಡೆದ ಸಾಂಸ್ಕೃತಿಕ ಪರಿಕರವೂ ಆಗಿರುತ್ತಾರೆ. ವೈಯಕ್ತಿಕ ಅಥವಾ ಸಾಂಸ್ಥಿಕವಾಗಿ ಬಳಸಿಕೊಳ್ಳುವ ಹಾದಿ ಹೊಂದಿದ ಪರಿಣತ ಸಂಸ್ಕೃತಿ ಅತ್ಯಧಿಕ ಪ್ರಮಾಣದಲ್ಲಿ ಲಾಭ ಮಾಡುತ್ತದೆ. ಸಂಶೋಧನೆ ಮತ್ತು ಸಂಶೋಧನೆಯ ಫಲಿತಗಳನ್ನು ತಲುಪಿಸುವ ಕೆಲಸ ತ್ವರಿತವಾಗಿ ಮತ್ತು ಹೆಚ್ಚು ವ್ಯಾಪಕವಾಗಿರುತ್ತದೆ. ಯಾವುದೇ ನಿರ್ದಿಷ್ಟ ಸಂದರ್ಭದಲ್ಲೂ ಸುಲಭ ಸಂಪರ್ಕ ಸಾಧನ ಪರಿಣತರ ವಿಶಾಲ ಸಮುದಾಯದೊಂದಿಗೆ ನೇರ ಸಂಪರ್ಕವನ್ನು ತಂದುಕೊಡುತ್ತದೆ. ಈ ಪರಿಣತರ ಸಮುದಾಯ ಮಾಹಿತಿ ಬೃಹತ್ ಪ್ರಜಾಪ್ರಭುತ್ವೀಕರಣ ಮತ್ತು ಅದರ ಪ್ರವೇಶದಂಥ ಸಮಗ್ರ ಪ್ರಕ್ರಿಯೆಯ ಅನುಭವ ಪಡೆಯಲು ತಾನೇ ಬಯಸುತ್ತದೆ. ವಾಸ್ತವದಲ್ಲಿ ಇದುವರೆಗಿನ ಯಾವುದೇ ಮುದ್ರಣ ತಂತ್ರಜ್ಞಾನ ಸಾಧಿಸಿರುವುದರ ಆಚೆಗೆ ಪರಿಣತ ಸಂಸ್ಕೃತಿ ವಿಸ್ತರಿಸಿಕೊಂಡಿದೆ ಹಾಗೂ ಕ್ರೋಢೀಕರಿಸಿಕೊಂಡಿದೆ. ಆದರೂ ಪರಿಣತ ಮತ್ತು ಪರಿಣತವಲ್ಲದ ಸಂಸ್ಕೃತಿಗಳ ನಡುವಿನ ಅಂತರ ಮುಂಬರುವ ಕಾಲದಲ್ಲಿ ಬೃಹತ್ತಾಗಿ ಬೆಳೆದಿರುತ್ತದೆ. ನಿರಂತರವಾಗಿ ಈ ಮೇಲ್ ಗಳನ್ನು ರವಾನಿಸುವವರು ಮತ್ತು ಪಡೆಯುವವರು ಹಾಗೂ ಈ ಮೇಲ್ ಇಲ್ಲದವರ ನಡುವೆ ಜಗತ್ತು ಶೀಘ್ರವೇ ವಿಭಜನೆಯಾಗಲಿದೆ. ಇಂಟರ್ ನೆಟ್ ನ ಹೆಚ್ಚು ವಿಸ್ತೃತವಾದ ಬಳಕೆ ಸವಲತ್ತು ಪಡೆದಿರುವವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ನೀವು ಇಂಟರ್ ನೆಟ್ಅನ್ನು ಹೊಂದಿದ್ದರೆ ದೆಹಲಿಯ ಮತ್ತೊಂದು ಮೂಲೆಯಲ್ಲಿ ಪೋನ್ ಸಂಪರ್ಕವಿಲ್ಲದೆ ವಾಸಿಸುತ್ತಿರುವವರಿಗಿಂತ ಚಿಕಾಗೋದಲ್ಲಿ ವಾಸಿಸುತ್ತಿರುವವರೊಂದಿಗೆ ಸತತ ಸಂಪರ್ಕಕ್ಕೆ ಬರುತ್ತೀರಿ, ಹೆಚ್ಚು ಆತ್ಮೀಯರಾಗುತ್ತೀರಿ.
ನಾನೇನು ಒತ್ತಿ ಹೇಳಲು ಬಯಸುತ್ತೇನೆ ಅಂದರೆ, ಪ್ರತಿಯೊಂದು ಹೊಸ ತಂತ್ರಜ್ಞಾನ ವೈರುದ್ಧಾತ್ಮಕ ಪರಿಣಾಮವನ್ನು ಹೊಂದಿರುತ್ತದೆ. ಸಂಸ್ಕೃತಿ ಮತ್ತು ಸಂಪರ್ಕ ಕ್ಷೇತ್ರದಲ್ಲಿನ ಪ್ರತಿಯೊಂದು ಹೊಸ ತಂತ್ರಜ್ಞಾನ ಬಿಡುಗಡೆಗೊಳಿಸುವ ಶಕ್ತಿಯನ್ನು ಪಡೆದಿದೆ. ಅದು ಶ್ರಮದ ಅವಧಿಯನ್ನು ಕಡಿಮೆಗೊಳಿಸಬಲ್ಲದು, ಶ್ರಮದ ಪ್ರಕ್ರಿಯೆಯನ್ನು ವಿಚಾರವಾಗಿಸಬಲ್ಲದು; ಸಾಂಸ್ಕೃತಿಕ ಸಂಪರ್ಕದ ಸಮುದಾಯವನ್ನು ಹೆಚ್ಚಿಸಬಲ್ಲದು ಹಾಗೂ ಆಧುನಿಕ ಸಾಂಸ್ಕೃತಿಕ ಉತ್ಪನ್ನಗಳ ವ್ಯಾಪ್ತಿಯೊಳಗೆ ಹೆಚ್ಚು ಜನರನ್ನು ಒಳತರಬಲ್ಲದು; ಪ್ರಯೋಗ ಮತ್ತು ಅನ್ವೇಷಣೆಯ ಹೊಸಕ್ಷೇತ್ರಗಳನ್ನೆ ತೆರೆದಿಡಬಲ್ಲದು. ಹಾಗಾಗಿಯೆ ಆಧುನಿಕತೆ ವಿರೋಧಿ ಬಲೆಯೊಳಗೆ ಬೀಳುವುದಾಗಲೀ ತಂತ್ರಜ್ಞಾನವನ್ನೇ ವಿರೋಧಿಸಲು ತೊಡಗುವುದಾಗಲೀ ಯಾರೂ ಎಂದಿಗೂ ಮಾಡುವುದಿಲ್ಲ. ಸ್ವಾತಂತ್ರ್ಯದ ಪ್ರತಿಯೊಂದೂ ಶಕ್ತಿಯನ್ನು ಪ್ರಾಬಲ್ಯದ ಸಾಧನವನ್ನಾಗಿ ಬದಲಿಸುವಂಥ ಉತ್ಪಾದನೆ ಮತ್ತು ಉಪಭೋಗದ ಸಾಮಾಜಿಕ ಸಂಬಂಧಗಳನ್ನು ಯಾರೇ ಆಗಲಿ ನಿಜವಾಗಿಯೂ ನಿರಂತರವಾಗಿ ವಿರೋಧಿಸುತ್ತಾರೆ.
ಜಾಗತೀಕರಣದ ಯುಗದಲ್ಲಿ ಭಾರತಕ್ಕೆ ಬಂದ ಸಂಪರ್ಕದ ಪ್ರಮುಖ ಹೆದ್ದಾರಿಗಳನ್ನು ಕುರಿತು ಇದುವರೆಗೆ ನನ್ನ ಮಾತನ್ನು ಕೇಂದ್ರೀಕರಿಸಿದ್ದೇನೆ. ಆದರೆ ಸಂಸ್ಕೃತಿ ಬಗೆಗಿನ ಮುಖ್ಯ ವಿಚಾರವೆಂದರೆ ಅದು ಬದುಕಿನ ಎಲ್ಲ ಮುಖಗಳಲ್ಲೂ ನೆಲೆಸಿರುತ್ತದೆ. ಆರ್ಥಿಕ, ರಾಜಕೀಯ, ಮಿಲಿಟರಿ ಮತ್ತು ಇತರ ವಲಯಗಳಿಂದ ಸರಳವಾಗಿ ಬೇರೆ ಮಾಡಲು ಸಾಧ್ಯವಾಗದಿರುವುದು. ಭಾರತಕ್ಕೆ ನವ-ಉದಾರವಾದ ಬಂದ ಪರಿಣಾಮವಾಗಿ ಸಮಗ್ರ ರಾಜಕೀಯ ಸಂಸ್ಕೃತಿ ತೀವ್ರ ಅವನತಿಗೆ ಒಳಗಾಗಿರುವುದನ್ನು ಕಂಡಿದ್ದೇವೆ. ಕೊನೆಯ ಪಕ್ಷ ದೇಶಾದ್ಯಂತ ಪ್ರಸಾರವುಳ್ಳ ಇಂಗ್ಲಿಶ್ ದಿನ ಪತ್ರಿಕೆಗಳೂ ಸೇರಿದಂತೆ ಇಂದು ಯಾವ ಪತ್ರಿಕೆಗಳೂ ಜಾಹಿರಾತಿಗಿಂತ ಸುದ್ದಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಪತ್ರಿಕೆಗಳಾಗಿ ಉಳಿದಿಲ್ಲ. ಟೈಮ್ಸ್ ಆಫ್ ಇಂಡಿಯಾ 1980ರಷ್ಟು ಹಿಂದೆ ಗಂಭೀರ ಪತ್ರಿಕೆಯಾಗಿ ಉಳಿದಿತ್ತು. ಆದರೆ ನಂತರ ಅದು ಹೆಚ್ಚಾಗಿ ಅರೆಲಂಪಟ ಸಾಹಿತ್ಯದ ದೊಡ್ಡ ಕಾಗದದ ಹಾಳೆಯಾಗಿಬಿಟ್ಟಿದೆ. ಅದು ಸಣ್ಣ ಪುಟ್ಟ ಸುದ್ದಿಗಳನ್ನು ಜಾಹಿರಾತುಗಳ ನಡುವೆ ಉಳಿದ ಜಾಗ ಭರ್ತಿ ಮಾಡಲು ಬಳಸುತ್ತದೆ. ಲಂಪಟ ಸಾಹಿತ್ಯದ ಶಕ್ತಿ ಎಂಬ ಮತ್ತೊಂದು ಬಗೆಯ ಲಂಪಟ ಸಾಹಿತ್ಯಕ್ಕೆ ಇದು ಸಂಬಂಧ ಹೊಂದಿದೆ. ಇರಾಕ್ ಸಮುದಾಯಗಳ ಜನತೆ ಸಾಮ್ರಾಜ್ಯಶಾಹಿ ಆಕ್ರಮಣದ ಅತ್ಯಂತ ಬರ್ಬರ ಮಾರ್ಗಗಳ ಮೂಲಕ ನಿರ್ದಯವಾಗಿ ನಾಶವಾದ ಹಾಗೆಲ್ಲ ಭಾರತದ ದಿನಪತ್ರಿಕೆಗಳು 'ಸ್ವಯಂಚಾಲಿತ ರಂಣರಂಗ 'ದಲ್ಲಿ ಅಳವಡಿಸಿಕೊಂಡಿದ್ದ ಅಮೆರಿಕದ ಇತ್ತೀಚಿನ ಅಸ್ತ್ರಗಳ ಅದ್ಭುತ ತಾಂತ್ರಿಕ ಹಿರಿಮೆಯನ್ನು ಮೆಚ್ಚುಗೆಯಿಂದ ವರದಿ ಮಾಡುತ್ತಿದ್ದವು. ಅದೇ ಕಾಲಕ್ಕೆ ಈ ಪತ್ರಿಕೆಗಳು ಅಲ್ಪತನದಲ್ಲಿ ಪರಿಣತಿ ಪಡೆದಿದ್ದ ವ್ಯಾಪಕ ಪ್ರಸಾರದ ಅಮೆರಿಕದ ದಿನಪತ್ರಿಕೆಗಳ ಮಾದರಿಗೆ ತಮ್ಮನ್ನು ತಾವು ಮರುರೂಪಿಸಿಕೊಳ್ಳುತ್ತಿದ್ದವು. ಅಮೆರಿಕದ ಈ ದಿನಪತ್ರಿಕೆಗಳಲ್ಲಿ ಒಂದು ದಿನ ಭಾರತ ಸುಂದರಿಯ ಸುದ್ದಿ ಮುಖಪುಟವನ್ನು ಅಲಂಕರಿಸಿಕೊಂಡಿದ್ದರೆ ಮತ್ತೊಂದು ದಿನ ಅಮೆರಿಕ ಚಲನಚಿತ್ರ ತಾರೆಯರ ವಿವಾಹ ವಿಚ್ಛೇದನದ ಸುದ್ದಿ ತುಂಬಿಕೊಂಡಿರುತ್ತಿತ್ತು.
ಅಂಥ ಹಲವಾರು ವಿಷಯಗಳು ಇವೆ. ಆದರೆ ಅವನ್ನೆಲ್ಲ ಕುರಿತು ಮಾತನಾಡಲು ಸಮಯ ಉಳಿದಿಲ್ಲ. ಈ ಮಾತನ್ನು ಮುಗಿಸುತ್ತ ಹೀಗೆ ಹೇಳಬಹುದು. ಜಾಗತೀಕರಣ ಸಂಸ್ಕೃತಿಯನ್ನು ಸರಳವಾಗಿ ಹೊರಗಿನಿಂದ ಹೇರಿದುದಲ್ಲ. ಭಾರತದೊಳಗಿನ ಶ್ರೀಮಂತ ವರ್ಗಗಳು ಈ ಹಿಂದಿನಿಂದ ಅಪ್ರಯತ್ನಪೂರ್ವಕವಾಗಿ ನಡೆಸಿಕೊಂಡು ಬಂದ ಜೀವನ ವಿಧಾನಗಳಿಂದಲೂ ಹುಟ್ಟಕೊಂಡಿದೆ. ಆದ್ದರಿಂದ ಇದನ್ನು ಆಕ್ರಮಣ ಮತ್ತು ರಕ್ಷಣೆ ಎಂಬ ಪಾರಿಭಾಷಿಕ ಪದಗಳಲ್ಲಿ ನಡೆಸಿಕೊಳ್ಳಕೂಡದು. ಆಧುನಿಕ ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಅತ್ಯಂತ ಪ್ರಗತಿ ಪರ ಹಾಗೂ ಮಹತ್ವಪೂರ್ಣವಾದ ಮಾರ್ಕ್ಸ್ ವಾದ, ಕಮ್ಯೂನಿಸಂ, ಉದಾರವಾದಿ ಪ್ರಜಾಪ್ರಭುತ್ವ, ಜಾತ್ಯತೀತವಾದ, ಟ್ರೇಡ್ ಯೂನಿಯನ್, ಮುದ್ರಣ ತಂತ್ರಜ್ಞಾನ, ಮುಕ್ತ ಪತ್ರಿಕೋದ್ಯಮ, ಆಧುನಿಕ ಸಿವಿಲ್ ಹಾಗೂ ಕ್ರಿಮಿನಲ್ ಕೋಡುಗಳು, ಸ್ವತಂತ್ರ ನ್ಯಾಯಾಂಗ- ಇವು ಆರಂಭದಿಂದಲೇ ಯುರೋಪಿನಿಂದ ಬಂದಿತೆಂಬುದನ್ನು ನೆನಪು ಮಾಡಿಕೊಳ್ಳುವುದು ಉಪಯುಕ್ತ. ಅವೆಲ್ಲ ಅಮೆರಿಕದಲ್ಲಿ ಹುಟ್ಟಿದವು, ಅವನ್ನು ಕೂಡ ರೈಲು, ಫ್ಯಾಕ್ಟರಿ ತಯಾರಿಸಿದ ಸಾಮಗ್ರಿಗಳನ್ನು ಬಳಸಿದ ಹಾಗೆ ನಮ್ಮ ಉದ್ದೇಶಗಳಿಗೆ ಬಳಸುತ್ತಿದ್ದೇವೆ. ಸರ್ವವ್ಯಾಪಿ ಬಂಡವಾಳಶಾಹಿಯಾಗಿ ಸಮಗ್ರ ಭಾರತ ತಳೆದ ಅತ್ಯಂತ ಹೀನ ದೃಷ್ಟಿಕೋನವೆಂದರೆ ಅದು ಪಾಶ್ಚಿಮಾತ್ಯ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಅತಿ ಕೆಡುಕಿನ ಅಂಶಗಳನ್ನು ತಂದುಕೊಂಡಿತೆ ವಿನಾ ಅತ್ಯುತ್ತಮ ಅಂಶಗಳನ್ನು ತಂದುಕೊಳ್ಳಲಿಲ್ಲ. ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ಬಂಡವಾಳ ಸಂಸ್ಕೃತಿಗಳ ಅತ್ಯುತ್ತಮ ಭಾಗಗಳಲ್ಲಿ ನಮಗೆ ಅಗತ್ಯವಾದುದು ಹೆಚ್ಚಿನದಿದ್ದು, ನಮ್ಮ ಉದ್ದೇಶಗಳಿಗಾಗಿ ಅದನ್ನು ಮೆಚ್ಚಬೇಕಿದೆ. ಈ ನಡುವೆ 'ಪಾಶ್ಚಾತ್ಯ ಆಕ್ರಮಣ'ವೆಂದು ಕರೆಯಲಾಗುವುದರ ವಿರುದ್ಧ ಕಾಲಕಾಲಕ್ಕೆ ಗಲಭೆ ಪ್ರದರ್ಶನ ನಡೆಸುವವರು-ಅಂದರೆ ಶಿವಸೇನೆ, ಸ್ವದೇಶಿ ಚಾಗರಣ ಮಂಚ ಮತ್ತಿತರರು- ಸರಕಾರ ಮತ್ತು ರಾಜಕೀಯ ಪಕ್ಷಗಳ ಏಜಂಟರುಗಳೇ ಆಗಿದ್ದು ಭಾರತದ ಮಾರುಕಟ್ಟೆಗಳು ಪಾಶ್ಚಾತ್ಯ ಬಂಡವಾಳಕ್ಕೆ ತೆರೆದಿಕೊಳ್ಳಲು ಹಾಗೂ ಹಣ ಹೂಡುವ ಅಮೆರಿಕನ್ನರಿಗೆ ಸರಿ ಹೊಂದುವಂತೆ ಭಾರತದ ಕಾನೂನುಗಳಿಗೆ ತಿದ್ದುಪಡಿ ತರಲು ಅತ್ಯಂತ ತೀವ್ರವಾಗಿ ಒಪ್ಪಿಸಿಕೊಂಡವರು. ಅವರು ಕೇವಲ ಸಾಂಕೇತಿಕ ನಡಾವಳಿಗಳನ್ನು ಮೀರಿ ಹೋಗಲು ಸಾಧ್ಯವೆ ಇಲ್ಲ. ಏಕೆಂದರೆ ಅವರ ಸರಕಾರವಷ್ಟೆ ಅಲ್ಲ ಅವರ ಮುಖ್ಯ ಸಾಮಾಜಿಕ ನೆಲೆಯಾದ ಮೇಲುವರ್ಗ, ಮೇಲುಜಾತಿ, ದೊಡ್ಡ ನಗರಗಳ ವ್ಯಾಪಾರಿ ಬೂರ್ಜ್ವಾಗಳು ಮತ್ತು ಕೇಸರಿ ಬಟ್ಟೆ ಧರಿಸಿದ ಹೌದಪ್ಪಗಳು ಕೂಡ ಉದಾರೀಕರಣದ ಅತ್ಯಂತ ಅತ್ಯುತ್ಸಾಹಿಗಳನ್ನು ಒಳಗೊಂಡಿದೆ.
ನಮ್ಮ ಇತಿಹಾಸದ ಐವತ್ತು ವರುಷಗಳನ್ನು ಹಿಂದಿರುಗಿ ನೋಡಿದಾಗ ನಾವು ಪ್ರತ್ಯಕ್ಷವಾಗಿ ತುಂಬಾ ಮಹತ್ವದ ವೈರುಧ್ಯವನ್ನು ಕಾಣುತ್ತೇವೆ. ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ಜಾತ್ಯತೀತತೆ, ಆಧುನಿಕತೆ ಮತ್ತು ದೇಶದ ಆರ್ಥಿಕತೆ 'ಸಮಾಜವಾದಿ ಹಾಗೂ ಯೋಜನಾ ಬದ್ಧ ಅಭಿವೃದ್ಧಿ' ನೆಲೆಯ ವಿಚಾರಧಾರೆಗಳನ್ನು ಅನುಸರಿಸಿದ ರಾಷ್ಟ್ರೀಯ ಬೂರ್ಜ್ವಾ ವರ್ಗಗಳು ಅಲಿಪ್ತ ಹಾಗೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತು ದೇಶದೊಳಗಿನ ವಿಚಾರದಲ್ಲಿ ಒಂದು ಬಗೆಯ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ವಿರೋಧಿ ನಿಲುವನ್ನು ಕೂಡ ತಳೆದಿದ್ದರು. ಇದಕ್ಕೆ ವಿರುದ್ಧವಾಗಿ ಇಂದು ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಮಂಡಿಸುವ ಅತ್ಯಂತ ಬಲಪಂಥೀಯ ಪ್ರಚಾರಕರು ಭಾರತದ ನಿಜವಾದ ಧರ್ಮ ಮತ್ತು ಪರಂಪರೆ ಮುಂತಾದುವನ್ನು ಅತ್ಯಂತ ವ್ಯಾಪಕವನ್ನಾಗಿಯೂ ಸಾಮ್ರಾಜ್ಯಶಾಹಿ ಬಂಡವಾಳಕ್ಕೆ ಶೀಘ್ರ ಶರಣಾಗುವಂಥದ್ದನ್ನಾಗಿಯೂ ಮಾಡಿದ್ದಾರೆ. ಇದು ಕಮ್ಯೂನಿಸಂಗೆ ತುಂಬಾ ವಿಚಿತ್ರ ಬಗೆಯ ಆಕ್ರಮಣಶೀಲತೆಯನ್ನು ತಂದುಕೊಡುತ್ತದೆ. ನಾನು ಬೇರೊಂದು ಕಡೆ ಪ್ರತಿಪಾದಿಸಿದಂತೆ ಭಾರತದಂಥ ದೇಶದಲ್ಲಿ ವಸಾಹತು ವಿರೋಧಿ ರಾಷ್ಟ್ರೀಯವಾದ ಸಂಪ್ರದಾಯಗಳು ಹಿಂದಿನ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿದ್ದು, ವರ್ತಮಾನದಲ್ಲಿ ಸಾಮ್ರಜ್ಯಶಾಹಿ ಪ್ರಾಬಲ್ಯದ ಗುರಿಯೆ ರಾಷ್ಟ್ರೀಯವಾದಿ ವಿಚಾರಧಾರೆಯ ಉದ್ದೇಶಿತ ಅಗತ್ಯವಾಗಿದೆ. ಅಲ್ಲದೆ ಪ್ರಗತಿಪರ ಶಕ್ತಿಗಳು ಈ ರಾಷ್ಟ್ರೀಯವಾದದ ಸೆಳೆತವನ್ನು ಮುನ್ನಡೆಸಿ ಸಾಮ್ರಾಜ್ಯಶಾಹಿ ವಿರುದ್ಧ ಸಾಗಲು ಸಾಧ್ಯವಾಗದಿದ್ದರೆ ಆ ಸ್ಥಾನವನ್ನು ಭ್ರಷ್ಟ ಹಾಗೂ ಪ್ರಗತಿ ವಿರೋಧಿ ಶಕ್ತಿಗಳು ಖಂಡಿತವಾಗಿ ಅಲಂಕರಿಸಲು ಯತ್ನಿಸುತ್ತವೆ. ಪ್ರಸ್ತುತ ಆರೆಸ್ಸೆಸ್ ಮತ್ತು ಅದರ ಪರಿವಾರ ಸಂಘ ಸಂಸ್ಥೆಗಳಿಗೆ ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದ ಕಾರ್ಯಗತಗೊಳಿಸಲು ಧೈರ್ಯವಿಲ್ಲದುದರಿಂದ ಅವು ಕೋಮುವಾದಿ ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಪಸರಿಸಲು ಬಯಸಿವೆ. ಅವರು ನಿಜವಾದ ಯುದ್ಧ ಮರೆಯಲು ಅವರನ್ನು ಹೀಗೆ ಉದ್ದೀಪಿಸಲಾಗಿದೆ ಎಂಬ ನಂಬಿಕೆಯಿಂದ ಸಾಂಕೇತಿಕ ಯುದ್ಧ ಹೂಡಲಾಗಿದೆ. ನಿಜವಾದ ದಮನಕಾರರು ವಿಶ್ವ ವ್ಯಾಪಾರ ಸಂಸ್ಥೆ ಅಥವಾ ಅಮೆರಿಕ ಎಂಬುದನ್ನು ತಳ್ಳಿ ಹಾಕಲಾಗದ ಮತ್ತು ತಳ್ಳಿ ಹಾಕಲು ಸಾಧ್ಯವಿಲ್ಲದ ಮಾತಾಗಿರುವುದರಿಂದ ಅವರು ಕೆಂಟುಕಿ ಫ್ರೈಡ್ ಚಿಕನ್ ಶಾಖೆಗಳ ವಿರುದ್ಧ ಸಾಂಕೇತಿಕ ಚಳವಳಿ ನಡೆಸುತ್ತಾರೆ. ಅಮೆರಿಕದ ಯಾವುದೇ ಅಸ್ತ್ರದ ಮೇಲೆ ನಡೆಸುವ ಯಾವುದೇ ಬಗೆಯ ನಿಜವಾದ ದಾಳಿ ಸಾಂಸ್ಥಿಕ ಬಂಡವಾಳದ ಉಳಿದ ಸಾಂಸ್ಥಿಕ ಹಣ ಹೂಡಿಕೆದಾರರನ್ನು ಉಳಿಯಗೊಡದಂತೆ ಮಾಡುತ್ತದೆ. ಆದ್ದರಿಂದ ಸಾಮ್ರಾಜ್ಯಶಾಹಿಗೆ ಶರಣಾಗತರಾಗಿದ್ದರೂ ಅವರಿಗೆ ಸಾಂಕೇತಿಕ ಯದ್ಧದಲ್ಲೂ ತಡೆಯೊಡ್ಡುವ ಧೈರ್ಯವಿಲ್ಲ. ಹಾಗಾಗಿ 'ವಿದೇಶಿ ಆಕ್ರಮಣ' ಅವೈಚಾರಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯ ನೆಲೆಯಲ್ಲಿ ನಿರಂತರ ಪುನರ್ವ್ಯಾಖ್ಯಾನಕ್ಕೆ ಒಳಗಾಗಿದೆ. ಭಾರತವನ್ನು ಬೆದರಿಸಿರುವುದು ಇಂದಿನ ಸಾಮ್ರಾಜ್ಯಶಾಹಿ ಆಕ್ರಮಣವಲ್ಲ, ಮಧ್ಯಯುಗದ 'ಮುಸ್ಲಿಂ' ಆಕ್ರಮಣ, ವಿದೇಶಿ ಸಾಂಸ್ಥಿಕ ಬಂಡವಾಳವಲ್ಲ ಆದರೆ 'ವಿದೇಶಿ ಧರ್ಮ'ಗಳಲ್ಲಿ ಮುಖ್ಯವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳೆಂಬ ದೃಷ್ಟಿಕೋನದ ಮೇಲೆ ಒತ್ತು ಹಾಕಿದೆ. ಆದುದರಿಂದ ಒಂದು ಹಾಡಿಗಾಗಿ ದೇಶದ ಸಾರ್ವಜನಿಕ ಆಸ್ತಿಗಳು ವಿದೇಶಿ ಹೂಡಿಕೆದಾರರಿಗೆ ಮತ್ತು ಬಂಡವಾಳದಾರರಿಗೆ ಮಾರಾಟವಾಗುತ್ತಿದ್ದ ಹಾಗೆ ಈ ವಿದೇಶಿ ಧರ್ಮಗಳ ಜೀವಂತ ಸಂಕೇತಗಳಾದ ಮಸೀದಿ ಮತ್ತು ಚರ್ಚುಗಳ ನಾಶ ನಿರ್ದಿಷ್ಟ ಸಮಯದಲ್ಲಿ ರಾಷ್ಟ್ರೀಯ ಗೌರವದ ವಿಮೋಚನೆಯ ಕೃತ್ಯವಾಗಿ ಮಂಡಿತವಾಗಿದೆ. ಸಂಕ್ಷಿಪ್ತವೆಂದರೆ- ಹಿಂದೂ ಜಾಗರಣ ಮಂಚ ರಾಷ್ಟ್ರದ ನಿಜವಾದ ಯಾವುದೇ ಆಸ್ತಿಯನ್ನು ಸಂರಕ್ಷಿಸುವುದರಲ್ಲಿ ಅಸಮರ್ಥವಾಗಿತ್ತು ಮತ್ತು ಸಂಪೂರ್ಣ ನಗೆಪಾಟಿಲಿಗೆ ಈಡಾಗಿತ್ತು. ಆದುದರಿಂದ ಅದು ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದದ ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ತುಂಬಾ ಆಕ್ರಮಣಕಾರಿಯಾಗಿತ್ತು.
-ಏಜಾಜ್ ಅಹಮದ್