ಭಾನುವಾರ, ಮೇ 29, 2011

ಪುರುಷತ್ವದ ಪುನಾರಚನೆ: ರಾಜ್ ಕುಮಾರ್ ಮತ್ತು ಕನ್ನಡ ಸಾರ್ವಜನಿಕ ವಲಯ




-ತೇಜಸ್ವಿನಿ ನಿರಂಜನ

ಇಂದು ಕನ್ನಡಿಗನಾಗಿರುವುದು ಅಂದರೇನು ಎಂಬ ಕನ್ನಡ ಭಾಷೆಯ ಗುರುತಿನ ಪ್ರಶ್ನೆಯನ್ನು ಕುರಿತ ಹೊಸ ಅನುಸಂಧಾನಗಳಿಗೆ ವೀರಪ್ಪನ್ ನಿಂದಾದ ರಾಜ್ ಕುಮಾರ್ ಅಪಹರಣ ಪ್ರೇರಣೆ ಒದಗಿಸಿದೆ. ಈ ಬಿಕ್ಕಟ್ಟು ಕಳೆದ ಹಲವು ವರುಷಗಳ ಸಾಮಾಜಿಕ ತಳಮಳ ಮತ್ತು ಆತಂಕಗಳಿಗೆ ಮರುನುಡಿ ಕೊಟ್ಟಿದೆ. ಅದನ್ನು ಚಾರಿತ್ರಿಕ ಪರಿಪ್ರೇಕ್ಷ್ಯದಲ್ಲಿಟ್ಟು ಜಾನಕಿ ನಾಯರ್ ಅವರ ಲೇಖನ ನೋಡಿದೆ. ಈ ಎಲ್ಲ ತವಕ-ತಲ್ಲಣಗಳ ಕೇಂದ್ರಬಿಂದು ಮತ್ತೆ ಮತ್ತೆ ಕಾಣಿಸಿಕೊಳ್ಳುವ ಪುರುಷತ್ವದ ಬಿಕ್ಕಟ್ಟು ಎಂದು ನಾನು ಈ ಲೇಖನದಲ್ಲಿ ವಾದಿಸುತ್ತಿದ್ದೇನೆ. ನಾನಿಲ್ಲಿ ಪರಿಶೀಲನೆಗೆ ಎತ್ತಿಕೊಂಡಿರುವ ಪಠ್ಯಗಳಲ್ಲಿ ಚರ್ಚಿತವಾಗಿರುವ, ಅಪಾಯಕ್ಕೆ ಸಿಲುಕಿದ ಭಾಷೆಯ ಪ್ರತಿಪಾದಕರ 'ಪುರುಷತ್ವ' ಏರಿದ ದನಿಯಲ್ಲಿ ಚರ್ಚೆಗೊಳಗಾಗಿದೆ.
ಕನ್ನಡ ಭಾಷೆಗೆ ಸಂಬಂಧಿಸಿದ ಹಾಗೆ ಅಪಹರಣದ ಪ್ರಕರಣ ಮಂಡಿಸುವ ಹೊಸ ಸಾಂಸ್ಕೃತಿಕ ಕಾರ್ಯಸೂಚಿಗಳು ಅನೇಕ ಬಗೆಯ ಜನಪ್ರಿಯ ವಾದಗಳನ್ನು ಹುಟ್ಟುಹಾಕಿದೆ.  ಅವು ಮತ್ತೆ ಮತ್ತೆ ರಾಜ್ ಕುಮಾರ್ ರವರ ತಾರಾ ಜೀವನದ ಒಂದು ಭಾಗವಾಗಿರುವಂತೆ ಕಾಣುತ್ತವೆ (ನನ್ನ ರಕ್ತ ಕನ್ನಡ, ನನ್ನ ಜೀವನ ಕನ್ನಡ, ನನ್ನ ಮೈ ಮನಸು ಕನ್ನಡ-ಈ ಬಗೆಯ ನುಡಿಗಟ್ಟುಗಳು ಅವರ ಅನೇಕ ಚಲನಚಿತ್ರಗಳ ಸಂಭಾಷಣೆ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ). ಜನಪ್ರಿಯ ಪತ್ರಿಕೆಯೊಂದು ಅಪಹರಣ ಕುರಿತು ಲೇಖನ ಪ್ರಕಟಿಸಿ, ಅದರ ತಲೆಬರಹದ ಮೂಲಕ 'ಭಾಷೆಯ ಮೂಲ ಅಸ್ತಿತ್ವಕ್ಕೆ ಕೊಡಲಿ ಏಟು' ಬಿದ್ದಿತೆಂದು ಘೋಷಿಸಿತು(ತರಂಗ, ಸೆಪ್ಟಂಬರ್ 14, 2000). ಕನ್ನಡ ಗುರುತಿನ ಹೋರಾಟದ ಚಿತ್ರಣದಲ್ಲಿ ಏಕೆ ಭಾಷಾ ವಿವಾದ ಪ್ರಧಾನ ನೆಲೆಯಲ್ಲಿ ಕಾಣುತ್ತದೆ? ತೆಲುಗು ಅಥವಾ ಮಲೆಯಾಳಂ ಹೋರಾಟಗಳಲ್ಲಿ ಇದು ತೀರಾ ಬೇರೆ ರೀತಿಯಲ್ಲಿ ಪ್ರತಿಪಾದಿತವಾಗುತ್ತದೆ. ಕನ್ನಡ ಭಾಷಾಭಿಮಾನ ಏಕೆ ಮತ್ತೆ ಮ್ತತೆ ತಮಿಳು ಅಭಿಮಾನದೊಂದಿಗೆ ಹೋಲಿಸಿ ಅದರ ವಿರುದ್ಧವಾಗಿ ನಿರ್ವಚನಗೊಳ್ಳುತ್ತಿದೆ? ತಾರಾ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿರುವ ಈ ಪ್ರಕ್ರಿಯೆ ರಾಜ್ಯದ ಉಳಿದ ಭಾಗಗಳಿಗಿಂತ ದಕ್ಷಿಣಭಾಗದ ಜಿಲ್ಲೆಗಳಲ್ಲೆ ಏಕೆ ಹೆಚ್ಚು ಪ್ರಮುಖ ವಿಷಯವಾಗಿದೆ?
ಅಪಹರಣ ಕುರಿತು ಬಂದಿರುವ ಪ್ರತಿಕ್ರಿಯೆಗಳು ಆಕ್ರಮಣಕಾರಿ ಪೌರುಷ್ಯತ್ವದ ಸಾರ್ವಜನಿಕ ವಲಯದ ಭಾಗವಾಗಿ ಒಡಮೂಡಿರುವುದನ್ನು ನೋಡಬಹುದಾಗಿದೆ. ಈ ಸ್ವರೂಪದ ಸಾರ್ವಜನಿಕ ವಲಯ ಈ ರೂಪವನ್ನು ಬೆಂಗಳೂರಿನಲ್ಲಿ 1990ರಲ್ಲಿ ತಳೆದಿತ್ತು. ಉಪೇಂದ್ರರ ಯಶಸ್ವಿ ಚಿತ್ರಗಳು, ವಿಶೇಷವಾಗಿ 'ಎ' (1998), 'ಸ್ವಸ್ತಿಕ್' (1999) ಮತ್ತು 'ಉಪೇಂದ್ರ' (2000) ಹಾಗೂ ರಾಜಕೀಯ ವಿಮರ್ಶೆ ಮತ್ತು ಸ್ಥಳೀಯ ಹಗರಣಗಳನ್ನು ಸಮಾನ ಪ್ರಮಾಣದಲ್ಲಿ ವಿವರವಾಗಿ ಬರೆಯುವ ವಾರಪತ್ರಿಕೆಗಳಾದ ಹಾಯ್ ಬೆಂಗಳೂರು, ಅಗ್ನಿ, ಪೋಲಿಸರ ಹೋರಾಟ, ಕ್ರೈಮ್ ನ್ಯೂಸ್, ಸ್ಟಾರ್ ಆಫ್ ಬೆಂಗಳೂರು ಅಥವಾ ಸಂಜೆ ಸ್ಫೋಟಗಳು ಈ ಹೊಸ ಮಾದರಿಯ ಕನ್ನಡ ಸಾರ್ವಜನಿಕ ವಲಯಕ್ಕೆ ನುಡಿಕೊಡುವಲ್ಲಿ ನಿರ್ಣಾಯಕ ವಾದುವು. ಮೊದಲಿನೆರಡು ವಾರಪತ್ರಿಕೆಗಳು ಉಳಿದವುಗಳಿಗಿಂತ ಭಿನ್ನವಾಗಿವೆ. ಸಾಹಿತ್ಯ ವಲಯದ ಸಂಬಂಧವನ್ನು ಉಳಿಸಿಕೊಂಡಿರುವ ಹಾಗೂ ಸಾರ್ವಜನಿಕ ರಂಗದಲ್ಲಿ ಕಣ್ಣುಕಟ್ಟುವಂಥ ರೀತಿಯಲ್ಲಿ ಅವು ತಲೆ ತೂರಿಸಬಯಸುತ್ತವೆ1. ಲಂಕೇಶ್ ಪತ್ರಿಕೆ (ಸುಮಾರು ಒಂದು ಲಕ್ಷ ಪ್ರತಿ ಮಾರಾಟವಾಗುತ್ತಿದ್ದು) ಈ ಕ್ಷೇತ್ರದಲ್ಲಿ ಮೊದಲಿನದು. ಖ್ಯಾತ ಸಾಹಿತಿ ಪಿ.ಲಂಕೇಶ್ ಇಪ್ಪತ್ತೈದು ವರುಷಗಳ ಹಿಂದೆ ಪ್ರಾರಂಭಿಸಿದ ಈ ಪತ್ರಿಕೆಯನ್ನು ಈಗ ಅವರ ಮಗಳು ಗೌರಿ ಲಂಕೇಶ್ ತಮ್ಮ ಕಚೇರಿಯ ಪುರುಷ ಸಿಬ್ಬಂದಿಗಳ ನೆರವಿನಿಂದ ನಡೆಸುತ್ತಿದ್ದಾರೆ. ಈಗದು ಅದರ ಯಶಸ್ವಿ ಸಂಚಿಕೆಗಳಿಗಿಂತ ಭಿನ್ನವಾಗಿದೆ. ಆಗ ಅವರೊಂದಿಗೆ ಹಲವಾರು ಕವಿಗಳು, ಕಾದಂಬರಿಕಾರರು, ಲೇಖಕರು ಸದಾಶಯವನ್ನು ಹೊಂದಿ ತಮ್ಮ ಪ್ರತಿಭೆಯ ನೆರವನ್ನು ನೀಡಿ ಪತ್ರಿಕೆಗಾಗಿ ಬರೆಯುವ ಮೂಲಕ ಅದನ್ನು ಒಂದು ಬಗೆಯಲ್ಲಿ ತುಂಬ ವ್ಯಾಪಕವಾದ ಕನ್ನಡ ಸಾಹಿತ್ಯ ಪತ್ರಿಕೆಯ ಜನಪ್ರಿಯ ರೂಪವನ್ನಾಗಿಸಿದರು.
ರವಿ ಬೆಳಗೆರೆ ಸಂಪಾದಿಸುತ್ತಿರುವ ಹಾಯ್ ಬೆಂಗಳೂರು ಮತ್ತು ಶ್ರೀಧರ್ ಸಂಪಾದಿಸುತ್ತಿರುವ ಅಗ್ನಿ-ಈ ಎರಡು ವಾರಪತ್ರಿಕೆಗಳ ಕೆಲವು ವಿವರಗಳನ್ನು ನಾನಿಲ್ಲಿ ಮಂಡಿಸುತ್ತೇನೆ. ಈ ಇಬ್ಬರೂ ಸಂಪಾದಕರು ಸಾಹಿತಿಗಳು, ಬರಹಗಾರರು. ಮೊದನೆಯವರು ಕವಿಯೂ ಆಗಿದ್ದಾರೆ. ಇವರಿಬ್ಬರಿಗೂ ಪಾತಕಲೋಕದೊಂದಿಗೆ ಸಂಬಂಧವಿದೆ ಎನ್ನುವ ಗಾಳಿಸುದ್ದಿ ಇದೆ. ಎರಡನೆಯವರು ತಮ್ಮ 'ಅಪರಾಧ' ಜಗತ್ತಿನ ತಿಳಿವಳಿಕೆಯನ್ನು ತಮ್ಮ ಬರವಣಿಗೆಯಲ್ಲಿ ಮೆರೆದಿದ್ದಾರೆ. ರುಚಿಕಟ್ಟಾದ ಜೆನ್ ಉಲ್ಲೇಖಗಳು, ತಮ್ಮ ಎಸ್ಟೀಮ್ ಮತ್ತು ರೆಡ್ ಜಿಪ್ಸಿ ಕಾರುಗಳು, ಪಡ್ಡೆ ಹುಡುಗರ ಭಾಷೆ ('ಲವ್ ಲವಿಕೆ' ಕಾಲಂ) ಅಳವಡಿಸಿಕೊಂಡಿರುವ ಬೆಳಗೆರೆಯ 'ಹಾಯ್ ಬೆಂಗಳೂರ್' 'ಅಗ್ನಿ'ಯಂತೆಯೆ ಜಾಗತೀಕರಣ ವಿರೋಧಿ ಭಾವನೆಗಳನ್ನು ಅಭಿವ್ಯಕ್ತಿಸಿದೆ. ಈ ಪತ್ರಿಕೆ ವರದಿಗಾರರ ಹಲವು  ಲೇಖನಗಳು ಕನ್ನಡ ಪರವಾದ 'ಅನ್ಯ'  ವಿರೋಧಿ ನಿಲುವನ್ನು ಬಿಂಬಿಸಿದೆ. ಅನ್ಯರು ಯಾವಾಗಲೂ ಮೇಲ್ದರ್ಜೆಯವರಾಗಿದ್ದು, ಹಣವಂತರು, ವ್ಯಾಪಾರಿಗಳು ಮತ್ತು ಸಾಫ್ಟ್ ವೇರ್ ಕ್ಷೇತ್ರದವರಾಗಿದ್ದಾರೆ. ಅವರೆಲ್ಲ ಜಯನಗರ ಅಥವಾ ಇಂದಿರಾ ನಗರದಂತಹ ಸುರಕ್ಷಿತ ಹೊರವಲಯದಲ್ಲಿ ವಾಸಿಸುತ್ತಿದ್ದಾರೆ. ಉನ್ನತ ಶಿಕ್ಷಣಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳೆಲ್ಲ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳ ಪಬ್ ಗಳಲ್ಲಿರುತ್ತಾರೆ. ವಲಸಿಗ ತಮಿಳು ಕೂಲಿಕಾರರು ಮತ್ತು ಬೀದಿ ವ್ಯಾಪಾರಿಗಳಂಥ ಬಡ ಅನ್ಯಭಾಷಿಕರು ಸಾಮಾನ್ಯವಾಗಿ ಕನ್ನಡ ಪರ ಹಿಂಸೆಯ ಪರಿಣಾಮಗಳನ್ನು ಅನುಭವಿಸುವವರು. ಇವರ ಬಗ್ಗೆ ಈ ಪತ್ರಿಕೆಗಳು ಚಕಾರವೆತ್ತುವುದಿಲ್ಲ. ತಮಿಳು ವಿರೋಧಿ ಹೇಳಿಕೆಗಳ ಪರಿಣಾಮ ಇವರನ್ನು ಸ್ಪಷ್ಟವಾಗಿ ಗುರಿಪಡಿಸಿದೆ.
ನವೀನ ಮತ್ತು ಅಗ್ಗದ ತಂತ್ರಜ್ಞಾನ ಎಲ್ಲ ಕಡೆ ವಿಭಿನ್ನ ಬಗೆಯ ಜನಪ್ರಿಯ ಸಾಂಸ್ಕೃತಿಕ ಕಲಾ ಮಾಧ್ಯಮವಾದ ಆಡಿಯೋ ಕ್ಯಾಸೆಟ್ಅನ್ನು ಒದಗಿಸಿದೆ. ಇದು ಕನ್ನಡದಲ್ಲಿ ಇಂದು ಮೊದಲ ಬಾರಿಗೆ ಭಕ್ತಿಗೀತೆ, ಜನಪದ ಗೀತೆ ಮತ್ತು ಮಿಮಿಕ್ರಿ ಪರಂಪರೆಯಿಂದಾಚೆಗೆ ಹೊರಟು ಸಮಕಾಲೀನ ರಾಜಕಾರಣದ ವೀಕ್ಷಕ ವಿವರಣೆ ಕ್ಷೇತ್ರಕ್ಕೆ ಕಾಲಿರಿಸಿದೆ2.  ರಾಜಕುಮಾರ್ ಅಪಹರಣದ ಹಿನ್ನೆಲೆಯಲ್ಲಿ ಹನ್ನೊಂದು ಆಡಿಯೋ ಕ್ಯಾಸೆಟ್ಟುಗಳನ್ನು ಹೊರತರಲಾಗಿದೆ. ಅವುಗಳಲ್ಲಿ ಒಂಬತ್ತು ಕನ್ನಡ, ಒಂದೊಂದು ಹಿಂದಿ ಮತ್ತು ಉರ್ದು ಭಾಷೆಯಲ್ಲಿದೆ. ಇವುಗಳ ತಯಾರಿಕೆಯ ತಾಂತ್ರಿಕ ಗುಣಮಟ್ಟ ಉನ್ನತವಾಗಿದ್ದು, ಹೊರಕವಚ ಸುಂದರವಾಗಿದೆ. ಇವುಗಳಲ್ಲಿ ಪ್ರಸಿದ್ಧ ಹಾಸ್ಯನಟರು, ಕಲಾವಿದರು, ಹಿನ್ನೆಲೆ ಗಾಯಕರು ಮತ್ತು ರಂಗಭೂಮಿ ನಟರು ತಮ್ಮ ಕಂಠದಾನ ಮಾಡಿದ್ದಾರೆ. ಮೊದಲ ಕ್ಯಾಸೆಟ್ಟು ಅಪಹರಣವಾದ ಹತ್ತು ದಿನಗಳ ನಂತರ ಹೊರಬಂದರೆ, ಕೊನೆಯ ಕ್ಯಾಸೆಟ್ಟು ಅಪಹರಣವಾದ ಎರಡು ತಿಂಗಳ ನಂತರ ಬಿಡುಗಡೆಯಾಗಿದೆ. ಲಂಕೇಶ್ ಪತ್ರಿಕೆಯ ಲೇಖನವೊಂದು ನಮಗೆ ತಿಳಿಸುವ ಹಾಗೆ ಪ್ರತಿಯೊಂದು ಆಡಿಯೋ ಕಂಪನಿಗಳು ಪ್ರತಿ ಕ್ಯಾಸೆಟ್ಟಿನ 20-25 ಸಾವಿರ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಗಾಂಧಿಬಜಾರಿನ ಒಂದು ಚಿಕ್ಕ ಕ್ಯಾಸೆಟ್ ಅಂಗಡಿಯಲ್ಲಿ ಒಂದು ವಾರಕ್ಕೆ ಸುಮಾರು 100 ಕ್ಯಾಸೆಟ್ಟುಗಳು ಮಾರಾಟವಾಗಿವೆ(ಬೆಲೆ ರೂ. 25 ರಿಂದ 30)3. ಮೈಸೂರು, ಕೋಲಾರ ಮತ್ತಿತ್ತರ ಊರುಗಳಿಂದ ಬೆಂಗಳೂರಿಗೆ ಬರುವ ಚಿಲ್ಲರೆ ವ್ಯಾಪಾರಿಗಳಲ್ಲಿ ಪ್ರತಿಯೊಬ್ಬರೂ ಸುಮಾರು 30 ಪ್ರತಿಗಳನ್ನು ಕೊಳ್ಳುತ್ತಾರೆ.
ಅವುಗಳ ರಚನೆ ಸರಳ ಸ್ವರೂಪದ್ದಾಗಿವೆ. ಅವು ಹರಿಕತೆಯ ಧಾಟಿಯಲ್ಲಿದ್ದು, ಎರಡು ಗಂಡು ಧ್ವನಿ ಕೇಳಿ ಬರುತ್ತದೆ. ಒಬ್ಬರ ಪ್ರಶ್ನೆಗೆ ಮತ್ತೊಬ್ಬರು ಉತ್ತರಿಸಿದ್ದು, ಯಾವಾಗಲಾದರೊಮ್ಮೆ ಮಗದೊಬ್ಬರ ಪ್ರವೇಶವಿರುತ್ತದೆ. ಸ್ತ್ರೀ ಪಾತ್ರಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ. ಸಂಭಾಷಣೆಗಳ ನಡುವೆ ಹಾಡುಗಳನ್ನು ಮೇಲಿಂದ ಮೇಲೆ ಬಳಸಲಾಗಿದೆ. ಆ ಹಾಡುಗಳಲ್ಲಿ ಕೆಲವನ್ನು  ಹೆಂಗಸರು ಹಾಡಿದ್ದಾರೆ. ಅವು ಸಂದರ್ಭಕ್ಕೆ ತಕ್ಕ ಹಾಗೆ ರಚನೆಯಾಗಿರದಿದ್ದರೂ ರಾಜಕುಮಾರ್ ಹಾಡಿದ ಇಲ್ಲವೆ ಅವರ ಮೇಲೆ ಚಿತ್ರೀಕರಿಸಿದ ಪ್ರಸಿದ್ಧ ಹಾಡುಗಳ ರಿಮಿಕ್ಸ್ ಮಾಡಿದ ಚೌಚೌ ಹಾಡುಗಳಿವೆ. ಉದಾಹರಣೆಗೆ, ಎರಡು ಕನಸು (1974) ಚಿತ್ರದ  'ಎಂದೆಂದು ನಿಮ್ಮನು ಮರೆತು ನಾನಿರಲಾರೆ' ಎಂಬ ಮಂಜುಳ ಜೊತೆ ಹಾಡುವ ಯುಗಳ ಗೀತೆಯನ್ನು  'ಎಂದೆಂದು ನಿಮ್ಮನು ಮರೆತು ನಾನಿರಲಾರೆ / ನಾನೆಂದು ಕನ್ನಡ ಬಿಟ್ಟು ಬದುಕಿರಲಾರೆ' ಎಂದು ಬದಲಾಯಿಸಲಾಗಿದೆ. ಈ ಮೂಲಕ ರಾಜಕುಮಾರ್ ತನ್ನ ಅಭಿಮಾನಗಳೊಂದಿಗೆ ಮತ್ತು ಕನ್ನಡ ನುಡಿಯೊಂದಿಗೆ ಯುಗಳ ಗೀತೆ ಹಾಡುತ್ತಿರುವಂತೆ ಮಾಡಲಾಗಿದೆ. ರಾಜಕುಮಾರ್ ಕನ್ನಡ ಮತ್ತು ಕನ್ನಡಾಭಿಮಾನಿಗಳನ್ನು ಮರೆತು ಬದುಕಿರಲು ಸಾಧ್ಯವಿಲ್ಲ / ಕನ್ನಡವನ್ನು ಬಿಟ್ಟು ಜೀವಿಸಲು ಸಾಧ್ಯವಿಲ್ಲ (ಮಂಗನ ಕೈಯಲ್ಲಿ ಮಾಣಿಕ್ಯ)ವೆಂದು ಹೇಳಿಸಲಾಗಿದೆ. ಸಿನಿಮಾ ಹಾಡುಗಳನ್ನು ಹೀಗೆ ಬದಲಾಯಿಸಿದಾಗ, ಬದಲಾದ ಪದಗಳು ಪ್ರಸ್ತುತ ಸಂದರ್ಭಕ್ಕೆ ಸಂಬಂಧಿಸಿರುತ್ತವೆ. ಇಲ್ಲವೆ ರಾಜಕುಮಾರ್ ಅಭಿಮಾನಿಗಳನ್ನು ಕುರಿತು ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ಕೆಲವು ಕ್ಯಾಸೆಟ್ ಗಳಲ್ಲಿ ಆ ಸಂದರ್ಭಕ್ಕೆ ರಚನೆ ಮಾಡಿದ ಹಾಡುಗಳು ಸಂಗ್ರಹವಾಗಿವೆ (ನಾಡಿನ ಅಣ್ಣ ಕಾಡಿನಲ್ಲಿ, ರಾಜಣ್ಣ ನಾಡಿಗೆ ಬಾರಣ್ಣ). ಒಂದು ಕ್ಯಾಸೆಟ್ಟಿನಲ್ಲಿ ಜನಪದ ಪ್ರದರ್ಶನ ಕಲೆಯಾದ ಕಂಸಾಳೆ ಶೈಲಿ ಬಳಕೆಯಾಗಿದ್ದರೆ, ಮತ್ತೊಂದರಲ್ಲಿ ಉತ್ತರ ಕರ್ನಾಟಕದ ಆಡುಮಾತಿನ ಶೈಲಿ ಅಳವಡಿಸಿಲಾಗಿದೆ. ಒಂದು ಕ್ಯಾಸೆಟ್ ಜಾನಪದ ಶೈಲಿಯಿಂದ ಹೇಳಿಕೊಂಡರೂ ವಾಸ್ತವವಾಗಿ ಸಿನಿಮಾ ಗೀತೆಗಳ ಧಾಟಿಯೆ ಆಗಿದೆ. ಎರಡು ಟೇಪುಗಳನ್ನು ಸಂಜೆ ಸ್ಫೋಟ, ಪೋಲೀಸರ ಹೋರಾಟ ಮತ್ತು ಸ್ಟಾರ್ ಆಫ್ ಬೆಂಗಳೂರು ಪತ್ರಿಕೆಗಳ ಸಂಪಾದಕರ ತಂಡ ಸಂಯುಕ್ತವಾಗಿ ತಯಾರಿಸಿದೆ. ಒಂದನ್ನು ಎಐಎಡಿಎಂಕೆ ಪದಾಧಿಕಾರಿ ಕೆ.ಮುತ್ತು ಪ್ರಾಯೋಜಿಸಿದ್ದರೆ ಮತ್ತೊಂದರ ರಚನೆಯನ್ನು ತಮಿಳಿಗ ಬೆಂಗಳೂರು ಪಳಿನಿ ತಯಾರು ಮಾಡಿದ್ದಾರೆ.
ಕ್ಯಾಸೆಟ್ಟುಗಳ ಭಾಷೆ ಮತ್ತು ಪ್ರತಿಮೆಗಳ ಬಳಕೆ ಹಾಗೂ ಪತ್ರಿಕೆಗಳ ಲೇಖನಗಳು ಮತ್ತು ಸಂಪಾದಕೀಯಗಳ ನಡುವೆ ಮಹತ್ವಪೂರ್ಣವಾದ ಸಾಮ್ಯತೆ ಇದೆ. ಆದರೆ ಅವುಗಳ ದನಿಗಳಲ್ಲಿ ವ್ಯತ್ಯಾಸವಿದೆ. ಪತ್ರಿಕೆಗಳಲ್ಲಿ ಗಾಂಭಿರ್ಯ ಮತ್ತು ಅಪರೂಪದ ಅಣಕವಿದ್ದರೆ ಕ್ಯಾಸೆಟ್ಟುಗಳಲ್ಲಿ ರಾಜ್ ಕುಮಾರ್ ಕುರಿತ ಪ್ರೀತಿ ಮತ್ತು ಹಾಸ್ಯ ಅಭಿವ್ಯಕ್ತಗೊಂಡಿದೆ. ಪತ್ರಿಕೆಗಳಲ್ಲಿ ಗೊಂದಲ ಕುರಿತಂತೆ ಅಪಕ್ವ ರಾಜಕಾರಣಿಗಳನ್ನು ದೂಷಿಸಿ ಕ್ರ್ರಿಯಾಶೀಲರಾಗಲು ಉದ್ದೀಪಿಸಲಾಗಿದೆ. ಕ್ಯಾಸೆಟ್ಟುಗಳಲ್ಲಿ ಕೂಡ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡರ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಿ ಚುಚ್ಚಲಾಗಿದೆ. ಏಕೆ ವೀರಪ್ಪನ್ ಈ ರಾಜಕಾರಣಿಗಳನ್ನು ಅಪಹರಿಸಿಲ್ಲ? ಏಕೆ ಅವನು ವರ್ಲ್ಡ್ ಬ್ಯಾಂಕ್ ಹಣ ನುಂಗಿದ ವಿಧಾನಸೌಧದ ಬಿಳಿ ಆನೆಗಳನ್ನು ಅಪಹರಣ ಮಾಡಲಿಲ್ಲ?'' (ಅರಣ್ಯದಲ್ಲಿ ಅಣ್ಣಾವ್ರು). ರಾಜಕಾರಣಿಗಳನ್ನು ಅಪಹರಣ ಮಾಡಿದರೆ ಜನತೆ ಗಂಭೀರವಾಗಿ ಪರಿಗಣಿಸುವುದಿಲ್ಲ, ಇದರಿಂದ ವೀರಪ್ಪನ್ ಉದ್ದೇಶ ಈಡೇರುವುದಿಲ್ಲ ಎಂಬುದು ಸಾಮಾನ್ಯ ಉತ್ತರ. ಖಾದಿ ಮತ್ತು ಖಾಕಿ ತೊಡುವವರೆಲ್ಲ ಸೀರೆ ಉಟ್ಟುಕೊಂಡು ಬಳೆ ತೊಡಲಿ, ಸೌಟು ಹಿಡಿಯಲಿ ಎಂದು ಕ್ಯಾಸೆಟ್ಟೊಂದು ಟೀಕೆ ಮಾಡುತ್ತದೆ (ಕಾಡಿನಲ್ಲಿ ನಮ್ಮ ಅಣ್ಣಾವ್ರು). ಈ 'ನಷ್ಟ; ಮತ್ತು 'ದುಃಖ'ದ ನಿರೂಪಣೆಗಳಲ್ಲಿ ಪ್ರಸ್ತುತ ಸಂದರ್ಭ ರೂಪಿತವಾಗಿದ್ದು, ಕನ್ನಡಿಗನ ದುಸ್ಥಿತಿಯ ಚಿತ್ರಣ ಪ್ರಮುಖ ಪಾತ್ರವಹಿಸುತ್ತದೆ.
ಕ್ಯಾಸೆಟ್ಟಿನ ಪಾತ್ರಗಳಾದ ಕಲ್ಲಣ್ಣ-ಈರಣ್ಣ, ಸಂಗ್ಯಾ-ಬಾಳ್ಯಾ, ಬಶೀರ್-ಕಹತೂನಬ್ಬ ತಮ್ಮ ನೆಚ್ಚಿನ ನಾಯಕನಿಗೆ ಒದಗಿಬಂದ ದುಸ್ಥಿತಿ ಕುರಿತು ಸಂತಾಪ ವ್ಯಕ್ತಪಡಿಸುತ್ತವೆ. ಅಲ್ಲದೆ ಅವು ತಮ್ಮಲ್ಲೊಬ್ಬನನ್ನು ಅಥವಾ ವೀರಪ್ಪನ್ ನನ್ನು ಉದ್ದೇಶಿಸಿ, ಅಪಮಾನಿಸುವ ಹಾಸ್ಯ ಅಳವಡಿಸಿಕೊಂಡಿವೆ. ಬಹುಪಾಲು ಕ್ಯಾಸೆಟ್ಟುಗಳಲ್ಲಿ ಮಂಡ್ಯ ಶೈಲಿಯ ಆಡುಮಾತನ್ನು ಅಳವಡಿಸಿಕೊಳ್ಳಲಾಗಿದೆ. ದಕ್ಷಿಣ ಕರ್ನಾಟಕದ ಹಳೆಯ ಮೈಸೂರು ಪ್ರಾಂತ್ಯಕ್ಕೆ ಸೇರಿದ ಮಂಡ್ಯದ ಮಹತ್ವವನ್ನು ಇಲ್ಲಿ ಗುರುತಿಸಬಹುದು. ಮಂಡ್ಯ ಬೆಂಗಳೂರು ಮೈಸೂರು ನಡುವಿನ ತುಂಬ ಫಲವತ್ತಾದ ಉಳುಮೆ ಭೂಮಿ ಹೊಂದಿದ ಪ್ರದೇಶ. ಇಲ್ಲಿಗೆ 1930ರಲ್ಲಿ ಮೈಸೂರಿನ ದಿವಾನರಾಗಿದ್ದ ಎಂ.ವಿಶ್ವೇಶ್ವರಯ್ಯ ಕಟ್ಟಿಸಿದ ಕಾವೇರಿ ನದಿ ಆಧಾರಿತ ಕಾಲುವೆಗಳು ನೀರನ್ನೊದಗಿಸುತ್ತವೆ. ಒಕ್ಕಲಿಗ ಕೇಂದ್ರಿತ ರಾಜಕೀಯ ಮತ್ತು ಆರ್ಥಿಕ ವಲಯ ಸುಭದ್ರವಾಗಿದೆ. ಶ್ರೀಮಂತ ಗೌಡ ಜನಾಂಗದ ಒಕ್ಕಲಿಗರು / ರೈತರು ಒಂದೆರಡು ದಶಕಗಳಿಂದ ಆದಿಚುಂಚನಗಿರಿ ಮಠಕ್ಕೆ ಕೊಡುಗೆ ನೀಡುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಹಲವಾರು ವರ್ಷಗಳಿಂದ ಮಂತ್ರಿಮಂಡಲದಲ್ಲಿ ಮಂಡ್ಯ ಶಾಸಕರಿಗೆ ಪ್ರಾತಿನಿಧ್ಯ ಒದಗಿಸಿವೆ. ಪ್ರಸಕ್ತ (ಹಿಂದಿನ) ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರು ಮಂಡ್ಯ ಪ್ರದೇಶದಿಂದ ಬಂದವರಾಗಿದ್ದು, ಈ ಹುದ್ದೆಗೇರಿದ ಈ ಪ್ರದೇಶದ ಮೊದಲ ಶಾಸಕರು. ಕನ್ನಡ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಮಧ್ಯಮ ವರ್ಗದ ಆಡುಮಾತು ನಗರದ ಕೂಲಿಕಾರ್ಮಿಕರ ಭಾಷಾಶೈಲಿಗೆ ತುಂಬ ಹತ್ತಿರವಾಗಿದ್ದು ಹಾಸ್ಯ ನಿರೂಪಣೆ ಹೆಚ್ಚಾಗಿ ಬಳಕೆಯಾಗುತ್ತದೆ.
ಸಂಕ್ಷಿಪ್ತವಾಗಿ ಹೇಳಬೇಕಾದರೆ, ಕ್ಯಾಸೆಟ್ಟುಗಳಲ್ಲಿ ರಾಜ್ ಕುಮಾರ್ ರ ವೈಭವೀಕರಣ ಮತ್ತು ಅಪಹರಣಕಾರನ ಹನನ ಮಾಡುತ್ತಿರುವುದು ಕಂಡುಬರುತ್ತದೆ. ಕ್ಯಾಸೆಟ್ಟುಗಳಿಂದ ಮೈಪಡೆದ ರಾಜ್ ಕುಮಾರ್ ರ ಚಿತ್ರ ಕನ್ನಡಿಗರ (ಅಭಿಮಾನಿ-ವಾಚ್ಯಾರ್ಥದಲ್ಲಿ ಮತ್ತೊಬ್ಬರ ಬಗೆಗೆ ಗೌರವಾದರ ಹೊಂದಿರುವವನು) ಚಿತ್ರವನ್ನು ರೂಪಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ. ರಾಜ್ ಕುಮಾರ್ ಅವರನ್ನು ಘೋಷ ಉದ್ಘೋಷದ ಶೈಲಿಯಲ್ಲಿ ಹೊಗಳಲಾಗುತ್ತದೆ. ಒಂದಾದ ಮೇಲೊಂದು ಅವರ ಬಿರುದುಗಳನ್ನು ಕನ್ನಡ ಕಂಠೀರವ, ಕನ್ನಡ ಕುಲತಿಲಕ, ಕೆಂಟುಕಿ ಕರ್ನಲ್ (ಅವರಿಗೆ ದೊರೆತ ಅಮೆರಿಗನ್ನಡ ಪ್ರಶಸ್ತಿಗೆ ಸಂಬಂಧಿಸಿದೆ), ದಾದಾ ಸಾಹೇಬ್ ಫಾಲ್ಕೆ ವಿಜೇತ, ಬಡವರ ಬಂಧು, ಪದ್ಮಭೂಷಣ, ಕನ್ನಡಿಗರ ದೇವರು, ಬಹದ್ದೂರ್ ಗಂಡು ಎಂದು ಉಲ್ಲೇಖಿಸಲಾಗುತ್ತದೆ. ಒಬ್ಬರು ಘೋಷಣೆ ಹಾಕಿದರೆ ಇಡೀ ಸಮೂಹ ಸರಳವಾಗಿ 'ರಾಜಣ್ಣ' ಅಥವಾ 'ಡಾ.ರಾಜ್ ಅವರಿಗೆ ಜಯವಾಗಲಿ' ಎಂದು ಜಪಿಸುವ ರೀತಿಯಲ್ಲಿ ಪ್ರತಿಘೋಷಣೆ ಕೂಗುತ್ತದೆ. ಅಂಥ ಉನ್ನತ ಕನ್ನಡಿಗನ ಅಪಹರಣ ಕುರಿತು ಉಗ್ರ ಪ್ರತಿಭಟನೆ (ವೀರಪ್ಪನ್ ಬೇಡಿಕೆಗಳನ್ನೆಲ್ಲ ಟೇಪುಗಳಲ್ಲಿ ನಮೂದಿಸಿದ್ದರೂ) ಸಾಮಾನ್ಯವಾಗಿ  ಎರಡು ವಿವಾದಗಳಲ್ಲಿ ಕೇಂದ್ರಿಕೃತವಾಗಿರುತ್ತದೆ.  ಒಂದು-ಕಾವೇರಿ ನೀರು, ಎರಡು-ಭಾಷೆಯ ಪ್ರಶ್ನೆ. ಎಐಡಿಎಂಕೆ ಪದಾಧಿಕಾರಿಗಳು ಪ್ರಾಯೋಜಿಸಿದ ಕ್ಯಾಸೆಟ್ಟು ಹಾಗೂ ಹಿಂದಿ ಮತ್ತು ಉರ್ದು ಕ್ಯಾಸೆಟ್ಟುಗಳು ಭಾಷಾ ವಿವಾದವನ್ನು ಹೆಸರಿಸುವುದೆ ಇಲ್ಲ. ಇವರ ಆತಂಕ, ಶಾಂತಿಯುತ ಸಹಜೀವನ ಮಾಡುವುದನ್ನು ಕುರಿತಾಗಿದೆ: ಹಮಾರಾ ಸ್ಟೇಟ್ ಅಚ್ಛಾ ರೆಹನಾ''(ನಮ್ಮ ರಾಜ್ಯ ಚೆನ್ನಾಗಿರಬೇಕು) ಎಂದು ಬಶೀರ್ 'ಆಜ್ ಕಾ ವೀರಪ್ಪನ್' ಕ್ಯಾಸೆಟ್ಟಿನಲ್ಲಿ ಹೇಳಿದ್ದಾನೆ. ಇದನ್ನು ಕೋಲಾರದ ಕಹತೂನಬ್ಬ ನಾಟಕ ಕಂಪನಿ ತೆಲುಗು ಮತ್ತು ಕನ್ನಡ ಭಾಗಗಳನ್ನು ಹೊರತುಪಡಿಸಿ (ಕನ್ನಡ ಹಾಸ್ಯ ನಟ ಧೀರೇಂದ್ರ ಗೋಪಾಲ್, ತೆಲುಗು ಹಾಸ್ಯ ನಟ ನೂತನ್ ಪ್ರಸಾದ್ ಮತ್ತು ಎನ್.ಟಿ.ರಾಮರಾವ್ ಅವರ ಅನುಕರಣೆ ಮೂಲಕ) ಸಂಪೂರ್ಣವಾಗಿ ದಖನಿ ಉರ್ದುವಿನಲ್ಲಿ ಪ್ರಸ್ತುತ ಪಡಿಸಿದೆ. ಅದರ ಕೇಂದ್ರಬಿಂದು ನದಿನೀರಿನ ಪ್ರಶ್ನೆಯಾಗಿದ್ದು, ವೀರಪ್ಪನ್ ಅದರ ಮೇಲೆ ನ್ಯಾಯಯುತವಲ್ಲದ ಅಧಿಕಾರ ಚಲಾಯಿಸುವುದಾಗಿದೆ.ಜಂಗಲ್ ಮೆ, ಉಸೆ ಕೈಕು ಕಾವೇರಿ ಕ ಪಾನಿ ಕ ಜರೂರತ್ ರೆ?'' (ಅಡವಿಯಲ್ಲಿರೋ ಅವನಿಗೆ ಕಾವೇರಿ ನೀರಿನ ಅಗತ್ಯವೇನು?). ಗೌಡ ಮತ್ತು ಅವನ ಕಾರಿನ ಕುರಿತಾದ ಜನಪ್ರಿಯ ದಂತಕತೆಯನ್ನು ಒಂದಕ್ಕಿಂತ ಹೆಚ್ಚು ಕ್ಯಾಸೆಟ್ಟುಗಳಲ್ಲಿ ಹೇಳಲಾಗಿದೆ4 . ಗೌಡನೊಬ್ಬ ಒಮ್ಮೆ ತಮಿಳುನಾಡಿನಲ್ಲಿ ಕಾರು ನಡೆಸಿಕೊಂಡು ಹೋಗುತ್ತಿದ್ದ. ದಾರಿ ಮಧ್ಯದಲ್ಲಿ ಅವನ ಕಾರು ಅಪಘಾತಕ್ಕೆ ಈಡಾಯಿತು. ಕಾರಿನ ಹಿಂದಿನ ಚಕ್ರ ಕೆಸರಿನಲ್ಲಿ ಹೂತುಹೋಯಿತು. ಅವನಿಗೆ ಏನು ಮಾಡಬೇಕೆಂದು ತೋಚದಿದ್ದಾಗ ಅವನ ಮುಂದೆ ಹಾದು ಹೋಗುತ್ತಿದ್ದ ಐದು ಜನ ಅವನನ್ನು ಕನ್ನಡದಲ್ಲಿ ಮಾತನಾಡಿಸಿ ಸಹಾಯ ಮಾಡಬಹುದೆ ಎಂದು ಕೇಳಿದರು. ಗೌಡ ಅಚ್ಚರಿಗೊಂಡು ನಿಮಗೆ ಕನ್ನಡ ಹೇಗೆ ಗೊತ್ತು ಎಂದು ಕೇಳಿದ. ನಾವು ಮಂಡ್ಯದಲ್ಲಿ ಕೂಲಿಕಾರರಾಗಿದ್ದೀವಿ ಎಂದರು. ನಂತರ ಅವರು ಕಾರನ್ನು ಕೆಸರಿನಿಂದ ಹೊರಗೆಳೆದು ನಿಲ್ಲಿಸಿದರು. ಗೌಡ ಕೃತಜ್ಞತೆಯಿಂದ ನೋಟಿನ ಕಂತೆ ಹೊರತೆಗೆದು ಅವರಿಗೆ ಒಂದಲ್ಲ, ಎರಡಲ್ಲ, ಮೂರು ಐದುನೂರು ರೂಪಾಯಿಯ ನೋಟು ಕೊಟ್ಟ. ಅವರು ಪ್ರತಿಭಟಿಸಿ ನಾವು ಸಹಾಯ ಮಾಡಲು ಮಾತ್ರ ಆಸಕ್ತರು, ಅದಕ್ಕೆ ಹಣ ಪಡೆಯಲು ಬಯಸುವುದಿಲ್ಲವೆಂದು ಹೇಳಿ ಹಣ ಪಡೆಯಲು ನಿರಾಕರಿಸಿದರು. ಗೌಡನ ಒತ್ತಾಯಕ್ಕೆ ಮಣಿದು ಅವರು ಕೊನೆಗೂ ಹಣ ಪಡೆದರು. ಅವನು ಹೊರಡುತ್ತ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದರಿಂದ ನಿಮ್ಮ ಊರಿಗೆ ಹೆಚ್ಚು ನೀರು ಬಂದಿರಬೇಕಲ್ಲ? ಎಂದು ಕೇಳಿದ. ಅವರು, ಹೌದು ನಮಗೆ ಹೆಚ್ಚು ನೀರು ಬಂತು ಎಂದು ಹೇಳಿದರು. ಹಾಗಾದರೆ ನೀವು ಒಳ್ಳೆಯ ಬೆಳೆ ಬೆಳೆದಿರಬೇಕು ಎಂದು ಗೌಡ ಕೇಳಿದ. ಓ... ಇಲ್ಲ ನಾವು ಏನನ್ನೂ ಬೆಳೆಯಲಿಲ್ಲವೆಂದು ತಮಿಳು ರೈತರು ಹೇಳಿದರು. ನಾವಿಲ್ಲಿ ಹಳ್ಳ ತೋಡಿದ್ದೀವಿ. ರಸ್ತೆ ಪಕ್ಕ ನಿಂತು ಕಾಯುತ್ತೀವಿ. ಪ್ರತಿದಿನ ಐದಾರು ಕಾರುಗಳು ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ನಾವು ಡ್ರೈವರ್ ಗಳಿಗೆ ಸಹಾಯ ಮಾಡ್ತೀವಿ. ಈ ಮೂಲಕ ಚೆನ್ನಾಗಿ ಹಣ ಗಳಿಸ್ತೀವಿ. ಈ ಕತೆ ಕೇಳಿದ ಮೇಲೆ ಗೌಡ 'ತಮಿಳರು ಎಷ್ಟೊಂದು ಜಾಣರು' ಎಂದು ತೀವ್ರ ವಿಷಾದದಿಂದ ಹೇಳುತ್ತಾನೆ. ಇಲ್ಲಿ ವೀರಪ್ಪನ್ ನ ನಿಜವಾದ ಬಲಿಪಶುವಾಗಿ ಮಂಡ್ಯದ ಗೌಡ ಚಿತ್ರಿತವಾಗಿರುವುದನ್ನು ಕಾಣಬಹುದು. ಕತೆಯಲ್ಲಿ ಚಿತ್ರಿತವಾಗಿರುವ ಹಾಗೆ ಕಾವೇರಿ ನೀರು ತಮಿಳುನಾಡಿಗೆ ಹೋಗುತ್ತಿರುವುದರಿಂದ ಮಂಡ್ಯಗೌಡ ವಂಚಿತನಾಗಿದ್ದಾನೆ. ``ಕಾಡುಗಳ್ಳ ಕದ್ದ ಮುತ್ತು'' ಕ್ಯಾಸೆಟ್ನ ಪಾತ್ರವೊಂದು ಹೀಗೆ ಹೇಳುತ್ತದೆ-'ಅವರಿಗೆ' ಮೂರು ಬೆಳೆ. 'ನಮಗೆ' ಬರೀ ಎರಡು ಬೆಳೆ. ಮತ್ತೊಂದು ಕ್ಯಾಸೆಟ್ಟಿನಲ್ಲಿ-ಮಕ್ಕಳ ಅಂಡು ತೊಳೆಯಲು ಇಲ್ಲಿ ನೀರಿಲ್ಲ. ಇವನಿಗೆ ಹೆಚ್ಚು ಟಿಎಂಸಿ ನೀರು ಬಿಡಬೇಕು'', (ನರಹಂತಕನ ಬಲೆಯಲ್ಲಿ ಕರುನಾಡಿನ ಹೃದಯ) ಎಂದು ಹೇಳಿದೆ. ಇದರ ಉಪಶೀರ್ಷಿಕೆ 'ಅಭಿಮಾನಿಗಳ ಹೃದಯದಾಳದಿಂದ' ಎಂದಿದೆ. ಈ ಕ್ಯಾಸೆಟ್ಟಿನ ಪರಿಕಲ್ಪನೆ ಮತ್ತು ಸಂಭಾಷಣೆ, ರಚನೆ ತಮಿಳಿಗ ಬೆಂಗಳೂರು ಪಳನಿ ಅವರದ್ದು. ಇದನ್ನು ಕೆ.ದೇವರಾಜ್ ಗೋಕಾಕ್ ಅವರು ಉತ್ತರ ಕರ್ನಾಟಕದ ಶೈಲಿಯಲ್ಲಿ ಅನುವಾದಿಸಿದ್ದಾರೆ.

ತಮಿಳರು ಮತ್ತು ನಾವು
ಯಾರು ಕನ್ನಡಿಗರು ಎಂಬ ಪ್ರಶ್ನೆಯನ್ನು ಯಾರು ಕನ್ನಡಿಗರಲ್ಲ ಎಂಬ ಅರ್ಥದಲ್ಲಿ ಕೇಳಲಾಗುತ್ತದೆ. ಹಾಯ್ ಬೆಂಗಳೂರು ಪತ್ರಿಕೆಯ ಆಗಸ್ಟ್ 25, 2000 ಸಂಚಿಕೆಯ ಸಂಪಾದಕೀಯ ತಮಿಳರು ತಮ್ಮ ಭಾಷೆಯ ಬಗ್ಗೆ ದುರಭಿಮಾನ ಹೊಂದಿರುವುದನ್ನು ಸೂಚಿಸುತ್ತದೆ. ಈ ದುರಭಿಮಾನದಿಂದ ಉಂಟಾದ ಅತಿರೇಕವನ್ನು 'ನಮ್ಮ' ನಿರಭಿಮಾನದಿಂದ ಹುಟ್ಟಿದ ಕಡು ದುಃಖದೊಂದಿಗೆ ಹೋಲಿಸಿ ಅದರ ವೈರುಧ್ಯವನ್ನು ಕಾಣಿಸಲಾಗಿದೆ. ತಮಿಳರು ರಾಷ್ಟ್ರ ವಿರೋಧಿಗಳು (ಎಲ್ ಟಿಟಿಇ ಮತ್ತು ಐಎಸ್ಐಗಳೊಂದಿಗಿನ ಸಂಪರ್ಕ ಎಲ್ಲರಿಗೂ ತಿಳಿದ ವಿಷಯ) ಮತ್ತು ಆತ್ಮಾಹುತಿ ಚಟುವಟಿಕೆಯಲ್ಲಿ ಪ್ರವೃತ್ತರು. ನಾವು ಅಂಥವರಲ್ಲ, ನಾವು 'ಮರ್ಯಾದಸ್ಥ' ಜನ, ಎಂದು ಈ ಸಂಪಾದಕೀಯ ಹೇಳುತ್ತದೆ.
ವೀರಪ್ಪನ್ ನನ್ನು, ಅವನ ಜೀವನದ ಈ ಹಂತದಲ್ಲಿ, ಒಬ್ಬ ಕಳ್ಳ, ದರೋಡೆಕೋರ ಎಂದಷ್ಟೇ ಅಲ್ಲದೆ ತಮಿಳಿಗ ಎಂದೂ ಗುರುತಿಸಲಾಗುತ್ತದೆ. ಈ ಬಗೆಯ ಮರುಗುರುತಿಸುವಿಕೆ ವೀರಪ್ಪನ್ ನ ಸಹಚರರಿಗೆ ಸಂಬಂಧಿಸಿದುದಾಗಿದೆ. ಕೆಲವರು ಇದನ್ನು ಹೊಸ ಬಗೆಯ ಬೇಡಿಕೆ ಎಂದು ಗ್ರ್ರಹಿಸುತ್ತಾರೆ. ತಮಿಳುನಾಡಿನಲ್ಲಿ ಇದು ತನ್ನದೆ ಆದ ಪರಿಣಾಮಗಳನ್ನು ಸ್ಪಷ್ಟವಾಗಿಯೆ ಮೂಡಿಸಲಿದೆ. ನಾವಿಲ್ಲಿ ಕನ್ನಡ ಗುರುತನ್ನು ಕುರಿತ ಚರ್ಚೆ ಇದರ ಪರಿಣಾಮವನ್ನು ಗಮನಿಸುವುದರ ಬಗ್ಗೆ ಆಸಕ್ತರಾಗಿದ್ದೇವೆ. ಹಾಯ್ ಬೆಂಗಳೂರು ಪತ್ರಿಕೆಯ ಆಗಸ್ಟ್ 25ರ ಸಂಚಿಕೆಯ ಸಂಪಾದಕೀಯ ``ಕನ್ನಡಿಗರ ಆತ್ಮಾಭಿಮಾನ ಕೆದಕಲು ಪರಭಾಷೆಯನ್ನಾಡುವ ಜನ ಹಿಂದೆಂದು ಈ ರೀತಿ ಕನ್ನಡಿಗರ ಮನದಾಳಕ್ಕೆ ಕೈ ಹಾಕಿರಲಿಲ್ಲ''ವೆಂದು ಹೇಳುತ್ತದೆ. ಒಂದು ವಾರದ ನಂತರ ಅಂದರೆ, ಸೆಪ್ಟಂಬರ್ 1, 2001ರಂದು ಹಾಯ್ ಬೆಂಗಳೂರು ``ಇಷ್ಟೆಲ್ಲ ನಡೆದ ಮೇಲೂ ನಾವು ಅಸಹಾಯಕರಾಗಿ ಸಹನೆಶೀಲತೆಯನ್ನು ಉಳಿಸಿಕೊಳ್ಳಬೇಕೆ?'' ಎಂದು ವಾಚ್ಯವಾಗಿಯೆ ಕೇಳಿತು. ಈ ಸಂಪಾದಕೀಯ ತಮಿಳು ಉಗ್ರರ ಎದುರು ಕನ್ನಡಿಗರು ಪೂರ್ವಸಿದ್ಧರಾಗಿರದ ಬಗ್ಗೆ ಮಾತನಾಡುತ್ತದೆ. ವೀರಪ್ಪನ್, ಮಾರನ್ ಮತ್ತು ಕರುಣಾನಿಧಿ-      ಎಲ್ ಟಿಟಿಇ, ಹೆರಾಯಿನ್ ಮತ್ತು ಶಸ್ತ್ರಾಸ್ತ್ರ ಮಾರಾಟದ ನಡುವಿನ ಸಂಬಂಧವನ್ನು ಸೂಚಿಸುತ್ತದೆ. 'ಅವರ' ಮೆಶಿನ್ ಗನ್ನು ಮತ್ತು ನೆಲಬಾಂಬುಗಳೊಂದಿಗೆ 'ನಮ್ಮ' ಪೂಜೆ, ಭಜನೆ, ಉರುಳುಸೇವೆಗಳಿಗಿರುವ ವೈರುಧ್ಯವನ್ನು ಕಾಣಿಸುತ್ತದೆ. ಕನ್ನಡಿಗರು ಏಕೆ ನಿಧಾನವಾಗಿ ಅಸಹಾಯ ಸ್ಥಿತಿಗೆ ಮರುಳುತಿದ್ದಾರೆ ಎಂದು ಕೇಳಲಾಗಿದೆ. ನಮ್ಮ ನಲ್ಲಿಯ ನೀರು ಕೂಡ ಇಷ್ಟರಲ್ಲೆ ಅವರ ಗನ್ ಬ್ಯಾರೆಲ್ ಗಳಿಂದ ನಿಯತ್ರಿತವಾಗುತ್ತದೆ ಎಂದು ಹಾಯ್ ಬೆಂಗಳೂರು ಎಚ್ಚರಿಸುತ್ತದೆ.
ಸಾರ್ವಜನಿಕ ವಲಯದಲ್ಲಿ ಪೌರುಷತ್ವ ಮತ್ತೆ ಮತ್ತೆ ಕನ್ನಡಿಗರ ಸಹನೆ ಕುರಿತ ಕಲ್ಪನೆಯಾಗಿ ಮರುಕೊಳಿಸುತ್ತದೆ. ಹಾಯ್ ಬೆಂಗಳೂರು ಪತ್ರಿಕೆಯ ಪ್ರಕಾರ ಕರ್ನಾಟಕ ಸರಕಾರ 200 ತಮಿಳು ಶಾಲೆಗಳನ್ನು ನಡೆಸುತ್ತಿದೆ. ಬೆಂಗಳೂರು ಒಂದರಲ್ಲೆ 12 ಜನ ತಮಿಳು ಕಾರ್ಪೋರೇಟರುಗಳಿದ್ದಾರೆ. ಹಲವಾರು ತಮಿಳು ಐಎಎಸ್ ಅಧಿಕಾರಿಗಳು, ಪೋಲಿಸ್ ಪಡೆ ಮತು ಶಾಸಕರು ಇಲ್ಲಿದ್ದಾರೆ. ಅವರನ್ನೆಲ್ಲ ನಾವು ಪ್ರೀತಿಸಿದ್ದೇವೆ. ಅವರನ್ನು ನಾವು ಸಹಿಸಿಕೊಂಡಿದ್ದೇವೆ. ಆದರೆ ತಮಿಳುನಾಡಿನಲ್ಲಾದ ಬದಲಾವಣೆಯ ಹಿನ್ನೆಲೆಯಲ್ಲಿ ನಾವು ನಮ್ಮ ಅಸಹಾಯಕ ಸಹನೆಯನ್ನು ಮುಂದುವರಿಸಬೇಕೆ? ಈ ಪ್ರಶ್ನೆಯನ್ನು ನಾವು ನಮಗೆ ಕೇಳಿಕೊಳ್ಳಬೇಕು'' (ಸೆಪ್ಟಂಬರ್ 1, 2000). ಕನ್ನಡಿಗರು ಮತ್ತು ತಮಿಳಗರ ನಡುವಿನ ವೈರುಧ್ಯದ ಬಗ್ಗೆ ಕ್ಯಾಸೆಟ್ಟು ಮತ್ತು ಪತ್ರಿಕೆಗಳಲ್ಲಿ ನೀಡಲಾಗಿರುವ ಸಾಮಾನ್ಯ ಉದಾಹರಣೆ ಹೀಗಿದೆ: 'ಬೆಂಗಳೂರಿನಲ್ಲಿ ತಮಿಳರ ಕೊಳಚೆ ಪ್ರದೇಶಗಳು ಇರುವ ಹಾಗೆ ಚೆನ್ನೈನಲ್ಲಿ ಕನ್ನಡಿಗರ ಕೊಳಚೆ ಪ್ರದೇಶಗಳಿವೆಯೆ?' ತಮಿಳುನಾಡಿನಲ್ಲಿ ಕನ್ನಡಿಗರೆ ಇಲ್ಲವೆಂಬುದು ಇಲ್ಲಿಯ ಅಂಶವಲ್ಲ. ಆದರೆ ಅವರು ಸ್ಥಳೀಯರೊಂದಿಗೆ ಬೆರತುಹೋಗಿದ್ದಾರೆಯೆ ಹೊರತು ಕರ್ನಾಟಕದ ತಮಿಳರ ಹಾಗೆ ಅವಿಧೇಯರಾಗಿ ಉಳಿದಿಲ್ಲ. ಈ ಅಂಶ  ಒಂದು ದೃಷ್ಟಿಯಿಂದ ಕನ್ನಡಿಗರ ಒಳ್ಳೆಯ ಸ್ವಭಾವವನ್ನು ನಿರೂಪಿಸುತ್ತಿರಬಹುದು, ಮತ್ತೊಂದು ದೃಷ್ಟಿಯಿಂದ ತಮಿಳರ ಸ್ಥಳೀಯ ಜನಸಂಖ್ಯೆಯ ಒಂದು ಭಾಗವೆಂದು ಒತ್ತಿ ಹೇಳದೆ ಪ್ರತ್ಯೇಕ 'ತಮಿಳರ ಕೊಳಚೆ ಪ್ರದೇಶಗಳು' ತಲೆ ಎತ್ತುವಲ್ಲಿ ಕನ್ನಡಿಗರ ಸಹನೆ ಒಪ್ಪಿಗೆ ನೀಡಿದೆ ಎಂಬಂಶವನ್ನು ಅದು ಸ್ಥಳೀಯರಲ್ಲಿ ಮೂಡಿಸುತ್ತದೆ.
ಹೀಗಿದ್ದರೂ ತಮಿಳರು ತಮ್ಮ ಸುತ್ತಲ ಕನ್ನಡವನ್ನು ಮರೆತು ಬಿಟ್ಟಿಲ್ಲ. ಕತ್ತೇಗೇನು ಗೊತ್ತು ಕಸ್ತೂರಿ ಕಂಪು ಎಂಬ ಕ್ಯಾಸೆಟ್ಟಿನಲ್ಲಿ ಹೇಳಿರುವ ಹಾಗೆ ಸಜ್ಜನ ತಮಿಳರೂ ಇದ್ದಾರೆ. ಈ ಕ್ಯಾಸೆಟ್ಟಿನಲ್ಲಿ ರಾಜ್ ಕುಮಾರ್ ಕನ್ನಡಿಗರ ಅಣ್ಣನಾಗಿರುವ ಹಾಗೆಯೆ ತಮಿಳರಿಗೂ ಅಣ್ಣನಾಗಿದ್ದಾರೆ. ತಮಿಳರೂ ರಾಜ್ ಕುಮಾರ್ ನನ್ನು ಆರಾಧಿಸುತ್ತಾರೆ. ಕನ್ನಡ ವಾಕ್ಯದಲ್ಲಿ ತಮಿಳು ಪದಗಳನ್ನು ಬಳಸುವ ಶೈಲಿಯಲ್ಲಿ ಮಾತನಾಡುತ್ತ, ರಾಜಣ್ಣ ನಿಮಕ್ಕೂ ಅಣ್ಣ, ನಮಕ್ಕೂ ಅಣ್ಣ. ಅವರ ಮೇಲೆ ನಮಗೆ ರುಂಬ ಭಕ್ತಿ ಇರ್ಕದು'' ಎಂದು ಒಳ್ಳೆಯ ತಮಿಳನ್ನು ಹೇಳುತ್ತಾನೆ. ಮತೊಬ್ಬ ಸಜ್ಜನ ತಮಿಳಿಗ ಅಂದರೆ ಬೆಂಗಳೂರು ರೌಡಿ, ಬೆಕ್ಕಿನ ಕಣ್ಣು ರಾಜೇಂದ್ರ (ಆಗಸ್ಟ್ 25, 2000ರ ಅಗ್ನಿ ಸಂಚಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ). ಅವನು ಭಾಷೆ ಆಧಾರಿತ ಕೃತ್ಯಗಳು ಮತು ಹಿಂಸೆಯನ್ನು ಖಂಡಿಸುತ್ತಾನೆ ಮತು ಹೀಗೆ ಕೇಳಿಕೊಳ್ಳುತ್ತಾನೆ : ``ಆ ಪಾತಕಿಗಳೊಂದಿಗೆ ನಮ್ಮನ್ನು ಹೋಲಿಸಬೇಡಿ''. ಇದೇ ಸಂಚಿಕೆಯ ಸಂಪಾದಕೀಯದಲ್ಲಿ ಅಗ್ನಿ ಪತ್ರಿಕೆ ಮರಗೆಲಸ ಮಾಡುವ ಷಣ್ಮಗುಂ ಮತ್ತು ಕಂತ್ರಾಟುದಾರ ಅಣ್ಣಾಮಲೈ ಕುರಿತು ಚರ್ಚಿಸಿದೆ: ``ಅವರ ಹಿರಿಯರು ತಮಿಳುನಾಡಿನಿಂದ ಬಂದಿರಬಹುದು. ಆದರೆ ಅವರಿಗೆ ಇಲ್ಲಿರಲು ಹಕ್ಕುಗಳಿವೆ. ಅವರನ್ನು ಕನ್ನಡಿಗರನ್ನಾಗಿ ಮಾಡುವ ಪರಿಸ್ಥಿತಿಯನ್ನು ನಾವು ನಿರ್ಮಿಸಬೇಕಿದೆ. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯುವ, ಮಾತಾಡುವ ಸ್ಥಿತಿಯನ್ನು ನಾವು ಸೃಷ್ಟಿಸಬೇಕು''. ಪ್ರಭುತ್ವ ಮತು ನಾಗರಿಕ ಸಮಾಜದ ತಪ್ಪಿನಿಂದಾಗಿ ಕನ್ನಡ ಬಲಹೀನವಾಗಿದೆ ಎಂಬ ಬಹುಜನಪ್ರಿಯ ಗ್ರಹಿಕೆ ಇಲ್ಲಿದೆ. ಕರ್ನಾಟಕದಲ್ಲಿ ತಮಿಳನ್ನು ಎರಡನೆಯ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ವೀರಪ್ಪನ್ ನ ಬೇಡಿಕೆಯನ್ನು ಕುರಿತು ಕ್ಯಾಸೆಟ್ಟೊಂದರಲ್ಲಿ ಹೀಗೆ ಉದ್ಗಾರ ತೆಗೆಯಲಾಗಿದೆ: ``ನಾವು ಕನ್ನಡವನ್ನು ಮೊದಲ ಭಾಷೆಯನ್ನಾಗಿ ಮಾಡಲು ಹೋರಾಡುತಿದ್ದೇವೆ. ಅವನು ತಮಿಳನ್ನು ಮತ್ತೊಂದು ಅಧಿಕೃತ ಭಾಷೆಯನ್ನಾಗಿ ಮಾಡಬಯಸಿದ್ದಾನೆ!''5
ಬಿಕ್ಕಟ್ಟು ಬೆಳೆದಂತೆಲ್ಲ ಒಂದು ನಿರ್ದಿಷ್ಟ ಕನ್ನಡ ಅಸಹಾಯಕತೆ ಕಾಣಿಸಿಕೊಳ್ಳುತ್ತದೆ. ಇದು ಪ್ರಭುತ್ವ ಆ ಸಂದರ್ಭಕ್ಕೆ  ಪ್ರತಿಕ್ರಿಯಿಸಿದ ರೀತಿಯ ನಿರ್ವಚನಾ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಹಾಯ್ ಬೆಂಗಳೂರು ಪತ್ರಿಕೆಯ ಸೆಪ್ಟಂಬರ್ 15, 2000ದ ಸಂಚಿಕೆಯ ಸಂಪಾದಕೀಯ ಖಿನ್ನತೆಯಿಂದ ಕೂಡಿದೆ:ತಮಿಳರು ಕನ್ನಡಿಗರನ್ನು ತಮಾಷೆಯ ವಸ್ತುವಾಗಿ ನೋಡುತ್ತಾರೆ. ರಾಜ್ ಕುಮಾರ್ ಕಾಡಿನಲ್ಲಿ ನಲವತ್ತು ದಿನ ಅಸ್ವಸ್ಥರಾಗಿ ಕಳೆದ ನೋವನ್ನು ಒಂದು ದಿನ ಮರೆತುಬಿಡಬಹುದು: ಆದರೆ ಅವರು ತಮಿಳರಿಂದ ಅನುಭವಿಸಿದ ಅಪಮಾನವನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡಿಗರು ವಿಜಯದ ಕ್ಷಣವನ್ನು ಎದುರು ನೋಡುತ್ತ ಮನೆಯಲ್ಲಿ ಕುಳಿತುಕೊಳ್ಳುವುದು ದಿನನಿತ್ಯದ ದಿನಚರಿಯಾಗಿಬಿಟ್ಟಿದೆ. ನಮಗೆಲ್ಲರಿಗಿಂತ ನೀವು(ಎಸ್.ಎಂ.ಕೃಷ್ಣ) ಹೆಚ್ಚು ಅಪಾಯಕಾರಿಯಾಗಿ ಕುಳಿತಿದ್ದೀರಿ. ಇದು ಘಟಿಸಬಾರದು, ಸ್ವಾಮಿ, ಇತಿಹಾಸ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ.''
ಮೊದಲ ಕ್ಯಾಸೆಟ್ಟಾಗಿ ಬಿಡುಗಡೆಯಾದ 'ಮಂಗನ ಕೈಯಲ್ಲಿ ಮಾಣಿಕ್ಯ', ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕೀಯದ ಕೆಲವು ಅಂಶಗಳನ್ನು ಪುನರುಚ್ಛರಿಸುತ್ತದೆ. ಕನ್ನಡಿಗರ ಅಭಿಮಾನ ಶೂನ್ಯತೆ ಮತು ತಮಿಳರ ದುರಭಿಮಾನ-ಇದೇ ನುಡಿಗಟ್ಟುಗಳಲ್ಲಿ ಅವರ ನಡುವಿನ ವೈರುಧ್ಯ ಕಾಣಿಸಲಾಗಿದೆ. ಕರ್ನಾಟಕದಲ್ಲಿ ತಮಿಳರ, ಮರಾಠಿಗರ ಹಲವು ಕಾಲನಿಗಳಿವೆ. 'ಅಲ್ಲಿ ಕನ್ನಡಿಗರೂ ವಾಸ ಮಾಡುತ್ತಿದ್ದು ಅವರ ಪ್ರತ್ಯೇಕ ಪ್ರದೇಶಗಳು ಕಾಣುವುದಿಲ್ಲ. ಕರ್ನಾಟಕದಲ್ಲಿ ಕನ್ನಡವನ್ನು ಹುಡಕಬೇಕಾಗಿಬಂದಿದೆ-ಇನ್ನೇನು ನಾವೆಲ್ಲ ನಮ್ಮ ನಾಡನ್ನು ಬಿಟ್ಟುಹೋಗಬಹುದಾದ ಪರಿಸ್ಥಿತಿ ಬರಬಹುದು. ಕರ್ನಾಟಕ ಸಹನೆ, ಶಾಂತಿ ಮತ್ತು ಸಹಜೀವನಕ್ಕೆ ಮತೊಂದು ಹೆಸರು. ಅಣ್ಣಾವ್ರ ಅಪಹರಣವಾದಾಗ ಏನಾಯಿತು? ಕರ್ನಾಟಕ ಹೊತ್ತಿಕೊಂಡು ಉರಿಯಬೇಕಾಗಿತ್ತು. ಆಗ ನಾವು ದಂಗೆ ಏಳುವ ಬದಲು ಯಾಗಯಜ್ಞ ಮಾಡಿದೆವು. ಹಿಂಸೆಯ ಬದಲು ಪ್ರಾರ್ಥನೆ ಮಾಡಿದೆವು. ಶಪಿಸುವ ಬದಲು ಮಂತ್ರ ಜಪಿಸಿದೆವು. ನಾವು ಅವರ ವಿರುದ್ಧ ಕೈ ಎತ್ತುವ ಬದಲು ಅವರೊಂದಿಗೆ ಕೈ ಜೋಡಿಸಿದೆವು. ಉರುಳಿಸುವ ಬದಲು ಉರುಳುಸೇವೆ ಮಾಡಿದೆವು. ಕ್ರಾಂತಿ ತಿಲಕವಿಟ್ಟುಕೊಳ್ಳುವ ಬದಲು ಶಾಂತಿ ಸಿಂಧೂರವಿಟ್ಟುಕೊಂಡೆವು.'' 6
ಕನ್ನಡದ ಪುರುಷತ್ವ
ಅಗ್ನಿ ಪತ್ರಿಕೆ ಸೆಪ್ಟಂಬರ್ 18, 2000ರ ಸಂಚಿಕೆಯ ಸಂಪಾದಕೀಯದಲ್ಲಿ ಜನರು ಕಾಡಿಗೆ ಹೋಗಿ ರಾಜ್ ಕುಮಾರ್ ನನ್ನು ಕಾಪಾಡಬೇಕೆಂದು ಕರೆ ನೀಡಿತು. ಸಾವಿರಾರು ಯುವಕರು ತಮಗೆ ಫೋನ್ ಕರೆ ಮಾಡಿ ಕಾಡಿಗೆ ಹೋಗಲು ಸಿದ್ಧರಿರುವುದರ ಬಗ್ಗೆ ಪ್ರತಿಕ್ರಿಯಿಸುತ್ತ ಸಂಪಾದಕ ಶ್ರೀಧರ್, ಬೆರಳೆಣಿಕೆ ಜನ ಮಾತ್ರ ನೀಡಿದ ಎಚ್ಚರಿಕೆಯನ್ನು ಶಾಂತಿ/ಅಹಿಂಸೆ ಹೇಡಿತನವಾಗದಿರಲಿ'' ಎಂದು ಖಂಡಿಸಿದರು(ಅಗ್ನಿ,ಆಗಸ್ಟ್ 25). ಒಂದು ತಿಂಗಳ ನಂತರವೂ ಭಯ ಬಿಡಿ. ಕುರಿಗಳಾಗದಿರಿ''(ಸೆಪ್ಟಂಬರ್ 22) ಎಂದು ಓದುಗರನ್ನು ಪ್ರೇರೇಪಿಸಿದರು. ಹಾಯ್ ಬೆಂಗಳೂರು ಮತ್ತು ಅಗ್ನಿಯ ಹೇಡಿಗಳಾಗದಿರಿ ಎಂದು ಉದ್ರೇಕಿಸುವ ಮಾತುಗಳನ್ನು ಕನ್ನಡಿಗರು ಮತ್ತು ತಮಿಳರನ್ನು ಪರಸ್ಪರ ವಿರೋಧಿ ರೂಪದಲ್ಲಿ ಚಿತ್ರಿಸುವುದರೊಂದಿಗೆ ಜೋಡಿಸಿ ನೋಡಿದರೆ ಹೊಸ ಕನ್ನಡ ವ್ಯಕ್ತಿತ್ವ ರೂಪುಗೊಳ್ಳುತ್ತಿರುವುದನ್ನು ಕಾಣಬಹುದು. ಅಗ್ನಿ ಪತ್ರಿಕೆಯ ಶ್ರೀಧರ್ ಆಗಸ್ಟ್ 25ರ ಸಂಚಿಕೆಯ ಲೇಖನದಲ್ಲಿ 'ಹುಲಿಯಲ್ಲಿ ಹಿಜಡಾ' ಎಂದು ವಿರೋಧಿ ದೃಷ್ಟಿಕೋನದಿಂದ ವ್ಯಾಖ್ಯಾನ ಮಾಡುವುದನ್ನು ಮುಂದುವರೆಸಿದರು. ಈ ಲೇಖಕರು ನಿಜವಾದ ಗಂಡಸು ಅಂದರೆ ಯಾರು?'' ಎಂದು ಕೇಳಿದರು. ವೀರಪ್ಪನ್ದು ಎರಡು ಬಗೆಯ ಚಿತ್ರಗಳಿವೆ. ಒಂದು-ಮೀಸೆ ಇರುವ ಚಿತ್ರ. ಇನ್ನೊಂದು-ಮೀಸೆಯಿರದ ಚಿತ್ರ. ಇವು ಕಾಡಿನಲ್ಲಿ ಇನ್ನುಳಿದ ಫೋಟೋಗಳೊಂದಿಗೆ ತೆಗೆದ ಚಿತ್ರಗಳು. ವೀರಪ್ಪನ್ ಗೆ ನಿಜವಾದ ಮ್ಯಾನ್ಲಿ ಮೌಲ್ಯ ಮತ್ತು ಗಂಡಸುತನಗಳಿವೆಯೆ? ಮುಕ್ತ ಮನಸ್ಸಿನಿಂದ ಈ ಪ್ರಶ್ನೆಯನ್ನು ಪರಿಶೀಲಿಸೋಣ. ಪಾತಕ ಜಗತ್ತಿನ ಬಗೆಗೆ ನನಗಿರುವ ತಿಳುವಳಿಕೆ ಮತ್ತು ಅನುಭವ ನಿಮಗೆ ಗೊತ್ತಿದೆ. ಮನುಷ್ಯ ಗುಣಗಳನ್ನು ನಿಜವಾಗಿಯೂ ಹೊಂದಿರುವವನು ತಾನು ಮಾಡುವುದನ್ನು ವೈಭವೀಕರಿಸುವುದೆ ಮರೆತುಬಿಡುತ್ತಾನೆ. ಕೇವಲ ಅಶಕ್ತರು ಮತ್ತು ಹೇಡಿಗಳು ಮಾತ್ರ ತಮ್ಮ ಕೃತ್ಯಗಳನ್ನು ಬಡಾಯಿ ಕೊಚ್ಚಿಕೊಳ್ಳುತ್ತಾರೆ (ಶ್ರೀಧರ್, ದಿನವೊಂದಕ್ಕೆ ಐವತ್ತು ಕಿ.ಲೋ.ಮೀಟರ್ ನಡೆಯುವುದು, ಕಾಡನ್ನು ಚೆನ್ನಾಗಿ ತಿಳಿದಿರುವುದು, ಉಳಿದ ವಿಷಯಗಳೊಂದಿಗೆ ಮ್ಯಾನ್ಲಿ ರೂಪಿಸುತ್ತದೆಯೆ ಎಂದು ಕೇಳುತ್ತಾರೆ. ಇಷ್ಟು ದೂರದ ಹಾದಿಯನ್ನು ಯಾವುದೇ ಅಭ್ಯಾಸವಿಲ್ಲದೆ ಪ್ರತಿಯೊಬ್ಬರೂ ನಡೆಯಲು ಸಾಧ್ಯ, ಕಾಡಿನಲ್ಲಿ ವಾಸಿಸುವ ಪ್ರತಿಯೊಂದು ಬುಡಕಟ್ಟಿಗೂ ಇದು ಚೆನ್ನಾಗಿ ಗೊತ್ತು ಎಂದು ಹೇಳುತ್ತಾರೆ. ಹೀಗಿರುವಾಗ ಹೇಗೆ ವಿಶೇಷ ಗುಣವಾಗುತ್ತೆ?). ಹಿಟ್ಲರ್ ಒಬ್ಬ ಹಿಜಡಾನಾಗಿದ್ದ. ಅವನಲ್ಲಿ ಅಲ್ಪಸ್ವಲ್ಪವಾದರೂ ಮ್ಯಾನ್ಲಿನೆಸ್ ಇದ್ದಿದ್ದರೆ ಅವನು ಅಷ್ಟು ಕ್ರೂರಿಯಾಗುತ್ತಿರಲಿಲ್ಲ. ಹಾಗಿದ್ದರೆ ವೀರಪ್ಪನ್ ನನ್ನು ನಾವು ಏನೆಂದು ಕರೆಯಬೇಕು? ಹೆಣ್ಣಿಗನೆ, ಲಿಂಗ ಪರಿವರ್ತನೆ, ಲಿಂಗವಿಲ್ಲದವನೆ? ನಮ್ಮ ಹುಡುಗರು ಏಕದನಿಯಲ್ಲಿ ಹೇಳುತ್ತಾರೆ : ಚಕ್ಕಾ (ಷಂಡ).''7 ಈ ಲೇಖನದಲ್ಲೆಲ್ಲೂ ರಾಜ್ ಕುಮಾರ್ ರವರ ಹೆಸರು ಪ್ರಸ್ತಾಪವಾಗಿಲ್ಲ. ಆದರೂ ವೀರಪ್ಪನ್ನ ಮ್ಯಾನ್ಲಿನೆಸ್ ನ ಚರ್ಚೆಯಲ್ಲಿ ರಾಜ್ ಕುಮಾರ್ ಅವ್ಯಕ್ತವಾಗಿ ಸೂಚಿತ ಕೇಂದ್ರವಾಗಿದ್ದಾರೆ.
ವೀರಪ್ಪನ್ನಲ್ಲಿ ಎದ್ದುಕಾಣುವ ಮುಖ್ಯ ಲಕ್ಷಣವೆಂದರೆ ಅವನ ದೊಡ್ಡಮೀಸೆ. ಅದು ಗಂಡಸುತನದ ಚರ್ಚಿಗೆ ಅನುಕೂಲಕರವಾಗಿ ಒದಗಿದೆ. ವೀರಪ್ಪನ್ನನ್ನು ಕ್ಯಾಸೆಟ್ಟೊಂದರಲ್ಲಿ ಹೀಗೆ ನೇರವಾಗಿ ಸಂಬೋಧಿಸಲಾಗಿದೆ: ನಿನ್ನ ಮೀಸೆಗೆ ಬೆಂಕಿ ಹಾಕ/ ಗಂಡಸಾದರೆ ಎದುರಿಗೆ ಬಾರೋ.../ ಕನ್ನಡದೋರು ಗಂಡುಗಳು/ ನಿನಗೆ ಯಾಕೋ ಗೊತಿಲ್ಲ'' ('ರಾಜಣ್ಣ ನಾಡಿಗೆ ಬಾರಣ್ಣ'ದಿಂದ). ಹಲವು ಕ್ಯಾಸೆಟ್ಟುಗಳಲ್ಲಿ ಖಳನಾಯಕನ ಪ್ರತಿಷ್ಠೆಗೆ ಮಸಿ ಬಳಿಯಲು ಉಪಾಯವೊಂದನ್ನು ಅನುಸರಿಸಲಾಗಿದೆ, ಅದೆಂದರೆ ತೃಣೀಕರಿಸುವುದು.  'ವೀರಯೋಧರು ಕೂಡ ಹೀಗೆ ಆಟವಾಡಿಲ್ಲ. ಇವನು ಆಟವಾಡುವ ಧೈರ್ಯ ಮಾಡಿದ್ದಾನೆ. ಅವನ ಮೀಸೆ ತುಂಬ, ಕಸ, ಕಡ್ಡಿ, ಕೊಳೆ, ಹುಳ, ತಿಗಣೆ ತುಂಬಿವೆ,' (ಕಾಡಗಳ್ಳ ಕದ್ದ ಮುತ್ತು). ಉಸ್ಕಾ ಮುಚ್ಚಾ ಮೆ ಮಟ್ಟಿ ಪಡೊ. ಉಸ್ಕಾ ಮುಚ್ಚಾ ಮೆ ಕೀಡಾ ಪಡೊ'' (ಅವನ ಮೀಸೆಗೆ ಮಣ್ಣು ಹಾಕ, ಅವನ ಮೀಸೆಗೆ ಹುಳ ಬೀಳ) ಎಂದು 'ಆಜ್ ಕಾ ವೀರಪ್ಪನ್'ನಲ್ಲಿ ಬಶೀರ್ ಮತ್ತು ಅವನ ಸ್ನೇಹಿತರು ಹೇಳುತ್ತಾರೆ.
'ಕಾಡಿನಲ್ಲಿ ಕನ್ನಡ ರತ್ನ' ಕ್ಯಾಸೆಟ್ಟಿನಲ್ಲಿ ರಾಜ್ ಕುಮಾರ್ ಮತ್ತು ವೀರಪ್ಪನ್ ನಡುವೆ ಉದ್ದವಾದ ಸಂಭಾಷಣೆ ನಡೆಯುತ್ತದೆ. ಅದು ಮೀಸೆಯ ಲಕ್ಪ್ಷಣಗಳನ್ನು ಕೇಂದ್ರೀಕರಿಸಿದ ಚರ್ಚೆಯಾಗಿದೆ. ಕ್ಯಾಸೆಟ್ಟಿನ ನುಣುಪು ಹೊದಿಕೆ ಮೇಲೆ ಪ್ರಸ್ತುತ ದಿನಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನೀಟಾಗಿ ಶೇವ್ ಮಾಡಿದ ಮತ್ತು ನುಣುಪು ತಲೆಯ, ಅಭಿಮಾನಿಗಳನ್ನು  ಅಭಿನಂದಿಸುತ್ತಿರುವ ರಾಜ್ ಕುಮಾರ್ ಚಿತ್ರ ಹಾಗೂ ಗಡ್ಡ-ಮೀಸೆ ಎದ್ದು ಕಾಣುವ ವೀರಪ್ಪನ್ ನ ವ್ಯಂಗ್ಯ ಚಿತ್ರವಿದೆ. ಕಾಡಿನಲ್ಲಿ ರಾಜ್ ಕುಮಾರ್ ಮತ್ತು ವೀರಪ್ಪನ್ ಮಾತಾಡುತ್ತಿದ್ದಾರೆ. ವೀರಪ್ಪನ್ ತನ್ನ ಹಿತ ಕಾಪಾಡಿಕೊಳ್ಳಲು ಶರಣಾಗತನಾಗಬೇಕೆಂದು ರಾಜ್ ಕುಮಾರ್ ಒತ್ತಾಯಿಸುತ್ತಾರೆ. ಆಗ ವೀರಪ್ಪನ್ ಹೇಳುತ್ತಾನೆ : ನಾನು ಶರಣಾದರೆ ನನ್ನ ಮೀಸೆಗೆ ಅವಮಾನ''. ರಾಜ್ ಕುಮಾರ್ ಹೇಳುತಾರೆ: ನಿಮಗೆ ಬಹಳ ಅದ್ಭುತ ಮೀಸೆ ಇದೆ ಅಂತ ತಿಳಿದಿದ್ದೀರಾ?  ನೀವು ನನ್ನ ಅಪ್ಪಾಜಿ ಪುಟ್ಟಸ್ವಾಮಯ್ಯ ಅವರ ಹೆಸರು ಕೇಳಿದ್ದೀರಾ? ನಮ್ಮ ಅಪ್ಪಾಜಿಗೆ ನಿಮ್ಮ ಮೀಸೆಗಿಂತ ದೊಡ್ಡ ಮೀಸೆಯಿತ್ತು. ನಿಮ್ಮಿಬ್ಬರ ನಡುವಿನ ವ್ಯತ್ಯಾಸವೆಂದರೆ  ನಮ್ಮ ಅಪ್ಪಾಜಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಾಗ ಮೀಸೆ ತಿರುವುತ್ತಿದ್ದರು. ನೀವು? ಇನ್ನೊಬ್ಬರಿಗೆ ಹಿಂಸೆಕೊಟ್ಟಾಗ, ಕೊಲೆ ಮಾಡಿದಾಗ ಮೀಸೆ ತಿರುವುತ್ತೀರಿ.  ವೀರಪ್ಪನ್ ನಿಮ್ಮ ಮೀಸೆಗೆ ಒಂದು ಪೈಸೆ ಬೆಲೆನೂ ಇಲ್ಲ. ನಾನು ನಿಮ್ಮ ಮೀಸೆಯನ್ನು ದಿಟ್ಟಿಸಿ ನೋಡಿದಾಗ ನನಗೇನೂ ಭಯವಿಲ್ಲ. ನಿಮ್ಮನ್ನು ನೋಡಿ ನಗು ಬರುತ್ತೆ ಅಷ್ಟೆ.. ಕೇವಲ ಮೀಸೆಯಿಂದ ಯಾರಾದರೂ ಜನರನ್ನು ಭಯಪಡಿಸುವುದಾದರೆ ಎಲ್ಲರೂ ಮೀಸೆ ಬೆಳೆಸುತ್ತಿದ್ದರಷ್ಟೆ.. ಜನರನ್ನು ಹೆದರಿಸುವ ಬದಲು, ಅವರಲ್ಲಿ ಪ್ರೀತಿಯಿಂದ ನಂಬಿಕೆ ಹುಟ್ಟಿಸಬೇಕು''.
ಸಭ್ಯ ಹಾಗೂ ಆತ್ಮೀಯನ ಹಾಗೆ ಕಾಣುವ ರಾಜ್ ಕುಮಾರ್ ಕನ್ನಡತನ ಮತ್ತು ಕನ್ನಡ ಪುರುಷತ್ವದ ಸಾಧ್ಯತೆಗಳನ್ನು ಒಳಗೊಂಡಿದ್ದಾರೆ. ಅವರ ಈ ವ್ಯಕ್ತಿತ್ವವೇ ಸಾಂಪ್ರದಾಯಿಕ ಪುರುಷತ್ವದ ಸಾಧ್ಯತೆಗಳನ್ನು ಸಾಧಿಸಬಹುದಾದ ತಮ್ಮ ಅಭಿಮಾನಿಗಳನ್ನು ಹಿಂಸೆಯಿಂದ ಹಿಂದೆ ಉಳಿಯುವಂತೆ ಮಾಡಿದೆ. ರಾಜ್ ಕುಮಾರ್ ರ ಬಹುಪಾಲು ಐತಿಹಾಸಿಕ, ಪ್ರಣಯ, ಸಿಐಡಿ ಚಿತ್ರಗಳ ಪುರುಷತ್ವದ ಇಮೇಜಿಗಿಂತ ಅವರ ಇಂದಿನ ವಯಸ್ಸಾದ ವ್ಯಕ್ತಿತ್ವ ಸಮಕಾಲೀನ ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿರುವಂತೆ ಕಾಣುತ್ತದೆ. ಅವರು ತಮ್ಮ ಅಭಿಮಾನಿಗಳು ಹಿಂಸಾಕೃತ್ಯದಲ್ಲಿ ತೊಡಗದಿರಲು ಮಾಡಿಕೊಂಡ ಮನವಿಯ ಮುದ್ರಿತ ಟೇಪುಗಳನ್ನು ಅಥವಾ ಅವರ ಕುಟುಂಬದ ಸದಸ್ಯರು ಅಭಿಮಾನಿಗಳು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು ಎಂದು ಮಾಡಿಕೊಂಡ ವಿನಂತಿಗಳನ್ನು ಕ್ಯಾಸೆಟ್ಟು ಮತು ಪತ್ರಿಕೆಗಳಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಕ್ಯಾಸೆಟ್ಟಿನ ಪಾತ್ರಗಳು ಈ ಮನವಿಯನ್ನು ಪುನರುಚ್ಚರಿಸುತ್ತಾ ಕಾಡಿನಲ್ಲಾಗಲೀ ನಾಡಿನಲ್ಲಾಗಲೀ ಹಿಂಸೆಗೆ ಇಳಿಯದಂತೆ ತಮ್ಮನ್ನು ತಡೆದಿರುವುದು ರಾಜ್ ಕುಮಾರ್ ರವರ ಈ ಮಾತುಗಳೇ ಎಂದು ಹೇಳುತ್ತವೆ.
ಇನ್ನೂ ಕೆಲವು ವ್ಶೆರುಧ್ಯಗಳು ಪುರುಷತ್ವದ ಪ್ರಶ್ನೆಯನ್ನು ಮತ್ತಷ್ಟ್ಟು ವಿಸ್ತರಿಸುತ್ತದೆ. ವೀರಪ್ಪನ್ ಮತ್ತು ರಾಜ್ ಕುಮಾರ್ ಗೆ ಸಂಬಂಧಿಸಿದ ಉಲ್ಲೇಖಗಳು ಕ್ರಮವಾಗಿ ಕಾಡು ಮತು ನಾಡನ್ನು ಪ್ರತಿನಿಧಿಸುತ್ತವೆ. ಪಾಶವೀ ಶಕ್ತಿಯನ್ನು ಸಾತ್ವಿಕ ಶಕ್ತಿಯೊಂದಿಗೆ, ಸ್ಫೋಟಕ ಆಕ್ರಮಣಕಾರಿತನವನ್ನು ನಿರ್ಲಿಪ್ತತೆಯೊಂದಿಗೆ, ರಕ್ತ ಪಿಪಾಸುತನವನ್ನು ಸಭ್ಯತೆಯೊಂದಿಗೆ ಹೋಲಿಸಿ ವೈರುಧ್ಯವನ್ನು ತೋರಿಸಲಾಗಿದೆ. 'ತುಂಬಿದ ಮಡಕೆಯು ತುಳುಕದೆಂಬ ಮಾತಿದೆ, ನಿನ್ನ ಬಾಳು ಮಟ್ಟಿಗೆ ನ್ಶೆಜಚಿತ್ರವಾಗಿದೆ' ಎಂಬ ಕ್ಯಾಸೆಟ್ಟಿನ ಹಾಡು ವೀರಪ್ಪನ್ನ ಹಿಂಸಾ ಜೀವನಕ್ಕೆ ಸಮರ್ಥ ಪ್ರತಿಕ್ರಿಯೆಯಾದ ರಾಜ್ಕುಮಾರ್ರ ಶಾಂತಿಮಂತ್ರವನ್ನು ಮೆಚ್ಚುಗೆಯಿಂದ ಉಲ್ಲೇಖಿಸುತ್ತದೆ8. ತಮಿಳು ಭಾಷಾಭಿಮಾನದೊಂದಿಗೆ ವೀರಪ್ಪನ್ ನನ್ನು ಮರುಗುರುತಿಸುವುದು ಸದ್ಯ ಕರ್ನಾಟಕದಲ್ಲಿ ಸಂಶಯಕ್ಕಡೆಯಿಲ್ಲದಂತೆ ನಡೆಯುತಿರುವ ಪ್ರಕ್ರಿಯೆಯಾಗಿದೆ. ಇದು ತಮಿಳು ವಿರುದ್ಧ ಕನ್ನಡ, ವೀರಪ್ಪನ್ ವಿರುದ್ಧ ರಾಜ್ ಕುಮಾರ್/ ಅಭಿಮಾನಿ ಎಂಬ ಭಾಷಿಕ ಪುರುಷತ್ವಗಳ ಹುಟ್ಟುವಿಕೆಗೆ ಅವಕಾಶ ಒದಗಿಸಿದೆ. ಕನ್ನಡ ರಾಷ್ಟ್ರೀಯ ವಿಚಾರಧಾರೆಯೊಳಗಿನ ಹಲವು ವಿರೋಧಾಭಾಸಗಳನ್ನು ಸೂಚಿಸುವುದರಿಂದ ಕನ್ನೆಡದ ಗುರುತು ಅಗತ್ಯವಾಗಿ ಸೀಳು ವ್ಯಕ್ತಿತ್ವ (ದ್ವಂದ್ವ ವ್ತಕ್ತಿತ್ವ)ವಾಗೇ ರೂಪು ತಳೆದಿದೆ. ಅಭಿಮಾನಿ ಹಿಂಸಾತ್ಮಾಕ ಭಾಷೆಯನ್ನು ಒಂದು ಆಚರಣಾತ್ಮಕ ಹಾವಭಾವವಾಗಿಯೇ ಬಳಸಬೇಕು ಹಾಗೂ ರಾಜ್ ಕುಮಾರ್ ರವರ ಮಾತು ಅವನನ್ನು ನಿಯಂತ್ರಿಸುತ್ತದೆ ಎಂಬಂತಿರಬೇಕು. ಇಂಥ ಇಬ್ಬಗೆಯ ನಡವಳಿಕೆ ಕನ್ನಡದ ಅಭಿಮಾನವನ್ನು ಕಾಪಾಡುವಲ್ಲಿ ಅಗತ್ಯವಾಗಿದೆ9. ಅಣ್ಣಾವ್ರ ಮಾತುಗಳು ಅಥವಾ ಅವರ ಉದಾಹರಣೆಗಳಷ್ಟೆ ಸಾಲುವುದಿಲ್ಲ, ಅವರ ಅಭಿಮಾನಿಗಳನ್ನು ತಡೆಹಿಡಿಯಲು ಅದನ್ನು ಮರುಉತ್ಪಾದಿಸಬೇಕಾಗಿದೆ. ಈ ಅಪಹರಣದ ವಿಚಾರೆಧಾರೆಯಲ್ಲಿ ರಾಜ್ ಕುಮಾರ್ ರ ದೇಹವು ಅವರ ಭಾಷೆ ಮತ್ತು ಹಾವಭಾವಗಳಂತೆ ತಿದ್ದುಪಡಿಗೊಳಗಾಗುತ್ತದೆ. ಕ್ಯಾಸೆಟ್ಟೊಂದರಲ್ಲಿ ರಾಜ್ ಕುಮಾರ್ ಚಿತ್ರಗಳಾದ 'ರಣಧೀರ ಕಂಠೀರವ', 'ರೌಡಿ ರಂಗಣ್ಣ', 'ಚೂರಿ ಚಿಕ್ಕಣ್ಣ', 'ಸಿಪಾಯಿ ರಾಮು', 'ಬಬ್ರುವಾಹನ' (ಅತಿಪುರುಷತ್ವ ನಾಯಕ), 'ಬೇಡರ ಕಣ್ಣಪ್ಪ', 'ಭಕ್ತ ಅಂಬರೀಷ' (ಭಕ್ತನಾಗಿ)10 ಕ್ರಮವಾಗಿ ಹೆಸರಿಸುವುದನ್ನು ಕಾಣುತ್ತೇವೆ. 'ಕನ್ನಡಿಗರ ಹೃದಯಾಂತರಾಳದ ಮಾತು' ಎಂದು ಉಪಶೀರ್ಷಿಕೆಯಿರುವ ಮತ್ತೊಂದು ಕ್ಯಾಸೆಟ್ಟಿನ ರಿಮಿಕ್ಸ್ ಹಾಡಿನಲ್ಲಿ ರಾಜ್ ಕುಮಾರ್ ರನ್ನು ಬಹಾದ್ದೂರ್ ಗಂಡು, ಭೂಪತಿ ಗಂಡು, ಬೆಂಕಿ ಚೆಂಡು, ಫಿರಂಗಿ ಗುಂಡು ಎಂದು ಕರೆಯಲಾಗಿದೆ.11 ರಾಜ್ ಕುಮಾರ್ ರ ದೇಹವನ್ನು 'ಗರಡಿ (ಅಖಾಡ)ಯಲ್ಲಿರುವ ದೇಹವೆಂದು ವಿವರಿಸಲಾಗಿದೆ12.
ಅವರು ಮೈ ಮನಸುಗಳನ್ನು ಶುದ್ಧೀಕರಿಸಿಕೊಂಡ ಒಬ್ಬ ಹಠಯೋಗಿಯ ಹಾಗೆ ಅವರನ್ನು ತೋರಿಸಿದ್ದಾರೆ. ಕ್ಯಾಸೆಟ್ಟೊಂದರಲ್ಲಿ ಯೋಗದ ಮಹತ್ವ ಸೂಚಿಸುವ ಕತೆಯೂ ಇದೆ. ಕಾಡಿನಲ್ಲಿ ವೀರಪ್ಪನ್ ಸೂರ್ಯನಮಸ್ಕಾರ ಮಾಡುವುದು ಹೇಗೆ ಎಂದು ರಾಜ್ ಕುಮಾರ್ ಗೆ ಹೇಳಿಕೊಡಲು ಪ್ರಯತ್ನಿಸುತ್ತಾನೆ. ರಾಜ್ ಕುಮಾರ್ ಮುಗುಳು ನಗುತ್ತ ಹಲವಾರು ಆಸನಗಳಲ್ಲಿ ಮಗ್ನರಾಗುತ್ತಾರೆ. ಅವರು ತಮ್ಮ ಹೊಟ್ಟೆಯ ಮಾಂಸಖಂಡಗಳನ್ನು 'ರಾಗಿಮುದ್ದೆ ತಿರುಗಿಸುವ ಹಾಗೆ' ತಿರುಗಿಸುವ ಹಂತದಲ್ಲಿ ತಮ್ಮ ಮೂಗಿನ ಹೊಳ್ಳೆಗಳಿಂದ ನೀರನ್ನು ಒಳಗೆಳೆದುಕೊಂಡು ಹೊರಬಿಡುತ್ತಾರೆ. ಅವರ ಪರಿಣತಿಗೆ ಸಾಕ್ಷಿಯಾಗಿ ವೀರಪ್ಪನ್, ಅವರ ಕಾಲಿಗೆ ಎರಗುತ್ತಾನೆ13.  ಈ ಚಿತ್ರಕ್ಕೆ ವಿರುದ್ಧವಾಗಿ ಈ ಮುಂದೆ ನೀಡಿರುವ ರೂಪಕಗಳಲ್ಲಿ ರಾಜ್ ಕುಮಾರ್ ರ ಮಗುವಿನ ಸ್ವಭಾವ ಕುರಿತು ಸತತವಾಗಿ ಪುನರುಕ್ತವಾಗಿರುವುದನ್ನು ನೋಡಬಹುದು: ಹಿತ್ತಲಿನಲ್ಲಿ ಆಡುತ್ತಿದ್ದ ಮಗು ರಾಜ್ ಕುಮಾರ್ ನನ್ನು ಕದ್ದೊಯ್ಯಲಾಗಿದೆ (ಪತ್ರಿಕೆಗಳು, ಕ್ಯಾಸೆಟ್ಟುಗಳು); ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಬಿಟ್ಟೆವು (ಅಗ್ನಿ, ಆಗಸ್ಟ್ 25, 2000); ನಮ್ಮ ಬಟ್ಟೆ ಮುಳ್ಳಿನ ಮೇಲೆ ಬಿತ್ತು (ಕಾಡುಗಳ್ಳ ಕದ್ದ ಮುತ್ತು); ಅವರು ಹೇಳಿದರೆ ನಾವು ಹೂವನ್ನು ರಥದಲ್ಲಿಟ್ಟು ಕರೆ ತರುತ್ತೇವೆ (ಕತ್ತಗೇನು ಗೊತ್ತು ಕಸ್ತೂರಿ ಕಂಪು); ನಾಡಿನ ತಂದೆ, ಅಭಿಮಾನಗಳ ಅಣ್ಣ, ತನ್ನ ಮುಗ್ಧತೆಯಲ್ಲೊಂದು ಮಗು, ರತ್ನ, ಮುತ್ತು, ದೇವರು, ಅರಗಿಳಿ. ಅವರದು ಹಾಲಿನಂಥಾ ಮನಸ್ಸು ಎಂದು  'ಅಡವಿಯಲ್ಲಿ ಅಣ್ಣಾವ್ರು' ಕ್ಯಾಸೆಟ್ಟಿನ ಪಾತ್ರವೊಂದು ಹೇಳುತ್ತದೆ.
ಏಕೀಕೃತ ಕನ್ನಡ ಗುರುತಿನ ಹೆಸರಿನಲ್ಲಿ ಮಾತನಾಡಬೇಕು ಎಂಬ ಒತ್ತಡವಿರುವ ಈ ಕಾಲದಲ್ಲಿ ಅಭಿಮಾನಿಗಳ ಹಿಂಸಾಕೃತ್ಯಗಳ ಬಯಕೆ ಮತು ವೀರಪ್ಪನ್ ನ ಪ್ರಸಿದ್ಧ ಸೆರೆಯಾಳಾದ ರಾಜ್ ಕುಮಾರ್ ರ ಯೌಗಿಕ ಮೂರ್ತಿಯನ್ನು ಒಟ್ಟಾಗಿ ಬೆಸೆಯುವ ಭಾರ ಕನ್ನಡತನದ ಅಭಿವ್ಯಕ್ತಿಯ ಮೇಲಿದೆ. ಈ ವಿರುದ್ಧಾಂಶಗಳನ್ನು ಒಟ್ಟಿಗೆ ಸೇರಿಸಲು ಮಾಡಿದ ಪ್ರಯತ್ನ ಯಾವಾಗಲೂ ಯಶಸ್ಸು ಕಾಣುವುದಿಲ್ಲ. ಹಾಗಾಗಿಯೆ ಪುರುಷತ್ವ ಮರುರೂಪಿಸುವ ಈ ಪ್ರಕ್ರಿಯೆಯಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಸ್ಪಷ್ಟವಾಗಿದ್ದು, ಆಶಾವಾದಿಯಾಗಿ ಉಳಿಯಲು ಸಾಕಷ್ಟು ಆಧಾರ ಒದಗಿಸಿದೆ.


ಟಿಪ್ಪಣಿ
(ಈ ಲೇಖನದಲ್ಲಿ ಬಳಸಲಾದ ಸಾಮಗ್ರಿಯನ್ನು ಬೆಂಗಳೂರಿನ ದಿ ಸೆಂಟರ್ ಫಾರ್ ದಿ ಸ್ಟಡಿ ಆಫ್ ಕಲ್ಚರ್ ಅಂಡ್ ಸೊಸ್ಶೆಟಿಯ ಮೀಡಿಯಾ ಅಂಡ್ ಕಲ್ಚರ್ ಆರ್ಕೈವ್ಸ್ ನಿಂದ ಪಡೆಯಲಾಗಿದೆ. ನನಗೆ ನೆರವು ಮತು ಪ್ರೋತ್ಸಾಹ ನೀಡಿದ ಆಶಿಶ್ ರಾಜಾಧ್ಯಕ್ಷ , ಎಂ.ಮಾಧವ ಪ್ರಸಾದ್, ಎಸ್.ವಿ.ಶ್ರೀನಿವಾಸ್, ಪಿ.ರಾಧಿಕಾ ಮತು ಎಂ.ರಾಜು ಅವರಿಗೆ ಆಭಾರಿಯಾಗಿದ್ದೇನೆ.)
1.    ಹಾಯ್ ಬೆಂಗಳೂರು ಐದು ವರುಷಗಳಷ್ಟು ಹಳೆಯದು. ಅದರ ಪ್ರತಿಯೊಂದು ಸಂಚಿಕೆಗೆ ಹದಿನೆಂಟು ಲಕ್ಷ ಓದುಗರಿದ್ದಾರೆಂದು ಹೇಳಿಕೊಳ್ಳಲಾಗಿದೆ. ನಂಬಲರ್ಹ ಮೂಲಗಳ ಪ್ರಕಾರ ಒಂದು ಲಕ್ಷಕ್ಕೂ ಕಡಿಮೆ ಪತ್ರಿಕೆಗಳು ಮುದ್ರಣವಾಗುತ್ತವೆ.
2.    ಕ್ಯಾಸೆಟ್ ಆಗಮನ ಉತ್ತರ ಭಾರತದ ಸಂಗೀತದ ತಯಾರಿಕೆಯಲ್ಲಿ ಮತ್ತು ವಿತರಣೆಯಲ್ಲಿ ಹೇಗೆ ದುಡಿಯುವ ವರ್ಗ ಭಾಗವಾಯಿತು ಎಂಬ ಪೀಟರ್ ಮ್ಯಾನುಯಲ್ ನ ವಾದವನ್ನು ದಕ್ಷಿಣ ಭಾರತಕ್ಕೂ ಅನ್ವಯಿಸಬಹುದಾಗಿದೆ. ನೋಡಿ-ಮ್ಯಾನುಯಲ್, ಕ್ಯಾಸೆಟ್ ಕಲ್ಚರ್: ಪಾಪುಲರ್ ಮ್ಯೂಜಿಕ್ ಅಂಡ್ ಟೆಕ್ನಾಲಜಿ ಇನ್ ನಾರ್ತ್ ಇಂಡಿಯಾ (ಚಿಕಾಗೊ,1993)
3.    ಮೂಲ: 'ಕಾಡಿನಲ್ಲಿ ರಾಜ್, ಸಂಗೀತದಲ್ಲಿ ವೀರಪ್ಪನ್'-ಬಸವರಾಜು, ಲಂಕೇಶ್ ಪತ್ರಿಕೆ, ಸೆಪ್ಟಂಬರ್ 20, 2000, ಪು.15.
4.    ಇಲ್ಲಿ ನೀಡಿರುವ ಕತೆಯ ನಿರೂಪಣೆ 'ಕಾಡುಗಳ್ಳ ಕದ್ದ ಮುತು' ಆಡಿಯೊ ಕ್ಯಾಸೆಟ್ಟಿನದು.
5.    'ಕತ್ತಗೇನು ಗೊತ್ತು ಕಸ್ತೂರಿ ಕಂಪು' ಆಡಿಯೊ ಕ್ಯಾಸೆಟ್ಟಿನಿಂದ.
6.    ಈ ಬಗೆಯ ವ್ಶೆರುಧ್ಯಗಳನ್ನು ಕಟ್ಟಿದ ಶ್ರೇಯಸ್ಸು ಯುವ ಚಿತ್ರ ನಿದೇರ್ಶಕ ಎಸ್.ನಾರಾಯಣ್ ಅವರಿಗೆ ಸಲ್ಲುತ್ತದೆ.
7.    ಅಗ್ನಿ ಆರಂಭವಾದಾಗಿನಿಂದ ಅದರೊಂದಿಗೆ ತೊಡಗಿಸಿಕೊಂಡು ಹಲವಾರು ವಿಷಯಗಳ ಮೇಲೆ ಲೇಖನಗಳನ್ನು ಬರೆಯುತಿದ್ದ ಕವಯಿತ್ರಿ ಪ್ರತಿಭಾ ನಂದಕುಮಾರ್ ಪ್ರಸ್ತುತ ವಿಷಯದ ಮೇಲೂ ವಿಸ್ತೃತ ಚರ್ಚೆ ನಡೆಸಿದ್ದಾರೆ ಎಂದು ನಂಬಲಾಗಿದೆ. ಶ್ರೀಧರ್ ಅವರು 'ನಮ್ಮ ಹುಡುಗರು' ಚೌಕಟ್ಟಿನಲ್ಲಿ ಎಂದಾಗ ಆಕೆಯ ಪಾಲುದಾರಿಕೆ ಅದೃಶ್ಯವಾಗುತ್ತದೆ..
8.    'ಕಾಡುಗಳ್ಳ ಕದ್ದ ಮುತ್ತು'ನಲ್ಲಿ.
9.    ವೀರಪ್ಪನ್ನ ವಿರುದ್ಧದ ಬೆದರಿಕೆ ಮತ್ತು ಶಾಪಗಳು ಈ ಬಗೆಯ ಇಬ್ಬಗೆಯ ಫೆನಾಮಿನನ್ ಬಗ್ಗೆ ನಮಗೆ ಸೂಚನೆ ನೀಡುತ್ತವೆ. ನಮಗೆ ಅವಕಾಶ ಕೊಟ್ಟರೆ ಆ ಲೋಫರ್ ನ ಪಾಪರ್ ಮಾಡಿ, ಪೀಸ್ ಪೀಸ್ ಮಾಡಿ ನರಿಗೆ ಎಸೀತೀವಿ ಎಂದು ಅಭಿಮಾನಿ ಹೇಳುತ್ತಾನೆ(ಕತ್ತಗೇನು ಗೊತ್ತು ಕಸ್ತೂರಿ ಕಂಪು).
10.    ಕಾಡುಗಳ್ಳ ಕದ್ದ ಮುತ್ತು.
11.    ಕತ್ತಗೇನು ಗೊತ್ತು ಕಸ್ತೂರಿ ಕಂಪು.
12.    ಇಮ್ಮಡಿ ಪುಲಕೇಶಿ (1967) ಚಿತ್ರದ ಆರಂಭದ ಸ್ಮರಣಾರ್ಹ ಸನ್ನಿವೇಶದಲ್ಲಿ ರಾಜ್ ಕುಮಾರ್ ಯುವರಾಜನಾಗಿ ನಟಿಸಿದ್ದಾರೆ. ಬೀಳುತ್ತಿರುವ ಎತ್ತರದ ಮರದಿಂದ ಸಾಮ್ರಾಜ್ಯದ ರಾಜಕುಮಾರಿಯನ್ನು ಕಾಪಾಡಲು ಅವರು ತಮ್ಮ ದೇಹವನ್ನು ಬಳಸಿದ್ದಾರೆ. ಇದು ಅವರ ಏಕರಾಷ್ಟ್ರೀಯತೆಯ (ಹೋಮೋ ನ್ಯಾಷನಲಿಸ್) ಆರಂಭಿಕ ದೃಶ್ಯ ಪ್ರತಿನಿಧೀಕರಣ.
13.    ನರಹಂತಕನ ಬಲೆಯಲ್ಲಿ ಕರುನಾಡಿನ ಹೃದಯ.

ಪಾರಿಭಾಷಿಕ ಪದಗಳು
ಪಬ್ಲಿಕ್ ಸ್ಪಿಯರ್ - ಸಾರ್ವಜನಿಕ ವಲಯ
ಐಡೆಂಟಿಟಿ - ಗುರುತು
ಮ್ಯಾಸ್ಕ್ಯುಲಾನಿಟಿ - ಪುರುಷತ್ವ
ಮ್ಯಾಸ್ಕ್ಯುಲಾನಿಟಿ- ಪೌರುಷತ್ವ


-ತೇಜಸ್ವಿನಿ ನಿರಂಜನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ