-ಪೀಟರ್ ಬ್ಯಾರಿ
ನವಚಾರಿತ್ರಿಕವಾದ
ಅಮೆರಿಕದ ವಿಮರ್ಶಕ ಸ್ಟಿಫನ್ ಗ್ರೀನ್ ಬ್ಲಾಟ್ ಎಂಬುವನು 'ನವಚಾರಿತ್ರಿಕವಾದ' ಎಂಬ ಪಾರಿಭಾಷಿಕ ಪದವನ್ನು ಮೊದಲಿಗೆ ಟಂಕಿಸಿದನು. `ರೆನೈಸಾನ್ಸ್ ಸೆಲ್ಫ್ - ಫ್ಯಾಷನಿಂಗ್ : ಫ್ರಂ ಮೋರ್ ಟು ಶೇಕ್ಸ್ಪಿಯರ್' (1980) ಎಂಬ ಅವನ ಕೃತಿಯಿಂದ ಅದರ ಆರಂಭವನ್ನು ಸಾಮಾನ್ಯವಾಗಿ ಗುರುತಿಸಲಾಗಿದೆ. ಈ ಪ್ರವೃತ್ತಿಯನ್ನು 1970ರ ಅವಧಿಯಲ್ಲಿ ಪ್ರಕಟವಾದ ವಿವಿಧ ವಿಮರ್ಶಕರ ಕೃತಿಗಳಲ್ಲೂ ಗುರುತಿಸಲು ಸಾಧ್ಯ. 'ದಿ ಟ್ರ್ಯಾಜಿಡಿ ಆಫ್ ಸ್ಟೇಟ್ : ಎ ಸ್ಟಡಿ ಆಫ್ ಜಕೋಬಿಯನ್ ಡ್ರಾಮಾ' ಎಂಬ ಜೆ.ಡಬ್ಲ್ಯು.ಲಿವರ್ನ ಕೃತಿ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. (ಇದು 1971ರಲ್ಲಿ ಮೆಥ್ಯೂನ್ ಅವರಿಂದ ಮೊದಲು ಪ್ರಕಟವಾಯಿತು. ನಂತರ 1987ರಲ್ಲಿ ಜೊನಾಥನ್ ಡೊಲಿಮೊರ್ ಅವರ ಮುನ್ನುಡಿಯೊಂದಿಗೆ ಹೊರಬಂದಿತು.) ಜಕೋಬಿಯನ್ ರಂಗಭೂಮಿ ಕುರಿತು ಸಾಂಪ್ರದಾಯಿಕ ವಿಮರ್ಶಕರ ದೃಷ್ಟಿಕೋನವನ್ನು ಪ್ರಶ್ನಿಸಿದ ಈ ಕಿರುಕೃತಿ ಹೊಸಶಕೆಯನ್ನು ಆರಂಭಿಸಿತು. ನಾಟಕಗಳನ್ನು ಹಿಂದಿನ ವಿಮರ್ಶಕರಿಗಿಂತ ಹೆಚ್ಚು ಸೂಕ್ಷ್ಮವಾಗಿ ತಮ್ಮ ಯುಗದ ರಾಜಕೀಯ ಘಟನೆಗಳೊಂದಿಗೆ ತಳುಕು ಹಾಕಿತು.
ಇತಿಹಾಸದ ಒಂದು ಕಾಲಮಾನಕ್ಕೆ ಸೇರಿದ ಸಾಹಿತ್ಯಿಕ ಅಸಾಹಿತ್ಯಿಕ ಪಠ್ಯಗಳ 'ಸಮಾನಾಂತರ' ಓದಿಗೆ ನೆಲೆ ಒದಗಿಸಿದ ವಿಧಾನವೆಂದು ನವಚಾರಿತ್ರಿಕವಾದವನ್ನು ಸರಳವಾಗಿ ವ್ಯಾಖ್ಯೆ. ಮಾಡಲಾಗಿದೆ. ನವಚಾರಿತ್ರಿಕವಾದ ಸಾಹಿತ್ಯ ಪಠ್ಯದ 'ಅವಕಾಶ'ವನ್ನು (ಮೇಲುನೋಟಕ್ಕಾದರೂ) ನಿರಾಕರಿಸುತ್ತದೆ. ಸಾಹಿತ್ಯದ 'ಪೂರ್ವಪೀಠಿಕೆ' ಹಾಗೂ ಐತಿಹಾಸಿಕ 'ಹಿನ್ನೆಲೆ'ಯ ಬದಲಿಗೆ ಅದು ಸಾಹಿತ್ಯಿಕ ಹಾಗೂ ಅಸಾಹಿತ್ಯಿಕ ಪಠ್ಯಗಳನ್ನು ಸಮಾನವಾಗಿ ಕಂಡು ಪರಸ್ಪರ ಪ್ರಶ್ನಿಸುವ ಇಲ್ಲವೆ ನಿರಂತರವಾಗಿ ಸಂವೇದಿಸುವ ಅಧ್ಯಯನ ಮಾದರಿಯೊಂದನ್ನು ಅನುಸರಿಸಿ ಮನದಟ್ಟು ಮಾಡಿಕೊಡುತ್ತ್ತದೆ. ಈ 'ಸಮಾನ ದೃಷ್ಟಿಕೋನ'ವನ್ನು ಅಮೆರಿಕನ್ ವಿಮರ್ಶಕ ಲೂಯಿಸ್ ಮಾಂಟ್ರೊಸ್ ನೀಡಿರುವ ನವಚಾರಿತ್ರಿಕವಾದದ ವ್ಯಾಖ್ಯೆಯಲ್ಲಿ ಸೂಚಿಸಲಾಗಿದೆ. ಆತ ಅದನ್ನು 'ಪಠ್ಯದ ಐತಿಹಾಸಿಕತೆ ಮತ್ತು ಐತಿಹಾಸಿಕ ಪಠ್ಯ'ದ ಉಭಯ ಹಿತಾಸಕ್ತಿಗಳಲ್ಲಿ ವ್ಯಾಖ್ಯೆ ಮಾಡಿದ್ದಾನೆ. ಗ್ರೀನ್ ಬ್ಲಾಟ್ ನ ಮಾತುಗಳಲ್ಲೆ ಹೇಳುವುದಾದರೆ 'ಸಾಹಿತ್ಯಿಕ ಪಠ್ಯಗಳನ್ನು ಮಾತ್ರ ಸಾಂಪ್ರದಾಯಿಕವಾಗಿ ಗಮನಿಸುವುದರೊಂದಿಗೆ ಗತದ ಪಠ್ಯ ಗುರುತುಗಳನ್ನೆಲ್ಲ ಓದುವ ಉದ್ದೇಶಿತ ಇಚ್ಛೆಯನ್ನದು ಹೊಂದಿದೆ. ಹಾಗಾಗಿ ನವಚಾರಿತ್ರಿಕವಾದ (ಅದರ ಹೆಸರೆ ಸೂಚಿಸುವಂತೆ) ವೈರುಧ್ಯ (ಕೆಲವರಿಗೆ ಹಗರಣ)ವನ್ನು ರೂಪಿಸುತ್ತದೆ. ಇದು ಸಾಹಿತ್ಯಕ್ಕೆ ಅವಕಾಶ ನೀಡದೆಯೂ ಸಾಹಿತ್ಯವನ್ನು ಪ್ರಸ್ತಾಪಿಸುತ್ತದೆ' (ಆದರೂ ಈ ಹೇಳಿಕೆಗೆ ಕೆಲವು ಅರ್ಹತೆಗಳು ಅಗತ್ಯವೆಂಬುದನ್ನು ನಂತರದಲ್ಲಿ ಕಾಣುತ್ತೇವೆ).
ನವಚಾರಿತ್ರಿಕವಾದದ ಮಾದರಿ ಪ್ರಬಂಧವೊಂದು ಸಾಹಿತ್ಯಿಕ ಪಠ್ಯವನ್ನು ಅಸಾಹಿತ್ಯಿಕ ಪಠ್ಯದ 'ಚೌಕಟ್ಟಿ'ನೊಳಗೆ ಇಟ್ಟು ನೋಡುತ್ತದೆ. ಸಾಹಿತ್ಯಿಕ ಅಧ್ಯಯನದ ದೃಷ್ಟಿಕೋನದಿಂದ ಗ್ರೀನ್ಬ್ಲಾಟ್ನ ಮುಖ್ಯ ಅನ್ವೇಷಣೆಯಾದ 'ಈ ಯುಗದ ಯುರೋಪಿನ ಪ್ರಮುಖ ಶಕ್ತ ದೇಶಗಳೆಲ್ಲ ಅನುಸರಿಸಿದ ಭಯಾನಕ ವಸಾಹತುಶಾಹಿ ನೀತಿಗಳ' (ದಿ ಮಾಡ್ರನಿಸ್ಟ್ ಶೇಕ್ಸ್ ಪಿಯರ್ ನಲ್ಲಿ ಹ್ಯೂ ಗ್ರಾಡಿ) ಜೊತೆಗೆ ಪುನರುತ್ಥಾನ ಕಾಲದ ನಾಟಕಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡುತ್ತದೆ. ಒಂದಲ್ಲ ಒಂದು ಬಗೆಯಲ್ಲಿ ನಾಟಕದ ವಸ್ತು ಒಳಗೊಂಡ ಸಮಕಾಲೀನ ಐತಿಹಾಸಿಕ ದಾಖಲೆಯ ವಿಶ್ಲೇಷಣೆಯನ್ನು ಸಾಮಾನ್ಯವಾಗಿ ಲೇಖನದ ಆರಂಭದಲ್ಲೆ ಮಾಡುವ ಮೂಲಕ 'ದಮನಕ್ಕೆ ಒಳಪಟ್ಟ ಇತರರನ್ನು ಮೂಲೆಗೊತ್ತುವ ಹಾಗೂ ಅಮಾನವೀಯಗೊಳಿಸುವ' (ಗ್ರಾಡಿ) ಕಡೆಗೆ ಗಮನ ಸೆಳೆಯುತ್ತದೆ. ಗ್ರೀನ್ ಬ್ಲಾಟ್ ಸ್ವತಹ ಸೂಕ್ತ ಐತಿಹಾಸಿಕ ದಾಖಲೆಯನ್ನು 'ಐತಿಹ್ಯ'ದ ಹಾಗೆ ನೋಡುತ್ತಾನೆ. ನವಚಾರಿತ್ರಿಕವಾದದ ಮಾದರಿ ಪ್ರಬಂಧವೊಂದು ನಾಟಕದ ಬಗ್ಗೆ ಈ ಹಿಂದೆ ಪ್ರಕಟವಾದ ವ್ಯಾಖ್ಯಾನಗಳು ಮತ್ತು ರೂಢಿಗತ ಶೈಕ್ಷಣಿಕ ಪೂರ್ವಸಿದ್ಧತೆಯನ್ನು ಕೈ ಬಿಡುತ್ತದೆ ಹಾಗೂ ಈಗಾಗಲೆ ಸಂಕೇತ ನೀಡಿದ ಹಾಗೆ ಪ್ರಭಾವಶಾಲಿಯಾದ ನಾಟಕೀಯ ಐತಿಹ್ಯದೊಂದಿಗೆ ಆರಂಭವಾಗುತ್ತದೆ. ಉದಾಹರಣೆಗೆ, ಲೂಯಿಸ್ ಮಾಂಟ್ರೊಸ್ ನಂತರದ ಕಾಲದಲ್ಲಿ ಚರ್ಚೆ ಮಾಡಿದ ಪ್ರಬಂಧದ ಮೊದಲ ವ್ಯಾಕ್ಯವಿದು: 'ಎಲಿಜಬೆತನ್ ಕನಸು ಅಂದರೆ ಶೇಕ್ಸ್ಪಿಯರ್ನ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಅಲ್ಲವಾದರೂ 1597ರ ಜನವರಿ 23ರಂದು ಸೈಮನ್ ಫೋರ್ಮನ್ ಕಂಡ ಕನಸನ್ನು ವಿವರಿಸಲು ಬಯಸುತ್ತೇನೆ'. ಈ ಬಗೆಯ ನಾಟಕೀಯ ಆರಂಭಗಳು ಮತ್ತೆ ಮತ್ತೆ ಸ್ಥಳ ಮತ್ತು ತಾರೀಕನ್ನು ಉಲ್ಲೇಖಿಸುತ್ತವೆ ಹಾಗೂ ದಾಖಲಾತಿಯ ಎಲ್ಲ ಬಲವನ್ನು ಹೊಂದಿರುತ್ತವೆ. ಕಣ್ಣಾರೆ ಕಂಡ ವಿವರವೊಂದು 'ಇತಿಹಾಸ'ಕ್ಕಿಂತ ಜೀವಂತ ಅನುಭವ ಗುಣವನ್ನು ಸಶಕ್ತವಾಗಿ ಆವಾಹಿಸುತ್ತದೆ. ಈ ಐತಿಹಾಸಿಕ ದಾಖಲಾತಿಗಳು ಸಂದರ್ಭಗಳ ಹಾಗೆ ಅಪ್ರಧಾನವಾಗದೆ ಇರುವವರೆಗೆ ಅವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ನಾವದನ್ನು 'ಸಂದರ್ಭಗಳು' ಎನ್ನುವ ಬದಲಿಗೆ 'ಸಹಪಠ್ಯಗಳು' ಎಂದು ಕರೆಯುತ್ತೇವೆ. ಪಠ್ಯ ಮತ್ತು ಸಹಪಠ್ಯ ಒಂದು ಐತಿಹಾಸಿಕ 'ಕ್ಷಣ'ದ ಅಭಿವ್ಯಕ್ತ್ತಿಗಳ ಹಾಗೆ ಕಂಡು ಬಳಸಲಾಗುತ್ತದೆ ಮತ್ತು ಆ ಪ್ರಕಾರವಾಗಿಯೇ ವ್ಯಾಖ್ಯಾನ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ರಿಚರ್ಡ್ ವಿಲ್ಸನ್ ಮತ್ತು ರಿಚರ್ಡ್ ಡಟ್ಟನ್ ತಮ್ಮ 'ನ್ಯೂ ಹಿಸ್ಟಾರಿಸಿಜಂ ಅಂಡ್ ರೆನೈಸಾನ್ಸ್ ಡ್ರಾಮ' ಎಂಬ ಪ್ರಬಂಧ ಸಂಕಲನದ ಮುನ್ನುಡಿಯಲ್ಲಿ ಹೀಗೆ ವಿವರಿಸಿದ್ದಾರೆ :
ಅಲ್ಲಿ (ಈ ಮೊದಲು) ವಿಮರ್ಶೆ ಶೇಕ್ಸ್ ಪಿಯರ್ ನನ್ನು ಇಂಗ್ಲಿಶ್ ಆಡುನುಡಿಯ ಅವತಾರ ಪುರುಷನ ಹಾಗೆ ನಿಗೂಢಗೊಳಿಸಿತ್ತು. ಇದು (ನವಚಾರಿತ್ರಿಕವಾದ) ನಾಟಕಗಳು ವಸಾಹತು ದಾಖಲೆಗಳು, ವೈದ್ಯಕೀಯ ಹಾಗೂ ದಂಡನೆಯಂಥ ಇತರ ಬರೆಹದ ಪಠ್ಯಗಳಲ್ಲಿ ಹೂತು ಹೋಗಿರುವುದನ್ನು ತೋರಿಸಿಕೊಟ್ಟಿತು. ಪತ್ರಾಗಾರದ ಕಾಗದದ ಕಟ್ಟುಗಳೊಳಗಿಂದ ಓದಿದರೆ, ಅವು ಪ್ರತಿನಿಧಿಸುವಂಥದ್ದು ಸಾಮರಸ್ಯವನ್ನಲ್ಲ- ಆದರೆ ಕಾರ್ನಿವಾಲ್ ಮೇಲೆ ಪ್ಯೂರಿಟನ್ನರ ಹಿಂಸಾತ್ಮಕ ದಾಳಿಯನ್ನು, ಗುಲಾಮಿತನದ ಹೇರಿಕೆಯನ್ನು, ಪುರುಷಶಾಹಿ ತಲೆ ಎತ್ತುವುದನ್ನು, ಹಾದಿ ತಪ್ಪಿದವನ ಬೇಟೆಯಾಡುವುದನ್ನು ಹಾಗೂ ಫೂಕೊ ಕರೆದಿರುವ 'ಬಂಧನ ಯುಗದ ಸೆರೆಮನೆ ವಾಸವೆ ಸಮಾಜದ ಮುಂಬೆಳಗಿನ ಕಾಲದಲ್ಲಿ ಸೆರೆಮನೆ ಬಾಗಿಲು ಮುರಿಯುವುದನ್ನು' (ವಿಲ್ಸ್ನ್ ಮತ್ತು ಡಟ್ಟನ್, ಪು.8).
ಇದು ಸಂಕ್ಷಿಪ್ತವಾಗಿ ನವಚಾರಿತ್ರಿಕವಾದದ ಆಶಯ ಮತ್ತು ಆಕಾಂಕ್ಷೆಗಳನ್ನು ತಿಳಿಸಿಕೊಡುತ್ತದೆ. ಸಾಹಿತ್ಯದ ಓದು ಕುರಿತ ನುಡಿಕಟ್ಟು 'ಪತ್ರಾಗಾರದ ಕಾಗದದ ಕಟ್ಟುಗಳೊಳಗಿಂದ' ಎಂಬುದು ಇದರ ವಿಸ್ತೃತ ಬೀಜರೂಪವಾಗಿದೆ.
ಹಳೆಯ ಮತ್ತು ನವಚಾರಿತ್ರಿಕವಾದಗಳು: ಕೆಲವು ವ್ಯತ್ಯಾಸಗಳು
ನವಚಾರಿತ್ರಿಕವಾದವನ್ನು ಸಾಹಿತ್ಯಿಕ ಹಾಗೂ ಅಸಾಹಿತ್ಯಿಕ ಪಠ್ಯಗಳ ಸಮಾನಾಂತರ ಅಧ್ಯಯನವೆಂದು ಹೇಳಿದಾಗ 'ಸಮಾನಾಂತರ' ಎಂಬ ಪದಕ್ಕೂ ಐತಿಹಾಸಿಕ ಅಂಕಿಅಂಶಗಳನ್ನು ಬಳಸಿಕೊಳ್ಳುತ್ತಿದ್ದ ಈ ಮೊದಲಿನ ಸಾಹಿತ್ಯ ಪ್ರಸ್ತಾಪಕ್ಕೂ ನಡುವೆ ಮೂಲಭೂತ ವ್ಯತ್ಯಾಸವನ್ನು ಪೂರ್ಣಗೊಳಿಸಿದಂತಾಗುತ್ತದೆ. ಈ ಮೊದಲಿನ ಪ್ರಸ್ತಾಪಗಳು ವಸ್ತುಮೌಲ್ಯವಿದ್ದ ಸಾಹಿತ್ಯ ಪಠ್ಯಗಳ ನಡುವೆ ಆಭರಣಗಳ ಹಾಗೆ ಕ್ರಮಬದ್ಧ ಶ್ರೇಣಿಯ ಪ್ರತ್ಯೇಕತೆಯನ್ನು ಉಂಟುಮಾಡಿದ್ದವು. ಐತಿಹಾಸಿಕ 'ಹಿನ್ನೆಲೆ' ಹೆಚ್ಚು ಉಪಯುಕ್ತವಲ್ಲದ ವ್ಯಾಖ್ಯೆಯೊಂದಿಗೆ ಕೇವಲ ಆವರಣವಾಗುಳಿದಿತ್ತು.
ಸಾಹಿತ್ಯಿಕ ಮತ್ತು ಅಸಾಹಿತ್ಯಿಕ ವಾದಗಳ ಸಾಮಗ್ರಿಗಳಿಗೆ 'ಸಮಾನ ಮಹತ್ವ' ನೀಡುವ ಪದ್ಧತಿ 'ಹಳೆಯ' ಮತ್ತು 'ನವ' ಚಾರಿತ್ರಿಕವಾದಗಳ ನಡುವಿನ ಪ್ರಧಾನ ಮತ್ತು ಮೊದಲ ವ್ಯತ್ಯಾಸವಾಗಿದೆ. ಹಳೆಯ ಚಾರಿತ್ರಿಕವಾದದ ಪ್ರತಿನಿಧಿಯಾಗಿ ಇ.ಎಂ.ಡಬ್ಲ್ಯು.ಟಿಲ್ಯಾರ್ಡ್ನ 'ದಿ ಎಲಿಜಬೆತನ್ ವರ್ಲ್ಡ್ ಪಿಕ್ಚರ್' (1943) ಮತ್ತು 'ಶೇಕ್ಸ್ ಪಿಯರ್ಸ್ ಹಿಸ್ಟರಿ ಪ್ಲೇಸ್' (1944) ಎಂಬ ಕೃತಿಗಳನ್ನು ಉಲ್ಲೇಖಿಸಬಹುದು. ನವಚಾರಿತ್ರಿಕವಾದ ಇವಕ್ಕೆ ವಿರುದ್ಧವಾಗಿ ತನ್ನನ್ನು ಮೇಲಿಂದ ಮೇಲೆ ವ್ಯಾಖ್ಯಾನಿಸಿಕೊಂಡಿದೆ. ಶೇಕ್ಸ್ ಪಿಯರ್ ನ ನಾಟಕಗಳಲ್ಲಿ ಪ್ರತಿಬಿಂಬಿತವಾಗಿರುವ ಎಲಿಜಬೆತನ್ ಮನೋಭಾವವನ್ನು ಮಾದರಿಗೊಳಿಸಿರುವ ಹಾಗೆಯೆ ಈ ಪುಸ್ತಕಗಳು ಟಿಲ್ ಯಾರ್ಡ್ ಕಂಡಿರುವ ಸಾಂಪ್ರದಾಯಿಕ ಮನಸಿನ (ಸಮಾಜ, ದೈವ, ನಿಮರ್ಿತ ಜಗತ್ತು ಮುಂತಾದ) ನಡವಳಿಕೆಯ ರೀತಿಯನ್ನೂ ವಿವರಿಸಿವೆ. ಶೇಕ್ಸ್ ಪಿಯರ್ ಕುರಿತ (1970ರ ಮೂಲಕ) 'ಪರಂಪರಾಗತ' ಪ್ರಸ್ತಾಪವೆ 'ನಿಕಟ ಓದಿ'ನ ಪರಿಪಾಲನೆ ಮತ್ತು 'ಪ್ರತಿಮಾ ಸ್ವರೂಪ'ಗಳ ಬಿಚ್ಚುನೋಟದಿಂದ ಕೂಡಿದ್ದು ಐತಿಹಾಸಿಕ ಚೌಕಟ್ಟನ್ನು ಲಕ್ಷಣೀಕರಿಸಿದೆ.
ಹಳೆಯ ಮತ್ತು ನವಚಾರಿತ್ರಿಕವಾದಗಳ ಎರಡನೆಯ ಮುಖ್ಯ ವ್ಯತ್ಯಾಸವನ್ನು ಈ ಮೊದಲ ಉಲ್ಲೇಖಿತ ನುಡಿಕಟ್ಟು 'ಪತ್ರಾಗಾರದ ಕಾಗದ ಕಟ್ಟು'ನಲ್ಲಿ 'ಪತ್ರಾಗಾರ' ಎಂಬ ಪದ ಪೂರ್ಣಗೊಳಿಸಿದೆ. ನವಚಾರಿತ್ರಿಕವಾದ ಚಾರಿತ್ರಿಕ ಚಳವಳಿಯಾಗಿರದೆ ನಿಜವಾದ ಚರಿತ್ರೆಯಾಗಿದೆ ಎಂಬುದನ್ನು ಈ ಪದ ಸೂಚಿಸುತ್ತದೆ. ಅದು ಬರೆಹ ದಾಖಲೆಗಳಲ್ಲಿ ನಮೂದಾಗಿರುವ ಹಾಗೂ ಪ್ರತಿನಿಧಿತವಾಗಿರುವ ಇತಿಹಾಸದಲ್ಲಿ - ಪಠ್ಯದ ಇತಿಹಾಸದಲ್ಲಿ - ಆಸಕ್ತವಾಗಿದೆ. ಐತಿಹಾಸಿಕ ಸಂಗತಿಗಳು ಮರಳಿ ಪಡೆಯದ ಹಾಗೆ ಹಾಳಾಗುವಂಥವು ಎಂದು ವಾದಿಸಲಾಗಿದೆ. ಈ ಮಾತಿನ ಒತ್ತು, ಲೇಖಕನ ಆಲೋಚನೆಗಳು, ಭಾವನೆಗಳು, ಉದ್ದೇಶಗಳು ಮರಳಿ ಪಡೆಯಲಾರದಂಥವು ಅಥವಾ ಮರುರಚಿಸಲಾಗದಂಥವು ಎಂಬ ಸಾಹಿತ್ಯಿಕ ಅಧ್ಯಯನಗಳ ಬಹುದಿನಗಳ ಜನಪ್ರಿಯ ನೋಟದ ಪ್ರಭಾವವನ್ನು ಒಳಗೊಂಡಿದೆ. ಹಾಗಾಗಿ ನಮ್ಮ ಕೈ ಸೇರಿದ ಸಾಹಿತ್ಯ ಕೃತಿಯಿಂದ ಜೀವಂತ ವ್ಯಕ್ತಿಯೊಬ್ಬ ಸಂಪೂರ್ಣವಾಗಿ ನಿರಾಕರಣೆಗೆ ಒಳಪಡುತ್ತಾನೆ. ಹಾಗೆಯೆ ಭೂತ ಕಾಲದ ಜಗತ್ತು ಕೂಡ ಪುನರ್ ಸ್ಥಾಪನೆಯಾಗುತ್ತದೆ. ಈ ಭೂತ ಕಾಲದ ಸಂಗತಿಗಳು ಮತ್ತು ನಡವಳಿಕೆಗಳು ನವಚಾರಿತ್ರಿಕವಾದಿಗಳಿಗೆ ಸದ್ಯದ ಸಂಗತಿಯಾಗಿ ಉಳಿದಿವೆ. ಈ ಮೊದಲು ಇವು ಸಾಹಿತ್ಯ ಪಠ್ಯಗಳಿಗೆ ಸೀಮಿತವಾಗಿದ್ದ ನಿಕಟ ಬಿಚ್ಚುನೋಟ ಮಾದರಿಯ ಬರವಣಿಗೆಗೆ ವಿಷಯ ಸೂಕ್ಷ್ಮತೆಯನ್ನು ಉಂಟು ಮಾಡಿದ್ದವು.
ವಿರಚನವಾದದ ಪ್ರಭಾವದಿಂದಲೆ ಅದು ಭೂತಕಾಲದ ಪಠ್ಯ ಸಂಬಂಧಿ ದಾಖಲೆಗೆ ಮೊದಲ ಆದ್ಯತೆಯನ್ನು ನೀಡಿತು. ಪಠ್ಯದಾಚೆಗೆ ಏನೂ ಇಲ್ಲ, ವಿಶೇಷಾರ್ಥದಲ್ಲಿ ಹೇಳಬೇಕೆಂದರೆ ಭೂತ ಕಾಲದ ಪ್ರತಿಯೊಂದು ಅಂಶವೂ ಪಠ್ಯೀಕೃತ ರೂಪದಲ್ಲೇ ನಮಗೆ ಸಿಗುತ್ತದೆ ಎಂಬ ಡೆರಿಡಾನ ದೃಷ್ಟಿಕೋನವನ್ನು ನವಚಾರಿತ್ರಿಕವಾದ ಒಪ್ಪುತ್ತದೆ. ಆದರೆ ಅದರದು 'ಮೂರು ಬಗೆಯ ಕಾರ್ಯ ವಿಧಾನ'. ಮೊದಲನೆಯದು ವಿಚಾರಗಳು ಅಥವಾ ನಿಲುವುಗಳು ಅಥವಾ ತನ್ನ ಕಾಲದ ವ್ಯಾಖ್ಯಾನಾತ್ಮಕ ಆಚರಣೆಗಳು, ನಂತರದ್ದು ನಮ್ಮದು, ಕೊನೆಯದು ತಿರುಚುತ್ತಿರುವ ಭಾಷೆಯ ಜಾಲದ್ದು. ಪಠ್ಯದಲ್ಲಿ ಏನೇ ಪ್ರತಿನಿಧಿತವಾದರೂ ಅದು ಆ ಮೂಲಕ ಸಿದ್ಧಗೊಂಡ ಮರು ತಯಾರಿಕೆಯಾಗಿದೆ. ನವಚಾರಿತ್ರಿಕವಾದಿಗಳ ಪ್ರಬಂಧಗಳು ಯಾವಾಗಲೂ ಇನ್ನೊಂದು ಪುನರ್ನಿರ್ಮಾಣವನ್ನು, ಭೂತ ಕಾಲದ ಇನ್ನೊಂದು ಪರಿವರ್ತನೆಯನ್ನು ತಾನೇ ರಚಿಸುತ್ತದೆ, ನಾಟಕ ಅಥವಾ ಕವಿತೆ ಚರ್ಚೆಯ ವಿಷಯವಾಗಿರುವಾಗಲೇ ಆಯ್ದ ದಾಖಲೆಯನ್ನು ಮುಖಾಮುಖಿಯಾಗಿಸುತ್ತದೆೆ. ಈ ಆಯ್ದ ದಾಖಲೆಗಳು ನಾಟಕಕ್ಕೆ ನಿಜವಾಗಿ 'ಸುಸಂಗತ'ವಲ್ಲದಿದ್ದರೆ ಅವನ್ನು ಬಲಹೀನಗೊಳಿಸುವ ಕುರಿತು ಆಕ್ಷೇಪ ಎತ್ತಲಾಗಿದೆ. ಇದರ ಉದ್ದೇಶ ಭೂತ ಕಾಲದಲ್ಲಿ ತನ್ನನ್ನು ಪ್ರತಿನಿಧಿಸುವುದಲ್ಲ, ಅದನ್ನು ಮರು ಏರ್ಪಾಟು ಮಾಡುವ ಮೂಲಕ ಹೊಸ ವಾಸ್ತವವನ್ನು ಮಂಡಿಸುವುದು.
ನವಚಾರಿತ್ರಿಕವಾದ ಮತ್ತು ಫೂಕೊ
ನವಚಾರಿತ್ರಿಕವಾದ ಸ್ಥಾಪಿತ ಮೌಲ್ಯಗಳ ವಿರುದ್ಧ ದೃಢ ನಿಶ್ಚಯವುಳ್ಳದ್ದು, ಯಾವಾಗಲೂ ವ್ಯಕ್ತಿಗತ ಸ್ವಾತಂತ್ರ್ಯದ ಉದಾರ ವಿಚಾರಗಳ ಪರ ಧ್ವನಿತವಾಗುವಂಥದ್ದು ಹಾಗೂ ಎಲ್ಲ ಬಗೆಯ ಭಿನ್ನತೆ ಮತ್ತು 'ತಿರುವು'ಗಳನ್ನು ಪ್ರಸಿದ್ಧ ಪಡಿಸುವಂಥದ್ದು, ಒಪ್ಪಿಕೊಳ್ಳುವಂಥದ್ದು. ಅದೇ ವೇಳೆಯಲ್ಲಿ ಏಕಕಾಲಕ್ಕೆ ದಮನಿಸುವ ಪ್ರಭುತ್ವ ಶಕ್ತಿಯ ಕಣ್ಣೆದುರು ಉಳಿದುಕೊಂಡವರಿಗೆ ಎದೆಗುಂದಿಸುವಂಥದ್ದು ಎಂದು ತೋರುತ್ತದೆ. ಆದರೂ ವ್ಯಕ್ತಿಗತ ಜೀವನದ ಅಂತರಂಗಿಕ ನೆಲೆಗಳಿಗೆಲ್ಲ ನುಸುಳಬಲ್ಲ ಹಾಗೂ ಕಳಂಕಿತವಾಗಿಸಬಲ್ಲ ಹಾಗೆ ಪ್ರಕಟವಾಗುತ್ತದೆ. ಪ್ರಭುತ್ವದ ಈ ತಿಳುವಳಿಕೆ ಸರ್ವಶಕ್ತಶಾಲಿ ಹಾಗೂ ಪೂರ್ಣ ನೋಟ ಬೀರುವ ಕಟ್ಟೆಗಳ ಹಾಗೆ. ಇದನ್ನು ಸಂರಚನೋತ್ತರ ಸಾಂಸ್ಕೃತಿಕ ಚರಿತ್ರಕಾರ ಮೈಕೆಲ್ ಫೂಕೊನಿಂದ ಪಡೆಯಲಾಗಿದೆ. ಪ್ರಭುತ್ವ - ಪೂರ್ಣ ನೋಟದ ಕಣ್ಗಾವಲು ಎಂಬುದು ಆತನ ಪ್ರಭಾವಯುತ ಪ್ರತಿಮೆ. ಪೂರ್ಣನೋಟದ ಕಟ್ಟೆ (ಪ್ಯನೊಪ್ಟಿಕಾನ್) ಎಂಬುದು ಹದಿನೆಂಟನೆಯ ಶತಮಾನದ ಪ್ರಯೋಜನವಾದಿ ಜೆರೆಮಿ ಬಾಂಥಮ್ ರೂಪಿಸಿದ ವೃತ್ತಾಕಾರ ಸೆರೆಮನೆಯ ವಿನ್ಯಾಸ. ಈ ವಿನ್ಯಾಸ ಶ್ರೇಣೀಕೃತ ಅಂತಸ್ತಿನ ಕೋಣೆಗಳನ್ನು ಒಳಗೊಂಡಿದ್ದು, ವೃತ್ತದ ಕೇಂದ್ರ ನೆಲೆಯಿಂದ ಒಬ್ಬನೇ ಕಾವಲುಗಾರ ಎಲ್ಲವನ್ನೂ ನಿಗಾ ವಹಿಸಬಲ್ಲುದಾಗಿತ್ತು. ಹೀಗಿದ್ದರೂ ಪ್ರಭುತ್ವ ತನ್ನ ಪೂರ್ಣ ನೋಟದ ಕಣ್ಗಾವಲನ್ನು ದೈಹಿಕ ಬಲ ಮತ್ತು ಹೆದರಿಸುವಿಕೆಯಿಂದ ಮಾಡದೆ 'ವ್ಯಾಖ್ಯಾನಾತ್ಮಕ ಆಚರಣೆಗಳ' ಶಕ್ತಿಯಿಂದ ನಿರ್ವಹಿಸುತ್ತದೆ. (ಫೂಕೊನ ಪಾರಿಭಾಷಿಕ ಪದ ಬಳಸಲು ಡಿಸ್ಕೋರ್ಸ್-'ವ್ಯಾಖ್ಯಾನ' ಎಂಬ ನಾಮಪದದಿಂದ ಡಿಸ್ಕೋರ್ಸ್-'ವ್ಯಾಖ್ಯಾನಾತ್ಮಕ ' ಎಂಬ ಗುಣವಾಚಕವನ್ನು ಪಡೆಯಲಾಗಿದೆ.) ಅದು ತನ್ನ ವಿಚಾರವನ್ನು ರಾಜಕಾರಣ ಎಂಬ ದೇಹದ ತುಂಬ ಸುತ್ತುತ್ತದೆ.
ವ್ಯಾಖ್ಯಾನವೆಂಬುದು ಕೇವಲ ಬರವಣಿಗೆ ಅಥವಾ ಮಾತಾಡುವ ಮಾರ್ಗವಲ್ಲವಾದರೂ ಸಮಾಜದ ಎಲ್ಲ ಜನರ ಆಲೋಚನೆಯನ್ನು ಒಳಗೊಂಡ ಸಮಸ್ತ 'ಮಾನಸಿಕ ಸ್ಥಿತಿ' ಮತ್ತು ವಿಚಾರವಾಗಿದೆ. ವ್ಯಾಖ್ಯಾನ ಏಕವ್ಯಕ್ತಿ ಮತ್ತು ಏಕಾಕೃತಿಯದಾಗಿರದೆ ಯಾವಾಗಲೂ ಬಹುರೂಪದಲ್ಲಿ ಇರುತ್ತದೆ. ಹಾಗಾಗಿ ಅಧಿಕಾರ ಸ್ವರೂಪಗಳ ಕಾರ್ಯಾಚರಣೆ ಕುಟುಂಬದಲ್ಲಿ ಹೇಗೋ ಹಾಗೆ ಸರಕಾರದ ಸ್ಥರಗಳಲ್ಲೂ ಒಂದು ಮಹತ್ವದ ಅಂಶವಾಗಿರುತ್ತದೆ. ಇದರಿಂದಾಗಿ ಅದರ ಸ್ಪರ್ಧೆ ರಾಜಕಾರಣಕ್ಕಷ್ಟೇ ಅಲ್ಲದೆ ಲೈಂಗಿಕ ರಾಜಕಾರಣದ ಬದಲಾವಣೆಯ ಹೋರಾಟವನ್ನೂ ಒಳಗೊಂಡಿರಬಹುದು. ಹಾಗೆಯೆ ಸ್ತ್ರೀವಾದಿ ವಿಮರ್ಶೆಯಲ್ಲಿ ತುಂಬ ಆಸಕ್ತವಾಗಿರುವ ವ್ಯಕ್ತಿಗತ ಪರಿಧಿ ಹಲವು ಮಾರ್ಗಗಳಲ್ಲಿ ರಾಜಕೀಯ ಕಾರ್ಯ ಸಾಧ್ಯ ಪರಿಧಿಯಾಗಿ ಬದಲಾಗುತ್ತದೆ. ಅಂದರೆ ನಾವಿಲ್ಲಿ ರಾಜಕಾರಣದ ಆಶಾವಾದದ ನೆಲೆಯನ್ನು ಕಾಣುತ್ತೇವೆ. ಮತ್ತೊಂದು ಕಡೆ ರಾಜಕೀಯ ಶಕ್ತಿ ಕಾರ್ಯ ಪ್ರವೃತ್ತವಾಗಿದ್ದಾಗ ಹಾಗೂ ಹಲವಾರು ಪರಿಧಿಗಳನ್ನು ವ್ಯಾಪಿಸುತ್ತಿರುವಾಗ, ಮೂಲಭೂತ ಬದಲಾವಣೆ ಮತ್ತು ಪರಿವರ್ತನೆಯ ಸಾಧ್ಯತೆ ತುಂಬಾ ದೂರದಲ್ಲಿರುವಂತೆ ತೋರುತ್ತದೆ.
ಸಮಗ್ರವಾಗಿ ನವಚಾರಿತ್ರಿಕವಾದ ಈ ಬಗೆಯ 'ಆಲೋಚನಾ ನಿಯಂತ್ರಣ'ವನ್ನು ಒತ್ತಿ ಹೇಳುವಂತೆ ತೋರುತ್ತದೆ. ಅಲ್ಲದೆ 'ದಾರಿ ತಪ್ಪಿದ' ಆಲೋಚನೆ ವಾಚ್ಯವಾಗಿ ಆಲೋಚಿಸಲಾಗದೆ (ಅಥವಾ ಆಲೋಚಿಸಲು ಮಾತ್ರ ಸಾಧ್ಯವಾಗಿ) ಇರುವುದು ಆಗಿರಬಹುದು ಎಂಬ ತೊಡಕಿನಿಂದ ಕೂಡಿದೆ. ಹಾಗಾಗಿ ಪ್ರಭುತ್ವ ಏಕಶಿಲ್ಪ ರಚನೆಯ ಹಾಗೆ ಕಾಣುತ್ತದೆ ಮತ್ತು ಬದಲಾವಣೆ ಬಹುಪಾಲು ಅಸಾಧ್ಯವಾಗಿ ಪರಿಣಮಿಸುತ್ತದೆ. ಪ್ರಭುತ್ವ ಶಿಕ್ಷೆ, ಸೆರೆಮನೆಗಳು, ವೈದ್ಯಕೀಯ ವೃತ್ತಿ ಹಾಗೂ ಲೈಂಗಿಕತೆ ಬಗೆಗಿನ ಶಾಸನಗಳಂಥ ನಿಭಾಯಿಸಬಲ್ಲ ಶಕ್ತಿ ನೀಡುವ ಸಂಸ್ಥೆಗಳತ್ತ ಫೂಕೊನ ಕೃತಿ ನೋಡುತ್ತದೆ. ಆಲ್ಥೂಸರ್ನಲ್ಲಿ 'ನಿಗ್ರಹಿಸುವ ಸ್ವರೂಪಗಳು' ಮತ್ತು 'ವೈಚಾರಿಕ ಸ್ವರೂಪಗಳು' ನಡುವೆ ಕಾಣುವುದಕ್ಕಿಂತ ಹೆಚ್ಚು ಬಿಗುವಿಲ್ಲದ ವೈಶಿಷ್ಟ್ಯಗಳನ್ನು ಫೂಕೊ ಹುಟ್ಟುಹಾಕುತ್ತಾನೆ. ಅದೇ ಬಗೆಯಲ್ಲಿ ಗ್ರಾಮ್ಸ್ಕಿಯ 'ಯಾಜಮಾನ್ಯತೆ' ಮತ್ತು ಫೂಕೊನ 'ವ್ಯಾಖ್ಯಾನಾತ್ಮಕ ಆಚರಣೆಗಳು' ನಡುವೆ ಸ್ಪಷ್ಟ ಸಂಬಂಧವಿದೆ. ಈ ಎಲ್ಲ ಸಂಬಂಧಗಳಿಂದಾಗಿ ಯಾರಿಂದ ಪ್ರಭುತ್ವ ಅಧಿಕಾರಹೀನಗೊಂಡಿತೋ ಅವರಿಂದಲೇ ಅಧಿಕಾರ ಮಾರ್ಗವನ್ನು ಅಂತರಂಗಿಕವನ್ನಾಗಿಸಿಕೊಂಡಿತು. ಅದರಿಂದಾಗಿ ಅದನ್ನು ಹೊರಗಿನಿಂದ ನಿರಂತರವಾಗಿ ನಿರ್ಬಂಧಿಸಲಾಗದಂತಾಯಿತು.
ನವಚಾರಿತ್ರಿಕವಾದ 'ಚಾರಿತ್ರಿಕವಾದ' ಎಂಬ ಪದವನ್ನು ಉತ್ತರಪದವಾಗಿ ಹೊಂದಿದೆ. ಆದರೂ ಅಸಾಹಿತ್ಯಿಕ ಪಠ್ಯಗಳನ್ನು ಸಾಹಿತ್ಯಿಕ ವಿಮರ್ಶೆಯ ರೀತಿಯಲ್ಲಿ ತೀವ್ರ 'ನಿಕಟ ಓದಿ'ಗೆ ಒಳಪಡಿಸುತ್ತದೆ. ಇದು ಸಾಹಿತ್ಯಿಕ ಅಧ್ಯಯನಗಳ ಸಾಮ್ರಾಜ್ಯದ ಮಹತ್ತರ ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲೇಬೇಕು. ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸುವ ಸಂಗ್ರಹ ಮಾಡುವ ಬದಲು ಅಪರೂಪಕ್ಕೊಮ್ಮೊ ತನ್ನನ್ನೆ ಇಡಿಯಾಗಿ ಒಪ್ಪಿಸಿಕೊಂಡು ಬಿಡುತ್ತದೆ. (ದಾಖಲೆಯ ಸಾಂದರ್ಭೀಕರಣ ಸಾಮಾನ್ಯವಾಗಿ ಕ್ವಚಿತ್ತಾಗಿರುತ್ತದೆ, ಹೆಚ್ಚೆಂದರೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದಕ್ಕಾಗಿ ಮಾಡುವ ಲೇಖನ ಉದ್ಯೋಗವಾಗಿರುತ್ತದೆ.) ನವಚಾರಿತ್ರಿಕವಾದದ ಅನ್ವೇಷಣೆ ಶೈಕ್ಷಣಿಕವಾಗಿ ಪ್ರತಿಯೊಂದನ್ನೂ ಒರೆಸಿ ಹಾಕಿದೆ. ಆದರೂ ನಂತರದಲ್ಲಿನ ಅದರ ಪಠ್ಯ ಪೂರ್ವಕಾಲದ ಬರವಣಿಗೆಯನ್ನು ಒಮ್ಮೆ ಗಮನಿಸಬಹುದು. ಇದರಿಂದ ಇದು 'ಹಾಳೆ ಮೇಲಿನ ಪದಗಳು' ಮಾತ್ರವಾಗಿದೆ. ಅವನ್ನು ಸಂದರ್ಭದಿಂದ ಸಡಿಲಿಸಿ ಸಾಮಗ್ರಿಯನ್ನು ಪ್ರತ್ಯೇಕಗೊಳಿಸಿದ, ಅಸಾಂದರ್ಭಿಕಗೊಳಿಸಿದ ಪದ್ಯದ ಹಾಗೆ ಅಧ್ಯಯನ ಮಾಡುವ 1920ರಲ್ಲಿ ಐ.ಎ.ರಿಚರ್ಡ್ಸ್ ವಿಮರ್ಶೆಗೆ ನೀಡಿದ ಕ್ರಮವನ್ನು ಒಳಗೊಂಡಿದೆ. ಹೀಗೆ ಕೆಲವುಸಲ ಐತಿಹಾಸಿಕ ಪಠ್ಯ ಲೈಂಗಿಕತೆಯ ನಡತೆಯಲ್ಲಾದ ಕೆಲವಂಶಗಳ ಬದಲಾವಣೆಯನ್ನು ಪ್ರತಿಪಾದಿಸುವ ಏಕಮಾತ್ರ ಸಾಕ್ಷಿಯಾಗಿ ಬಿಡುತ್ತದೆ. ಇಂಥ ಏಕಮಾತ್ರ ದಾಖಲೆಯನ್ನು ಆಧರಿಸಿದ ವಿಶ್ಲೇಷಣಾತ್ಮಕ ನಿಲುವು ಮಹತ್ವದ್ದಾಗುತ್ತದೆ. ಹಾಗಾಗಿ ಇತಿಹಾಸಕಾರರು ಮೆಚ್ಚಿದ ಅಥವಾ ನವಚಾರಿತ್ರಿಕವಾದ ಹೆಚ್ಚು ಪ್ರಾಮುಖ್ಯತೆಗೆ ನೀಡಿದ ವಿಧಾನಗಳನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇದೊಂದು ಇತಿಹಾಸ ಹೀನತೆಯ ಪರವಾಗಿ ಗಟ್ಟಿದನಿ ಎತ್ತುವ ಇತಿಹಾಸ 'ರಚನೆ'ಯ ಹಾದಿಯಾಗಿದೆ.
ನವಚಾರಿತ್ರಿಕವಾದದ ಅನುಕೂಲತೆಗಳು ಮತ್ತು ಅನಾನುಕೂಲತೆಗಳು
ಹೀಗಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ನವಚಾರಿತ್ರಿಕವಾದದ ಮನವಿ ಯಾವ ಅನುಮಾನವಿಲ್ಲದೆ ಮಹತ್ತರವಾದುದಾಗಿದೆ. ಮೊದಲನೆಯದು, ಸಂರಚನೋತ್ತರವಾದಿಗಳ ಚಿಂತನೆ ಕುರಿತು ಕಂಡುಕೊಂಡಿದ್ದಾಗಿದ್ದರೂ ಬಹಳಷ್ಟು ಭಾಗ ಶಬ್ದ ಸಂಪತ್ತು ಮತ್ತು ನಿಬಿಡ ಶೈಲಿಯಿಂದ ಕೂಡಿದ ಸಂರಚನೋತ್ತರ ಲಕ್ಷಣವನ್ನು ದೂರ ಮಾಡಿದೆ, ಹೆಚ್ಚು ಸುಗಮವಾದ ರೀತಿಯಲ್ಲಿ ಬರವಣಿಗೆ ಮಾಡಿ ತನ್ನ ಅಂಕಿಅಂಶಗಳನ್ನು ಮಂಡಿಸಿ ಮುಕ್ತಾಯ ಮಾಡುತ್ತದೆ. ಕೆಲವು ಬಾರಿ ಅಂಕಿಅಂಶಗಳ ವಿಶ್ಲೇಷಣಾ ರೀತಿಯನ್ನು ಪ್ರಶ್ನೆ ಮಾಡುವುದು ಸುಲಭವೂ ಆಗಿರುತ್ತದೆ. ಇದಕ್ಕೆ ಭಾಗಶಹ (ಫ್ರಾಯಿಡ್ ನ ಸಿದ್ಧಾಂತಗಳಲ್ಲಿ ಆಗಿರುವಂತೆ) ವ್ಯಾಖ್ಯಾನಗಳು ಪ್ರಾಯೋಗಿಕ ನೆಲೆಗಟ್ಟನ್ನು ಆಧರಿಸಿರುವುದು ಹಾಗೂ ಪರಿಶೀಲನೆಗೆ ಮುಕ್ತವಾಗಿ ದೊರಕುವಂತೆ ಮಾಡಿರುವುದು ಕಾರಣವಾಗಿರಬಹುದು. ಎರಡೆನೆಯದು, ಸಾಮಗ್ರಿ ಸ್ವತಹ ಆಕರ್ಷಕವಾಗಿದ್ದು, ಸಾಹಿತ್ಯಿಕ ಅಧ್ಯಯನದ ಸಂದರ್ಭದಲ್ಲಿ ಸಂಪೂರ್ಣವಾಗಿ ವಿಶಿಷ್ಟವಾಗಿದೆ. ಈ ಪ್ರಬಂಧಗಳು ಬೇರೆ ಯಾವುದೇ ವಿಮರ್ಶಾ ಪ್ರಸ್ತಾವದಿಂದ ರಚಿತವಾದವುಗಳಿಗಿಂತ ಭಿನ್ನ ಬಗೆಯದಾಗಿ ಕಾಣುವಂತಿವೆ, ಈ ಪ್ರಬಂಧಗಳಲ್ಲಿ ಸಾಹಿತ್ಯ ಕೃತಿಯ ಹಿಂದಿನ ಚರ್ಚೆಯನ್ನು ಉಲ್ಲೇಖಿಸದಿರುವ ಫಲವಾಗಿ ಕೂಡಲೆ ಸಾಹಿತ್ಯ ವಿದ್ಯಾರ್ಥಿಯ 'ಗೊಂದಲಗಳಿಲ್ಲದ ' 'ಕತ್ತರಿಸಿ ಹಾಕುವ ' ಭಾವನೆ ಅವಕ್ಕೆ ಗಟ್ಟಿತನ ಮತ್ತು ನಾಟಕೀಯ ಶಕ್ತಿಯನ್ನು ನೀಡುತ್ತದೆ. ಮೂರನೆಯದು, ನವಚಾರಿತ್ರಿಕವಾದಿಗಳ ಬರವಣಿಗೆಗೆ ರಾಜಕಾರಣದ ಮೊನಚು ಯಾವಾಗಲೂ ಹರಿತವಾಗಿರುತ್ತದೆ. ಆದರೆ ಅದೇ ವೇಳೆಯಲ್ಲಿ ಮಾರ್ಕ್ಸಿಸ್ಟ್ ವಿಮರ್ಶೆಯ 'ನೇರ ಸ್ವಭಾವ'ದಲ್ಲಿ ಅದು ಮೇಲಿಂದ ಮೇಲೆ ಎದುರಾದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಹೆಚ್ಚು ಬಹಿರಂಗವಾಗದ ಚರ್ಚಾಸ್ಪದ ವಿಷಯವೆಂದು ತೋರುತ್ತದೆ. ಅಲ್ಲದೆ ತನ್ನದೇ ದನಿಯುಳ್ಳ ಐತಿಹಾಸಿಕ ಸಾಕ್ಷ್ಯಾಧಾರಗಳಿಗೆ ಅವಕಾಶ ಮಾಡಿಕೊಡಲು ಹೆಚ್ಚು ಆಸಕ್ತವಾಗಿರುತ್ತದೆ.
ಸ್ವಲ್ಪ ಯೋಚಿಸಿ
ಸಾಹಿತ್ಯಿಕ ಸಾಮಾಗ್ರಿ ಮತ್ತು ಸಮಕಾಲೀನ ಸಾಹಿತ್ಯೇತರ ಪಠ್ಯಗಳನ್ನು ನವಚಾರಿತ್ರಿಕವಾದ ಮುಖಾಮುಖಿ 'ಮಾಡುತ್ತಿದೆ'. ಈ ಸೂತ್ರ ಬಳಸಿದ ಪ್ರಕಟಿತ ಪ್ರಬಂಧಗಳನ್ನು ಈಗ ತಾನೆ ಓದಿ ಅದನ್ನು ರೂಪಿಸಲು ಹೇಗೆ ತಾನೆ ಸಾಧ್ಯ? ಉದಾಹರಣೆಗೆ, ಶೇಕ್ಸ್ ಪಿಯರ್ ನ ಕಾಮಿಡಿ ಕುರಿತು ಪ್ರಬಂಧ ರಚನೆಗೆ ನವಚಾರಿತ್ರಿಕವಾದಿಗಳ ವಿಧಾನವನ್ನು ಅನುಸರಿಸಲು ಇಚ್ಛಿಸಿದಿರಿ ಎಂದು ಇಟ್ಟುಕೊಳ್ಳೋಣ. ಶೇಕ್ಸ್ ಪಿಯರ್ ನ ಕಾಮಿಡಿಗಳಿಗೆ ತಕ್ಕ ಐತಿಹಾಸಿಕ ಸಾಮಗ್ರಿ ಎಲ್ಲಿ ತಡುಕುತ್ತೀರಿ? ಸಾಮಗ್ರಿಯೋನೋ ಪತ್ತೆ ಮಾಡಿದಿರಿ. ನಂತರ ನಿಮ್ಮ ಪ್ರಬಂಧದ ಚೌಕಟ್ಟು ಏನಾಗಿರುತ್ತದೆ?
ಇದು ಒಳಗೊಂಡಿರುವ ಕಷ್ಟ ಪರಂಪರೆಯನ್ನು ಪರಿಶೀಲಿಸಲು ನಾನು ಬಯಸುವುದಿಲ್ಲ. ಆದರೆ ಇಲ್ಲೊಂದು ಸಲಹೆ ನೀಡುತ್ತೇನೆ: ಶೇಕ್ಸ್ ಪಿಯರ್ ನ ಕಾಮಿಡಿಗಳ ವಸ್ತು 'ಮನೆ'ಯಾಗಿದೆ. ಹಾಗೆಯೆ, ಲೈಂಗಿಕ ನೀತಿ, ಪ್ರೇಮದ ನಡವಳಿಕೆ, ಸ್ತ್ರೀ ಪುರುಷರ ಸಂಬಂಧಗಳು ಮತ್ತು ತಲೆಮಾರುಗಳ ಸಂಘರ್ಷಗಳಿಗೆ ಸಂಬಂಧಿಸಿದುದಾಗಿದೆ. ಹೀಗಿದ್ದರೂ ನಾವು ಸಾಮಾಜಿಕ ಮತ್ತು ಕೌಟುಂಬಿಕ ಚರಿತ್ರೆ ಕುರಿತ ಸಾಮಗ್ರಿಗಾಗಿ ಹುಡುಕಾಟ ನಡೆಸುತ್ತಿರುತ್ತೇವೆ.
ಲಾರೆನ್ಸ್ ಸ್ಟೋನ್ ನ ಜನಪ್ರಿಯ ಪುಸ್ತಕ 'ಇಂಗ್ಲೆಂಡಿನಲ್ಲಿ ಕುಟುಂಬ, ಮದುವೆ ಮತ್ತು ಕಾಮ-1500-1800' ('ದಿ ಫ್ಯಾಮಿಲಿ, ಸೆಕ್ಸ್ ಅಂಡ್ ಮ್ಯಾರೇಜ್ ಇನ್ ಇಂಗ್ಲೆಂಡ್ 1500-1800', ಪೆಂಗ್ವಿನ್ 1979) ಎಂಬ ಪುಸ್ತಕ ಇಲ್ಲಿ ಪ್ರಸ್ತುತವಾದುದು. ಈ ಕೃತಿಯಲ್ಲಿನ ಪುರುಷಶಾಹಿಯ ಮರು ಬಲಪಡಿಸುವಿಕೆ (ದಿ ರಿ ಇನ್ಫೋರ್ಸಮೆಂಟ್ ಆಫ್ ಪೆಟ್ರಿಯಾಕರ್) ಎಂಬ ಐದನೆಯ ಅಧ್ಯಾಯ ಉಪಯುಕ್ತ ಸಾಮಗ್ರಿಗಳಿಂದ ಕೂಡಿದೆ. ಗಂಡ ಮತ್ತು ಹೆಂಡತಿ (ಹಸ್ಬೆಂಡ್ ಅಂಡ್ ವೈಫ್) ಎಂಬ ಮೂರನೆಯ ಭಾಗದಲ್ಲಿ ಮಡದಿಯರ ಅಧೀನತೆ (ದಿ ಸಬಾರ್ಡಿನೇಶನ್ ಆಫ್ ವೈವ್ಸ್) ಹಾಗೂ ಮಹಿಳೆಯರ ಶಿಕ್ಷಣ (ದಿ ಎಜುಕೇಶನ್ ಆಫ್ ವುಮನ್) ಎಂಬ ಉಪಭಾಗಗಳಿವೆ. ಅಧ್ಯಾಯ ಏಳು ಮತ್ತು ಎಂಟು ಮದುವೆ ಮತ್ತು ನ್ಯಾಯಾಲಯ (ಮ್ಯಾರೇಜ್ ಅಂಡ್ ಕೋರ್ಟ್ ಶಿಪ್) ಕುರಿತಿದ್ದರೆ ಐದನೆಯ ಭಾಗ ಕಾಮ (ಸೆಕ್ಸ್)ವನ್ನು ಕುರಿತಿದೆ.
ಅಷ್ಟು ಜನಪ್ರಿಯವಲ್ಲದ ಆದರೆ ನವಚಾರಿತ್ರಿಕವಾದಿಗಳು ಬಳಸಿದ ಸಮಾನ ಅಂಕಿಅಂಶಗಳನ್ನು ಒಳಗೊಂಡ ಕೃತಿ-ಸೆಕ್ಸ್ನ್ ಮಿಡ್ಲಸೆಕ್ಸ್ : ಪಾಪ್ಯುಲರ್ ಮೋರ್ಸ್ ಇನ್ ಮಸ್ಯಾಚುಸೆಟ್ಸ್ ಕಂಟ್ರಿ, 1649-1699- ರಾಜರ್ ಥಾಮಸನ್, ಯುನಿವಸಿಟರ್ಿ ಆಫ್ ಮಸ್ಯಾಚುಸೆಟ್ಸ್ ಪ್ರೆಸ್ (1986). ಈ ಪುಸ್ತಕದ ಮೊದಲ ಭಾಗದಲ್ಲಿ ಪಡ್ಡೆ ಮೂರ್ಗಳು (ಅಡೊಲಸೆಂಟೆ ಮೂರ್ಸ್), ಎರಡನೆಯ ಭಾಗದಲ್ಲಿ ವಿವಾಹಿತ ಮೋರ್ಗಳನ್ನು (ಮ್ಯಾರಿಡ್ಸ್ ಮೋರ್ಸ್) ಕುರಿತಿವೆ.
ಈ ಬಗೆಯ ಪ್ರಕಟಿತ ಚಾರಿತ್ರಿಕ ಅಂಕಿ ಅಂಶ ಮತ್ತು ಸಾಮಾಜಿಕ ಚರಿತ್ರೆ, ಹೊಸ ಚಾರಿತ್ರಿಕ ಪ್ರಸ್ತಾವಕ್ಕೆ `ಸಹಪಠ್ಯ'ವಾಗಿ ಸುಲಭ ಆಕರಗಳನ್ನು ಒದಗಿಸುತ್ತದೆ. ವಿಧಾನದೊಂದಿಗಿನ ಸಮಸ್ಯೆಗಳನ್ನು ಉಪಮಾರ್ಗಗಳಲ್ಲಿ ಕಳೆದುಕೊಳ್ಳದೆ ಮುಂದೆ ಸಾಗಿಹೋದರೆ ಕೊನೆಯ ಪಕ್ಷ ನವಚಾರಿತ್ರಿಕವಾದದ ವಿಮರ್ಶೆಯ ಪ್ರಾಯೋಗಿಕ ನೆಲೆಯನ್ನು 'ಅಂಗೈ ಮೇಲೆ ಅನುಭವ' ಪಡೆಯಬಹುದು.
ನವಚಾರಿತ್ರಿಕವಾದಿಗಳ ಕಾರ್ಯವಿಧಾನ
1, ಅವರು ಸಾಹಿತ್ಯಿಕ ಮತ್ತು ಅಸಾಹಿತ್ಯಿಕ ಪಠ್ಯಗಳನ್ನು ಮುಖಾಮುಖಿ ಮಾಡುತ್ತಾರೆ. ಅಸಾಹಿತ್ಯಿಕ ಪಠ್ಯದ ಬೆಳಕಿನಲ್ಲಿ ಸಾಹಿತ್ಯಿಕ ಪಠ್ಯವನ್ನು ನೀಡುತ್ತಾರೆ.
2. ಈ ಮೂಲಕ ಅವರು ಅಂಗೀಕೃತ ಪಠ್ಯವನ್ನು 'ಅಪ್ರಸಿದ್ಧ'ಗೊಳಿಸುತ್ತಾರೆ. ಇದುವರೆಗಿನ ಸಾಹಿತ್ಯಿಕ ವಿದ್ವತ್ತಿನ ಸಂಚಿತ ಪ್ರಭಾವದಿಂದ ಸಾಹಿತ್ಯವನ್ನು ಬೇರೆ ಮಾಡುತ್ತಾರೆ ಹಾಗೂ ಹೊಚ್ಚ ಹೊಸದಾಗಿ ನೋಡುತ್ತಾರೆ.
3. ಅವರು (ಪಠ್ಯ ಮತ್ತು ಸಹಪಠ್ಯ ಎರಡರೊಳಗೂ) ಪ್ರಭುತ್ವ ಶಕ್ತಿ ಹಾಗೂ ಅದನ್ನು ಹೇಗೆ ನಿಭಾಯಿಸಲಾಗಿದೆ ಎಂಬ ವಿವಾದಗಳ ಕುರಿತು, ವಸಾಹತುಶಾಹಿ ಪ್ರಕ್ರಿಯೆ ಮತ್ತದರ ಸಹವತರ್ಿ 'ಮನೋವೃತ್ತಿ' ಕುರಿತು ಗಮನ ಕೇಂದ್ರೀಕರಿಸುತ್ತಾರೆ.
4. ಅವರು ಹಾಗೆ ಮಾಡುತ್ತ ಸಂರಚನೋತ್ತರವಾದ ನಿಲುವಿನ ದೃಷ್ಟಿಕೋನವನ್ನು -ವಿಶೇಷವಾಗಿ ವಾಸ್ತವದ ಪ್ರತಿಯೊಂದೂ ಮುಖ ಪಠ್ಯೀಕೃತಗೊಂಡಿದೆ ಎಂಬ ಡೆರಿಡಾನ ತಿಳುವಳಿಕೆಯನ್ನು ಮತ್ತು ಫೂಕೊನ ಪ್ರಬಲ 'ವ್ಯಾಖ್ಯಾನಾತ್ಮಕ ಆಚರಣೆಗಳು' ನಿರ್ಣಯಿಸಲ್ಪಟ್ಟ ಸಾಮಾಜಿಕ ಸಂರಚನೆಯ ವಿಚಾರವನ್ನು -ಬಳಸಿಕೊಳ್ಳುತ್ತಾರೆ.
ನವಚಾರಿತ್ರಿಕವಾದ ; ಒಂದು ಉದಾಹರಣೆ
ನವಚಾರಿತ್ರಿಕವಾದದ ಪ್ರಾಯೋಗಿಕ ಉದಾಹರಣೆಗಾಗಿ ಗ್ರೀನ್ ಬ್ಲಾಟ್ ನ ಬದಲು ಲೂಯಿಸ್ ಮಾಂಟ್ರೋಸ್ ನ ಪ್ರಬಂಧವೊಂದನ್ನ್ರು ಪರಿಶೀಲನೆಗೆ ಒಳಪಡಿಸಬಹುದು. ಆತನ ಪ್ರಬಂಧ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಅಂಡ್ ದಿ ಶೇಪಿಂಗ್ ಫ್ಯಾಂಟಸೀಸ್ ಆಫ್ ಎಲಿಜಬೆತನ್ ಕಲ್ಚರ್: ಜೆಂಡರ್, ಪವರ್, ಫಾರಂ' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಮತ್ತು ಎಲಿಜಬೆತನ್ ಸಂಸ್ಕೃತಿ ರೂಪಿತ ರಮ್ಯಾದ್ಭುತಗಳು : ಲಿಂಗ, ಅಧಿಕಾರ, ರೂಪ) ಇದು ನವಚಾರಿತ್ರಿಕವಾದದ 'ತಾಯಿ ಪತ್ರಿಕೆ'ಯಾದ ಅಮೆರಿಕೆಯ ನಿಯತಕಾಲಿಕೆ 'ರೆಪ್ರಸೆಂಟೇಶನ್ಸ್'ನಲ್ಲಿ ಮೊದಲು ಪ್ರಕಟಗೊಂಡು ವಿಲ್ಸನ್ ಮತ್ತು ಡಟ್ಟನ್ ಪ್ರಕಾಶನ ಸಂಸ್ಥೆಯಿಂದ ಮರುಮುದ್ರಣ ಕಂಡಿತು. ಮಾಂಟ್ರೋಸ್ ನ ನವಚಾರಿತ್ರಿಕವಾದ ಕುರಿತ ಪ್ರಸಿದ್ಧ ವ್ಯಾಖ್ಯೆಯೆಂದರೆ ಅದು ಪಠ್ಯದ ಚಾರಿತ್ರಿಕತೆ ಮತ್ತು ಚರಿತ್ರೆಯ ಮೂಲಪಠ್ಯವನ್ನು ಕೇಂದ್ರೀಕರಿಸಿರುತ್ತದೆ. ಪ್ರಬಂಧ ಈ ಹೇಳಿಕೆಯನ್ನು ಮೈ ತಳೆದಿರುವಂತೆ ಕಾಣುತ್ತದೆ. ಆತನ ಒಟ್ಟಾರೆ ಸಿದ್ಧಾಂತ : 'ಸಂಸ್ಕೃತಿ ಯಾವುದರಿಂದ ಹುಟ್ಟಿದೆಯೋ ಅದು ಸಂಸ್ಕೃತಿಯನ್ನು ಹುಟ್ಟಿಸುವ, ಮತ್ತು ರಮ್ಯಾದ್ಭುತಗಳು ಯಾವುದರಿಂದ ರೂಪಿತವಾಗಿದೆಯೋ ಅವು ರಮ್ಯಾದ್ಭುತವನ್ನು ರೂಪಿಸುವ ' ಆಟವಾಗಿದೆ (ಪು.130). ಹಾಗೆಯೆ ಎಲಿಜಬೆತ್(ಕನ್ನೆ) ರಾಣಿಯ ಆಚರಣೆ, ಸ್ಪೆನ್ಸರ್ನ 'ದಿ ಫೇರಿ ಕ್ಚೀನ್'ನಂಥ ಸಾಹಿತ್ಯ ಮತ್ತು ಇಡೀ ತಂಡದ ಆಸ್ಥಾನ ನೃತ್ಯ, ಮೆರವಣಿಗೆ ಇವೆರಡನ್ನೂ ಪೋಷಿಸಿವೆ ಹಾಗೂ ಅಂಥ ಸಾಹಿತ್ಯವನ್ನು ಸೃಷ್ಟಿಸಿವೆ. ಸಾಹಿತ್ಯ ಮತ್ತು ಜೀವನ ಒಂದನ್ನೊಂದು ಉದ್ದೀಪಿಸಿದೆ ಹಾಗೂ ಪರಸ್ಪರ ಪಾತ್ರ ವಹಿಸಿದೆ. ನಿಗೂಢ ಹಾಗೂ ಮಾಂತ್ರಿಕ ಶಕ್ತಿಯ ಕನ್ಯತ್ವ ಪಡೆದಿರುವ ಎಲಿಜಬೆತ್ ತನ್ನನ್ನು ರಾಣಿಯ ಹಾಗೆ ಸಾಕಾರಗೊಳಿಸಬಲ್ಲಳು. ಏಕೆಂದರೆ, ಇಂಥ ಪ್ರತಿಮೆಗಳನ್ನು ಆಸ್ಥಾನದ ಮೊಗವಾಡ ನಾಟಕಗಳು, ವಿನೋದ ನಾಟಕಗಳು ಮತ್ತು ಜಾನಪದ ಮಹಾಕಾವ್ಯಗಳಲ್ಲಿ ಚಾಲ್ತಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಎಲಿಜಬೆತಳ ಚಿತ್ತವೂ ಅಂಥ ಕೃತಿ ಮತ್ತು ಪ್ರತಿಮೆಗಳ ಉತ್ಪನ್ನ ಮತ್ತು ಉತ್ತೇಜನವನ್ನು ಉದ್ದೀಪಿಸುತ್ತದೆ. ಇದರಿಂದಾಗಿ ಈ ಅರ್ಥದಲ್ಲಿ ಚರಿತ್ರೆಯನ್ನು ಮೂಲಪಾಠವನ್ನಾಗಿಯೂ ಪಠ್ಯಗಳನ್ನು ಚಾರಿತ್ರಿಕವನ್ನಾಗಿಯೂ ಮಾಡಲಾಯಿತು. ಚಲನಚಿತ್ರದ ಗಂಡಸುತನ ಮತ್ತು ಹೆಣ್ಣುತನದ ಪ್ರತಿಮೆಗಳು ನಮ್ಮ ಜೀವನವನ್ನು ವ್ಯಾಪಿಸಿರುವುದು ಹಾಗೂ ನಮ್ಮನ್ನು ಪ್ರತಿನಿಧಿಸುವ ಮಾರ್ಗವನ್ನು ನಮಗೆ ನೀಡಿರುವುದು ಒಂದು ಸರಳ ಆಧುನಿಕ ಪರ್ಯಾಯವಾಗಿದೆ. ಅದು ನಮಗೆ 'ಪಾತ್ರ ಮಾದರಿ'ಗಳನ್ನು ನೀಡುತ್ತದೆ ಮತ್ತು ಅದರೊಳಗೆ ನಾವು ಬಂದಿಯಾಗಿ ಬಿಡುತ್ತೇವೆ. ಹಾಗಾಗಿ ವಾಸ್ತವ ಜೀವನ ಜೀವನದ ಸಿನಿಮೀಯ ಪ್ರಾತಿನಿಧ್ಯವನ್ನು ಅಣಕಿಸುತ್ತದೆ.
ಮಾಂಟ್ರೋಸ್ನ ಪ್ರಬಂಧ ಕೂಡ ನವಚಾರಿತ್ರಿಕವಾದದ ಅತಿ ಉತ್ತಮ ವಾದವನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿ ಮನೋವಿಶ್ಲೇಷಣೆಯನ್ನು ವಿಶೇಷವಾಗಿ ಫ್ರಾಯಿಡ್ ನ ಕನಸಿನ ವಿಶ್ಲೇಷಣೆ ಮತ್ತು ಸ್ತ್ರೀವಾದವನ್ನು ಚಿತ್ರಿಸುತ್ತದೆ. ಅದು ಸೈಮನ್ ಫೋರ್ಮನ್ನ ಕನಸಿನ ವಿವರಗಳೊಂದಿಗೆ ಆರಂಭಗೊಳ್ಳುತ್ತದೆ. ಈಗಾಗಲೇ ಹೇಳಿರುವಂತೆ, ಫೋರ್ಮನ್ ರಾಣಿಯೊಂದಿಗಿನ ಶೃಂಗಾರ ಸಮಾಗಮವನ್ನು, ನಂತರ ಹಿರಿಯ ಹೆಂಗಸರೊಂದಿಗಿನ ಸಂಬಂಧವನ್ನು ವಿವರಿಸುತ್ತಾನೆ. ರಾಣಿಗಾಗಿ 'ಕಾಯುವುದು' (ಕಾಯುತ್ತ ಕುಳಿತುಕೊಳ್ಳುವುದು) ಹಾಗೂ ಆಕೆಗಾಗಿ 'ಕಾಯುವುದು' (ಉದ್ವಿಗ್ನಗೊಳ್ಳುವುದು) ಎಂಬ ಶ್ಲೇಷೆಯಾಗಿ ಕನಸು ಬದಲಾಗುತ್ತದೆ. ಆಕೆಯ ಉಡುಪು ಕೆಸರಿನಲ್ಲಿ ಜೋತು ಬಿದ್ದಿದೆ. ಇದಕ್ಕೆ ಕಾರಣವಾದ ಆಕೆಯ ಉದರವನ್ನು ಎತ್ತಿ ಕಟ್ಟುವ ಮೂಲಕ ಅವನು ಸಮಸ್ಯೆಗೆ ಪರಿಹಾರ ನೀಡುತ್ತಾನೆ (ಅಂದರೆ ಕಾಯುವುದು ನಿನಗಾಗಿ ಹೊರತು ಕಾಯುವುದು ನಿನ್ನಿಂದಾಗಿ ಅಲ್ಲ). ಕನಸಿನಲ್ಲಿ ಫೋರ್ಮನ್ ನು 'ಎತ್ತರದ, ಕೆಂಪುಗಡ್ಡದ ನೇಕಾರ'ನ ಪೀಡನೆಗೊಳಗಾಗಿದ್ದ ರಾಣಿಯನ್ನು ಆಗ ತಾನೇ ಕಾಪಾಡಿಕೊಳ್ಳುತ್ತಾನೆ. ಮಾಂಟ್ರೋಸ್ ಇದನ್ನು ಎಡಿಪಸ್ ಕಾಂಪ್ಲೆಕ್ಸ್ಗೆ ಸಂಬಂಧಿಸಿದ ತ್ರಿಕೋನ ಸಮಸ್ಯೆಯ ಹಾಗೆ ನಿರೂಪಿಸುತ್ತಾನೆ. ದೇಶದ ಮಾತೆಯ ಹಾಗೆ ತನ್ನನ್ನು ಬಿಂಬಿಸಿಕೊಂಡಿರುವ ರಾಣಿಯ ಯೋಜನೆಗೆ ಇದನ್ನು ಸಂಬಂಧ ಕಲ್ಪಿಸುತ್ತಾನೆ. ಆದರೆ ಆಕೆ ಮುಕ್ತ ವಿಲಾಸಿನಿ ಹಾಗೂ ಉದ್ರೇಕಕಾರಿ ಕನ್ನೆಯ ಹಾಗೆ. ಮಾಂಟ್ರೋಸ್ ಆಕೆಯ ಉಡುಪು ವಿನ್ಯಾಸದ ಅತಿರೇಕವನ್ನು ನಿರೂಪಿಸಲು ಫ್ರೆಂಚ್ ರಾಯಭಾರಿಯ ವಿವರಗಳನ್ನು ಉದ್ಧರಿಸುತ್ತಾನೆ (ಅವಳು ತನ್ನ ಉಡುಪಿನ ಮುಂಭಾಗ ತೆರೆದಿಟ್ಟಂತೆ ಧರಿಸಿದ್ದಳು. ಇದರಿಂದ ಅವಳ ಅಂತರಂಗವನ್ನು ಯಾರೂ ತಿಳಿಯಬಲ್ಲವರಾಗಿದ್ದರು. ಪು.111). ಆನಂತರ ಅವನು ಈ ಎಲ್ಲವನ್ನೂ -ಅಧಿಕಾರವೆಲ್ಲ ಪುರುಷತ್ವದಲ್ಲಿ ಉಳಿದುಬಿಟ್ಟಿರುವ, ಹೆಣ್ಣು ಎಂದಿಗೂ ಅಧಿಕಾರ ಚಲಾಯಿಸದಿದ್ದರೂ ತನಗೆ ಸಂಬಂಧಿಸಿದ ಸ್ತ್ರೀ-ಪುರುಷರನ್ನೊಳಗೊಂಡು ಎಲ್ಲ ವಿಷಯಗಳ ಮೇಲೆ ಹಾಗೂ ತನ್ನ ಪುರುಷ ಆಸ್ಥಾನಿಕರ ಜೀವನೋಪಾಯವನ್ನು ನಿಲ್ಲಿಸುವ ಅಥವಾ ಮುಂದುವರೆಸುವ -ಜೀವನದ ಪರಮಾಧಿಕಾರ ಹೊಂದಿರುವ ಸುವ್ಯವಸ್ಥಿತ ಪುರುಷ ಪ್ರಧಾನ ವ್ಯವಸ್ಥೆಯ ವಿಚಿತ್ರ ಪರಿಸ್ಥಿತಿ ಹುಟ್ಟು ಹಾಕಿರುವ ಬಿಕ್ಕಿಟ್ಟಿಗೆ ಸಂಬಂಧ ಕಲ್ಪಿಸುತ್ತಾನೆ. ಶೇಕ್ಸ್ಪಿಯರ್ನ ನಾಟಕಗಳಲ್ಲಿ ರಾಣಿ 'ಯಜಮಾನಿಕೆ' ನಡೆಸುವ ಹಾಗೂ ಆ ಮೂಲಕ ಸ್ತ್ರೀಯಾಗಿದ್ದ ಹಲವಾರು ನಿದರ್ಶನಗಳು ಇವೆ. ಅಮೆಜೋನಿಯನ್ ರಾಣಿ ಹಿಪ್ಪೊಲೈಟಳು ಥೆಸಿಯಸ್ನಿಂದ ಸೋಲು ಅನುಭವಿಸುತ್ತಾಳೆ. ನಂತರ ಅವನಿಗೆ ತನ್ನನ್ನು ಒಪ್ಪಿಸಿಕೊಂಡು ಮದುವೆಯಾಗುತ್ತಾಳೆ. ಅತಿಸುಂದರಿಯರ ರಾಣಿಯಾದ ಟೈಟಾನಿಯಾ ತನ್ನ ಬದಲಾದ ಹುಡುಗನ ಪ್ರೀತಿ ವಿಷಯದಲ್ಲಿ ತನ್ನ ಗಂಡ ಒಬೆರಾನ್ನನ್ನು ದೂಷಿತನನ್ನಾಗಿ ಮಾಡುತ್ತಾಳೆ. ಇದರಿಂದಾಗಿ ಆಕೆ ಅವನಿಂದ ಅಪಮಾನಿತಳಾಗುವಲ್ಲಿ ಯಕ್ಷ ಒಂದು ಸಲ ಮಾಟಮಂತ್ರ ನಡೆಸುತ್ತಾನೆ. ಇದರ ಪರಿಣಾಮವಾಗಿ ನಿದ್ದೆಯಿಂದ ಆಕೆ ಎಚ್ಚರಗೊಂಡಾಗ ಮೊದಲು ಕಂಡ ವ್ಯಕ್ತಿಯನ್ನು ಪ್ರೇಮಿಸುತ್ತಾಳೆ. ಇಡೀ ನಾಟಕ ಹೆಣ್ಣುಮಕ್ಕಳ ಮೇಲಿನ ತಂದೆಯರ ಹಕ್ಕುಗಳು, ಹೆಂಡತಿಯರ ಮೇಲಿನ ಗಂಡಂದಿರ ಹಕ್ಕುಗಳು ಹಾಗೂ ಪುರುಷರ ಪೂರ್ವಭಾವಿ ಬಯಕೆಗಳಿಗೆ ಸ್ತ್ರೀಯರು ಈಡಾಗುವುದೇ ತುಂಬಿಹೋಗಿದೆ. ನಾಟಕ 'ಹರ್ಷ'ದಿಂದ ಕೊನೆಯಾಗುವುದು ಪುರುಷ ಪ್ರಾಧಾನ್ಯತೆಯ ಬಲಪಡಿಸುವಿಕೆಯನ್ನು ಅವಲಂಬಿಸಿದೆ.
ಎ ಮಿಡ್ಸಮ್ಮರ್ ನೈಟ್ಸ್ಡ್ರೀಮ್ನ ಸಂಭ್ರಮದ ಮುಕ್ತಾಯ; ಅದರ ರಮ್ಯ ಮನೋಭಾವದ ಆಚರಣೆ ಮತ್ತು ಪ್ರಜನನ ಶಕ್ತಿಯ ಲೈಂಗಿಕ ಮಿಲನ- ಇವು ಜೀವ ವಿರೋಧಿ ಯುದ್ಧ ಕಲಿಗಳು, ತಾಯಂದಿರ ಯಜಮಾನಿಕೆ, ಸ್ವಚ್ಛಂಧ ಸ್ವಭಾವದ ಹೆಂಡತಿಯರಲ್ಲಿರುವ ಪ್ರಕಟಿತ ಸ್ತ್ರೀ ಸ್ವಾಭಿಮಾನ ಮತ್ತು ಚೈತನ್ಯ, ಹಾಗೂ ಸಇಚ್ಛೆಯ ಹೆಣ್ಣುಮಕ್ಕಳು ಗಂಡಂದಿರ ಮತ್ತು ಯಜಮಾನರ ಹಿಡಿತಕ್ಕೊಳಪಡುವ ಪ್ರಕ್ರಿಯೆಯ ಯಶಸ್ಸನ್ನು ಅವಲಂಬಿಸಿದೆ (ಪು.120).
ಇದರಿಂದ ನಾಟಕ ನಂಬಿಕೆ ದ್ರೋಹವನ್ನು ಧ್ವನಿಸುತ್ತಿರುವ ಹಾಗೆ ಕಾಣಬಹುದಾಗಿದೆ ಎಂದು ಸೂಚಿಸಲಾಗಿದೆ. ಆದ್ದರಿಂದ
ಎಲಿಜಬೆತ್(ಕನ್ನೆ) ರಾಣಿ ತನ್ನ ಸ್ವಂತ ವಿಷಯದಲ್ಲಿ ಕನ್ಯಾಮಾತೆಯಾಗಿ ತೋರಿಸಿಕೊಂಡಾಗ ಗಂಡಸಿನ ಪ್ರಜನನ ಶಕ್ತಿ. ಸ್ವಯಂ ಜನನ ವಿಷಯ ಹಾಗೂ ಹೆಂಗಸರ ಪ್ರಭುತ್ವ ರಾಜದ್ರೋಹದ ಅಸ್ತ್ರವಾಗುತ್ತದೆ. ವೈಭವೋಪೇತ ರಾಜಾಸ್ಥಾನದಲ್ಲಿ ರಾಣಿ ಯಾವಾಗಲೂ ಆಕರ್ಷಣೆಯ ಕೇಂದ್ರ. ರಾಣಿಯ ಕನ್ಯತ್ವ ಮಾಂತ್ರಿಕವಾದ ಪ್ರಬಲ ಸ್ವತಂತ್ರ ಶಕ್ತಿ. ಹಾಗಿದ್ದರೂ ಎ ಮಿಡ್ಸಮ್ಮರ್ ನೈಟ್ಸ್ಡ್ರೀಮ್ನಲ್ಲಿ ಅಂಥ ಮಾಂತ್ರಿಕ ಶಕ್ತಿಗಳನ್ನು ರಾಜನಿಗೆ ಆರೋಪಿಸಲಾಗಿದೆ (ಪು.127).
ಇದರಿಂದ 'ಶೇಕ್ಸ್ ಪಿಯರ್ ನ ಸುಖಾಂತ ನಾಟಕ ರಾಜಪ್ರಭುತ್ವಕ್ಕೆ ಸಲ್ಲಿಸುವ ಮೇಲುತೋರಿಕೆಯ ಗೌರವಾದರವನ್ನು ಸಾಂಕೇತಿಕವಾಗಿ ತಟಸ್ಥಗೊಳಿಸುತ್ತದೆ' (ಪು.127). ಎಲಿಜಬೆತ್ಗೂ ಉಳಿದ ಹೆಂಗಸರಿಗೂ ಇರುವ ವ್ಯತ್ಯಾಸವನ್ನು ಸತತವಾಗಿ ಒತ್ತಿ ಹೇಳುವ ಮೂಲಕ ಪ್ರಭುಶಕ್ತಿಯ ಮೇಲುತುದಿಯಲ್ಲಿ ಹೆಣ್ಣೊಂದು ಉಪಸ್ಥಿತಳಿದ್ದರೂ ಪುರುಷ ಪ್ರಾಧಾನ್ಯವನ್ನು ಆಚರಣೆಯಲ್ಲಿ ಉಳಿಸಿಕೊಂಡು ಬರಲಾಗಿದ್ದು, ಇದು ಇಂದಿಗೂ ಜನಪ್ರಿಯ ತಂತ್ರವಾಗಿದೆ. ಸಮಾಜದಲ್ಲಿ ಸ್ತ್ರೀಯರ ಪಾತ್ರ ಕುರಿತು ತನ್ನ ವಿಚಾರಗಳನ್ನು ಪರಿಷ್ಕರಿಸಿದ ಟೊರಿಪಾರ್ಟಿ, ಮಹಿಳಾ ಮುಂದಾಳುಗಳನ್ನು ಹೊಂದಿದ್ದರೂ ಅವರಿಗೆ ನಾಯಕತ್ವ ನೀಡಲಿಲ್ಲ. ಇದಕ್ಕೆ ವಿರುದ್ಧವಾಗಿ 'ಉಕ್ಕಿನ ಮಹಿಳೆ'ಯ ಆಳ್ವಿಕೆಯಡಿ (ಈ ಸಂದರ್ಭದಲ್ಲಿನ ಮಾತಿನ ರೀತಿ ಆಸಕ್ತಿದಾಯಕ) ಪ್ರತಿಗಾಮಿ ವಿಚಾರಗಳನ್ನು ಗಟ್ಟಿಗೊಳಿಸಿತು. ಹಾಗೆ 'ಎಲಿಜಬೆತ್ ಆಳ್ವಿಕೆಗೆ ತನ್ನ ಸಂಸ್ಕೃತಿಯ ಪುರುಷಾಳ್ವಿಕೆ ನಾಶ ಮಾಡುವ ಉದ್ದೇಶವಿರಲಿಲ್ಲ. ಉಳಿದ ಹೆಂಗಸರೊಂದಿಗಿನ ಆಕೆಯ ವ್ಯತ್ಯಾಸಗಳ ಮೇಲೆ ಬಿದ್ದ ಒತ್ತು ಇದನ್ನು ಬಲಪಡಿಸಲು ನೆರವಾಯಿತು' (ಪು.124). ಆಸ್ಥಾನಿಕರು ಮತ್ತು ಹೊಗಳುಭಟರು ಜೊತೆಗೂಡಿ ಆಕೆಯನ್ನು ಕುರಿತು 'ಕನ್ನೆ, ಗೃಹಿಣಿ, ಮಾತೆ' ಎಂದು ನಿರಂತರ ಘೋಷಣೆ ಹಾಕಿದರೂ ನಂತರ ಆಕೆ ನಿಜವಾದ ಹೆಣ್ಣಾಗದೆ, ಧಾರ್ಮಿಕವಾಗಿ ನಿಗೂಢಳಾಗಿ ಬಿಡುತ್ತಾಳೆ. ಇಡೀ ಪ್ರಬಂಧ ನಿಷ್ಟೂರ ಪುರುಷ ಪ್ರಧಾನ ಸಮಾಜ ರಚನೆ ಮತ್ತು ಸ್ತ್ರೀ ಸಾಮ್ರಾಜ್ಯ ಜೊತೆಯಲ್ಲಿರುವುದನ್ನು ಹೆಸರಿಸುವಲ್ಲಿ ಮುಂದೆ ಬಂದ ಪುರುಷ ಪ್ರಯತ್ನದ ಆಟದ ವಿವರಗಳೊಂದಿಗೆ ಹೆಣೆಯುತ್ತದೆ. ಪುರುಷ ಆಸ್ಥಾನಿಕರು ಒಂದು ಬಗೆಯಲ್ಲಿ 'ಎಲಿಜಬೆತ್(ಕನ್ಯಾ) ರಾಣಿ'ಯ ಬ್ರಹ್ಮಚರ್ಯ ಸೇವಕರಾಗಿದ್ದು 'ನಿರ್ವೀರ್ಯಗೊಳಿಸುವಿಕೆ'ಯಲ್ಲಿ ಒಳಗಾಗಿದ್ದಿರಬಹುದಾಗಿದೆ. ಆಕೆಯಿಂದ ಅವರು ತಮ್ಮ ಏಳಿಗೆ ಬಯಸಿದವರಾಗಿದ್ದು, ದೇಶಮಾತೆಯ ಮೆಚ್ಚುಗೆ ಗಳಿಸಲು ಬಯಸುತ್ತಿರುವ ಮಕ್ಕಳ ಹಾಗೆ ತೋರುತ್ತಾರೆ (ರಾಲೆ ಮತ್ತು ಗ್ರೆವಿಲ್ಲೆ ಈ ಉಪಮೆಯನ್ನು ಅಭಿನಯಿಸಲಾಗದೆ ಹೋದ, ಮಿತಿ ಮೀರಿದ ಹಾಗೂ ಹೆಚ್ಚು ಲಂಬಿಸಿದ ಮನರಂಜನೆಯೆಂದು ಮಾಂಟ್ರೋಸ್ ವಿವರಿಸುತ್ತಾನೆ). ಪ್ರಾಯೋಗಿಕವಾಗಿ ಏನು ಹೇಳಲಾಗಿದೆಯೋ ಈ ಎಲ್ಲವನ್ನು ಅದು ಪಠ್ಯದ ಚಾರಿತ್ರಿಕತೆ ಮತ್ತು ಚರಿತ್ರೆಯ ಮೂಲ ಪಾಠದ ಮೇಲೆ ಒತ್ತು ಹಾಕಿ ಪ್ರದಶರ್ಿಸುತ್ತದೆ.
ಸಾಂಸ್ಕೃತಿಕ ಉಪಭೋಗವಾದ
ಬ್ರಿಟಿಶ್ ವಿಮರ್ಶಕ ಗ್ರಾಹಂ ಹೊಲ್ಡರ್ನೆಸ್ ಸಾಂಸ್ಕೃತಿಕ ಉಪಭೋಗವಾದವನ್ನು 'ಇತಿಹಾಸ ಲೇಖನ ರಾಜಕೀಯಗೊಳಿಸಿದ ರೂಪ'ವೆಂದು ವಿವರಿಸುತ್ತಾನೆ. ಇದನ್ನು (ಸಾಹಿತ್ಯಿಕ ಪಠ್ಯ ಒಳಗೊಂಡ) ಐತಿಹಾಸಿಕ ಸಾಮಗ್ರಿಯ ಅಧ್ಯಯನವೆಂದು ರಾಜಕೀಯ ಚೌಕಟ್ಟಿನಲ್ಲಿ ಕೂಡ ವಿವರಿಸಲು ಸಾಧ್ಯ. ವರ್ತಮಾನವನ್ನು ಒಳಗೊಂಡ ಈ ಚೌಕಟ್ಟು ರೂಪ ತಳೆಯಲು ಸಾಹಿತ್ಯಿಕ ಪಠ್ಯಗಳು ಹಲವು ರೀತಿಯಲ್ಲಿ ನೆರವಾಗಿವೆ. ಅತ್ಯುತ್ತಮ ಸಾಂಸ್ಕೃತಿಕ ಉಪಭೋಗವಾದಿಗಳೆಂದು ಹೆಸರು ಪಡೆದ ಜೋನಾಥನ್ ಡೋಲಿಮೋರ್ ಮತ್ತು ಅಲನ್ ಸಿನ್ ಫಿಲ್ಡ್ ಎಂಬುವರು ತಮ್ಮ ಸಂಪಾದಿತ ಪ್ರಬಂಧ ಸಂಕಲನ ಕೃತಿಗೆ ಉಪಶೀರ್ಷಿಕೆಯಾಗಿ `ಪೊಲಿಟಿಕಲ್ ಶೇಕ್ಸ್ ಪಿಯರ್' ಎಂದಿಡುವ ಮೂಲಕ ಸಾಂಸ್ಕೃತಿಕ ಉಪಭೋಗವಾದ ಎಂಬ ಪದವನ್ನು 1985ರಲ್ಲಿ ಚಲಾವಣೆಗೆ ತಂದರು. ಅವರು ಈ ಪದವನ್ನು ತಮ್ಮ ಮುನ್ನುಡಿಯಲ್ಲಿ ನಾಲ್ಕು ಗುಣ ಲಕ್ಷಣಗಳ್ಳುಳ್ಳ ವಿಮರ್ಶಾತ್ಮಕ ವಿಧಾನವೊಂದಕ್ಕೆ ಹೆಸರಿಡುವ ಹಾಗೆ ವ್ಯಾಖ್ಯಾನಿಸಿದ್ದಾರೆ. ಅದು ಒಳಗೊಂಡ ಅಂಶಗಳು ಹೀಗಿವೆ:
1. ಐತಿಹಾಸಿಕ ಸಂದರ್ಭ
2. ಸೈದ್ಧಾಂತಿಕ ಸಂದರ್ಭ
3. ರಾಜಕೀಯ ಬದ್ಧತೆ
4. ಪಠ್ಯದ ಬಿಚ್ಚುನೋಟ
ಇವಲ್ಲಿ ಪ್ರತಿಯೊಂದಕ್ಕೂ ಸಂಕ್ಷಿಪ್ತ ಟಿಪ್ಪಣಿ ಮಾಡಬಹುದು. ಮೊದಲನೆಯದು 'ಐತಿಹಾಸಿಕ ಸಂದರ್ಭ' ಕುರಿತ ಒತ್ತು 'ಸಾಹಿತ್ಯಿಕ ಪಠ್ಯಕ್ಕೆ ಪರಂಪರಾಗತವಾಗಿ ಮಾನ್ಯವಾಗಿರುವ ಅತೀತತೆಯ ಮಹತ್ವವನ್ನು ನಾಶ ಮಾಡುತ್ತದೆ. ಇಲ್ಲಿ 'ಅತೀತ' ಪದದ ಅರ್ಥವನ್ನು 'ಕಾಲಾತೀತ"ವೆಂದಿರಿಸಿಕೊಂಡಿದೆ. ಸ್ವಂತ ನಿಲುವುಗಳನ್ನು ತೆಗೆದುಕೊಂಡಾಗ ಸ್ಪಷ್ಟ ಆಕ್ಷೇಪಣೆಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಇಂದು ಕೂಡ ನಾವು ಶೇಕ್ಸ್ಪಿಯರ್ನನ್ನು ಓದುತ್ತಿದ್ದರೆ, ಅಧ್ಯಯನ ಮಾಡುತ್ತಿದ್ದರೆ ಸರಳವಾಗಿ ಅವನ ಕೃತಿಗಳು 'ಕಾಲಾತೀತ'ವೆಂಬುದನ್ನು ಸಾಬೀತು ಪಡಿಸಿದಂತೆಯೇ ಆಗುತ್ತದೆ. ಅವು ರಚನೆಗೊಂಡ ಕಾಲದ ಐತಿಹಾಸಿಕ ಸಂಗತಿಗಳ ಮಿತಿಗೆ ಒಳಪಟ್ಟಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಇದು ಕೇವಲ ಗಾತ್ರದ ವಿಷಯ. ಸಾಂಸ್ಕೃತಿಕ ಉಪಭೋಗದ ಈ ಅಂಶದ ಮುಖ್ಯ ಉದ್ದೇಶವೆಂದರೆ ಸಾಹಿತ್ಯ ಪಠ್ಯಕ್ಕೆ ಈ ಹಿಂದಿನ ಅಧ್ಯಯನಗಳಲ್ಲಿ ಕಡೆಗಣಿಸಿದ್ದ 'ತನ್ನ ಇತಿಹಾಸಗಳನ್ನು ಮರಳಿ ಪಡೆಯುವ ಅವಕಾಶ ದೊರಕಿಸಿಕೊಡುವುದು. ನಾಟಕಗಳಿಗೆ ಸಂಬಂಧಿಸಿದಂತೆ ಇಂಥ ವಿಷಯಗಳಲ್ಲಿ ಇತಿಹಾಸ ಮರಳಿ ಪಡೆದ ರೀತಿ 'ಗ್ರಾಮೀಣ ಜನರ ತುಳಿತ ಮತ್ತು ರಕ್ಷಣೆಗಳು, ಪ್ರಭುತ್ವ ಶಕ್ತಿ ಹಾಗೂ ಅದಕ್ಕೆ ಅಡೆತಡೆಮಾಟಮಂತ್ರ, ಸ್ವೇಚ್ಛಾ ವಿಹಾರೋತ್ಸವ ಒಳಗೊಂಡಿರುವಿಕೆ ಮತ್ತು ಸವಾಲು' (ಡೋಲಿಮೋರ್ ಮತ್ತು ಸಿನ್ಫೀಲ್ಡ್, ಪು.3)ಗಳ ಹಾಗೆ ಒಳಪಡುತ್ತದೆ. ಎರಡನೆಯದು, ಸೈದ್ಧಾಂತಿಕ ವಿಧಾನದ ಮೇಲಿನ ಒತ್ತು 1970ರಿಂದ ಪ್ರಮುಖವಾಗಿರುವ ಸಂರಚನಾವಾದ, ಸಂರಚನೋತ್ತರವಾದ ಹಾಗೂ ಇತರ ಪ್ರಸ್ತಾವಗಳ ಪಾಠ ಸ್ವೀಕರಿಸಿದ ಹಾಗೂ ಉದಾರ ಮಾನವತಾವಾದದಿಂದ ಬಿಡುಗಡೆ ಹೊಂದಿದ ಗುರುತಾಗಿದೆ. ಮೂರನೆಯದು, ರಾಜಕೀಯ ಬದ್ಧತೆಯ ಒತ್ತು ಮಾಕ್ಸರ್್ವಾದಿ ಹಾಗೂ ಸ್ತ್ರೀವಾದಿ ದೃಷ್ಟಿಕೋನಗಳ ಪ್ರಭಾವ ಹಾಗೂ ಇದುವರೆಗೂ ಶೇಕ್ಸ್ಪಿಯರ್ ವಿಮಶರ್ೆಯಲ್ಲಿ ಪ್ರಧಾನವಾಗಿದ್ದ ಸಂಪ್ರದಾಯವಾದಿ ಕ್ರಿಶ್ಚಿಯನ್ ಚೌಕಟ್ಟಿನಿಂದ ಹೊರಬಂದ ಸೂಚನೆಯಾಗಿದೆ. ಕೊನೆಯದು, ಪಠ್ಯದ ಬಿಚ್ಚುನೋಟದ ಮೇಲಿನ ಒತ್ತು ಎಲ್ಲಿಯೂ ಕಡೆಗಣಿಸಲಾಗದ ವಿಮರ್ಶೆಯ ಪಾರಂಪರಿಕ ಪ್ರಸ್ತಾವನೆಗಳು ನೆಲೆಗೊಳ್ಳುವಂತೆ ಮಾಡಿದೆ. ಇದು ಕಟ್ಟುವ ಬದ್ಧತೆಯನ್ನಷ್ಟೆ ಹೊಂದಿರದೆ, ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಪ್ರಮುಖ ಪ್ರತಿಮೆಗಳು, ಶೈಕ್ಷಣಿಕ ವಲಯದ ವೃತ್ತಿ ಪರ ಹಾಗೂ ಸತತ ಸಮೂಹದ ಗಮನ ಸೆಳೆದಿರುವ, ಮುಖ್ಯವಾಗಿ ಅಂಗೀಕೃತ ಪಠ್ಯಗಳ ಮೇಲೆ ಪ್ರಯೋಗಿಸುವುದಾಗಿದೆ.
'ಸಾಂಸ್ಕೃತಿಕ ಉಪಭೋಗ' ಎಂಬ ಪರಿಭಾಷೆಯಲ್ಲಿರುವ ಎರಡು ಪದಗಳನ್ನು ಹೆಚ್ಚು ಸ್ಪಷ್ಟ ಮಾಡಲಾಗಿದೆ. 'ಸಂಸ್ಕೃತಿ' (ಟಿ.ವಿ., ಜನಪ್ರಿಯ ಸಂಗೀತ, ಮತ್ತು ಕಾದಂಬರಿಯಂಥ) ಸಂಸ್ಕೃತಿಯ ಎಲ್ಲ ರೂಪಗಳನ್ನು ಒಳಗೊಂಡಿದೆ. ಅಂದರೆ ಶೇಕ್ಸ್ಪಿಯರ್ನ ನಾಟಕದ ಹಾಗೆ ಈ ಪ್ರಸ್ಥಾವನೆ 'ಉನ್ನತ' ಸಾಂಸ್ಕೃತಿಕ ರೂಪಗಳಿಗೆ ಸೀಮಿತವಾಗುವುದಿಲ್ಲ. ಬದಲಿಗೆ 'ಉಪಭೋಗವಾದ' 'ಆದರ್ಶವಾದ'ದ ವೈರುಧ್ಯವನ್ನು ಸೂಚಿಸುತ್ತದೆ. ಉನ್ನತ ಸಂಸ್ಕೃತಿ ಪ್ರತಿಭಾವಂತರ ವ್ಯಕ್ತಿಗತ ಮನಸ್ಸಿನ ಮುಕ್ತ ಮತ್ತು ಸ್ವತಂತ್ರ ಕ್ರೀಡಾ ಮನೋಭಾವವನ್ನು ಪ್ರತಿನಿಧಿಸುತ್ತದೆ ಎಂಬುದು ಆದರ್ಶವಾದಿಯ ನಂಬುಗೆಯಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ 'ಉಪಭೋಗವಾದ'ದ ನಂಬುಗೆಯೆಂದರೆ 'ಸಂಸ್ಕೃತಿ ಉನ್ನತ ಸಂಬಂಧಗಳನ್ನು ಹಾಗೂ ಭೌತಿಕ ಶಕ್ತಿಗಳನ್ನು ಮೀರಲು' ಸಾಧ್ಯವಿಲ್ಲ. 'ಸಂಸ್ಕೃತಿಯೆಂಬುದು ಕೇವಲ ಆಥರ್ಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಸರಳವಾಗಿ ಬಿಂಬಿಸುವುದಿಲ್ಲ. ಅದು ಸ್ವತಂತ್ರವೂ ಇರಲಾಗುವುದಿಲ್ಲ'. ಉಪಭೋಗವಾದ ಕುರಿತ ಈ ವ್ಯಾಖ್ಯಾನಗಳು ಮಾಕ್ಸರ್್ವಾದಿ ವಿಮಶರ್ೆಯ ಪ್ರಮಾಣಭೂತ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಅದು ಸಾಂಸ್ಕೃತಿಕ ಉಪಭೋಗವಾದ ಹಾಗೂ 'ನೇರ' ಮಾಕ್ಸರ್್ವಾದಿ ವಿಮರ್ಶೆ ನಡುವಿನ ವ್ಯತ್ಯಾಸಗಳನ್ನು ಬಳಸಿಕೊಳ್ಳಲು ಕಷ್ಟಪಡುವ ಬಿಂದು ತಲುಪುತ್ತದೆ. ಹೀಗಿದ್ದರೂ ಸುಸಂಬದ್ಧವಾದ ಇತಿಹಾಸ ಕೇವಲ ನಾಲ್ಕು ನೂರು ವರ್ಷಗಳ ಹಿಂದಿನದಲ್ಲ ಎಂದೂ ಹೇಳಲಾಗುತ್ತದೆ. ಆದರೆ ಆ ಕಾಲಗಳಲ್ಲೆ (ನಮ್ಮ ಕಾಲವೂ ಒಳಗೊಂಡು) ಶೇಕ್ಸ್ ಪಿಯರ್ ನಿಗೆ ಹುಟ್ಟು-ಮರುಹುಟ್ಟು ನೀಡಲಾಯಿತು. ಹಾಗೆಯೆ ಸಾಂಸ್ಕೃತಿಕ ಉಪಭೋಗವಾದದಲ್ಲಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಒತ್ತು ನೀಡಲಾಯಿತು. ಈ ಮೂಲಕ ಶೇಕ್ಸ್ ಪಿಯರ್ ಈಗ ನಮ್ಮ ಕೈಗೆ ತಲುಪುವಂತೆ ಮಾಡಲಾಗಿದೆ. ರಾಯಲ್ ಶೇಕ್ಸ್ಪಿಯರ್ ಕಂಪನಿ, ಸಿನಿಮೋದ್ಯಮ, ಶಾಲಾ ಕಾಲೇಜುಗಳಿಗಾಗಿ ಪಠ್ಯ ಪುಸ್ತಕ ಮುದ್ರಿಸುವ ಪ್ರಕಾಶಕರು ಹಾಗೂ ರಾಷ್ಟ್ರೀಯ ಶೈಕ್ಷಣಿಕ ಚಟುವಟಿಕೆಗಳು, ವಿಶೇಷವಾಗಿ ಎಲ್ಲ ಶಾಲಾ ಹುಡುಗರು ಶೇಕ್ಸ್ಪಿಯರ್ ನಾಟಕಗಳ ಅಧ್ಯಯನ ಮಾಡುವ ಅಗತ್ಯತೆಯನ್ನು ನಾಶಗೊಳಿಸಿದ್ದಾರೆ.
ಬ್ರಿಟಿಶ್ ಎಡಗುಂಪಿನ ವಿಮರ್ಶಕ ರೇಮಂಡ್ಸ್ ವಿಲಿಯಮ್ಸ್ನಿಂದಾಗಿ ಸಾಂಸ್ಕೃತಿಕ ಉಪಭೋಗವಾದ ತನ್ನ (ಹೆಸರು) ದೃಷ್ಟಿಕೋನವನ್ನು ಹೆಚ್ಚು ಸ್ಪಷ್ಟ ತಳೆಯಿತು. ಫೂಕೊನ 'ಸಂಕಥನ'ದ(ಡಿಸ್ಕೋರ್ಸ್) ತಿಳುವಳಿಕೆ ಬದಲು ವಿಲಿಯಮ್ಸ್ 'ಭಾವನಾ ರಚನೆಗಳು' ಎಂಬ ಪಾರಿಭಾಷಿಕ ಪದ ಶೋಧಿಸಿದನು. ಇವು 'ಜೀವಿಸಿದ ಹಾಗೆ ಹಾಗೂ ಭಾವಿಸಿದ ಹಾಗೆ ಇರುವ ಅರ್ಥಗಳು, ಮೌಲ್ಯಗಳು'. ಭಾವನಾ ರಚನೆಗಳು ಸಮಾಜದಲ್ಲಿನ ಪ್ರಬಲ ವೈಚಾರಿಕ ಆಕೃತಿಗಳಿಗೆ ಹಾಗೂ ನಂಬಿಕೆಗಳು, ಮೌಲ್ಯಗಳು ಪ್ರಕಟಿತ ವ್ಯವಸ್ಥೆಗಳಿಗೆ ಎರಡಕ್ಕೂ ಪ್ರತಿರೋಧವುಳ್ಳದ್ದಾಗಿದೆ. ಇವು (ಡಿಕನ್ಸ್, ಬ್ರೂಂಟ್ಸ್ ಮೊದಲಾದವರ ಮೌಲ್ಯಗಳು ವಿಕ್ಟೋರಿಯನ್ ಕಾಲದ ವಾಣೀಜ್ಯೀಕೃತ ಹಾಗೂ ಅನುಭೋಗ ಮೌಲ್ಯಗಳೊಂದಿಗಿನ ಭಿನ್ನತೆಯನ್ನು ಮಾನವನ ಭಾವನಾ ರಚನೆಗಳು ಪ್ರತಿನಿಧಿಸುವ ಹಾಗೆ) ಯಥಾವತ್ತಾದ ಸ್ಥಾನಮಾನವನ್ನು ವಿರೋಧಿಸುತ್ತದೆ. ಇದರ ಫಲವಾಗಿ ಸಾಂಸ್ಕೃತಿಕ ಉಪಭೋಗವಾದ ಬದಲಾವಣೆಯ ಸಾಧ್ಯತೆ ಬಗ್ಗೆ ಹೆಚ್ಚು ಆಶಾವಾದಿ ನಿಲುವು ಹೊಂದಿದೆ, ಕೆಲವು ವೇಳೆ ವೈರುದ್ಧಾತ್ಮಕ ಮೌಲ್ಯಗಳ ಆಕರದ ಹಾಗೆ ಸಾಹಿತ್ಯವನ್ನು ನೋಡುವ ಇಚ್ಛೆ ಹೊಂದಿದೆ. ಸಾಂಸ್ಕೃತಿಕ ಉಪಭೋಗವಾದ ವರ್ತಮಾನದ 'ಓದು'ವಿಕೆಗಾಗಿ ಗತದ ನಿದರ್ಿಷ್ಟ ಬಳಕೆಯನ್ನು ಒಳಗೊಳ್ಳುತ್ತದೆ. ಗತವನ್ನು ಎತ್ತ್ತಿ ಹೇಳುವ ಅಥವಾ ತುಳಿದಿಡುವ ನಮ್ಮ ಆಯ್ಕೆಯ ಮೂಲಕ ನಮ್ಮದೇ ಸಮಾಜದ ರಾಜಕಾರಣವನ್ನು ನಿರೂಪಿಸುತ್ತದೆ. ಬ್ರಿಟಿಶ್ ಸಂಸ್ಕೃತಿಯೊಳಗೆ ಶೇಕ್ಸ್ ಪಿಯರ್ ಸಂಪ್ರದಾಯವಾದಿ ಮೂರ್ತಿಯ ಹಾಗೆ, ಅಂಧಶ್ರದ್ಧೆಯ ಪಾತ್ರದ ಹಾಗೆ ಕಾಣುವುದನ್ನು ನಿರ್ನಾಮ ಮಾಡಿರುವುದರ ಬಗೆಗೆ ಬ್ರಿಟಿಶ್ ಕಾರ್ಯವಿದೆ. ಈ ರೂಪದ ಸಾಂಸ್ಕೃತಿಕ ಉಪಭೋಗವಾದಕ್ಕೆ 'ದಿ ಶೇಕ್ಸ್ ಪಿಯರ್ ಮಿತ್'- ಗ್ರಾಹಂ ಹೋಲ್ಡರ್ ನೆಸ್, 'ಆಲ್ಟರ್ನೇಟೀವ್ ಶೇಕ್ಸ್ ಪಿಯರ್' - ಸಂ.ಜಾನ್ ಡಕಾಕಿಸ್, ಮತ್ತು ' ದಟ್ ಶೇಕ್ಸ್ ಪಿಯರ್ ರಾಗ್ ' - ಟೆರೆನ್ಸ್ ಹಾಕೀಸ್ (ಈ ವಿಚಿತ್ರ ಹೆಸರು ಟಿ.ಎಸ್.ಎಲಿಯೆಟ್ನ ದಿ ವೇಸ್ಟ್ ಲ್ಯಾಂಡ್ ಪ್ರಸ್ಥಾವನೆಯಿಂದ ತೆಗೆದುಕೊಳ್ಳಲಾಗಿದೆ) ಈ ಮೂರೂ 'ಹೊಸದನಿ'ಯ ಪುಸ್ತಕಗಳು ಅನುಕೂಲಕರ ಮಾದರಿಯಾಗಿವೆ. ಈ ಪುಸ್ತಕಗಳ ಕುರಿತು ಪ್ರಕಟವಾದ ವಿಮರ್ಶೆಗಳಿಗೆ ಪ್ರತಿಕ್ರಿಯೆಯಾಗಿ 'ಬಾರ್ಡೊಲಾಟ್ರಿ' ಶೀರ್ಷಿಕೆಯಡಿ 'ಲಂಡನ್ ರಿವ್ಯೂ ಆಫ್ ಬುಕ್ಸ್' ಪತ್ರಿಕೆಯಲ್ಲಿ ಒಂದು ವರ್ಷದ ಕಾಲ ಪತ್ರ ವ್ಯಹಾರ ನಡೆದಿದೆ.
ಸಾಂಸ್ಕೃತಿಕ ಉಪಭೋಗವಾದ ನವಚಾರಿತ್ರಿಕವಾದದಿಂದ ಹೇಗೆ ಭಿನ್ನ?
ಸಾಂಸ್ಕೃತಿಕ ಉಪಭೋಗವಾದವನ್ನು ಅದರ ಅಮೆರಿಕಾದ ಪ್ರತಿಸ್ಪರ್ಧೆಯಾದ ನವಚಾರಿತ್ರಿಕವಾದದೊಂದಿಗೆ ಮೇಲಿಂದ ಮೇಲೆ ಚರ್ಚೆಗಳಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎರಡು ಚಳವಳಿಗಳು ಒಂದೇ ಕುಟುಂಬಕ್ಕೆ ಸೇರಿದವು. ಹೀಗಿದ್ದರೂ ಅವೆರಡರ ನಡುವೆ ಕೌಟುಂಬಿಕ ಜಗಳ ನಡೆಯುತ್ತಲೆ ಇರುತ್ತದೆ. 'ಪೊಲಿಟಿಕಲ್ ಶೇಕ್ಸ್ ಪಿಯರ್' ನವಚಾರಿತ್ರಿಕವಾದಿಗಳ ಪ್ರಬಂಧವನ್ನೊಳಗೊಂಡಿದೆ. ಈ ಕೃತಿಯ ಪ್ರಸ್ತಾವನೆ ಈ ಎರಡು ಚಳವಳಿಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ,
ಮೊದಲನೆಯದಾಗಿ, ಡೋಲಿಮೋರ್ ಮತ್ತು ಸಿನ್ ಫೀಲ್ಡ್ ಒಂದು ಅಚ್ಚುಕಟ್ಟಾದ ಭೇದಗಣನೆಯಲ್ಲಿ ಮಾರ್ಕ್ಸ್ನನ್ನು ಪರಿಣಾಮಕಾರಿಯಾಗಿ ಉಲ್ಲೇಖಿಸುತ್ತಾರೆ: 'ಪುರುಷರು ಮತ್ತು ಮಹಿಳೆಯರು ತಮ್ಮದೆ ಸ್ವಂತ ಚರಿತ್ರೆಯನ್ನು ರೂಪಿಸುತ್ತಾರಾದರೂ ತಮ್ಮದೆ ಸ್ವಂತ ಆಯ್ಕೆಯ ಪರಿಸ್ಥಿತಿಗಳಲ್ಲಲ್ಲ' (ಪುಟ.3). ಸಾಂಸ್ಕೃತಿಕ ಉಪಭೋಗವಾದಿಗಳ ಪ್ರಕಾರ ಪುರುಷರು ಮತ್ತು ಮಹಿಳೆಯರು ತಮ್ಮದೆ ಸ್ವಂತ ಚರಿತ್ರೆ ಕಟ್ಟುವಲ್ಲಿ ಮಧ್ಯೆ ಪ್ರವೇಶಿಸಲು ಆಸಕ್ತರಾಗಿರುತ್ತಾರೆ. ಆದರೆ ನವಚಾರಿತ್ರಿಕವಾದಿಗಳ ಪ್ರಕಾರ ತಮ್ಮನ್ನು ನಿರ್ಬಂಧಿಸಿರುವ 'ವೈಚಾರಿಕ ಆಕೃತಿಗಳು ಹಾಗೂ ಸಾಮಾಜಿಕ ಅಧಿಕಾರ'ದ ಮೇಲೆ, ತಾವು ಮಾಡುವ ಹಾಗೆ, ಆದರ್ಶವಲ್ಲದ ಸಂದರ್ಭಗಳ ಮೇಲೆ ಕೇಂದ್ರೀಕರಿಸಲು ಒಲವು ತೋರುತ್ತಾರೆ. ಇದರ ಫಲಿತವೆಂದರೆ ಆಶಾವಾದಿ ರಾಜಕಾರಣ ಹಾಗೂ ನಿರಾಶಾವಾದಿ ರಾಜಕಾರಣಗಳ ನಡುವಿನ ವ್ಯತ್ಯಾಸ.
ಎರಡನೆಯದಾಗಿ, ನವಚಾರಿತ್ರಿಕವಾದಿಗಳು ಜ್ಞಾನ ಪಡೆಯುವ ಸಾಧ್ಯತೆಯ ಬಗೆಗೆ ಅದರ ವೈಚಾರಿಕ ಸಂದೇಹವಾದದೊಂದಿಗಿನ ನಿರ್ದಿಷ್ಟ ಸಂರಚನೋತ್ತರ ವಾದದ ಕಥನಕ್ಕೆ ಸಮ್ಮತಿ ನೀಡುವ ಮೂಲಕ ಪರಿಣಾಮಕಾರಿ ರಾಜಕಾರಣದ ಸ್ಥಾನಮಾನಗಳಿಂದ ತಮ್ಮನ್ನು ಕಡಿದುಕೊಂಡರೆೆಂದು ಸಾಂಸ್ಕೃತಿಕ ಉಪಭೋಗವಾದಿಗಳು ನೋಡುತ್ತಾರೆ. ಆದರೂ ಸಂರಚನೋತ್ತರವಾದದ ಉನ್ನತ ಜ್ಞಾನ, ಭಾಷೆ, ಸತ್ಯ ಮೊದಲಾದವನ್ನು ಸಮಸ್ಯೆಗೆ ಒಳಪಡಿಸುವ ದೃಷ್ಟಿಕೋನವನ್ನು ನವಚಾರಿತ್ರಿಕವಾದ ಸ್ವೀಕರಿಸಿತು ಮತ್ತು ತನ್ನ ಮುಖ್ಯ ಭಾಗವನ್ನಾಗಿ ಮಾಡಿಕೊಂಡಿತು. ಈ ಆರೋಪದ ವಿರುದ್ಧ ನವಚಾರಿತ್ರಿಕವಾದದ ಸಮರ್ಥನೆಯೆಂದರೆ ಎಲ್ಲ ಬಗೆಯ ಜ್ಞಾನಗಳ ಆಂತರಿಕ ರಚನೆಯ ಅನಿಶ್ಚಿತತೆಯ ಬಗ್ಗೆ ಎಚ್ಚರದಿಂದಿರುವುದು, ಅಂದರೆ ನಾವು ಸತ್ಯಗಳನ್ನು ಸ್ಥಾಪಿಸುವ ಪ್ರಯತ್ನ ಕೈಬಿಡುವುದು ಎಂದರ್ಥವಲ್ಲ, ಸರಳವಾಗಿ ಹೇಳಬೇಕೆಂದರೆ ನಾವು ಒಳಗೊಂಡಿರುವ ಅಪಾಯಗಳ ಮತ್ತು ಮಿತಿಗಳ ಪ್ರಜ್ಞಾವಂತಿಕೆಯನ್ನು ಪಡೆದಿರುವುದು, ಹಾಗೆಯೆ ತಮ್ಮದೇ ಬೌದ್ಧಿಕ ವಿಚಾರಣೆಗೆ ವಿಶೇಷ ಅಧಿಕಾರ ನೀಡುವುದು. ಇದು ಗಂಡಾಂತರಕಾರಿ ನೀರೆಂದು ತಿಳಿದೂ ಸಮುದ್ರ ಸಂಚಾರ ಮಾಡುವ ಹಾಗೆ ಎಲ್ಲ ಪೂರ್ವಭಾವಿ ಎಚ್ಚರಿಕೆಯನ್ನು ಸೂಕ್ಷ್ಮವಾಗಿ ತೆಗೆದುಕೊಂಡ, ಎಲ್ಲ ದೀಪಗಳು ಉರಿಯುತ್ತಿರುವ ಮತ್ತು ಅಪಾಯದ ಅರಿವಿಲ್ಲದೆ ಉಲ್ಲಾಸದಿಂದಿರುವ ಸ್ಥಿತಿ. ಹೀಗೆ ನವಚಾರಿತ್ರಿಕವಾದ (ಪೀಟರ್ ವಿಡ್ಡೋಸನ್ರ ಮಾತುಗಳಲ್ಲಿ) ಪ್ರತಿಪಾದಿಸುವುದೆಂದು ಫೂಕೊ 'ಅಸತ್ಯ ಪೂರ್ವಾಧಾರಿತ ರೂಪದ ಇತಿಹಾಸಜ್ಞರ ಅಧ್ಯಯನ ಪಠ್ಯಗಳಿ'ಗೆ (ಪು.161) ಪ್ರವೇಶ ನೀಡುತ್ತಾನೆ. ಅವನು ಹೇಳುವ ಮಾತುಗಳಲ್ಲಿ ಅವನಿಗೆ ನಂಬಿಕೆ ಇಲ್ಲ ಎಂಬುದು ಇದರರ್ಥವಲ್ಲ. ಆದರೆ ಸ್ಥಾಪಿಸುವ ಸತ್ಯಗಳ ಪ್ರತಿಪಾದನೆಯಲ್ಲಿರುವ ಅಪಾಯಗಳು, ಕಷ್ಟಗಳು ಎಂಥವು ಎಂಬುದರ ಅರಿವು ಅವನಿಗಿದೆ ಎಂದಾಗುತ್ತದೆ.
ನವಚಾರಿತ್ರಿಕವಾದ ಮತ್ತು ಸಾಂಸ್ಕೃತಿಕ ಉಪಭೋಗವಾದಗಳ ನಡುವೆ ಮೂರನೆಯ ಮುಖ್ಯ ವ್ಯತ್ಯಾಸವೆಂದರೆ ಎಲ್ಲಿ ಹಿಂದಿನ ಸಹ-ಪಠ್ಯಗಳು ಶೇಕ್ಸ್ಪಿಯರ್ನ ಸಮಕಾಲೀನ ದಾಖಲಾತಿಗಳೋ ಅವು ನಂತರ ಇಂದಿನ ರಾಯಲ್ ಶೇಕ್ಸ್ಪಿಯರ್ ಕಂಪನಿ ತಯಾರಿಕೆಯ ಕಾರ್ಯಕ್ರಮಗಳ ಟಿಪ್ಪಣಿ, ಖಾರಿ ಯುದ್ಧವೊಂದರ ವಿಮಾನ ಚಾಲಕ ಉಲ್ಲೇಖಿಸಿದ ಶೇಕ್ಸ್ಪಿಯರ್ನ ಸಾಲುಗಳು, ಅಥವಾ ಸರಕಾರವೊಂದರ ಸಚಿವರ ಶಿಕ್ಷಣ ಕುರಿತ ಅಭಿಪ್ರಾಯಗಳು ಆಗಿರುತ್ತವೆ. ಇದನ್ನು ಬೇರೊಂದು ರೀತಿಯಲ್ಲಿ ಹೇಳಬೇಕೆಂದರೆ, ನವಚಾರಿತ್ರಿಕವಾದಿ ಸಾಹಿತ್ಯಿಕ ಪಠ್ಯವನ್ನು ಅದರದೆ ಕಾಲದ ರಾಜಕಾರಣದ ಸಂದರ್ಭದಲ್ಲಿಟ್ಟು ನೋಡುತ್ತಾನೆ, ಸಾಂಸ್ಕೃತಿಕ ಉಪಭೋಗವಾದಿ ಅದನ್ನು ನಮ್ಮ ಕಾಲದಲ್ಲಿಟ್ಟು ನೋಡುತ್ತಾನೆ. ಇದು ರಾಜಕಾರಣದ ಮೇಲೆ ಒತ್ತು ನೀಡುವಲ್ಲಿ ಈ ಎರಡು ವಿಧಾನಗಳ ನಡುವೆ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಸುತ್ತದೆ. ಅಲ್ಲದೆ ರಾಜಕಾರಣದ ವ್ಯತ್ಯಾಸವನ್ನು ತಮ್ಮ ಸಾಮಾನ್ಯ ಮತ ಭೇದವೆಂದು ಈ ಮೂರೂ ವ್ಯತ್ಯಾಸಗಳು ಹೆಚ್ಚಾಗಿ ವಿವರಿಸಿವೆ.
ಸ್ವಲ್ಪ ಯೋಚಿಸಿ
ಸಾಂಸ್ಕೃತಿಕ ಉಪಭೋಗವಾದ ಮತ್ತು ನವಚಾರಿತ್ರಿಕವಾದಗಳ ನಡುವಿನ ವ್ಯತ್ಯಾಗಳನ್ನು ಬಿಡಿಸಿ ಹೇಳುವುದರಲ್ಲೆ ನಾವು ಕಾಲಕಳೆದೆವು ಎಂಬುದು ವಾಸ್ತವವಾಗಿದೆ. ಇದು ಅವೆರಡರ ನಡುವೆ ಇರುವ ಪರಸ್ಪರ ವ್ಯಾಪಿಸುವ ಗಮನಾರ್ಹ ಅಂಶವನ್ನು ಸೂಚಿಸುತ್ತದೆ. ಅವು ಮೂಲಭೂತವಾಗಿ ಒಂದೆಯಾಗಿದ್ದು ಎರಡು ಬೇರೆ ದೇಶಗಳಲ್ಲಿ ಮೈ ತಳೆದ ಕಾರಣದಿಂದಾಗಿ ಉಂಟಾದ ಸ್ವರೂಪ ವೈವಿಧ್ಯತೆಯೆ? ಅಥವಾ (ಸಾಂಸ್ಕತಿಕ ಉಪಭೋಗವಾದಿಗಳು ವಿಶೇಷವಾಗಿ ಒತ್ತಿ ಹೇಳುವ ಹಾಗೆ) ವೈಚಾರಿಕ ಪ್ರತಿಪಾದನೆ ಮೂಡಿರುವಷ್ಟು ತೀವ್ರತರವಾಗಿರುವುದೆ?
ಬಹುಶಹ ಎರಡು ರೀತಿಯ ಪ್ರಬಂಧಗಳನ್ನು ಓದುವ ಮೂಲಕ ಮತ್ತು ಹೋಲಿಸುವ ಮೂಲಕ ಈ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲು ಸಾಧ್ಯ. ಆರೋಪಿತವಾದ ವ್ಯತ್ಯಾಸಗಳು ಮುಖ್ಯವಾಗಿ ಎರಡು ರೂಪಗಳಲ್ಲಿ ನೆಲೆಸಿವೆ. ಮೊದಲನೆಯದು: ರಾಜಕಾರಣದ ದೃಷ್ಟಿಕೋನದಲ್ಲಿ, ಎರಡನೆಯದು: ಸಂರಚನೋತ್ತರವಾದ ದೃಷ್ಟಿಕೋನದ ಮೇಲೆ ಒತ್ತು ಹಾಕಿರುವ ಪ್ರಮಾಣದಲ್ಲಿ.
ಪ್ರಶ್ನೆ ಕುರಿತು ಆಲೋಚನೆ ಮಾಡುತ್ತ, ಈ ಪುಸ್ತಕದಲ್ಲಿ ಪ್ರತಿಯೊಂದು ಉದಾಹರಣೆಗಳಲ್ಲಿರುವ ಸ್ಪಷ್ಟ ಮನೋಭಾವವನ್ನು ಆರಂಭಿಸಿ. ನೀಡಿರುವ ಸಂಕ್ಷಿಪ್ತ ವಿವರಗಳಿಂದಲೇ ನಿರ್ಣಯ ನೀಡಲು ಸಾಧ್ಯ. ನಂತರದಲ್ಲಿ ಎರಡು ಕೃತಿಗಳನ್ನು ಓದಿ ಮತ್ತು ಹೋಲಿಸಿ ನೋಡಿ. (ಈ ಭಾಗದ ಕೊನೆಯಲ್ಲಿ ನೀಡಿರುವ ಹೆಚ್ಚಿನ ಓದಿಗಾಗಿ ಪಟ್ಟಿ ಗಮನಿಸಿ.)
ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸಗಳು ಭಾಗಶಹ ಅವು ಭಿನ್ನ ಭೌದ್ಧಿಕ ಚೌಕಟ್ಟಿನ ಫಲ. ನವಚಾರಿತ್ರಿಕವಾದ ಫೂಕೊನಿಂದ ಹೆಚ್ಚು ಪ್ರಭಾವಿತಗೊಂಡಿದೆ. ಆತನ 'ವ್ಯಾಖ್ಯಾನಾತ್ಮಕ ಆಚರಣೆಗಳು' ಅದರ ಪ್ರಮುಖ ವಿಚಾರವನ್ನು ಹೆಚ್ಚು ಪುಷ್ಟಿಗೊಳಿಸುವಂಥದ್ದಾಗಿದೆ. ಇನ್ನೊಂದು ಕಡೆ ಸಾಂಸ್ಕೃತಿಕ ಉಪಭೋಗವಾದ ರೇಮಂಡ್ ವಿಲಿಯಮ್ಸ್ಗೆ ಹೆಚ್ಚು ಉಪಕೃತವಾಗಿದೆ. ಆತನ 'ಭಾವನಾ ರಚನೆಗಳು' ಅದರ ಪ್ರಮುಖ ವಿಚಾರಗಳಿಗೆ ಗಟ್ಟಿತನ ತಂದುಕೊಟ್ಟ ಬೀಜಗಳನ್ನು ಒಳಗೊಂಡಿದೆ. ಈ ಎರಡೂ ವಿಮರ್ಶಾ ವಿಧಾನಗಳ ಬಗೆಗಿನ ಸಂದೇಹ ನವಚಾರಿತ್ರಿಕವಾದಿಗಳಿಗೆ ಹೇಗೆ ಇಂಗ್ಲಿಶರ ಅಂತರ್ಯುದ್ಧ ಎಂದಿಗೆ ಪ್ರಾರಂಭವಾಗಿತ್ತು ಎಂದು ವಿವರಣೆ ನೀಡುವುದು ಕಷ್ಟಕರವಾಗಿತ್ತೋ (ಅಲ್ಲಿಂದೀಚೆಗೆ ಅವರು ಗಟ್ಟಿತನ ತಂದುಕೊಡಲು ಗುಣಾತ್ಮಕವಾಗಿ ಅಸಾಧ್ಯವಾದ ವೈರುದ್ಧಾತ್ಮಕ ಪ್ರಭುತ್ವ ಶಕ್ತಿ ಬಗ್ಗೆ ಆಲೋಚನೆ ಮಾಡಿದಂತೆ ತೋರುತ್ತದೆ) ಹಾಗೆಯೆ ಸಾಂಸ್ಕೃತಿಕ ಉಪಭೋಗವಾದಿಗಳಿಗೂ ಹೇಗೆ ಅದು ಎಂದಿಗೆ ಮುಕ್ತಾಯಗೊಂಡಿತ್ತು ಎಂದು ವಿವರಣೆ ನೀಡುವುದು ಕಷ್ಟಕರವಾಗಿತ್ತು ಎಂದು ಸೂಚಿಸುತ್ತದೆ (ಅಲ್ಲೀಂದಿಚೆಗೆ ಸ್ಥಂಭನ ಉಂಟುಮಾಡುವಂತೆ ತೋರಲು ಅಸಾಧ್ಯವಾದ ಅವರ 'ಭಾವನಾ ರಚನೆಗಳು' ನಿರಂತರವಾಗಿ ಹೊಸ ವಿಚಾರಗಳನ್ನು ಹೊರಹಾಕಿದೆ). ಹೀಗಿದ್ದರೂ ಆಚರಣೆಯಲ್ಲಿ ಈ ಎರಡು ವಿಧಾನಗಳ ನಡುವೆ ಮತ್ತೆ ಮತ್ತೆ ಉಂಟಾದ ರಾಜಕಾರಣ ವ್ಯತ್ಯಾಸಗಳು ಪೂರ್ಣ ದ್ವಿವಿಧವಾದಿಗಳು ಧ್ವನಿಸುವುದಕ್ಕಿಂತ ಖಂಡಿತವಾಗಿ ಮೊದಲೇ ಹೇಳಬಹುದಾಗಿದ್ದು ಏಕರೂಪವಾಗಿಲ್ಲ.
ಸಾಂಸ್ಕೃತಿಕ ಉಪಭೋಗವಾದಿ ವಿಮರ್ಶಕರ ಕಾರ್ಯಸ್ವರೂಪ
1. ಅವರು ಸಾಹಿತ್ಯಿಕ ಪಠ್ಯ (ಹೆಚ್ಚಾಗಿ ಪುನರುತ್ಥಾನ ಕಾಲದ ನಾಟಕ)ವನ್ನು ನಮಗೆ 'ಅದರ ಇತಿಹಾಸಗಳನ್ನು ಮರಳಿ ಪಡೆದ' ಶಕ್ತಿಯನ್ನುಂಟು ಮಾಡುವ ಹಾಗೆ ಓದುತ್ತಾರೆ. ಅಂದರೆ ಕೃತಿ ಒಳಗೊಂಡ ಶೋಷಣೆಯ ಸಾಂದರ್ಭಿಕ ರೂಪವನ್ನು ತಿಳಿಸಿಕೊಡುತ್ತಾರೆ.
2. ಅದೇ ವೇಳೆಯಲ್ಲಿ ಅವರು ಕೃತಿಯಲ್ಲಿನ ಪ್ರಸ್ತುತ ಸಾಗಣೆ ಮತ್ತು ಸಾಂದರ್ಭಿಕಗೊಳಿಸುವ ಅಂಶಗಳನ್ನು ಮುನ್ನಲೆಗೆ ತರುತ್ತಾರೆ. ಅವು ಆ ಇತಿಹಾಸಗಳು ಮೊದಲ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಿದವುಗಳಾಗಿವೆ. (ಉದಾಹರಣೆಗೆ, ಇತಿಹಾಸದ ಪರಿಭಾಷೆಯಲ್ಲಿ ವೈಭವೋಪೇತ, ರಾಷ್ಟ್ರಕವಿ, ಸಾಂಸ್ಕೃತಿಕ ನೇತಾರ ಮುಂತಾದ ಪದಗಳ ಹಾಗೆ 'ಪಿತ್ರಾರ್ಜಿತ' ಕಾರ್ಖಾನೆಯ ಶೇಕ್ಸ್ಪಿಯರ್ ಮೂಟೆ ಕಟ್ಟುತ್ತಿರುವುದು.)
3. ಅವರು ಮಾರ್ಕ್ಸ್ವಾದ ಮತ್ತು ಸ್ತ್ರೀವಾದಗಳ ಸಂಯೋಜಿತ ವಿಮರ್ಶಾ ವಿಧಾನವನ್ನು ಪಠ್ಯಕ್ಕೆ ವಿಶೇಷವಾಗಿ ಮೇಲಿನವುಗಳಲ್ಲಿ ಮೊದಲನೆಯದನ್ನು ವ್ಯವಸ್ಥಿತವಾಗಿ ಮಾಡಲು ಬಳಸುತ್ತಾರೆ, ಹಾಗೂ ನಿರ್ದಿಷ್ಟವಾಗಿ ಶೇಕ್ಸ್ಪಿಯರ್ ವಿಮರ್ಶೆಯಲ್ಲಿ ಹಿಂದಿನ ಪ್ರಬಲ ಸಂಪ್ರದಾಯವಾದಿ ಸಾಮಾಜಿಕ, ರಾಜಕೀಯ, ಧಾಮರ್ಿಕ ಪ್ರಮೇಯಗಳನ್ನು ಮುರಿಯಲು ಬಳಸುತ್ತಾರೆ.
4. ಅವರು ಪಠ್ಯದ ನಿಕಟ ಬಿಚ್ಚುನೋಟ ತಂತ್ರವನ್ನು ಬಳಸುತ್ತಾರೆ. ಆದರೆ ಸಂರಚನಾ ಮತ್ತು ಸಂರಚನೋತ್ತರ ವಾದದ ತಂತ್ರಗಳನ್ನು ಹೆಚ್ಚು ಅಳವಡಿಸಿಕೊಳ್ಳುತ್ತಾರೆ. ವಿಶೇಷವಾಗಿ ಸಂಪ್ರದಾಯವಾದಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪ್ರಮೇಯಗಳ ಚೌಕಟ್ಟಿನೊಳಗೆ ಪಠ್ಯದ ನಿಕಟ ವಿಶ್ಲೇಷಣಾ ಪರಂಪರೆಯ ಉತ್ತರಾಧಿಕಾರ ಗುಣ ಮುರಿಯುವುದನ್ನು ಗುರುತಿಸಲು ಉಪಯೋಗಿಸುತ್ತಾರೆ.
5. ಅದೇ ವೇಳೆಯಲ್ಲಿ ಅವರು ಸಾಮಾನ್ಯ ನಿಯಮದ ಪರಂಪರಾಗತ ತಿಳುವಳಿಕೆಯೊಳಗೆ ಪರಿಣಾಮಕಾರಿ ರಾಜಕಾರಣ ಮಧ್ಯಪ್ರವೇಶ ಸ್ಥಾಪಿಸಲು ಎಂದಿಗೂ ಕಷ್ಟವಾಗುವ ಹೆಚ್ಚಾಗಿ ಅಸ್ಪಷ್ಟ ಕೃತಿಗಳ ಬರವಣಿಗೆಯ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ (ಉದಾಹರಣೆಗೆ, ಶಾಲಾ ಶೈಕ್ಷಣಿಕ ಚಟುವಟಿಕೆ ಕುರಿತ ಚರ್ಚಾಗೋಷ್ಟಿಗಳು ಅಥವಾ ರಾಷ್ಟ್ರೀಯ ಸಮಗ್ರತೆ).
ಸಾಂಸ್ಕೃತಿಕ ಉಪಭೋಗವಾದಕ್ಕೊಂದು ಉದಾಹರಣೆ
ಈ ವಿಧಾನದ ಅಸಾಂಪ್ರದಾಯಿಕ ಭಿನ್ನತೆಗೊಂದು ಉದಾಹರಣೆಯಾಗಿದೆ. ಅಂದರೆ ಟೆರೆನ್ಸ್ ಹಾಕೀಸ್ನ 'ದಟ್ ಶೇಕ್ಸ್ ಪಿಯರ್ ರ್ಯಾಗ್ಸ್' ಪುಸ್ತಕದ 'ತೆಲ್ಮಾ' ಪ್ರಬಂಧ ಈ ಪುಸ್ತಕದಲ್ಲಿ ನಾಲ್ಕನೆಯ ಬರಹ. ಪ್ರತಿಯೊಂದೂ ಬರೆಹ ಶತಮಾನದ ಮೊದಲ ಭಾಗದ ಪ್ರಮುಖ ಶೇಕ್ಸ್ ಪಿಯರ್ ವಿಮರ್ಶಕರ ಕೃತಿಯೊಂದನ್ನು ಕೇಂದ್ರೀಕರಿಸಿದೆ. ಶೇಕ್ಸ್ ಪಿಯರ್ ಹೇಗೆ ತಮಗೆ ಸಂಬಂಧ ಪಟ್ಟಿದ್ದಾನೆ ಹಾಗೂ ಹೇಗೆ ತಮ್ಮನ್ನು ಸಂಸ್ಕರಿಸಿದ್ದಾನೆ ಎಂಬ ದೃಷ್ಟಿಕೋನ ಕೃತಿಯ ಒಟ್ಟಾರೆ ತಂತ್ರವನ್ನು ಒಳಗೊಂಡಿದೆ. 1930ರ 'ವಾಟ್ ಹ್ಯಾಪನ್ಸ್ ಇನ್ ಹ್ಯಾಮ್ಲೆಟ್?' ಎಂಬ ಕೃತಿಯಿಂದ ಹೆಸರು ಪಡೆದ ವಿಮರ್ಶಕ ಜಾನ್ ಡೋವರ್ ವಿಲ್ಸನ್ ಎಂಬುವನು ಈ ಅಧ್ಯಾಯವನ್ನು ಬರೆದಿದ್ದಾನೆ. ಈ ಪುಸ್ತಕದ ಆರಂಭಿಕ ಭಾಗ 'ಹ್ಯಾಮ್ಲೆಟ್' ನಾಟಕದ ಚಕ್ರೀಯ ಮತ್ತು ಔಚಿತ್ಯಪೂರ್ಣ ಅಂಶಗಳ ಮೇಲೆ ಒತ್ತು ಹಾಕುತ್ತ ಬಗೆದು ನೋಡುತ್ತದೆ. ಅವೆಂದರೆ : ಆರಂಭ ಹೇಗೆ ಮುಕ್ತಾಯವನ್ನು ಪ್ರತಿಧ್ವನಿಸುತ್ತದೆ, ಒಂದೇ ಬಗೆಯ ಸನ್ನಿವೇಶ (ಹಲವು ತಂದೆ-ಮಗ ಪರ್ಯಾಯಗಳ ಹಾಗೆ) ಹಲವು ಬಾರಿ ಹೇಗೆ ಸಂಭವಿಸುತ್ತದೆ ಹಾಗೂ ಯಾವುದೇ ಪ್ರದರ್ಶನದ ಆರಂಭ ಮತ್ತು ಮುಕ್ತಾಯ ಹೇಗೆ ಅನಿಶ್ಚಿತವಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತದೆ. ಇದರಿಂದ ನಾಟಕ ಜನತೆಯ ಮನಸ್ಸಿನಲ್ಲಿ ಅದನ್ನು ಅವರು ನೋಡುವ ಮೊದಲೇ ಈಗಾಗಲೇ ಯಾವುದೋ ಹಾದಿಯಲ್ಲಿ ಸಾಂಸ್ಕೃತಿಕವಾಗಿ ನೆಲೆಸಿರುತ್ತದೆ ಎಂದು ತೋರಿಸಿಕೊಡುತ್ತದೆ. ನಾಟಕದಲ್ಲಿ (ವರ್ತಮಾನಕ್ಕಿಂತ ಉತ್ತಮವಾದ ಭೂತಕ್ಕಾಗಿ) ಸಿಂಹಾವಲೋಕನ ಮಾಡುವ ಪುನರಾವರ್ತಿತ ಉದ್ದೇಶ ಹಾಕೀಸ್ನಿಗೆ ತನ್ನ ಶೀಷರ್ಿಕೆಯ 'ತೆಲ್ಮಾ' ನೆರಳುಗಳ ಮೂಲಕ ನಿಜವಾದ ನಾಟಕ 'ತಲೆಕೆಳಗಾದ' ಹ್ಯಾಮ್ಲೆಟ್ಅನ್ನು ಕಲ್ಪಿಸಲು ದಾರಿ ತೋರಿಸಿದೆ.
ಎರಡನೆಯ ಭಾಗವನ್ನು 'ಟು ದಿ ಸಂಡರ್ ಲ್ಯಾಂಡ್ ಸ್ಟೇಷನ್' ಎಂದು ಹೆಸರಿಡಲಾಗಿದೆ. ಇದು 'ಟು ದಿ ಫಿನ್ಲ್ಯಾಂಡ್ ಸ್ಟೇಷನ್' ಎಂದು ಕರೆದಿರುವ ರಷ್ಯಾ ಕಾಂತ್ರಿಯ ಸುಪ್ರಸಿದ್ಧ ಇತಿಹಾಸ ಶೀರ್ಷಿಕೆಯನ್ನು ಅಪ್ರತ್ಯಕ್ಷವಾಗಿ ಸೂಚಿಸುತ್ತದೆ. ಯುದ್ಧ ಸಾಮಾಗ್ರಿ ಕಾರ್ಖಾನೆಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಕಳಿಸಿಕೊಟ್ಟ ಪರಿಣಾಮವಾಗಿ ಜಾನ್ ಡೋವರ್ ವಿಲ್ಸನ್ನು 1917ರಲ್ಲಿ ಸಂಡರ್ಲ್ಯಾಂಡ್ಗೆ ರೈಲಿನಲ್ಲಿ ಪಯಣಿಸಿದ ವಿವರಗಳನ್ನು ನೀಡಿದೆ ಹಾಗೂ ಡಬ್ಲ್ಯು. ಡಬ್ಲ್ಯು. ಗ್ರೇಗ್ನ 'ಹ್ಯಾಮ್ಲೆಟ್' ಕುರಿತ ಲೇಖನ ಓದಲಾಗಿದೆ. ಅದು ರಾಜನು ಮೂಕ ನಾಟಕಕ್ಕೆ ಮುಕ್ತವಾಗಿ ಪ್ರತಿಕ್ರಿಯೆ ನೀಡಲು ವಿಫಲನಾಗುವುದು, ಆತ ಕತೆ ಪುಸ್ತಕಗಳ ಖಳ ನಾಯಕನಾಗಿರದೆ ಒಂದು ಬಗೆಯ ಸಂಕೀರ್ಣ ವ್ಯಕ್ತಿತ್ವದವನಾಗಿದ್ದುದೆ ಕಾರಣವೆಂದು ವಾದ ಮಂಡಿಸುತ್ತದೆ. ಅವನು ಇದೇ ಆಗಿದ್ದರೆ ನಂತರ ನಮ್ಮ ಗಮನವನ್ನು ಸ್ವಲ್ಪವಾದರೂ ತನ್ನ ಕಡೆ ಸೆಳೆಯಲು ಆರಂಭಿಸುತ್ತಿದ್ದ. ಆದರೆ ಹ್ಯಾಮ್ಲೆಟ್ ಕುರಿತು ಪ್ರತ್ಯೇಕವಾಗಿ ಕೇಂದ್ರೀಕರಿಸುವುದರಿಂದ ತಾನೇ ಬೇರೆ ಕಡೆಗೆ ಗಮನ ಹೊರಳಿಸಿದ್ದಾನೆ. ಇದು ರೊಮ್ಯಾಂಟಿಕ್ ಕಾಲದ ನಾಟಕಕ್ಕೆ ಪ್ರತಿಕ್ರಿಯಿಸುವ ಪರಂಪರಾಗತ ಮಾರ್ಗವಾಗಿದೆ. ಈ ತಿಳುವಳಿಕೆಯ ಬಗ್ಗೆ ವಿಲ್ಸನ್ನ ಕೆರಳಿದ ಸಿಟ್ಟು ತನ್ನ ರಷ್ಯಾ ಕುರಿತ ಪ್ರಕಟಿತ ಬರಹಗಳಲ್ಲಿ ವ್ಯವಸ್ಥೆಗಾಗಿ ವ್ಯಕ್ತವಾದ ದುರಭಿಮಾನದ ಬಯಕೆಗೆ ಸಂಬಂಧಿಸಿದುದಾಗಿದೆ. ಅದು ರಷ್ಯಾವನ್ನು ಚಿತ್ರವತ್ತಾದ 'ಜೈವಿಕ' ಊಳಿಗಮಾನ್ಯ ಪ್ರಭುತ್ವದ ಹಾಗೆ ನೋಡುತ್ತದೆ. ಅದರ ಬದಲು ತನ್ನ ಸಾಮಾಜಿಕ ಮಾರ್ಗವನ್ನು ಹಂಬಲದಿಂದ ಗೌರವಿಸುವ ಹಾಗೂ ಭಯವನ್ನು ತೊರೆದಿರುವ ಇಂಗ್ಲೆಂಡಿನ ಹಾಗೆ ರಷ್ಯಾವನ್ನು ಕಾಣಬಯಸುತ್ತಾನೆ. ಗ್ರೇಗ್ಗೆ ತನ್ನ ಪ್ರತ್ಯುತ್ತರದಲ್ಲಿ ಮತ್ತು ನಂತರ ತನ್ನ 'ಹ್ಯಾಮ್ಲೆಟ್' ಪುಸ್ತಕದಲ್ಲಿ ಬೆದರಿಕೆಗೆ ಒಳಗಾದ ಸಾಂಸ್ಕೃತಿಕ ಪ್ರತಿಮೆ, ಹ್ಯಾಮ್ಲೆಟ್ನ ರಕ್ಷಣೆಗಾಗಿ ಡೋವರ್ ವಿಲ್ಸನ್ ಧಾವಿಸುವಿಕೆ-ಇವೆಲ್ಲಾ ರೋಗ ಸೂಚಕ ಲಕ್ಷಣಗಳ ಹಾಗೆಯೆ ಕಾಣುತ್ತದೆ. ಮೊದಲ ಜಾಗತಿಕ ಯುದ್ಧದ ಸ್ವಲ್ಪ ಕಾಲದ ನಂತರ ವಿಲ್ಸನ್ ನ್ಯೂಬೋಲ್ಟ್ ಕಮಿಟಿ ಸದಸ್ಯರಾದನು. ಈ ಕಮಿಟಿ ಇಂಗಿಶ್ ಬೋಧನೆ ಕುರಿತ ವರದಿ ಹಾಗೂ ರಷ್ಯಾದಲ್ಲಿ ಹಠತ್ತಾಗಿ ಸಂಭವಿಸಿದ ಅಪಾಯದಿಂದ ರಾಷ್ಟ್ರವನ್ನು ಪಾರು ಮಾಡುವ ಸಾಮಾಜಿಕ ಸುಸಂಬದ್ಧತೆಯ ರೂಪವೊಂದನ್ನು ಒದಗಿಸುವ ಹಾಗೆ ಕಂಡಿತು. 'ವಾಟ್ ಹಾಪನ್ಸ್ ಇನ್ ಹ್ಯಾಮ್ಲೆಟ್?' ಕುರಿತು ನೆವಿಲ್ಲೆ ಚೆಂಬರ್ಲಿನ್ ಹೊಗಳಿ ಬರೆದ ಪತ್ರದಿಂದಲೂ ಹಾಕೀಸ್ ಉಲ್ಲೇಖಿಸುತ್ತಾನೆ, ಅಲ್ಲದೆ ವ್ಯತ್ಯಾಸವನ್ನೊಳಗೊಂಡ ಮತ್ತು ಸಮಾಧಾನ ಪಡಿಸುವ ಮಾದರಿಯೊಂದನ್ನು ಹುಟ್ಟು ಹಾಕುತ್ತಾನೆ. ಇಪ್ಪತ್ತನೆಯ ಶತಮಾನದ ಜೀವನ ವಿಧಾನದಿಂದ ಹಲವಾರು ಸಹ-ಪಠ್ಯಗಳಲ್ಲಿ ನಾಟಕ ವಿಶ್ಲೇಷಣಾ ಮಾರ್ಗವೊಂದನ್ನು ಇದು ಗೊತ್ತು ಮಾಡಿತು, ಹಾಗೆಯೆ ಇಡೀ ನಾಟಕ ಸಾಂಸ್ಕೃತಿಕವಾಗಿ ಪರಿವರ್ತನೆ ಹೊಂದಿತು. ನಾಟಕದ ಕೊನೆಯಲ್ಲಿ ಹೆಚ್ಚುವರಿ ರಂಗ ನಿರ್ದೇಶನವೊಂದು ಒಳತೂರಿರುವುದನ್ನು ಹಾಕೀಸ್ನ ಅಂತಿಮ ಓದುವಿಕೆ ಒಳಗೊಂಡಿದೆ. ಈ ಬಗೆಯ ವಿಮರ್ಶೆಗೆ ಆತ ಅನುಸರಿಸಿದ ಮಾದರಿಯೆಂದರೆ ತಾನು ಪಡೆದ ಪಠ್ಯವನ್ನು ತಲುಪಿಸಿದ ಆದರೆ ತಾನು ಪ್ರದರ್ಶಿಸುವುದನ್ನು ಪರಿವರ್ತಿಸುವ ಜಾಸ್ ಸಂಗೀತಗಾರನ ಮಾದರಿಯದು. ವಿಮರ್ಶೆಯ ವಿಭಿನ್ನ ಗುಣ ಲಕ್ಷಣದ ಹಾಗೆ ಸಾಂಸ್ಕೃತಿಕ ಉಪಭೋಗವಾದ ಅದನ್ನು ತೆಗೆದುಕೊಂಡಿರಬಹುದು.
ಈ ಬಗೆಯ ಬರವಣಿಗೆಯಲ್ಲಿ 'ಸ್ಥಾನ' ಗೊತ್ತು ಪಡಿಸುವಿಕೆ ಹೇಗೆಂದು ತಿಳಿಯುವುದು ಕಷ್ಟ. ಇದರ ದನಿ ಜೀವಂತವಾಗಿ ಮತ್ತು ಆಸಕ್ತಿದಾಯಕವಾಗಿ, ವ್ಯಕ್ತಿಗತ ಮತ್ತು ಪ್ರವೃತ್ತಮಯವಾಗಿರುತ್ತದೆ, ಶಾಸ್ತ್ರೀಯ ಬರವಣಿಗೆಯ ಬಹುಪಾಲು ನಿಯಮಾನುಸರಣೆಯನ್ನು ಸಡಿಲಿಸುತ್ತದೆ. ಆರಂಭಗಳು ನಾಟಕೀಯವಾಗಿರುತ್ತವೆ, ಏಕಾಏಕಿ ಬದಲಾವಣೆಗೆ ಒಳಗಾಗುತ್ತವೆ, ಗರಿಷ್ಟ ಪರಿಣಾಮದ ಕ್ಷಣದ ವರೆಗೆ ಸನ್ನಿವೇಶ ಅಥವಾ ಸನ್ನಿವೇಶಗಳಂತೆ ತೋರುವ ಮಾಲೆಗಳಾಗಿದ್ದು ನಿಕಟವಾಗಿ ಹೆಣೆದುಕೊಂಡಿರುತ್ತವೆ. ಈ ಎಲ್ಲ ಲಕ್ಷಣಗಳು ಕಾದಂಬರಿಯದ್ದಾಗಿದೆ- ನವಚಾರಿತ್ರಿಕವಾದದಲ್ಲಿ ಸಾಹಿತ್ಯ ಮತ್ತು ಚರಿತ್ರೆ ಪರಸ್ಪರ ಹೆಣೆದುಕೊಂಡಿರುವ ಹಾಗೆ. ಇಲ್ಲಿ 'ಸೃಜನಶೀಲ ಬರವಣಿಗೆ' ಎಂಬಂಥ ಸ್ಪಷ್ಟವಾದ ವಿವೇಕವೊಂದಿದ್ದು, ಅದು ಸಾಹಿತ್ಯ ಮತ್ತು ವಿಮರ್ಶೆ ನಡುವಿನ ಯಾವುದೇ ಸಂಪೂರ್ಣ ಭಿನ್ನತೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನವಚಾರಿತ್ರಿಕವಾದದ ನಮ್ಮ ಕಾಲಕ್ಕಿಂತ ಹೆಚ್ಚಾಗಿ ಸ್ವಂತ ಸಂದರ್ಭದಲ್ಲಿ ಕೂಡ ದೃಷ್ಟಿಕೋನ ಮತ್ತು ಚಾರಿತ್ರಿಕಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ.
ಹೆಚ್ಚಿನ ಓದಿಗಾಗಿ
ಚೇಸ್, ಸಿಂತಿಯಾ, ಎಡಿಟರ್. ರೊಮ್ಯಂಟಿಸಂ, (ಲಾಂಗ್ಮ್ಯಾನ್ ಕ್ರಿಟಿಕ್ ರೀಡರ್ಸ್, 1993) ನವಚಾರಿತ್ರಿಕವಾದಿ ವಿಧಾನಗಳ ಮೂರು ಉದಾಹರಣೆಗಳನ್ನು ಒಳಗೊಂಡಿದೆ. ಅವು : ಕೋಲ್ರಿಡ್ಜ್ ನ ಕ್ರಿಸ್ಟಬೆಲ್ ಬಗ್ಗೆ ಕರೆನ್ ಸ್ವಾನ್, ಕೀಟ್ಸ್ ಕುರಿತು ಮೇಜರಿ ಲಾನ್ಸನ್ ಹಾಗೂ ಬೈರನ್ನನ ಸರ್ಡಾನಪಲಸ್ ಮೇಲೆ ಜರೊಮಿ ಕ್ರಿಸ್ಟೆನ್ಸೆನ್ರ ಅಧ್ಯಾಯಗಳು.
ಡಾಲಿಮೋರ್, ಜೊನಾಥನ್ ಅಂಡ್ ಸಿನ್ಫೀಲ್ಡ್, ಅಲನ್, ಎಡಿಟರ್ಸ್. ಪೊಲಿಟಿಕಲ್ ಶೇಕ್ಸ್ಪಿಯರ್: ನ್ಯೂ ಎಸೇಸ್ ಇನ್ ಕಲ್ಚರಲ್ ಮೆಟೀರಿಯಲಿಜಂ (ಮ್ಯಾಂಚಸ್ಟರ್ ಯೂನಿವರ್ಸಿಟಿ ಪ್ರೆಸ್, ಸೆಕೆಂಡ್ ಎಡಿಷನ್ 1994) ಪ್ರ್ರಸ್ತಾವನೆ ನವಚಾರಿತ್ರಿಕವಾದ ಕುರಿತು ಉಪಯುಕ್ತ ವಿವರಗಳನ್ನು ನೀಡುತ್ತದೆ. ಹಾಗೂ ಅದು ಹೇಗೆ ಸಾಂಸ್ಕೃತಿಕ ಉಪಭೋಗವಾದದಿಂದ ಭಿನ್ನ ಎಂಬುದನ್ನು ವಿವರಿಸುತ್ತದೆ. ಈ ಕೃತಿ ಗ್ರೀನ್ಬ್ಲಾಟ್ನ ಇನ್ವಿಸಿಬಲ್ ಬುಲೆಟ್ಸ್ ಪ್ರಬಂಧವನ್ನು ಮರು ಮುದ್ರಿಸಿದೆ.
ಡ್ರಾಕೀಸ್, ಜಾನ್, ಎಡಿಟರ್.ಆಲ್ಟರ್ನೇಟೀವ್ ಶೇಕ್ಸ್ಪಿಯರ್ (ಮ್ಯಾಥ್ಯೂನ್, 1985) ಈ ಪ್ರಬಂಧಗಳಲ್ಲಿ 'ಸಾಂಸ್ಕೃತಿಕ ಉಪಭೋಗವಾದ ' ಪಾರಿಭಾಷಿಕ ಪದವನ್ನು ಬಳಸಿಕೊಂಡಿಲ್ಲ. ಆದರೆ ಅವು ಈ ವಿಧಾನವನ್ನು ಸಾಮಾನ್ಯವಾಗಿ ಪ್ರತಿನಿಧಿಸುತ್ತವೆ. ಅವು 'ಶೇಕ್ಸ್ಪಿಯರ್ ವಿಮಶರ್ೆಯ ಸ್ಥಾಪಿತ ನಿಯಮಗಳ ಮುರಿತಕ್ಕೆ ಚಾಲನೆ ನೀಡಲು 'ಐತಿಹಾಸಿಕವಾಗಿ ನಿದರ್ಿಷ್ಟ ಓದುಗಳನ್ನು ಹುಟ್ಟು ಹಾಕಿದ ಮಾರ್ಗಗಳ ಶೋಧನೆಗಳು' ವಿನಾಯಿತಿ ನೀಡಲು ಕೇಳುತ್ತವೆ.
ಗ್ರಾಡಿ, ಹ್ಯೂ, ದಿ ಮಾಡ್ರನಿಸ್ಟ್ ಶೇಕ್ಸ್ಪಿಯರ್ (ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 1991) ಪುಟ 225-235 ನವಚಾರಿತ್ರಿಕವಾದ ಕುರಿತವು. ಯಾವಾಗಲೂ ಚುರುಕಾಗಿ ಓದಿಸಿಕೊಂಡು ಹೋಗಬಲ್ಲ ಉತ್ತಮ ಕೃತಿ. ಟಿಲ್ಯಾಡರ್್ ಕುರಿತ ನಾಲ್ಕನೆಯ ಅಧ್ಯಾಯ ('ಹಳೆಯ ಚಾರಿತ್ರಿಕವಾದ') ತುಂಬಾ ಉಪಯುಕ್ತ. ಐದನೆಯ ಅಧ್ಯಾಯ ಶೇಕ್ಸ್ಪಿಯರ್ನಿಗೆ ಸಮಕಾಲೀನ ವಿಮಶರ್ಾ ವಿಧಾನಗಳನ್ನು ಹೇಗೆ ಅನ್ವಯಿಸಬೇಕೆಂದು ಚಚರ್ಿಸುತ್ತದೆ.
ಗ್ರೀನ್ಬ್ಲಾಟ್, ಸ್ಟೀಫನ್, ಶೇಕ್ಸ್ಪೀರಿಯನ್ ನೆಗೋಷಿಯೇಷನ್ಸ್: ದಿ ಸರ್ಕ್ಯುಲೇಷನ್ ಆಫ್ ಸೋಷಿಯಲ್ ಎನರ್ಜಿ ಇನ್ ರೆನೈಸಾನ್ಸ್ ಇಂಗ್ಲೆಂಡ್, (ಕ್ಯಾಲಿಫೋರ್ನಿಯಾ ಪ್ರೆಸ್, 1991) ಶೇಕ್ಸ್ಪಿಯರ್ ಕಾಮಿಡಿಗಳಲ್ಲಿ ಉಡುಪುಗಳ ಅದಲು ಬದಲು ಕುರಿತ ಪ್ರಬಂಧ ಫಿಕ್ಷನ್ ಅಂಡ್ ಫ್ರಿಕ್ಷನ್, ನವಚಾರಿತ್ರಿಕವಾದ ಕುರಿತು ಮೂಲಭೂತ ವಿಷಯಗಳು ಚೆನ್ನಾಗಿವೆ. ಈ ಕೃತಿಯ ಅತ್ಯುತ್ತಮ ಬರಹ ಇನ್ವಿಸಿಬಲ್ ಬುಲೆಟ್ಸ್ ಪ್ರಬಂಧ.
ಹಾಕೀಸ್, ಟೆರೆನ್ಸ್, ದಟ್ ಶೇಕ್ಸ್ಪೀರಿಯನ್ ರ್ಯಾಗ್ (ಮ್ಯಾಥ್ಯೂನ್, 1986)ಸಾಂಸ್ಕೃತಿಕ ಉಪಭೋಗವಾದದ ಉದಾಹರಣೆಗಳು ಕಾರ್ಯರೂಪಕ್ಕಿಳಿಸಲಾಗಿದೆ. ಇಡೀ ಪುಸ್ತಕ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಆ ಓದು ಗಾಬರಿಗೊಳಿಸುವ ಕೆಲವು ಶೇಕ್ಸ್ಪಿಯರ್ನ ವೈರುಧ್ಯಗಳು ಹಾಗೂ ಅವನನ್ನು ನಾವು ಎದುರುಗೊಳ್ಳುವ ಸಂದರ್ಭಗಳು ಉಂಟು ಮಾಡುತ್ತದೆ.
ಹೋಲ್ಡರ್ನೆಸ್, ಗ್ರಾಹಂ, ದಿ ಶೇಕ್ಸ್ಪಿಯರ್ ಮಿತ್ (ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್, 1988) `ಸಾಂಸ್ಕೃತಿಕವಾಗಿ ಹುಟ್ಟು ಹಾಕಿದ ಮತ್ತು ಐತಿಹಾಸಿಕವಾಗಿ ನಿರ್ಣಯಿಸಿದ ಶೇಕ್ಸ್ಪಿಯರ್ ದಂತಕತೆಗಳ' ಅಧ್ಯಯನ , ಜೊತೆಗೆ 'ದೂರದರ್ಶನ, ಪತ್ರಿಕೋದ್ಯಮ, ರಂಗಭೂಮಿ, ಶಿಕ್ಷಣ ಕ್ಷೇತ್ರಗಳಲ್ಲಿನ ಶೇಕ್ಸ್ಪಿಯರ್ನ ಪ್ರಮುಖ ಮಧ್ಯಸ್ಥಗಾರರೊಂದಿಗಿನ ಸಂದರ್ಶನ'
ಲೆವಿನ್ಸನ್, ಮೆಜರಿ, ಎಡಿಟರ್: ರಿಥಿಂಕಿಂಗ್ ಹಿಸ್ಟಾರಿಸಿಸಂ: ಕಲ್ಚರಲ್ ರೀಡಿಂಗ್ಸ್ ಇನ್ ರೋಮ್ಯಾಂಟಿಕ್ ಹಿಸ್ಟರಿ (ಬ್ಲ್ಯಾಕ್ ವೆಲ್, 1989) ನವಚಾರಿತ್ರಿಕವಾದವನ್ನು ರೊಮ್ಯಾಂಟಿಸಮ್ಗೆ ಅನ್ವಯಿಸಲಾಗಿದೆ.
ವೀಸ್ಸೆರ್, ಹೆಚ್. ಆರಂ, ಎಡಿಟರ್: ದಿ ನ್ಯೂ ಹಿಸ್ಟಾರಿಸಿಸಂ (ರುಟ್ಲೆಡ್ಜ್, 1989) ಒಂದು ಉಪಯುಕ್ತ, ಮೌಲ್ಯಯುತ ಆಕರ ಗ್ರಂಥ.
ವಿಲ್ಸನ್, ರಿಚರ್ಡ್ ಅಂಡ್ ಡಟ್ಟನ್, ರಿಚರ್ಡ್, ಎಡಟರ್ಸ್: ನ್ಯೂ ಹಿಸ್ಟಾರಿಸಿಸಂ ಅಂಡ್ ರೆನೈಸಾನ್ಸ್ ಡ್ರಾಮ (ಲಾಂಗ್ಮ್ಯಾನ್, 1992) ಪ್ರಮುಖ ಲೇಖನಗಳ ಒಂದು ಉಪಯುಕ್ತ ಸಂಗ್ರಹ, ಉತ್ತಮವಾಗಿ ಪರಿಚಯಿಸಲಾಗಿದೆ.
-ಪೀಟರ್ ಬ್ಯಾರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ