ಗುರುವಾರ, ಏಪ್ರಿಲ್ 28, 2011

ಕಾವ್ಯ ಮತ್ತು ಸಮಾಜ : ಇಂಡಿಯಾದ ಪರಿಸ್ಥಿತಿ

-ಅಯ್ಯಪ್ಪ ಫಣಿಕ್ಕರ್


ಇದು ಕಾವ್ಯದ ಬಳಿ ಸಾಗುವ ಒಂದು ಸೂಚನೆಯೆ ಹೊರತು ಆಖೈರಾದ ಹೇಳಿಕೆಯಲ್ಲ. ಯಾವುದೇ ತೀರ್ಮಾನದಿಂದ ಕಾವ್ಯದ ಬಗ್ಗೆ ಹೇಳಿಕೆ ನೀಡಲು ಸಾಧ್ಯವಿಲ್ಲ, ಹಾಗೆ ಬಯಸುವುದು ತಕ್ಕುದೂ ಅಲ್ಲ. ಕಾವ್ಯ ಕಲೆಯ ಚೌಕಟ್ಟಿನೊಳಗೆ ಜೀವನ ಹಾಗೂ ಅದರ ತೊಡಕುಗಳನ್ನು  ಹಿಡಿದಿಡುವ ಯತ್ನ ನಡೆಯುತ್ತದೆಯೆ ಹೊರತು ಹೇಳಿಕೆಯ ರಚನೆಯಲ್ಲ. ಎರಡನೆಯ ಭಾಗವಾದ ಸಮಾಜ ಹೆಚ್ಚಾಗಿ ಊರೊಟ್ಟಿನ ಜನರ  ಅನುಭವಗಳನ್ನು ಒಳಗೊಂಡಿರುತ್ತದೆ ಹಾಗೂ ಅದರ ಬಗ್ಗೆ ಹೇಳುವುದೆಲ್ಲ ಯಾವುದೇ ಸಾಮಾನ್ಯವಾದ ಒಂಟಿ ಹೇಳಿಕೆಗಿಂತ ಉತ್ತಮವಾಗಿರುತ್ತದೆ. ಸಮಾಜ ಸಂಬಂಧದಲ್ಲಿ ಕಾವ್ಯವನ್ನಿಟ್ಟು ನೋಡಿದಾಗಲೆಲ್ಲ ಈವೊತ್ತಿನ ಪರಿಸ್ಥಿತಿ  ಬಾನಂಚಿನಲ್ಲಿ ಮಸುಕು ಮಸುಕಾಗಿ ಹರಡಿದಂತೆ ಕಾಣುತ್ತದೆ. ಅದು ಯಾವತ್ತೂ ಅತಿ ಸರಳವಾಗಿ ಕಾಣುವ ತ್ರಾಸವೂ ಇದೆ. ಇಂಡಿಯಾದ ಪರಿಸರದಲ್ಲಿ ಈ ಎರಡು ಚಿಂತನಾ ರೂಪಗಳನ್ನು ಜೊತೆಗಿಟ್ಟು ನೋಡಿದಾಗ ಜಟಿಲವಾದ ತೊಡಕುಗಳು ಒಂದಕ್ಕೆ ಹತ್ತರಷ್ಟು ಇದೆ. ಇಂಡಿಯಾದ ಪರಿಸರ ಬಲು ಬೇಗ ಬದಲಾವಣೆ ಹೊಂದುತ್ತದೆ. ಇಲ್ಲಿ ಯಾವುದೇ ತಾತ್ಕಾಲಿಕ ಸಾಮಾನ್ಯ ಸೂತ್ರ ನಿರೂಪಣೆ ಮಾಡಿದರೂ ಅದು ಅನ್ವಯವಾಗದಿರಬಹುದು. ಪ್ರತಿದಿನದ ಅನುಭವದಿಂದ ಉದಿಸುವ ಹೊಸಹೊಸ ಮಾದರಿಗಳಿಂದ ನಾವಿರುವ ಕಾಲ ಈ ಹಿಂದಿನ ಕಾಲಕ್ಕಿಂತ ಬಲು ವೇಗವಾಗಿ ಚಲಿಸುತ್ತಿರುವ ಇಲ್ಲವೆ ಬದಲಾಗುತ್ತಿರುವ ಕಾಲದಂತೆ ಕಾಣುತ್ತದೆ. ಇಂದಿನ ಇಂಥ ಸ್ಥಿತಿಯಲ್ಲಿ  ಜೀವಿಸುತ್ತಿರುವ ಭಾವನೆ ಹೆಚ್ಚು ಜನರದ್ದಾಗಿದೆ. ಜಾರುವ ಕ್ಷಣಿಕ ವಾಸ್ತವ ಸಂಗತಿಗಳನ್ನು ಹಿಡಿದಿಡುವುದೆ ಕಾವ್ಯದ ಕೆಲಸಗಳಲ್ಲಿ ಒಂದು. ಅಲ್ಲದೆ ಅದು ಯಾವತ್ತೂ ಮೆಲುಕು ಹಾಕುವ ಭಾಷೆ ಮತ್ತು ಲಯಕ್ಕೆ ಒಳಪಡುತ್ತದೆ. ಇದರಿಂದ ಅದರ ಚರಿತ್ರೆಯ ಸೂಕ್ತತೆ ಕಡಿಮೆಯಾದರೂ ಅದಕ್ಕೆ ತಕ್ಕ ಸೊಗಸು ಇದೆಯೊ ಇಲ್ಲವೊ ಅನ್ನುವುದು ವಿವಾದದ ವಿಷಯವಲ್ಲ.
ಕೊನಾರ್ಕದ ಸೂರ್ಯ ದೇವಸ್ಥಾನ ಎಷ್ಟು ಸೂರ್ಯೋದಯಗಳನ್ನು ಕಂಡಿದೆಯೊ ಲೆಕ್ಕವಿಲ್ಲ. ಆದರೆ ಆ ದೇವಸ್ಥಾನಕ್ಕೂ ಗೊತ್ತಿದೆ ಇರುವುದು ಒಬ್ಬನೇ ಸೂರ್ಯನೆಂದು. ಆ ಸೂರ್ಯ ಹುಟ್ಟಿದ್ದೂ ಇಲ್ಲ ಮುಳುಗಿದ್ದೂ ಇಲ್ಲವೆಂದು. ಕಲೆಗೂ ಈ ಸತ್ಯ ಗೊತ್ತು. ಅಷ್ಟೇ ಅಲ್ಲ ನಮ್ಮನ್ನು ಈ ಸತ್ಯ ತಿಳಿದುಕೊಳ್ಳುವಂತೆ ಮಾಡುತ್ತದೆ. ನಮಗೂ ಗೊತ್ತಿದೆ ಯಾವುದೇ ಗುಡಿ ಅದಕ್ಕೊಪ್ಪುವ ತಕ್ಕ ಆಕಾರ ಪಡೆದುಕೊಂಡಿರುವುದಿಲ್ಲವೆಂದು. ಸುಕ್ಕಾದ ಸೊರಗಿದ ಉದ್ದವಾದ ಕೆಲವು  ಜನರ ಕೈ ಬೆರಳುಗಳು ಕಟ್ಟಡವನ್ನು, ಮೂರ್ತಿಗಳ ಆಕಾರವನ್ನು, ಕೋನಗಳನ್ನು ನಯ ಮಾಡಿ ಗೊತ್ತಾದ ರೂಪ ನೀಡಿದಾಗಲೇ ದೇವಸ್ಥಾನ ನಿಲ್ಲುವುದು. ಹಾಗೆಯೆ ಈ ದೇವಸ್ಥಾನ ನಿಂತಿರುವುದೂ ತಿರುಗುವ ಚಕ್ರದ ಮೇಲೆ. ಇಲ್ಲಿ ಚಲನೆ ಭ್ರಮೆ. ಅಂದರೆ  ನೋಡುವವನು ಮುಂದೆ ಹೋದಂತೆ ಅದೂ ಮುಂದಕ್ಕೆ  ಚಲಿಸಿದಂತೆ ಭಾಸವಾಗುತ್ತದೆ. ಈ ದೇವಾಲಯದ ಕಟ್ಟಡ ತಳಪಾಯದ ಪದರುಗಳಲ್ಲಿ ಅದುಮಿಟ್ಟಿರುವ ಉಸಿರಿನ ಮೌನ ಅಳಲನ್ನು ಕೇಳಬಹುದು. ಅದು ತಂತಾನೇ ಕಟ್ಟಿಕೊಂಡ ಅಳಲು. ಚಕ್ರದ ಪ್ರತಿಯೊಂದೂ ಅಡ್ಡಮರ(ಕಡ್ಡಿ)ವೂ ಅದರ ಭಾರದಡಿ ಸಿಕ್ಕಿ ಜಜ್ಜಿಹೋದ ಜನರ ರಕ್ತದಲ್ಲಿ ಅದ್ದಿ ಹೋಗಿದೆ. ಪ್ರತಿಯೊಂದೂ ಆಸೆಯೂ ಜನಶಕ್ತಿಯನ್ನು ಅರಳಿಸುವ ತನ್ನ ಗುರಿಯನ್ನು ಸಾರುತ್ತಿದೆ. ರಥದ ತಿರುಗುವ ಚಕ್ರ ಹಾಗೂ ಯಾವ ಕಾಲಕ್ಕೂ ನಿಂತಿರುವ ತುಂಬು ಮೈಯ್ಯ ಆನೆ- ಇದರ ನಡುವೆ ಕಾವ್ಯ ಮತ್ತು ಸಮಾಜ ಸಂಬಂಧ ಬಗೆಗಿನ ಪ್ರಶ್ನೆಗೆ ಸಮಂಜಸ ಉತ್ತರ ಹುಡುಕಿಕೊಳ್ಳಬಹುದು.
ನಟನೆಯೂ ಪಾತ್ರವೂ ಅರ್ಧ ಅರ್ಧ ಕೂಡಿ ಆದ ಪ್ರತಿಯೊಬ್ಬ ಪ್ರತಿಭಾವಂತ ಕಥಕ್ಕಳಿ ಪಟುವಂತೆ ಕವಿ ಕೂಡ ವೈಯಕ್ತಿಕವೂ ಸಾಮಾಜಿಕವೂ ಆದ ತೀವ್ರ ಭಾವ ಬೆರಕೆಯವನು.  ಒಂದನ್ನು ಎತ್ತಿ ಹಿಡಿಯಲು ಹೋಗಿ ಮತ್ತೊಂದನ್ನು ತಳ್ಳಿ ಹಾಕಿದರೆ ಎರಡೂ ಕಡೆಗಣನೆಗೆ ಒಳಗಾಗುತ್ತದೆ. ಪ್ರತಿಯೊಂದೂ ಮಗು ತನ್ನ ತಂದೆತಾಯಿಗಳಿಬ್ಬರ ಬೇರೆ ಬೇರೆ ಜೀನ್ಸ್ ಗಳನ್ನು ನಿಗೂಢವಾಗಿ ಒಳಗೊಂಡಿರುವಂತೆ ಪ್ರತಿಯೊಬ್ಬನ ಮಾತಿನಲ್ಲೂ - ಆತ ಕಲಿತವನಿರಬಹುದು, ಕಲಿಯದವನಿರಬಹುದು-ವೈಯಕ್ತಿಕ ದನಿಯೂ ಎಲ್ಲ ಜನರ ನೋಟವೂ ಅಂತರ್ಗತವಾಗಿರುತ್ತದೆ. ಪ್ರತಿಯೊಂದು ಕವಿತೆ, ಪ್ರತಿಯೊಂದು ಕಲಾಕೃತಿ-ಒಬ್ಬ ವ್ಯಕ್ತಿ ಮ್ತತು ವೈಯಕ್ತಿಕತೆ ಅಥವಾ ಸಾಮಾಜಿಕ ಮತ್ತು ಸಮಾಜದಲ್ಲಿ ಪಾಲು ಪಡೆದ-ಭಾವುಕ ಅನುಭವಗಳ ಸತ್ಯಕ್ಕೆ ಸಾಕ್ಷಿಯಾಗಿರುತ್ತದೆ. ಹೂ ಅರಳಿದ ಒಂದರ್ಧ ಭಾಗವನ್ನು ಬೇರೆಯವರು ಕಾಣಲು ಆಗಿದ್ದರೆ ಅವರು ಕಾಣಲಾಗದ ಉಳಿದರ್ಧ ಭಾಗವನ್ನು ತಾನೇ ನೋಡಿಕೊಳ್ಳುತ್ತದೆ. ಹೂವೊಂದು ನೋಡುವುದು  ನಿಲ್ಲಿಸಿದಾಗ ಆ ಹೂವು  ನೋಡುಗರನ್ನು ನಿಗಾ ಮಾಡುತ್ತದೆ. ನಾವು ಮಾತ್ರ ನೋಡುತ್ತಿರುವ ರೀತಿಯಲ್ಲೆ ನೋಡುತ್ತೇವೆ.
ಕಲಾಸತ್ಯದ ಎರಡು ನಿಟ್ಟುಗಳು ಇವು. ಇಂಡಿಯಾದ ಸ್ಥಿತಿಯಲ್ಲಿ ಕಾವ್ಯ ಮತ್ತು ಸಮಾಜದ ಅಂತರ್ ಸಂಬಂಧವನ್ನು ನೋಡುವಾಗಿದು ಮನಸ್ಸಿನಲ್ಲಿರಬೇಕು. ಕಾವ್ಯ ಬಹು ಆಯಾಮಗಳನ್ನು ಪಡೆದುಕೊಂಡಿರಲಾರದು. ಕಾವ್ಯ ಒಳಮನಸ್ಸು ಮತ್ತು ಹೊರಮನಸ್ಸುಗಳ ಮಧುರ ಮಿಲನ.  ಈವೊತ್ತಿನ ಇಂಡಿಯಾದ ಪರಿಸ್ಥಿತಿಯಲ್ಲಿ ಕವಿಗಳು ತಾವು ಜೀವಿಸುತ್ತಿರುವ ಮತ್ತು ತಮ್ಮ ಕವಿತೆಗಳು ಹುಟ್ಟುವ ವಾತಾವರಣದ ಹವೆಯನ್ನು ಕಡೆಗಣಿಸಲು ಆಗುವುದಿಲ್ಲ. ಕವಿತೆ ಥರ್ಮಾಮಿಟರ್ ನ ಹಾಗೆ ಕೆಲಸ ಮಾಡುತ್ತದೆ. ಅದು ಬಿಸಿ ಹವೆಯೊ ತಂಪು ಹವೆಯೊ ಎನ್ನುವುದನ್ನು ದಾಖಲಿಸುತ್ತದೆ.  ಪ್ರಸನ್ನತೆಯ ಕ್ಷಣಗಳಲ್ಲಿ ಏರುಪೇರಾದ ತಾಪವನ್ನೂ  ಹದಗೊಳಿಸುತ್ತದೆ.
ಈವೊತ್ತಿನ ಕಾಲದಂತೆಯೇ ಹಲವು ಕಾಲಗಳಿರುತ್ತವೆ. ಆಗ ಕಾವ್ಯ-ಸಾಕ್ಷಿ ಹಾಗೂ ಉದ್ಧಾರಕ - ಇಬ್ಬರ ಕೆಲಸವನ್ನೂ ಮಾಡಬೇಕಾಗುತ್ತದೆ. ರಾಜಕಾರಣವನ್ನು ರಾಜಕಾರಣಿಗಳಿಗೆ ಬಿಟ್ಟುಬಿಟ್ಟಿರುವ ತುಂಬಾ ಗಂಭೀರವಾದ ವಿಷಯದ ಹಾಗೆಯೆ ಧರ್ಮ ಕೂಡ ದೈವಾರಾಧಕರ ವಿವೇಚನೆಗೋ   ನಿರ್ವಿವೇಚನೆಗೋ ಬಿಡಲಾದ ಅತಿ ಗಂಭೀರ ವಿಷಯ. ವಿದ್ಯೆ ಉಪಾಧ್ಯಾಯರ ಕೈಯಲ್ಲೆ ಹೆಚ್ಚು ದಿನ ಉಳಿಯುವಂಥಾದ್ದಲ್ಲ. ಇಂಥ ನಮ್ಮ ಸಮಾಜಕ್ಕಷ್ಟೇ ಅಲ್ಲ  ನಮ್ಮ ಕಾವ್ಯಕ್ಕೂ ಕಾವ್ಯದ ಮೂಲಕವೆ ಮರುಜೀವ ನೀಡಬೇಕು. ಇದಕ್ಕೆ ಒಂದು ವಿದ್ಯುತ್ಚ್ಛಕ್ತಿಯ ಜನರೇಟರ್ ನ ಶಕ್ತಿಯಿದೆ. ಜನರೇಟರ್ ನ ಹಾಗೆ ಕಾವ್ಯ ಕಾವ್ಯವನ್ನು ಹುಟ್ಟಿಸುತ್ತದೆ.  ಕಲೆ ಅಪ್ಸರೆ ಮಾತ್ರವಲ್ಲ ಡೈನಮೋ ಕೂಡ.
ಕುಮಾರ ಆಸನ್, ಮುಕ್ತಿ ಬೋಧ್, ಮರ್ಧೇಕರ್, ಶ್ರೀಶ್ರೀ ಹಾಗೂ ಹಲವರ ಇನ್ನಿತರ ಗಟ್ಟಿ ದನಿಗಳು ಇಪ್ಪತ್ತನೇ ಶತಮಾನದ ಭಾರತೀಯ ಕಾವ್ಯದಲ್ಲಿ  ಆಧುನಿಕ ಭಾರತದ ಕವಿಯ ಎರಡು ನಿಟ್ಟಿನ ನೋಟವನ್ನು ತಕ್ಕ ರೀತಿಯಿಂದ ಹೊರಹೊಮ್ಮಿಸಲು ಹವಣಿಸುತ್ತಿದೆ. ಸ್ವಾತಂತ್ರ್ಯಪೂರ್ವದ ಹಲವು ಕವಿಗಳು ಕವಿಯ ಖಾಸಗಿ ಹಾಗೂ ಸರ್ವ ಜನರ ಕೆಲಸ ಕಾರ್ಯಗಳನ್ನು ಬಲು ಗೆಲುವಾಗಿ, ತುಂಬಾ ಚೆನ್ನಾಗಿ  ಬೆಸೆದಿದ್ದಾರೆ. ಧೂಮಿಲ್, ಶ್ರೀಕಾಂತ್ ವರ್ಮ ಹಾಗೂ ಅವರಂತೆ ಇತರರೂ ರಾಜಕೀಯ ಹಾಗೂ ರಾಜಕೀಯೇತರ ಮಿತಿಯಲ್ಲಿ ಕಾವ್ಯ ಏನು ಮಾಡುತ್ತದೆ ಎನ್ನುವುದನ್ನು ತಮ್ಮದೇ ರೀತಿಯಲ್ಲಿ ಪ್ರಕಟಿಸಲು ಯತ್ನಿಸಿದ್ದಾರೆ. ಇದು ವಾಸ್ತವ ಸತ್ಯ, ಬರೀ ಸತ್ಯವಲ್ಲ- ಅದಕ್ಕೆ  ಕವಿಯೂ ಸಂಬಂಧಿಸಿದ್ದಾನೆ. ಆದರೂ ರಾಜಕೀಯದ ಒಂದಾದರೂ  ಪದರವನ್ನು ಅನ್ಚೇಷಿಸಿ ತೋರಬೇಕಿದೆ.  ಭಾರತೀಯ ಸಮಾಜದ, ಕುಟುಂಬದ ಹಣಕಾಸು ವ್ಯವಹಾರ ಹಾಗೂ ಸಾಂಸ್ಕೃತಿಕ ವಾಸ್ತವಗಳ ಉದ್ದ ಹಾಗೂ ಅಡ್ಡ ಸೀಳುನೋಟದಿಂದ ಜಾತೀಯತೆ ಮತ್ತು ಕೋಮುವಾದಗಳು ತುಂಬಿ ತುಳುಕುತ್ತಿರುವುದೆ ಕಾಣುತ್ತದೆ, ಅಲ್ಲದೆ ತನ್ನ ಸ್ವಂತ ಪಕ್ಕಾ ಕೇಡುತನ ಮತ್ತು   ಜಡ್ಡುತನದ ಗತಕಾಲದ ಅಪಾರ ಭಾರವನ್ನು ಹೊತ್ತಿದೆ. ಅದಕ್ಕೆ ಹಿರಿಯರಿಂದ ಸಾಗಿಬಂದ ಸಾಮಾಜಿಕ ನಿಷೇಧಗಳು ಹಾಗೂ ಬಹಿಷ್ಕಾರಗಳ ಕೆಸರನ್ನು ದಾಟಲು ಆಗುವುದಿಲ್ಲ. ಈ ಸತ್ಯ ಯಾವುದೇ ಶ್ರೇಷ್ಟ ಕವಿಯ ಸಾಚಾತನಕ್ಕೆ ಒಂದು ಸವಾಲೇ ಆಗಿದೆ. ಈ ಎಲ್ಲವೂ ಕಾವ್ಯದಲ್ಲಿ ಸರಿ ರೀತಿಯಲ್ಲಿ ಹೊಂದಿಕೊಂಡು ಹೊರಹೊಮ್ಮಲು ಸಾಧ್ಯವಾದರೆ  ಅದು ವಿಶಾಲ ಹರವುಳ್ಳ ಬೇರೆ ಬೇರೆ ಬಗೆಯ  ಅನುಭವಗಳಿಂದ ಸುತ್ತುಗಟ್ಟುತ್ತದೆ. ನಿಕಟವಾದ ನೋಟವನ್ನು ಕಳೆದುಕೊಳ್ಳದೆ ಪ್ರತಿಯೊಂದು ಸವಾಲು ಹೊಸ ಅವಕಾಶವೂ  ಆಗಿರುತ್ತದೆ. ಇಂಡಿಯಾದ ಇಂದಿನ ಕವಿಗಳು ಹೊಸ ಅವಕಾಶದಿಂದ ಕೂಡಿದ ಈ ಸವಾಲನ್ನು ಎದುರಿಸಬೇಕು. ಯಾವಾಗ ಒಳ್ಳೆಯ ಶ್ರೇಷ್ಟ ಕವಿತೆ ಹುಟ್ಟುತ್ತದೆಂದು ಯಾರೂ ಹೇಳಲು ಆಗುವುದಿಲ್ಲ. ಆದರೆ ಹೊಸ ಕವಿತೆಯನ್ನು ಬರಮಾಡಿಕೊಳ್ಳುವ ಪರಿಸರವನ್ನು ಯಾರೂ ಹುಟ್ಟುಹಾಕಬಹುದು.
ಈವೊತ್ತಿನ ಇಂಡಿಯಾದ ಕವಿ ತನ್ನ ದೇಶದ ಏಕತೆಗೆ ಒಳಗಿನಿಂದ ಹಾಗೂ ಹೊರಗಿನಿಂದ ಎದುರಾಗುತ್ತಿರುವ ಹೆದರಿಕೆಯನ್ನು ಕಾಣಲಾಗುತ್ತಿಲ್ಲವೆ? ಪ್ರತಿಯೊಂದು ಪ್ರಾಂತ್ಯ ಹಾಗೂ ಅದರ ಸಂಸ್ಕೃತಿಯ ಪೂರ್ಣತೆಯನ್ನು ಒಪ್ಪಿಕೊಳ್ಳುವ ತನಕ ಹಾಗೂ ಸಂಯುಕ್ತ ರಾಷ್ಟ್ರದಂತಹ ರಾಷ್ಟ್ರದ ಏಕತೆ ಪಡೆಯದ ಹೊರತು ತನ್ನ ಸ್ವಂತ ಭಾಷೆಯಲ್ಲೇ ಅಂದರೆ ತನ್ನ ಸುತ್ತ ಜೀವಿಸುತ್ತಿರುವ ಜನರ ಭಾಷೆಯಲ್ಲೇ ಬರೆಯುವ ಇಂಡಿಯಾದ ಕವಿಗೆ ಭಾವ ಪ್ರಕಟಿಸುವ ಸಹಜ ಮಾಧ್ಯಮವಾದ ತನ್ನ ಭಾಷಾ ಸಂಸ್ಕೃತಿಯ ದನಿಯಾಗಿರುವುದೂ ಕೂಡ ಅವನಿಗೆ ದಿಟವಲ್ಲ. ಇಂಡಿಯಾ ಅಖಂಡವಾದುದಲ್ಲ. ಅದೊಂದು ಮೊಸಾಯಿಕ್. ನಮ್ಮ ಭಾವುಕ ಅನುಭವದಲ್ಲೆ ಅನೇಕದಲ್ಲಿ ಏಕತೆಯನ್ನು ತರಲು ಯತ್ನ ಮಾಡಬೇಕು. ಕಾವ್ಯಭಾಷೆ ನಂಬಬಹುದಾದ ಮತ್ತು ಮಿತಿಮೀರಿ ನಡೆದುಕೊಳ್ಳದ ಜನರ ಅನುಭವದ ಭಾಷೆಯಾಗಬೇಕು. ಈವೊತ್ತಿನ ಇಂಡಿಯಾದ ಕವಿ ಈ ಮೂಲ ಸತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾನೀಗ ಬರೆದಿರುವುದನ್ನು ಓದದಿದ್ದರೂ ಕೂಡ- ತನ್ನ ಸ್ವಂತದ ಹಾಗೂ ತನ್ನ ಜನರ ಅನುಭವದ ದಿಟವನ್ನು ಹುಡುಕುತ್ತ, ಸೃಷ್ಟಿ ಮಾಡುತ್ತ, ಹೊರಗೆಡವುತ್ತ, ಮತ್ತೆ ಸರಿ ಮಾಡುತ್ತ, ಬಿಟ್ಟಿರಲಾಗದ ಇಂಥ ಕೆಲಸ ಮಾಡಬೇಕು.      ಅನುಕರಿಸಲಾಗದ ತನ್ನದೇ ರೀತಿಯಲ್ಲಿ ಪ್ರತಿಯೊಬ್ಬ ಕವಿಯೂ ಇದನ್ನು ಮಾಡಬೇಕು. ಇದಕ್ಕೆ ಪೂರಕವಾಗುವಂತೆ ಅವನಿಗೆ ಯಾರೂ ನಿಯಮಗಳನ್ನು ಮಾಡಿಟ್ಟಿಲ್ಲ, ಅದು ಅವನಿಗೆ ಸಹಾಯಕ್ಕೆ ಬರುವುದೂ ಇಲ್ಲ.


 ಅಯ್ಯಪ್ಪ ಫಣಿಕ್ಕರ್ ಇಂಡಿಯನ್ ಲಿಟರೇಚರ್ ನಲ್ಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ